ಪ್ರೊ ಕಬಡ್ಡಿ ಲೀಗ್: ಈ ಬಾರಿ ಚಾಂಪಿಯನ್ ಆಗಲು ಬೆಂಗಳೂರು ಬುಲ್ಸ್ ಏನು ಮಾಡಬೇಕು? ಪರ್ದೀಪ್ ನರ್ವಾಲ್ ಹೇಳ್ತಾರೆ ಕೇಳಿ
ಕನ್ನಡ ಸುದ್ದಿ  /  ಕ್ರೀಡೆ  /  ಪ್ರೊ ಕಬಡ್ಡಿ ಲೀಗ್: ಈ ಬಾರಿ ಚಾಂಪಿಯನ್ ಆಗಲು ಬೆಂಗಳೂರು ಬುಲ್ಸ್ ಏನು ಮಾಡಬೇಕು? ಪರ್ದೀಪ್ ನರ್ವಾಲ್ ಹೇಳ್ತಾರೆ ಕೇಳಿ

ಪ್ರೊ ಕಬಡ್ಡಿ ಲೀಗ್: ಈ ಬಾರಿ ಚಾಂಪಿಯನ್ ಆಗಲು ಬೆಂಗಳೂರು ಬುಲ್ಸ್ ಏನು ಮಾಡಬೇಕು? ಪರ್ದೀಪ್ ನರ್ವಾಲ್ ಹೇಳ್ತಾರೆ ಕೇಳಿ

Pardeep Narwal: ಪ್ರೊ ಕಬಡ್ಡಿ ಲೀಗ್‌ನ 11ನೇ ಋತುವಿನ ಆರಂಭಕ್ಕೂ ಮೊದಲು ಬೆಂಗಳೂರು ಬುಲ್ಸ್‌ ತಂಡದ ನಾಯಕ ಪರ್ದೀಪ್ ನರ್ವಾಲ್ ಮಾತನಾಡಿದ್ದು, ತಮ್ಮ ಫಾರ್ಮ್ ಮತ್ತು ತಂಡದ ಬಗ್ಗೆ ಕೆಲವು ವಿಚಾರ ಹಂಚಿಕೊಂಡಿದ್ದಾರೆ. ತಂಡ ಚಾಂಪಿಯನ್‌ ಆಗಲು ರೂಪಿಸಿರುವ ತಂತ್ರದ ಬಗ್ಗೆ ವಿವರಿಸಿದ್ದಾರೆ.

ಪಿಕೆಎಲ್ ಚಾಂಪಿಯನ್ ಆಗಲು ಬೆಂಗಳೂರು ಬುಲ್ಸ್ ಏನು ಮಾಡಬೇಕು? ಪರ್ದೀಪ್ ನರ್ವಾಲ್ ಹೇಳ್ತಾರೆ ಕೇಳಿ
ಪಿಕೆಎಲ್ ಚಾಂಪಿಯನ್ ಆಗಲು ಬೆಂಗಳೂರು ಬುಲ್ಸ್ ಏನು ಮಾಡಬೇಕು? ಪರ್ದೀಪ್ ನರ್ವಾಲ್ ಹೇಳ್ತಾರೆ ಕೇಳಿ

ಪ್ರೊ ಕಬಡ್ಡಿ ಲೀಗ್‌ನ 11ನೇ ಋತುವಿನ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಪಿಕೆಎಲ್ 11ರ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ಮುಖಾಮುಖಿಯಾಗಲಿವೆ. ಲೀಗ್‌ ಇತಿಹಾಸದ ಅತ್ಯಂತ ಬಲಿಷ್ಠ ರೈಡರ್ ಪರ್ದೀಪ್ ನರ್ವಾಲ್ ಕೂಡ ಈ ಪಂದ್ಯದಲ್ಲಿ ಬೆಂಗಳೂರಿನ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಟೂರ್ನಿಗೆ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಪ್ರೊ ಕಬಡ್ಡಿ ಲೀಗ್‌ನ 11 ನೇ ಋತುವಿನ ಆರಂಭಕ್ಕೂ ಮೊದಲು ಪರ್ದೀಪ್ ನರ್ವಾಲ್ ಮಾತನಾಡಿದ್ದು, ತಮ್ಮ ಫಾರ್ಮ್ ಮತ್ತು ತಂಡದ ಬಗ್ಗೆ ಕೆಲ ವಿಚಾರ ಹಂಚಿಕೊಂಡಿದ್ದಾರೆ.

“ಬೆಂಗಳೂರು ಬುಲ್ಸ್ ಎರಡೂ ವಿಭಾಗಗಳಲ್ಲಿ (ರೇಡಿಂಗ್ ಮತ್ತು ಡಿಫೆನ್ಸ್) ಕೆಲಸ ಮಾಡಬೇಕಾಗಿದೆ. ಕೇವಲ ರೇಡಿಂಗ್‌ನಲ್ಲಿ ಕೆಲಸ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ. ನಾವು ಎರಡೂ ವಿಭಾಗಗಳ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕು ಮತ್ತು ನಾವು ಒಟ್ಟಿಗೆ ಆಡಿದರೆ ಖಂಡಿತವಾಗಿಯೂ ಚಾಂಪಿಯನ್ ಆಗುತ್ತೇವೆ. ಕೇವಲ ಒಬ್ಬ ಆಟಗಾರನಿಂದ ಗೆಲ್ಲಲು ಸಾಧ್ಯವಿಲ್ಲ, ಎಲ್ಲಾ 7 ಆಟಗಾರರು ಕೊಡುಗೆ ನೀಡಬೇಕು,” ಎಂದು ಹೇಳಿದ್ದಾರೆ.

ನಾಯಕತ್ವದ ಒತ್ತಡದ ಬಗ್ಗೆ ಮಾತನಾಡಿದ ಡುಬ್ಕಿ ಕಿಂಗ್, “ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಇರುವುದಿಲ್ಲ. 7 ಆಟಗಾರರು ಆಡುತ್ತಿದ್ದಾರೆ. ತಂಡದಲ್ಲಿ ನಾಯಕ ಅಥವಾ ಉಪನಾಯಕ ಮಾತ್ರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವಾತಾವರಣವಿಲ್ಲ. ಎಲ್ಲಾ ಆಟಗಾರರಲ್ಲಿ ಅವರದ್ದೇ ಅಭಿಪ್ರಾಯಗಳಿರುತ್ತವೆ. ಎಲ್ಲಿ ಸುಧಾರಣೆಗಳನ್ನು ಮಾಡಬಹುದೆಂದು ಅವರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಬಹುದು,” ಎಂದು ಹೇಳಿದರು.

ಪರ್ದೀಪ್ ನರ್ವಾಲ್ ಈ ಲೀಗ್‌ನ ಪ್ರಬಲ ಆಟಗಾರರಲ್ಲಿ ಒಬ್ಬರು. ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ಯಾವುದೇ ಆಟಗಾರ ಅವರಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿಲ್ಲ. ಅಲ್ಲದೆ ಸೂಪರ್ 10 ಮತ್ತು ಸೂಪರ್ ರೈಡ್‌ ವಿಚಾರದಲ್ಲೂ ಇವರು ಮುಂದಿದ್ದಾರೆ. ಇದರ ಹೊರತಾಗಿಯೂ, ಕಳೆದ ಕೆಲವು ಸೀಸನ್‌ಗಳು ಡುಬ್ಕಿ ಕಿಂಗ್‌ಗೆ ನಿರೀಕ್ಷೆಯಂತೆ ಇರಲಿಲ್ಲ. ಪರ್ದೀಪ್ ಯುಪಿ ಯೋಧಾಸ್‌ ಪರ ಸೀಸನ್ 8ರಿಂದ 10ರವರೆಗೆ ಆಡಿದ್ದರು.

ನನ್ನ ತಪ್ಪು ಸರಿಪಡಿಸುತ್ತೇನೆ

“ನಾನು ಯುಪಿ ಯೋಧಾಸ್‌ ಪರ ಆಡಿದ ಮೂರು ಸೀಸನ್‌ಗಳಲ್ಲಿ, ನನ್ನ ಪ್ರದರ್ಶನವು ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಆ ಸೀಸನ್‌ಗಳು ಸರಿಯಾಗಿ ನಡೆಯಲಿಲ್ಲ. ನನ್ನ ಕಡೆಯಿಂದಲೂ ಕೆಲವು ನ್ಯೂನತೆಗಳಿದ್ದವು. ಈ ಬಾರಿ ನಾನು ಆ ನ್ಯೂನತೆಗಳನ್ನು ಸರಿಪಡಿಸಲು ಪ್ರಯತ್ನಿಸುತ್ತೇನೆ ಮತ್ತು ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ, ”ಎಂದರು.

ಈ ಬಾರಿ, ಪ್ರೊ ಕಬಡ್ಡಿ ಲೀಗ್ ಮೂರು-ನಗರ ಸ್ವರೂಪದೊಂದಿಗೆ ನಡೆಯಲಿದೆ. 2024ರ ಆವೃತ್ತಿಯು ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 9 ರವರೆಗೆ ನಡೆದರೆ, ನಂತರ ನವೆಂಬರ್ 10 ರಿಂದ ಡಿಸೆಂಬರ್ 1ರವರೆಗೆ ಎರಡನೇ ಲೆಗ್‌ ನೋಯ್ಡಾ ಒಳಾಂಗಣ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳಲಿದೆ. ಮೂರನೇ ಹಂತವು ಡಿಸೆಂಬರ್ 3ರಿಂದ ಡಿಸೆಂಬರ್ 24ರವರೆಗೆ ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.