ವಿಶ್ವದಾಖಲೆಗಳ ಸರಮಾಲೆ, 133 ರನ್‌ಗಳಿಂದ ಬಾಂಗ್ಲಾದೇಶ ಮಣಿಸಿದ ಭಾರತ; 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್
India vs Bangladesh 3rd T20I: ಬಾಂಗ್ಲಾದೇಶದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಚೊಚ್ಚಲ ಟಿ20 ಶತಕ ಸಿಡಿಸಿದರು. ಚುಟುಕು ಸ್ವರೂಪದಲ್ಲಿ ಬೃಹತ್ ಮೊತ್ತ ಕಲೆ ಹಾಕಿದ ಭಾರತೀಯ ಕ್ರಿಕೆಟ್ ತಂಡ ಹಲವು ದಾಖಲೆಗಳನ್ನು ನಿರ್ಮಿಸಿತು.
ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 133 ರನ್‌ಗಳ ಅಂತರದಿಂದ ಬೃಹತ್ ಜಯ ಸಾಧಿಸಿದ ಟೀಮ್ ಇಂಡಿಯಾ, ಸರಣಿಯನ್ನು 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಸರಣಿಯುದ್ದಕ್ಕೂ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಸೂರ್ಯಕುಮಾರ್ ಯಾದವ್ ಪಡೆ, ಅಂತಿಮ ಟಿ20ಯಲ್ಲೂ ಅಬ್ಬರಿಸಿ ಬೊಬ್ಬಿರಿಯಿತು. ಹಲವು ದಾಖಲೆಗಳೊಂದಿಗೆ ಅಭಿಮಾನಿಗಳಿಗೆ ವಾರಾಂತ್ಯದ ಮನರಂಜನೆ ಉಣಬಡಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ 6 ವಿಕೆಟ್ ನಷ್ಟಕ್ಕೆ 297 ರನ್ ಪೇರಿಸಿತು. ಚುಟುಕು ಸ್ವರೂಪದಲ್ಲಿ ಇದು ಭಾರತ ತಂಡ ಕಲೆ ಹಾಕಿದ ಗರಿಷ್ಠ ಮೊತ್ತವಾಗಿದೆ. ಅಲ್ಲದೆ ಟಿ20 ಸ್ವರೂಪದಲ್ಲಿ ಭಾರತ ತಂಡವು ಅತಿ ಹೆಚ್ಚು (37) ಬಾರಿ 200ಕ್ಕೂ ಹೆಚ್ಚು ರನ್ ಕಲೆ ಹಾಕಿದ ದಾಖಲೆ ಬರೆಯಿತು. ಭಾರತದ ದೊಡ್ಡ ಮೊತ್ತ ನೋಡಿಯೇ ಬೆದರಿದ್ದ ಬಾಂಗ್ಲಾ, ಅಂತಿಮವಾಗಿ 7 ವಿಕೆಟ್ ಕಳೆದುಕೊಂಡು 164 ರನ್ ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ ಭಾರತ ಪ್ರವಾಸದಲ್ಲಿ ಒಂದೇ ಒಂದು ಗೆಲುವು ಕಾಣದೆ ತಂಡ ತವರಿಗೆ ಮರಳಲಿದೆ. ತಂಡದ ಅನುಭವಿ ಆಟಗಾರ ಮಹಮ್ಮದುಲ್ಲಾಗೆ ಸರಣಿ ಸೋಲಿನ ವಿದಾಯ ಸಿಕ್ಕಿರುವುದು ತಂಡಕ್ಕೆ ಬೇಸರ ತರಿಸಿದೆ.
ಸರಣಿಯ ಮೂಲಕ ಆರಂಭಿಕರಾಗಿ ಬಡ್ತಿ ಪಡೆದಿದ್ದ ಸಂಜು ಸ್ಯಾಮ್ಸನ್ ಚುಟುಕು ಸ್ವರೂಪದಲ್ಲಿ ಮೊದಲ ಶತಕ ಬಾರಿಸಿದರು. ರೋಹಿತ್ ಶರ್ಮಾ ನಂತರ ಚುಟುಕು ಸ್ವರೂಪದಲ್ಲಿ ಅತಿ ವೇಗವಾಗಿ (40 ಎಸೆತ) ಶತಕ ಬಾರಿಸಿದ ಎರಡನೇ ಭಾರತೀಯ ಎನಿಸಿಕೊಂಡರು. ಅತ್ತ ನಾಯಕ ಸೂರ್ಯಕುಮಾರ್ ಯಾದವ್ 75(35) ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. ಹಾರ್ದಿಕ್ ಪಾಂಡ್ಯ 47 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು.
