Ind vs Pak: ಭಾರತ ತಂಡವನ್ನ 6 ವಿಕೆಟ್ಗಳಿಂದ ಸೋಲಿಸಿದ ಪಾಕಿಸ್ತಾನ; ಐದೇ ಓವರ್‌ಗಳಲ್ಲಿ 120 ರನ್ ಗುರಿ ಬೆನ್ನಟ್ಟಿದ ಪಾಕ್ ಪಡೆ
India vs Pakistan: ಪಾಕಿಸ್ತಾನ ವಿರುದ್ಧದ ತನ್ನ ಹಾಂಕಾಂಗ್ ಅಂತಾರಾಷ್ಟ್ರೀಯ ಸಿಕ್ಸರ್ ಟೂರ್ನಮೆಂಟ್ ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಯಿತು. ರಾಬಿನ್ ಉತ್ತಪ್ಪ ನೇತೃತ್ವದ ಭಾರತ ಸಿಕ್ಸ್ ತಂಡವು, ತಮ್ಮ 6 ಓವರ್‌ಗಳಲ್ಲಿ 119/2 ಗಳಿಸಿತು. ಆದರೆ ಪಾಕಿಸ್ತಾನ ತಂಡವು ಒಂದು ಓವರ್ ಬಾಕಿ ಇರುವಂತೆಯೇ ಗೆದ್ದು ಬೀಗಿತು.
ಹಾಂಕಾಂಗ್ನಲ್ಲಿ ನಡೆಯುತ್ತಿರುವ ಹಾಂಕಾಂಗ್ ಅಂತಾರಾಷ್ಟ್ರೀಯ ಸಿಕ್ಸರ್ ಟೂರ್ನಮೆಂಟ್ನಲ್ಲಿ (Hong Kong International Sixes) ತನ್ನ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಸೋಲಿಗೆ ಶರಣಾಗಿದೆ. ಅದು ಕೂಡ ಬದ್ಧವೈರಿ ಪಾಕಿಸ್ತಾನ ವಿರುದ್ಧ (India vs Pakistan Match Result). ಇದು ಆರು ಓವರ್ ಪಂದ್ಯಗಳ ಟೂರ್ನಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ತನ್ನ ನಿಗದಿತ 6 ಓವರ್‌ಗಳಲ್ಲಿ 119 ರನ್ಗಳ ಕಲೆ ಹಾಕಿತು. ಆದರೆ, ಇದರ ಹೊರತಾಗಿಯೂ ಪಾಕಿಸ್ತಾನ ಕೇವಲ 30 ಎಸೆತಗಳಲ್ಲೇ ಗೆಲುವಿನ ನಗೆ ಬೀರಿತು. ಒಂದು ವಿಕೆಟ್ ಕಳೆದುಕೊಳ್ಳದೆಯೇ ಈ ಗುರಿ ತಲುಪಿದ್ದು ವಿಶೇಷ.
ಶಕ್ತಿ ಪ್ರದರ್ಶಿಸಿದ ಭರತ್ ಚಿಪ್ಲಿ-ಉತ್ತಪ್ಪ
ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಭರತ್ ಚಿಪ್ಲಿ ಮತ್ತು ರಾಬಿನ್ ಉತ್ತಮ ಅತ್ಯುತ್ತಮ ಪ್ರದರ್ಶನ ನೀಡಿದರು. ಚಿಪ್ಲಿ 16 ಎಸೆತಗಳಲ್ಲಿ 53 ರನ್ ಸಿಡಿಸಿ ಗರಿಷ್ಠ ಸ್ಕೋರರ್ ಆದರು. ಅವರ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ಗಳಿದ್ದವು. ನಾಯಕ ರಾಬಿನ್ ಉತ್ತಪ್ಪ ಕೇವಲ 8 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 31 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 387.50 ಇದೆ. ಮನೋಜ್ ತಿವಾರಿ 7 ಎಸೆತಗಳಲ್ಲಿ 17 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಟೂರ್ನಿ ನಿಯಮಗಳ ಪ್ರಕಾರ, ಒಂದು ಪಂದ್ಯದಲ್ಲಿ 6 ಆಟಗಾರರು ಆಡಬಹುದು. ಪಂದ್ಯವೂ ತಲಾ 6 ಓವರ್‌ಗಳದ್ದಾಗಿದೆ.
ಪಾಕ್ ಪರ ಅಬ್ಬರಿಸಿದ ಆಸಿಫ್-ಅಖ್ಲಾಕ್
120 ರನ್ಗಳ ಗುರಿ ನೀಡಿದ ಪಾಕ್ 5 ಓವರ್ಗಳಲ್ಲೇ ಗೆಲುವಿನ ಗೆರೆ ದಾಟಿತು. ಆಸಿಫ್ ಅಲಿ 14 ಎಸೆತಗಳಲ್ಲಿ 55 ರನ್ ಗಳಿಸಿದರೆ, ಅಖ್ಲಾಕ್ 12 ಎಸೆತಗಳಲ್ಲಿ 40 ರನ್ ಗಳಿಸಿ ಭರ್ಜರಿ ಗೆಲುವಿಗೆ ಕಾರಣರಾದರು. ಆ ಮೂಲಕ ಭಾರತ ತಂಡವನ್ನು ಸೋಲಿಸಿದರು. ಇಬ್ಬರು ಸೇರಿ 14 ಸಿಕ್ಸರ್, 6 ಬೌಂಡರಿ ಬಾರಿಸಿದರು. ಅಂದರೆ ಬೌಂಡರಿ-ಸಿಕ್ಸರ್ಗಳ ಮೂಲಕವೇ 108 ರನ್ ಹರಿದು ಬಂದಿವೆ.
ಭಾರತ ತಂಡದ ಇನ್ನಿಂಗ್ಸ್
ಮೊದಲ ಓವರ್: ಭಾರತ 27 ರನ್ ಗಳಿಸಿತು. ಅಮೀರ್ ಯಾಮಿನ್ ಬೌಲಿಂಗ್ನ ಮೊದಲ 5 ಎಸೆತಗಳಲ್ಲಿ ರಾಬಿನ್ ಉತ್ತಪ್ಪ 3 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು.
ಎರಡನೇ ಓವರ್: ಫಹೀಮ್ ಅಶ್ರಫ್ ಬೌಲಿಂಗ್ನ ಮೊದಲ ಎಸೆತದಲ್ಲಿ ರಾಬಿನ್ ಉತ್ತಪ್ಪ ಸಿಕ್ಸರ್ ಹೊಡೆದರು. ಆದರೆ 2ನೇ ಎಸೆತದಲ್ಲಿ ಬೌಲ್ಡ್ ಆದರು. ಇದರ ನಂತರ ಕೇದಾರ್ ಜಾಧವ್ ಸತತ 2 ಬೌಂಡರಿಗಳನ್ನು ಬಾರಿಸಿದರು. ಬಳಿಕ ಮನೋಜ್ ತಿವಾರಿ ಔಟಾದರು. ಈ ಓವರ್‌ನಲ್ಲಿ 18 ರನ್ ಹರಿದು ಬಂದವು.
ಮೂರನೇ ಓವರ್: ಪಾಕಿಸ್ತಾನದ ಲೆಗ್ ಸ್ಪಿನ್ನರ್ ಶಾದಾಬ್ ಖಾನ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಕೇವಲ 8 ರನ್ ನೀಡಿದರು.
ನಾಲ್ಕನೇ ಓವರ್: ಫಹೀಮ್ ಅಶ್ರಫ್ ಅವರ ಓವರ್‌ನಲ್ಲಿ 32 ರನ್ ಗಳಿಸಲಾಯಿತು. ಈ ಓವರ್‌ನಲ್ಲಿ ಭರತ್ ಚಿಪ್ಲಿ 4 ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು.
ಐದನೇ ಓವರ್: ಹುಸೇನ್ ತಲಾತ್ ಅವರ ಬೌಲಿಂಗ್ನಲ್ಲಿ 14 ರನ್ ಬಂದವು. ಮನೋಜ್ ತಿವಾರಿ ಮೊದಲ 2 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಆದರೆ ನಂತರದ ನಾಲ್ಕು ಎಸೆತಗಳಲ್ಲಿ ಯಾವುದೇ ಬೌಂಡರಿ ಬರಲಿಲ್ಲ.
ಆರನೇ ಓವರ್: ಆಸಿಫ್ ಅಲಿ ಬೌಲಿಂಗ್ನ ಮೊದಲ 3 ಎಸೆತಗಳಲ್ಲಿ 3 ಬೌಂಡರಿಗಳು ಬಂದವು. ಭರತ್ ಚಿಪ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೊನೆಯ ಓವರ್‌ನಲ್ಲಿ ಭಾರತ 20 ರನ್ ಗಳಿಸಿತು. ಭಾರತ ನಿಗದಿತ 6 ಓವರ್‌ಗಳಲ್ಲಿ 119 ರನ್ ಗಳಿಸಿತು.
ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ
ಮೊದಲ ಓವರ್: ಸ್ಟುವರ್ಟ್ ಬಿನ್ನಿ ಅವರ ಬೌಲಿಂಗ್ನಲ್ಲಿ 21 ರನ್ ಗಳಿಸುವ ಮೂಲಕ ವೇಗದ ಆರಂಭ ಪಡೆಯಿತು. ಆಸಿಫ್ ಅಲಿ ಎರಡು ಸಿಕ್ಸರ್ ಬಾರಿಸಿದರೆ, ಅಖ್ಲಾಕ್ ಬೌಂಡರಿ ಬಾರಿಸಿದರು.
ಎರಡನೇ ಓವರ್: ಪಾಕಿಸ್ತಾನ 2ನೇ ಓವರ್‌ನಲ್ಲಿ 23 ರನ್ ಗಳಿಸಿತು. ಕೇದಾರ್ ಜಾಧವ್ ಅವರ ಓವರ್‌ನಲ್ಲಿ ಆಸಿಫ್ ಅಲಿ 3 ಸಿಕ್ಸರ್ ಸಿಡಿಸಿದರು.
ಮೂರನೇ ಓವರ್: ಶಹಬಾಜ್ ನದೀಮ್ ಅವರ ಬೌಲಿಂಗ್ನಲ್ಲಿ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳು 24 ರನ್ ಚಚ್ಚಿದರು. ಮೊಹಮ್ಮದ್ ಅಖ್ಲಾಕ್ ಈ ಓವರ್‌ನಲ್ಲಿ 3 ಸಿಕ್ಸರ್, 1 ಬೌಂಡರಿ ಬಾರಿಸಿದರು.
ನಾಲ್ಕನೇ ಓವರ್: ಮನೋಜ್ ತಿವಾರಿ ಕೂಡ ಒಂದು ಓವರ್‌ನಲ್ಲಿ 20 ರನ್ ನೀಡಿದರು. ಈ ವೇಳೆ ಆಸಿಫ್ ಅಲಿ ಮತ್ತು ಅಖ್ಲಾಕ್ ತಲಾ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು.
ಐದನೇ ಓವರ್: ಶಹಬಾಜ್ ನದೀಮ್ ಬೌಲಿಂಗ್ನಲ್ಲಿ ಆಸಿಫ್ ಅಲಿ 4 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು. 14 ಎಸೆತಗಳಲ್ಲಿ 55 ರನ್ ಗಳಿಸಿದರು. ಈ ಓವರ್‌ನಲ್ಲಿ ಶಹಬಾಜ್ 33 ರನ್ ಬಿಟ್ಟುಕೊಟ್ಟು ಭಾರತದ ಸೋಲಿಗೆ ಕಾರಣರಾದರು.
ಇದನ್ನೂ ಓದಿ: ಐದು ವಿಕೆಟ್ ಪಡೆದು ದಿಗ್ಗಜರ ದಾಖಲೆ ಮುರಿದ ಜಡೇಜಾ