3ನೇ ಟೆಸ್ಟ್‌ನಲ್ಲೂ ಭಾರತ ತಂಡ ಬ್ಯಾಟಿಂಗ್ ವೈಫಲ್ಯ: ಗೌತಮ್ ಗಂಭೀರ್ ಕೆಳಗಿಳಿಸಿ ಈತನನ್ನು ನೇಮಿಸಿ, ನೆಟ್ಟಿಗರ ಆಗ್ರಹ
Gautam Gambhir: 3ನೇ ಟೆಸ್ಟ್‌ನಲ್ಲೂ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಟೀಮ್ ಇಂಡಿಯಾ ಹೆಡ್ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ ಅವರನ್ನು ಕೆಳಗಿಳಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಮತ್ತೆ ಮುಂದುವರೆದಿದೆ. ತವರಿನ ಪಿಚ್ಗಳಲ್ಲಿ ರನ್ ಗಳಿಸಲು ಪರದಾಟ ನಡೆಸುತ್ತಿರುವುದು ಅಚ್ಚರಿ ಮೂಡಿಸಿದೆ. ನ್ಯೂಜಿಲೆಂಡ್ ಸ್ಪಿನ್ ಬೌಲಿಂಗ್ ವಿರುದ್ಧ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೇ ಬ್ಯಾಟ್ನಿಂದ ಸದ್ದು ಮಾಡುವುಲ್ಲಿ ವಿಫಲರಾಗಿದ್ದಾರೆ. ಕಳೆದ 2 ಟೆಸ್ಟ್ಗಳಲ್ಲಿ ವೈಫಲ್ಯ ಅನುಭವಿಸಿದ್ದ ಬ್ಯಾಟರ್ಸ್ 3ನೇ ಟೆಸ್ಟ್ನಲ್ಲಾದರೂ ಕಂಬ್ಯಾಕ್ ಮಾಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ, ಆಗಿದ್ದೇ ಬೇರೆ. ಕೊನೆಯ ಪಂದ್ಯದಲ್ಲೂ ಶುಭ್ಮನ್ ಗಿಲ್ (90), ರಿಷಭ್ ಪಂತ್ (60) ಹೊರತುಪಡಿಸಿ ಉಳಿದವರು ಪೆವಿಲಿಯನ್ ಪರೇಡ್ ನಡೆಸಿದರು. ಆದರೆ ಬ್ಯಾಟರ್ಗಳು ಫೇಲ್ ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗ್ತಿರೋದು ಗೌತಮ್ ಗಂಭೀರ್ (Gautam Gambhir). ಏಕೆ?
ಹೌದು, ಗಂಭೀರ್ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ಸತತ ಸೋಲುಗಳು, ಬ್ಯಾಟರ್ಗಳ ವೈಫಲ್ಯ. ಗಂಭೀರ್ ಅವರನ್ನು ಹೆಡ್ಕೋಚ್ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಹಿಂದೆ ರವಿ ಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಮಾರ್ಗದರ್ಶನದ ಅಡಿಯಲ್ಲಿ ಭಾರತ ತಂಡವು ದೇಶ-ವಿದೇಶಗಳಲ್ಲಿ ಅಬ್ಬರಿಸಿತ್ತು. ಯಾವುದೇ ಫಾರ್ಮೆಟ್ ಆಗಿರಲಿ ಭಾರತ ತಂಡದ್ದೇ ದರ್ಬಾರ್ ನಡೆಯುತ್ತಿತ್ತು. ಶಾಸ್ತ್ರಿ-ದ್ರಾವಿಡ್ ಕೋಚಿಂಗ್ ಅಡಿಯಲ್ಲಿ ರೋಹಿತ್ ಪಡೆ ಸೋತಿದ್ದೇ ಕಡಿಮೆ. ಆದರೆ ಗಂಭೀರ್ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಎರಡು ಸರಣಿಗಳನ್ನು ಸೋತಿದೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತಿದ್ದ ಭಾರತ ತಂಡ, ಇದೀಗ ನ್ಯೂಜಿಲೆಂಡ್ ಎದುರು ಟೆಸ್ಟ್ ಸರಣಿ ಸೋತಿದೆ.
ಜೂನ್ನಲ್ಲಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡ ಬಳಿಕ ಗಂಭೀರ್ ಕೋಚ್ ಆಗಿ ಚಾರ್ಚ್ ತೆಗೆದುಕೊಂಡರು. ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಗೆಲುವು, ಶ್ರೀಲಂಕಾ ಟಿ20 ಸರಣಿ ಗೆಲುವು, ಏಕದಿನ ಸರಣಿ ಸೋಲು, ನ್ಯೂಜಿಲೆಂಡ್ ವಿರುದ್ಧ ಭಾರತ ಟೆಸ್ಟ್ ಸರಣಿ ಸೋಲು ಕಂಡಿದೆ. ಮುಂದಿನ ಸರಣಿಗಳಿಗೂ ಮುನ್ನ ಆತಂಕ ಶುರುವಾಗಿದೆ. ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿ ಬಳಿಕ ಭಾರತ ತಂಡವು ಬಾರ್ಡರ್ ಗವಾಸ್ಕರ್ ಟ್ರೋಫಿ ಆಡಬೇಕಿದೆ. ಆದರೆ ಗಂಭೀರ್ ಅವರ ಗೇಮ್ ಪ್ಲಾನ್ಗಳು, ಸ್ಟ್ರಾಟರ್ಜಿ ಬದಲಾಗಬೇಕಿದೆ. ಏಕೆಂದರೆ ಕಂಡಿಷನ್, ಪಿಚ್ ಇಲ್ಲಿಗಿಂತ ತುಂಬಾ ವಿಭಿನ್ನವಾಗಿವೆ. ಆದರೆ, ಈ ಸರಣಿ ಗೆಲುವು ಸಾಧಿಸುವುದು ಭಾರತ ತಂಡಕ್ಕೆ ಅನಿವಾರ್ಯವಾಗಿದೆ.
ತನಗೆ ಬೇಕಾದ ಸಿಬ್ಬಂದಿಯನ್ನೇ ಆಯ್ಕೆ ಮಾಡಿಕೊಂಡ್ರು
ಗಂಭೀರ್ ಹೆಡ್ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ತನಗೆ ಬೇಕಾದ ಕೋಚಿಂಗ್ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಂಡರು. ಬಿಸಿಸಿಐ ವಿದೇಶಿ ಕೋಚ್ ಬೇಡವೆಂದರೂ ಬಿಡದ ಅವರು ದಕ್ಷಿಣ ಆಫ್ರಿಕಾ ತಂಡದ ಮೋರ್ನೆ ಮೊರ್ಕೆಲ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿಕೊಂಡರು. ಫೀಲ್ಡಿಂಗ್ ಕೋಚ್ ಟಿ ದಿಲೀಪ್, ಸಹಾಯಕ ಕೋಚ್ಗಳಾಗಿ ರಿಯಾನ್ ಟೆನ್ ಡೋಸ್ಕೇಟ್, ಅಭಿಷೇಕ್ ನಾಯರ್ ನೇಮಕಗೊಂಡಿದ್ದಾರೆ. ಆದರೆ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬರುತ್ತಿಲ್ಲ. ಇದು ಐಪಿಎಲ್ ಅಲ್ಲ. ಐಪಿಎಲ್ನಲ್ಲಿ ರೂಪಿಸಿದಂತೆ ರಣತಂತ್ರಗಳನ್ನು ರಾಷ್ಟ್ರೀಯ ತಂಡದಲ್ಲಿ ರೂಪಿಸಲು ಸಾಧ್ಯವಿಲ್ಲ. ನಿಮ್ಮ ನಾಯಕತ್ವದಲ್ಲಿ ಭಾರತ ತಂಡ ಅತ್ಯಂತ ಕೆಟ್ಟ ಕ್ರಿಕೆಟ್ ಆಡುತ್ತಿದೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಲಕ್ಷ್ಮಣ್ ಅವರನ್ನು ಕೋಚ್ ಆಗಿ ನೇಮಿಸಿ
ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ದೇಶಕರೂ ಆಗುರುವ ದಿಗ್ಗಜ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಅವರನ್ನು ಗಂಭೀರ್ ಸ್ಥಾನಕ್ಕೆ ನೇಮಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ತಾತ್ಕಾಲಿಕ ಕೋಚ್ ಆಗಿ ಆಗಾಗ್ಗೆ ಭಾರತ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಆದರೆ ಗಂಭೀರ್ಗೆ ಹೋಲಿಸಿದರೆ ಲಕ್ಷ್ಮಣ್ ಅವರ ತಂತ್ರಗಳು ತುಂಬಾ ಭಿನ್ನ ವಿಭಿನ್ನ. ಗಂಭೀರ್ ಬಾಡಿ ಲಾಂಗ್ವೇಜ್ನಲ್ಲಿ ಅಗ್ರೆಸ್ಸಿವ್ ಇದ್ದರೂ ಮಾರ್ಗದರ್ಶನದಲ್ಲಿ ಅಂತಹ ಅಗ್ರೆಸ್ಸಿವ್ ಇಲ್ಲ ಎಂದು ನೆಟ್ಟಿಗರು ಅಣಕಿಸಿದ್ದಾರೆ. ಗಂಭೀರ್ ಬೇಡ, ಲಕ್ಷ್ಮಣ್ ಅವರನ್ನೇ ಹೆಡ್ಕೋಚ್ ಆಗಿ ನೇಮಿಸಿ ಎಂದು ಆಗ್ರಹಿಸುತ್ತಿದ್ದಾರೆ.
ನ್ಯೂಜಿಲೆಂಡ್ ಎದುರು ಬ್ಯಾಟರ್ಸ್ ಫೇಲ್
3ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ ಕಳಪೆ ಪ್ರದರ್ಶನ ನೀಡಿದ್ದಾರೆ. ಬೌಲರ್ಗಳು ಮಾತ್ರ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಯಶಸ್ವಿ ಜೈಸ್ವಾಲ್ 30, ರೋಹಿತ್ ಶರ್ಮಾ 18, ವಿರಾಟ್ ಕೊಹ್ಲಿ 4, ರವೀಂದ್ರ ಜಡೇಜಾ 14, ಸರ್ಫರಾಜ್ ಖಾನ್ ಸೊನ್ನೆ ಸುತ್ತಿದರು. ಅದಕ್ಕೂ ಮುನ್ನ ಕಳೆದ ಎರಡು ಟೆಸ್ಟ್ಗಳಲ್ಲೂ ಇದೇ ಪ್ರದರ್ಶನ ನೀಡಿದ್ದರು. ಹೀಗಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಮುನ್ನ ಆತಂಕ ಶುರುವಾಗಿದೆ. ಆಸ್ಟ್ರೇಲಿಯಾ ಪಿಚ್ಗಳಲ್ಲಿ ಭಾರತ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡೋಣ.