ಶಫಾಲಿ ವರ್ಮಾ-ಸ್ಮೃತಿ ಮಂಧಾನ ಮಿಂಚು: ಸೌತ್ ಆಫ್ರಿಕಾ ವಿರುದ್ಧ ಚರಿತ್ರೆ ಸೃಷ್ಟಿಸಿ ಮೊದಲ ದಿನ ಮುಗಿಸಿದ ಭಾರತ
ಕನ್ನಡ ಸುದ್ದಿ  /  ಕ್ರಿಕೆಟ್  /  ಶಫಾಲಿ ವರ್ಮಾ-ಸ್ಮೃತಿ ಮಂಧಾನ ಮಿಂಚು: ಸೌತ್ ಆಫ್ರಿಕಾ ವಿರುದ್ಧ ಚರಿತ್ರೆ ಸೃಷ್ಟಿಸಿ ಮೊದಲ ದಿನ ಮುಗಿಸಿದ ಭಾರತ

ಶಫಾಲಿ ವರ್ಮಾ-ಸ್ಮೃತಿ ಮಂಧಾನ ಮಿಂಚು: ಸೌತ್ ಆಫ್ರಿಕಾ ವಿರುದ್ಧ ಚರಿತ್ರೆ ಸೃಷ್ಟಿಸಿ ಮೊದಲ ದಿನ ಮುಗಿಸಿದ ಭಾರತ

IND-W vs SA-W Test: ಸೌತ್ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶ ನೀಡಿದ ಭಾರತ ಮಹಿಳಾ ತಂಡವು ಮೊದಲ ದಿನದಾಟಕ್ಕೆ 525 ರನ್ ಪೇರಿಸಿ ವಿಶ್ವದಾಖಲೆ ನಿರ್ಮಿಸಿದೆ.

ಶಫಾಲಿ ವರ್ಮಾ-ಸ್ಮೃತಿ ಮಂಧಾನ ಮಿಂಚು: ಸೌತ್ ಆಫ್ರಿಕಾ ವಿರುದ್ಧ ಚರಿತ್ರೆ ಸೃಷ್ಟಿಸಿ ಮೊದಲ ದಿನ ಮುಗಿಸಿದ ಭಾರತ
ಶಫಾಲಿ ವರ್ಮಾ-ಸ್ಮೃತಿ ಮಂಧಾನ ಮಿಂಚು: ಸೌತ್ ಆಫ್ರಿಕಾ ವಿರುದ್ಧ ಚರಿತ್ರೆ ಸೃಷ್ಟಿಸಿ ಮೊದಲ ದಿನ ಮುಗಿಸಿದ ಭಾರತ

ಸ್ಮೃತಿ ಮಂಧಾನ ಶತಕ (149) ಮತ್ತು ಶಫಾಲಿ ವರ್ಮಾ ಅವರ (205) ದ್ವಿಶತಕದ ಸಹಾಯದಿಂದ ಸೌತ್ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಮಹಿಳಾ ತಂಡ ಬೃಹತ್ ಮೊತ್ತ ಪೇರಿಸಿದೆ. ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಅತಿ ಹೆಚ್ಚು ರನ್ ಕಲೆ ಹಾಕಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಹರ್ಮನ್ ಪಡೆ ಪಾತ್ರವಾಗಿದೆ.

ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿಕೊಂಡಿತು. ಅದರಂತೆ ನಾಯಕಿ ಹರ್ಮನ್​ಪ್ರೀತ್​ ನಿರ್ಧಾರ ಸಮರ್ಥಿಸುವಂತೆ ಬ್ಯಾಟಿಂಗ್ ಮಾಡಿದ ಆಟಗಾರ್ತಿಯರು, ಮೊದಲ ದಿನದಾಟವೇ ಬೃಹತ್ ಮೊತ್ತ ಕಲೆ ಹಾಕಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 98 ಓವರ್​​ಗಳನ್ನು ಬೌಲ್ ಮಾಡಿದ ಸೌತ್ ಆಫ್ರಿಕಾ ದಿನದಲ್ಲಿ 525 ರನ್ ನೀಡಿತು. ಪಡೆದಿದ್ದು, 4 ವಿಕೆಟ್ ಮಾತ್ರ.

