ಶ್ರೇಯಸ್ ಅಯ್ಯರ್ ಮೊದಲ ಆಯ್ಕೆ ಆಗಿದ್ದರು, ಆದರೆ..; ಕಪ್ ಗೆದ್ದುಕೊಟ್ಟ ನಾಯಕನ ಕೈಬಿಡಲು ಕಾರಣ ಬಿಚ್ಚಿಟ್ಟ ಕೆಕೆಆರ್
Nov 02, 2024 06:10 PM IST
ಶ್ರೇಯಸ್ ಅಯ್ಯರ್ ಮೊದಲ ಆಯ್ಕೆ ಆಗಿದ್ದರು, ಆದರೆ..; ಕಪ್ ಗೆದ್ದುಕೊಟ್ಟ ನಾಯಕನ ಕೈಬಿಡಲು ಕಾರಣ ಬಿಚ್ಚಿಟ್ಟ ಕೆಕೆಆರ್
- Shreyas Iyer: ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿದ್ದೇಕೆ ಎಂದು ಕೋಲ್ಕತಾ ನೈಟ್ ರೈಡರ್ಸ್ ಸಿಇಒ ವೆಂಕಿ ಮೈಸೂರು ಬಹಿರಂಗಪಡಿಸಿದ್ದಾರೆ
ನವದೆಹಲಿ: ಫ್ರಾಂಚೈಸಿಯನ್ನು ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳದಿರುವ ಕೆಕೆಆರ್ ನಿರ್ಧಾರದ ಬಗ್ಗೆ ಕೋಲ್ಕತಾ ನೈಟ್ ರೈಡರ್ಸ್ ಸಿಇಒ ವೆಂಕಿ ಮೈಸೂರು ಕೊನೆಗೂ ಮೌನ ಮುರಿದಿದ್ದಾರೆ. ರೇವ್ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ವೆಂಕಿ, ಶ್ರೇಯಸ್ ತಮ್ಮ ಪಟ್ಟಿಯಲ್ಲಿ ನಂಬರ್ 1 ಆಯ್ಕೆಯಾಗಿದ್ದರು ಎಂದು ಬಹಿರಂಗಪಡಿಸಿದ್ದಾರೆ. ರಿಟೇನ್ ಪ್ರಕ್ರಿಯೆಯು ಎರಡೂ ಕಡೆಗಳಿಂದಲೂ ಪರಸ್ಪರ ಒಪ್ಪುವುದರ ಮೇಲೆ ಅವಲಂಬಿತವಾಗಿರುತ್ತದೆ. ಅಂತಿಮ ನಿರ್ಧಾರ ತೆಗೆದುಕೊಳ್ಳಲು ಫ್ರ್ಯಾಂಚೈಸ್ಗೆ ಏಕಪಕ್ಷೀಯ ಹಕ್ಕಿಲ್ಲ ಎಂದು ಹೇಳುವ ಮೂಲಕ ಅಯ್ಯರ್, ರಿಟೇನ್ಗೆ ಪರೋಕ್ಷವಾಗಿ ತಿಳಿಸಿದ್ದಾರೆ.
ಪ್ರಸ್ತುತ ಕೆಕೆಆರ್ ತಂಡವು ರಿಂಕು ಸಿಂಗ್, ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಮತ್ತು ರಮಣ್ದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ರಿಟೇನ್ ಪ್ರಕ್ರಿಯೆಗೆ ಸಂಬಂಧಿಸಿ ಅನೇಕ ವಿಷಯಗಳಿವೆ. ಇಲ್ಲಿ ಅರ್ಥವಾದ ಅನೇಕ ಅಂಶಗಳಿವೆ. ಕೆಲವರು ಅರ್ಥಮಾಡಿಕೊಳ್ಳುವುದಿಲ್ಲ. ಇದು ಪರಸ್ಪರ ಒಪ್ಪುವ ವಿಷಯ. ಇದು ಫ್ರ್ಯಾಂಚೈಸ್ ಹೊಂದಿರುವ ಏಕಪಕ್ಷೀಯ ಹಕ್ಕು ಅಲ್ಲ. ಆಟಗಾರನು ವಿವಿಧ ಅಂಶಗಳನ್ನು ಪರಿಗಣಿಸಿ ಒಪ್ಪಬೇಕು. ಆದರೆ ನನ್ನ ಪ್ರಕಾರ, ಅವರು ನಮ್ಮ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಇದು ನಿಮಗೂ ತಿಳಿದಿತ್ತು. ನಾಯಕತ್ವಕ್ಕಾಗಿ, ಭವಿಷ್ಯಕ್ಕಾಗಿ ಅವರನ್ನು 2022ರಲ್ಲಿ ಆಯ್ಕೆ ಮಾಡಿದ್ದೆವು. ದುರದೃಷ್ಟವಶಾತ್ 2023ರಲ್ಲಿ ಗಾಯಗೊಂಡರು. ಅವರು ಕಂಬ್ಯಾಕ್ ಮಾಡಿದ ಬಳಿಕ ಮತ್ತೆ ನಾಯಕತ್ವ ಪಡೆದರು ಎಂದು ಅವರು ಹೇಳಿದ್ದಾರೆ.
ಹರಾಜಿಗೆ ಹೋಗಲು ಅವರೇ ನಿರ್ಧರಿಸಿದ್ರು ಎಂದ ವೆಂಕಿ ಮೈಸೂರು
ಶ್ರೇಯಸ್ ಅಯ್ಯರ್ ಅವರೊಂದಿಗೆ ಉತ್ತಮ ವೈಯಕ್ತಿಕ ಸಂಬಂಧ ಹೊಂದಿದ್ದರೂ, ಹರಾಜಿಗೆ ಹೋಗುವ ಅಂತಿಮ ನಿರ್ಧಾರ ಅಯ್ಯರ್ ಅವರದ್ದಾಗಿತ್ತು ಎಂದು ವೆಂಕಿ ಮೈಸೂರು ಹೇಳಿದ್ದಾರೆ. ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸುವ ಹಕ್ಕಿದೆ ಎಂದು ಅವರು ಹೇಳಿದ್ದಾರೆ. ಅಯ್ಯರ್ ಕೆಕೆಆರ್ ತಂಡದ ಪರ ಅದ್ಭುತ ಕೆಲಸ ಮಾಡಿದ್ದಾರೆ. ನಾನು ಅವರೊಂದಿಗೆ ವೈಯಕ್ತಿಕ ಸಂಬಂಧವನ್ನು ಆನಂದಿಸುತ್ತೇನೆ. ಆದರೆ ಎಷ್ಟೇ ಸಂಬಂಧ ಇದ್ದರೂ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದರಂತೆ ಆ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾವುದು ಉತ್ತಮ ಎಂಬುದನ್ನು ಅವರೇ ನಿರ್ಧರಿಸಬೇಕು. ತಮ್ಮ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ಮೌಲ್ಯ ನಿರ್ಧರಿಸಲು ಬಯಸುವ ಹಕ್ಕು ಆಟಗಾರರಿಗಿದೆ ಎಂದು ಹೇಳಿಕೆ ನೀಡಿದ್ದಾರೆ.
17ನೇ ಆವೃತ್ತಿಯಲ್ಲಿ 351 ರನ್ ಸಿಡಿಸಿದ್ದ ಅಯ್ಯರ್
2024ರ ಐಪಿಎಲ್ನಲ್ಲಿ ಶ್ರೇಯಸ್ 351 ರನ್ ಗಳಿಸಿದ್ದರು. ಕೆಕೆಆರ್ 2012 ಮತ್ತು 2014ರಲ್ಲಿ ಕೊನೆಯದಾಗಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಈ ಎರಡು ಪ್ರಶಸ್ತಿಗಳು ಗಂಭೀರ್ ನಾಯಕತ್ವದಲ್ಲಿ ಬಂದಿತ್ತು. ಅದರ ನಂತರ 10 ವರ್ಷಗಳ ನಂತರ 2024ರಲ್ಲಿ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಮೂರನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಯ್ಯರ್ ಹರಾಜಿಗೆ ಹೋಗಿದ್ದರೂ ಕೆಕೆಆರ್ ಮತ್ತೊಮ್ಮೆ ಆತನನ್ನು ಖರೀದಿಸಬಹುದು. ಕೆಕೆಆರ್ ಪರ 28 ಪಂದ್ಯಗಳನ್ನಾಡಿರುವ ಅಯ್ಯರ್ 752 ರನ್ ಗಳಿಸಿದ್ದಾರೆ. ಗಾಯದಿಂದಾಗಿ ಅವರು ಫ್ರಾಂಚೈಸಿ ಪರ 2023ರ ಐಪಿಎಲ್ ಆವೃತ್ತಿಯನ್ನು ತಪ್ಪಿಸಿಕೊಂಡಿದ್ದರು. ಕೆಕೆಆರ್ಗೆ ಬರುವುದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದರು.