ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ವನಿತೆಯರ ಅದ್ವಿತೀಯ ಸಾಧನೆ; ಆಸ್ಟ್ರೇಲಿಯಾ ಹಿಂದಿಕ್ಕಿ ಗರಿಷ್ಠ ಮೊತ್ತ ದಾಖಲಿಸಿದ ಕೌರ್ ಪಡೆ
Jun 29, 2024 11:49 AM IST
ಆಸ್ಟ್ರೇಲಿಯಾ ಹಿಂದಿಕ್ಕಿ ಗರಿಷ್ಠ ಮೊತ್ತ ದಾಖಲಿಸಿದ ಕೌರ್ ಪಡೆ
- ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ದಾಖಲೆಯ ಮೇಲೆ ದಾಖಲೆ ನಿರ್ಮಿಸಿದೆ. ಶಫಾಲಿ ವರ್ಮಾ ದ್ವಿಶತಕದ ನೆರವಿಂದ ಟೀಮ್ ಇಂಡಿಯಾ ವನಿತೆಯರು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ ದಾಖಲಿಸಿ ಇತಿಹಾಸ ನಿರ್ಮಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದದಲ್ಲಿ ಭಾರತ ವನಿತೆಯರ ತಂಡವು ದಾಖಲೆಗಳ ಬೆಟ್ಟವನ್ನೇ ನಿರ್ಮಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ ಕೇವಲ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 525 ರನ್ ಕಲೆ ಹಾಕಿದ್ದ ಭಾರತ, ಎರಡನೇ ದಿನದಾಟದಲ್ಲಿ ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿತ್ತು. ಅದರಂತೆಯೇ ಎರಡನೇ ದಿನದಾಟ ಮುಂದುವರೆಸಿದ ಭಾರತ ತಂಡವು, ಮಹಿಳೆಯರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಮೊತ್ತ ದಾಖಲಿಸಿ ದಾಖಲೆ ಬರೆದಿದೆ. ಎರಡನೇ ದಿನ ಆಟ ಮುಂದುವರೆಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಆಟದ ನೆರವಿನಿಂದ ಬರೋಬ್ಬರಿ 603 ರನ್ ಕಲೆ ಹಾಕಿದೆ. ಕೌರ್ ಮತ್ತು ರಿಚಾ ವಿಕೆಟ್ ಪತನವಾಗುತಿದ್ದಂತೆಯೇ 6 ವಿಕೆಟ್ ಕಳೆದುಕೊಂಡ ಭಾರತವು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಅಷ್ಟರಲ್ಲೇ ತಂಡದಿಂದ ಹಲವು ರೆಕಾರ್ಡ್ ನಿರ್ಮಾಣವಾಗಿದೆ.
ವನಿತೆಯರ ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ 600 ರನ್ ಗಡಿ ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದು ಮಹಿಳೆಯರ ಕ್ರಿಕೆಟ್ ಇನ್ನಿಂಗ್ಸ್‌ನಲ್ಲಿ ಈವರೆಗೆ ದಾಖಲಾದ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ ಈ ದಾಖಲೆ ಬಲಿಷ್ಠ ತಂಡ ಆಸ್ಟ್ರೇಲಿಯಾ ಹೆಸರಲ್ಲಿತ್ತು. ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ವನಿತೆಯರು 9 ವಿಕೆಟ್ ನಷ್ಟಕ್ಕೆ 575 ರನ್ ಗಳಿಸಿದ್ದರು. ಅದು ಕೂಡಾ ದಕ್ಷಿಣ ಆಫ್ರಿಕಾ ವಿರುದ್ಧ. ಇದೀಗ ಈ ದಾಖಲೆಯನ್ನು ಭಾರತ ಬ್ರೇಕ್ ಮಾಡಿದೆ.
ಆಸೀಸ್ ತಂಡವು 575 ರನ್ ಗಳಿಸಲು ಬರೋಬ್ಬರಿ 125.2 ಓವರ್ ತೆಗೆದುಕೊಂಡಿತ್ತು. ಆದರೆ ಭಾರತ ಕೇವಲ 115.1 ಓವರ್‌ಗಳಲ್ಲಿ 603 ರನ್ ಕಲೆ ಹಾಕಿದೆ.
ಅನ್ನೆರಿ ಡೆರ್ಕ್ಸೆನ್ ಎಸೆದ 109ನೇ ಓವರ್‌ನ ಆರಂಭಿಕ ಎಸೆತದಲ್ಲಿ ಬೌಂಡರಿ ಬಾರಿಸಿದ ರಿಚಾ ಘೋಷ್, ಭಾರತದ ಹೊಸ ದಾಖಲೆಗೆ ಸಾಕ್ಷಿಯಾದರು. ಅಮೋಘ ಆಟ ಪ್ರದರ್ಶಿಸಿದ ರಿಚಾ, 90 ಎಸೆತಗಳಲ್ಲಿ 16 ಬೌಂಡರಿ ಸಹಿತ 86 ರನ್ ಗಳಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ರಿಚಾ ಕೂಡ ತಲಾ ಅರ್ಧಶತಕ ಗಳಿಸುವುದಲ್ಲದೆ ಶತಕದ ಜೊತೆಯಾಟವಾಡಿದರು. ನಾಯಕಿ ಕೌರ್ ಆಟ 69 ರನ್‌ಗಳಿಗೆ ಅಂತ್ಯವಾಯ್ತು.
ವನಿತೆಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡ
ಭಾರತದ ಮೊದಲ ದಿನದಾಟ ಇನ್ನೂ ಅನೋಘವಾಗಿತ್ತು. ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ (205) ಮತ್ತು ಸ್ಮೃತಿ ಮಂದಾನ (149) ಅವರು 292 ರನ್‌ಗಳ ಅಪ್ರತಿಮ ಜೊತೆಯಾಟವಾಡಿದರು. ಇದು ವನಿತೆಯರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಜೊತೆಯಾಟವಾಗಿದೆ. ಜೆಮಿಮಾ ರೋಡ್ರಿಗಸ್ 55 ರನ್ ಗಳಿಸಿ ಔಟಾದರು. ಶಫಾಲಿ ವರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ ಶಾಧನೆ ಮಾಡಿದರು.
ಮೊದಲ ದಿನ ವನೆತೆಯರು ಕಲೆ ಹಾಕಿದ 525 ರನ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ದಿನ ದಾಖಲಾದ ಅತಿ ಹೆಚ್ಚು ಮೊತ್ತವಾಗಿದೆ. 2002ರಲ್ಲಿ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಪುರುಷರ ತಂಡ 9 ವಿಕೆಟ್ ನಷ್ಟಕ್ಕೆ 509 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಭಾರತ ವನಿತೆಯರು ಪುರುಷರ ದಾಖಲೆಯನ್ನು ಕೂಡಾ ಮುರಿದಿದ್ದಾರೆ.
ವನಿತೆಯರ ಕ್ರಿಕೆಟ್ನ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸ್ಮೃತಿ ಮಂಧಾನ ಶತಕ, ಶಫಾಲಿ ವರ್ಮಾ ದ್ವಿಶತಕ; ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ, ಪಾಕಿಸ್ತಾನ ದಾಖಲೆಯೂ ಧ್ವಂಸ