ಚೇಸಿಂಗ್ ವೇಳೆ ಬಾಂಗ್ಲಾದೇಶ ಎದುರಿಸಿದ ಮೊದಲ ಎಸೆತದಲ್ಲಿ ವಿಕೆಟ್ ಕಳೆದುಕೊಂಡು ನಿರಾಶೆ ಅನುಭವಿಸಿತು. ಲಿಟ್ಟನ್ ದಾಸ್ ವೇಗದ ಆಟವಾಡಿ 42 ರನ್ ಗಳಿಸಿದರು. ಅಬ್ಬರಿಸಿದ ತೌಹೀದ್ ಹೃದೋಯ್ ಅಜೇಯ 63 ರನ್ ಗಳಿಸುವ ಮೂಲಕ, ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಭಾರತ ತಂಡದ ದಾಖಲೆಗಳು
ಅಂತಾರಾಷ್ಟ್ರೀಯ ಟಿ20ಯಲ್ಲಿ ಎರಡನೇ ಗರಿಷ್ಠ ಮೊತ್ತ
- 314/3 - ನೇಪಾಳ (ಮಂಗೋಲಿಯಾ ವಿರುದ್ಧ) ಹ್ಯಾಂಗ್‌ಝೌ, 2023
- 297/6 - ಭಾರತ (ಬಾಂಗ್ಲಾದೇಶ ವಿರುದ್ಧ) ಹೈದರಾಬಾದ್, 2024
- 278/3 - ಅಫ್ಘಾನಿಸ್ತಾನ ಐರ್ಲೆಂಡ್ (ವಿರುದ್ಧ) ಡೆಹ್ರಾಡೂನ್, 2019
- 278/4 - ಜೆಕ್ ರಿಪಬ್ಲಿಕ್ ಟರ್ಕಿ (ವಿರುದ್ಧ) ಇಲ್ಫೋವ್ ಕೌಂಟಿ, 2019
- 268/4 - ಮಲೇಷ್ಯಾ ಥೈಲ್ಯಾಂಡ್ (ವಿರುದ್ಧ) ಹ್ಯಾಂಗ್‌ಝೌ, 2023
ಟಿ20 ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಬೌಂಡರಿ
- 47 - ಭಾರತ (ಬಾಂಗ್ಲಾದೇಶ ವಿರುದ್ಧ), ಹೈದರಾಬಾದ್, 2024
- 43 - ಜೆಕ್ ರಿಪಬ್ಲಿಕ್ (ಟರ್ಕಿ ವಿರುದ್ಧ), ಇಲ್ಫೊವ್ ಕೌಂಟಿ, 2019
- 42 - ದಕ್ಷಿಣ ಆಫ್ರಿಕಾ (ವೆಸ್ಟ್ ಇಂಡೀಸ್ ವಿರುದ್ಧ), ಸೆಂಚುರಿಯನ್, 2023
- 42 - ಭಾರತ (ಶ್ರೀಲಂಕಾ ವಿರುದ್ಧ), ಇಂದೋರ್, 2017
- 41 - ಶ್ರೀಲಂಕಾ (ಕೀನ್ಯಾ ವಿರುದ್ಧ), ಜೋಹಾನ್ಸ್‌ಬರ್ಗ್, 2007
ಟಿ20ಯಲ್ಲಿ ಭಾರತದ ಮೂರನೇ ಅತಿ ದೊಡ್ಡ ಗೆಲುವು
- 168 ರನ್ - ನ್ಯೂಜಿಲೆಂಡ್ ವಿರುದ್ಧ, ಅಹಮದಾಬಾದ್, 2023
- 143 ರನ್ - ಐರ್ಲೆಂಡ್ ವಿರುದ್ಧ, ಡಬ್ಲಿನ್, 2018
- 133 ರನ್ - ಬಾಂಗ್ಲಾದೇಶ ವಿರುದ್ಧ, ಹೈದರಾಬಾದ್, 2024
ಪುರುಷರ ಟಿ20ಯಲ್ಲಿ ಹೆಚ್ಚು ಬಾರಿ 200ಕ್ಕೂ ಅಧಿಕ ಮೊತ್ತ ಗಳಿಸಿದ ತಂಡಗಳು
- 37 - ಭಾರತ
- 36 - ಸೋಮರ್ಸೆಟ್
- 35 - ಸಿಎಸ್‌ಕೆ
- 33 - ಆರ್‌ಸಿಬಿ
ಇದನ್ನೂ ಓದಿ | ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬ: ಟೀಮ್ ಇಂಡಿಯಾ ಆಲ್‌ರೌಂಡರ್ ಫಿಟ್‌ನೆಸ್ ಸೀಕ್ರೆಟ್ ಏನು, ಕ್ರಿಕೆಟಿಗನ ಆಹಾರಕ್ರಮವೇ ಭಿನ್ನ