Sanju Samson: ಸಂಜು ಸ್ಯಾಮ್ಸನ್‌ಗೆ ಸತತ 5 ಸಿಕ್ಸರ್ ಬಾರಿಸಲು ಹೇಳಿದ್ದು ಯಾರು ಗೊತ್ತೇ? ಇದಕ್ಕಾಗಿ 1 ವರ್ಷದಿಂದ ತಯಾರಿ
Oct 13, 2024 12:06 PM IST
ಸಂಜು ಸ್ಯಾಮ್ಸನ್ ಶತಕ ಸಿಡಿಸಿ ಸಂಭ್ರಮಿಸಿದ ಸಂದರ್ಭ.
- India vs Bangladesh 3rd T20I: ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿತು. ಈ ವೇಳೆ ಸಂಜು ಸ್ಯಾಮ್ಸನ್ ಶತಕ ಸಿಡಿಸಿದ್ದರು. ಸಂಜು ಕೇವಲ 46 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿ 111 ರನ್ ಚಚ್ಚಿದರು.
ಟೆಸ್ಟ್ ಸರಣಿಯ ನಂತರ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲೂ (India vs Bangladesh 3rd T20I) ಟೀಮ್ ಇಂಡಿಯಾ ಪ್ರಾಬಲ್ಯ ಮೆರೆದಿದೆ. ಉಭಯ ತಂಡಗಳ ನಡುವೆ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಜಯಭೇರಿ ಬಾರಿಸಿದೆ. ಸರಣಿಯ ಕೊನೆಯ ಪಂದ್ಯ ಶನಿವಾರ (ಅಕ್ಟೋಬರ್ 12) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಪಡೆ 133 ರನ್‌ಗಳ ಜಯ ಸಾಧಿಸಿತ್ತು. ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಈ ಪಂದ್ಯ ತುಂಬಾ ವಿಶೇಷವಾಗಿತ್ತು. ಈ ಪಂದ್ಯದಲ್ಲಿ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿತು. ಈ ವೇಳೆ ಸಂಜು ಸ್ಯಾಮ್ಸನ್ ಶತಕ ಸಿಡಿಸಿದ್ದರು. ಸಂಜು ಕೇವಲ 46 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿ 111 ರನ್ ಚಚ್ಚಿದರು. ಈ ಇನ್ನಿಂಗ್ಸ್‌ನಲ್ಲಿ ಸಂಜು ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸಿದ ಸಾಧನೆ ಕೂಡ ಮಾಡಿದರು. ಟೀಂ ಇಂಡಿಯಾ ಇನಿಂಗ್ಸ್ ನ 10ನೇ ಓವರ್ ನಲ್ಲಿ ಬಾಂಗ್ಲಾದೇಶದ ಬೌಲರ್ ರಿಶಾದ್ ಹುಸೇನ್ ವಿರುದ್ಧ ಸ್ಯಾಮ್ಸನ್ ಸತತ 5 ಸಿಕ್ಸರ್ ಸಿಡಿಸಿದ್ದರು. ಸಂಜು ಅವರು ಈ ವಿಶೇಷ ಕ್ಷಣಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದರಂತೆ.
ಪಂದ್ಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ‘ನಮ್ಮ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಂದು ಶಕ್ತಿ ಇದೆ. ನಾನು ಈ ರೀತಿ ಆಡಿದ್ದಕ್ಕೆ ತಂಡ ಸಂತೋಷವಾಗಿದೆ. ಆದರೂ ಸಾಕಷ್ಟು ಅನುಭವದೊಂದಿಗೆ ನಾನು ಇನ್ನಷ್ಟು ಉತ್ತಮವಾಗಿ ಆಡಬಹುದಿತ್ತು. ಒತ್ತಡವನ್ನು ಹೇಗೆ ಎದುರಿಸಬೇಕೆಂದು ನನಗೆ ತಿಳಿದಿದೆ. ದೇಶಕ್ಕಾಗಿ ಆಡುವಾಗ ನೀವು ಸಾಕಷ್ಟು ಒತ್ತಡದಿಂದ ಬರುತ್ತೀರಿ. ನಿಜಕ್ಕೂ ಒತ್ತಡವಿತ್ತು, ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆ. ಕಳೆದ ಸರಣಿಯಲ್ಲಿ ನಾನು ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದೆ. ಆದರೆ ತಂಡದ ಮ್ಯಾನೇಜ್‌ಮೆಂಟ್ ನನಗೆ ಬೆಂಬಲ ನೀಡಿತು. ಕೆಲವು ಸಮಯದಿಂದ, ನನ್ನ ಗುರುಗಳು ನಾನು ಒಂದು ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಬಲ್ಲೆ ಎಂದು ಪದೇ ಪದೇ ಹೇಳುತ್ತಿದ್ದರು. ಅವರು ಹೇಳಿದಂತೆ ನಾನು ಹಾಗೆ ಮಾಡಲು ಪ್ರಯತ್ನಿಸುತ್ತಿದ್ದೆ. ಅದು ಇಂದು ನೆವೇರಿದೆ,’ ಎಂದು ಹೇಳಿದ್ದಾರೆ.
ಸ್ಯಾಮ್ಸನ್ ಖಾತೆಗೆ ಹಲವು ದಾಖಲೆಗಳು
ಈ ಇನ್ನಿಂಗ್ಸ್‌ನಲ್ಲಿ ಸಂಜು ಸ್ಯಾಮ್ಸನ್ ಅನೇಕ ದೊಡ್ಡ ಸಾಧನೆಗಳನ್ನು ಮಾಡಿದರು. ಟೀಂ ಇಂಡಿಯಾ ಪರ ಟಿ20ಯಲ್ಲಿ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪೂರ್ಣ ಸದಸ್ಯ ತಂಡಕ್ಕಾಗಿ ಮೂರನೇ ವೇಗದ ಶತಕ ಗಳಿಸಿದ ಸಾಧನೆಯನ್ನೂ ಅವರು ಸಾಧಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದರು. ಅದೇ ಸಮಯದಲ್ಲಿ, ಇದು ಭಾರತ ಪರ ಸಿಡಿಸಿದ ಎರಡನೇ ವೇಗದ ಶತಕವಾಗಿದೆ.