ಮೊದಲ ದಿನದಾಟದಲ್ಲಿ ಅತ್ಯಧಿಕ ರನ್

ಮಹಿಳಾ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ದಿನದ ಅಂತ್ಯಕ್ಕೆ ಅತಿ ಹೆಚ್ಚು ರನ್ ಕಲೆ ಹಾಕಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಸೌತ್ ಆಫ್ರಿಕಾ ಎದುರಿನ ಈ ಪಂದ್ಯದ ಮೊದಲ ದಿನದಲ್ಲಿ ಭಾರತ 525 ರನ್ ಪೇರಿಸಿದೆ. ಇದಕ್ಕೂ ಹಿಂದೆ ಈ ದಾಖಲೆ ಇಂಗ್ಲೆಂಡ್ ಹೆಸರಿನಲ್ಲಿತ್ತು. 1935ರಲ್ಲಿ ನ್ಯೂಜಿಲೆಂಡ್​ ವಿರುದ್ಧ ಮೊದಲ ದಿನದ ಅಂತ್ಯಕ್ಕೆ ಆಂಗ್ಲರ ಮಹಿಳಾ ತಂಡವು 4 ವಿಕೆಟ್ ನಷ್ಟಕ್ಕೆ 431 ರನ್ ಗಳಿಸಿತ್ತು. ಇದೀಗ 89 ವರ್ಷಗಳ ಈ ದಾಖಲೆಯನ್ನು ಭಾರತ ಪುಡಿಗಟ್ಟಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತವು ಪುರುಷರ ಮತ್ತು ಮಹಿಳೆಯರ ಟೆಸ್ಟ್‌ಗಳಲ್ಲಿ ಒಂದು ದಿನದಲ್ಲಿ ಅತಿ ಹೆಚ್ಚು ತಂಡದ ಮೊತ್ತವನ್ನು ದಾಖಲಿಸಿದೆ.

ಶಫಾಲಿ ವರ್ಮಾ ದ್ವಿಶತಕ, ಸ್ಮೃತಿ ಮಂಧಾನ ಶತಕ

ಇನ್ನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದರು. ಸೌತ್ ಆಫ್ರಿಕಾ ಬೌಲರ್​​ಗಳ ಬೆವರಿಳಿಸಿದ ಈ ಜೋಡಿ, ವಿಶ್ವದಾಖಲೆಯ ಜೊತೆಯಾಟವಾಡಿತು. ಮೊದಲ ವಿಕೆಟ್​ಗೆ 292 ರನ್​ಗಳ ಪಾಲುದಾರಿಕೆ ಒದಗಿಸಿತು. ಇದರೊಂದಿಗೆ ಮಹಿಳಾ ಟೆಸ್ಟ್​ನಲ್ಲಿ ಆರಂಭಿಕ ವಿಕೆಟ್​ಗೆ ಅತ್ಯಧಿಕ ರನ್ ಗಳಿಸಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಲ್ಲದೆ, ಸ್ಮೃತಿ ಶತಕ ಸಿಡಿಸಿದರೆ, ಶಫಾಲಿ ದ್ವಿಶತಕ ಸಿಡಿಸಿ ಮಿಂಚಿದರು.

122 ಎಸೆತಗಳಲ್ಲಿ ಸೆಂಚುರಿ ಪೂರೈಸಿದ ಸ್ಮೃತಿ ಅವರಿಗೆ ಇದು 2ನೇ ಟೆಸ್ಟ್​ ಶತಕವಾಗಿದೆ. ಒಟ್ಟಾರೆ 161 ಎಸೆತಗಳಲ್ಲಿ 27 ಬೌಂಡರಿ, 1 ಸಿಕ್ಸರ್ ಸಹಿತ 149 ರನ್ ಗಳಿಸಿತು. ಮತ್ತೊಂದೆಡೆ ಶಫಾಲಿ ಅವರು 113 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಪೂರೈಸಿದರು. ಮೊದಲ ಸೆಂಚುರಿಯನ್ನೇ ದ್ವಿಶತಕವನ್ನಾಗಿ ಪರಿವರ್ತಿಸಿ ವಿಶ್ವದಾಖಲೆಯನ್ನು ನಿರ್ಮಿಸಿದರು. 197 ಎಸೆತಗಳಲ್ಲಿ 23 ಬೌಂಡರಿ, 8 ಸಿಕ್ಸರ್ ಸಹಿತ 205 ರನ್ ಗಳಿಸಿದರು. ಮಹಿಳಾ ಟೆಸ್ಟ್​ನಲ್ಲಿ ವೇಗದ ಶತಕ, ವೇಗದ ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಸ್ಮೃತಿ ನಂತರ ಕನ್ನಡತಿ ಶುಭಾ ಸತೀಶ್ 15 ರನ್ ಗಳಿಸಿ ನಿರಾಸೆ ಮೂಡಿಸಿದರು. ಜೆಮೈಮಾ ರೋಡ್ರಿಗಸ್ ಕೂಡ ಉತ್ತಮ ಪ್ರದರ್ಶನ ನೀಡಿದರು. ಜೆಮೈಮಾ 94 ಎಸೆತಗಳಲ್ಲಿ 8 ಬೌಂಡರಿ ಸಹಿತ 55 ರನ್ ಗಳಿಸಿದರು. ನಾಲ್ಕು ವಿಕೆಟ್​ಗಳ ನಂತರ ಜೊತೆಯಾದ ಹರ್ಮನ್​ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಅಜೇಯರಾಗಿ ಉಳಿದಿದ್ದಾರೆ. ಕ್ರಮವಾಗಿ 42 ಮತ್ತು 43 ರನ್ ಸಿಡಿಸಿದ್ದಾರೆ. ಅದರಲ್ಲೂ ರಿಚಾ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಅಜೇಯರಾಗಿರುವ ಈ ಜೋಡಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಡೆಲ್ಮಿ ಟಕರ್ 2 ವಿಕೆಟ್, ನಾಡಿನ್ ಡಿ ಕ್ಲರ್ಕ್ 1 ವಿಕೆಟ್ ಪಡೆದರು.

Whats_app_banner