ರಸೆಲ್ ಮಸ್ಸಲ್ ಪವರ್ ಮುಂದೆ ಶರಣಾದ ಹೈದರಾಬಾದ್, ಕೆಕೆಆರ್ಗೆ ರೋಚಕ ಗೆಲುವು; ಐಪಿಎಲ್ ದುಬಾರಿ ಕ್ಯಾಪ್ಟನ್ಗೆ ಮೊದಲ ಸೋಲು
Mar 24, 2024 01:28 AM IST
ರಸೆಲ್ ಮಸ್ಸಲ್ ಪವರ್ ಮುಂದೆ ಶರಣಾದ ಹೈದರಾಬಾದ್
- KKR vs SRH : ಐಪಿಎಲ್ 3ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 4 ರನ್ಗಳ ರೋಚಕ ಗೆಲುವು ಸಾಧಿಸಿದೆ. ಕೊನೆಯ ಓವರ್ನಲ್ಲಿ ಎಸ್ಆರ್ಹೆಚ್ ಪಂದ್ಯವನ್ನು ಕೈಚೆಲ್ಲಿತು.
ಆ್ಯಂಡ್ರೆ ರಸೆಲ್ (65* ಮತ್ತು 25/2) ಅವರ ಆಲ್ರೌಂಡರ್ ಆಟದ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್/ಕೋಲ್ಕತ್ತಾ ನೈಟ್ ರೈಡರ್ಸ್ 17ನೇ ಆವೃತ್ತಿಯ ಐಪಿಎಲ್ನ ಮೂರನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 4 ರನ್ಗಳಿಂದ ರೋಚಕ ಗೆಲುವು ದಾಖಲಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಕೆಕೆಆರ್ ಶುಭಾರಂಭ ಕಂಡಿದೆ. ಆದರೆ ಏಕದಿನ ವಿಶ್ವಕಪ್ ಗೆದ್ದ ನಾಯಕ ಹಾಗೂ ಐಪಿಎಲ್ನ ದುಬಾರಿ ಕ್ಯಾಪ್ಟನ್ ಎನಿಸಿಕೊಂಡ ಪ್ಯಾಟ್ ಕಮಿನ್ಸ್ ಮೊದಲ ಸೋಲು ಕಂಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ, ಬಿರುಸಿನ ಆರಂಭ ಮತ್ತು ಆ್ಯಂಡ್ರೆ ರಸೆಲ್-ಫಿಲ್ ಸಾಲ್ಟ್ ಅವರ ಭರ್ಜರಿ ಅರ್ಧಶತಕಗಳ ಬಲದಿಂದ ಬೃಹತ್ ಮೊತ್ತವನ್ನು ಕಲೆ ಹಾಕಿತು. 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಈ ಗುರಿ ಬೆನ್ನಟ್ಟಿದ ಹೈದರಾಬಾದ್, 20 ಓವರ್ಗಳಲ್ಲಿ7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ಘಟಾನುಘಟಿ ಬ್ಯಾಟರ್ಗಳ ದಂಡೇ ಇದ್ದರೂ ಕ್ರೀಸ್ ನಿಂತು ಅಬ್ಬರಿಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಕ್ಲಾಸೆನ್ ಮಾತ್ರ ಕೊನೆಯವರೆಗೂ ಹೋರಾಟ ನಡೆಸಿದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಗುರಿ ಬೆನ್ನಟ್ಟಿದ ವೇಳೆ ಮಯಾಂಕ್ ಅಗರ್ವಾಲ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಭದ್ರ ಬುನಾದಿ ಹಾಕಿಕೊಟ್ಟರು. ಮೊದಲ ವಿಕೆಟ್ಗೆ 5.3 ಓವರ್ಗಳಲ್ಲಿ 60 ರನ್ಗಳು ಹರಿದು ಬಂದವು. ಆರಂಭಿಕರಿಬ್ಬರು ತಲಾ 32 ರನ್ ಸಿಡಿಸಿ ಔಟಾದರು. ಆದರೆ ಆ ಬಳಿಕ ಬಂದ ಬ್ಯಾಟರ್ಗಳು ಆಕ್ರಮಣಕಾರಿ ಆಟದ ಕಡೆ ಗಮನ ಕೊಡಲಿಲ್ಲ. ರಾಹುಲ್ ತ್ರಿಪಾಠಿ 20, ಏಡನ್ ಮಾರ್ಕ್ರಮ್ 18, ಅಬ್ದುಲ್ ಸಮದ್ 15 ರನ್ಗಳಿಗೆ ಸುಸ್ತಾದರು. ಆದರೆ ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು.
ಕೊನೆಯಲ್ಲಿ ಕ್ಲಾಸೆನ್ ಅಬ್ಬರ
ಕೊನೆಯ ಐದು ಓವರ್ಗಳಿಗೆ 80+ ರನ್ ಬೇಕಿದ್ದಾಗ ಹೆನ್ರಿಚ್ ಕ್ಲಾಸ್ ಬೆಂಕಿ-ಬಿರುಗಾಳಿ ಆಟಕ್ಕೆ ಕೈಹಾಕಿದರು. ಸಿಕ್ಸರ್ಗಳ ಸುರಿಮಳೆಗೈದರು. ಪರಿಣಾಮ ಕೊನೆಯ ಎರಡು ಓವರ್ಗಳಲ್ಲಿ ತಂಡ ಗೆಲ್ಲಲು 39 ರನ್ಗಳ ಬೇಕಾಯಿತು. 19ನೇ ಓವರ್ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಕ್ಲಾಸೆನ್ 3 ಸಿಕ್ಸರ್ ಮತ್ತು ಶಹಬಾಜ್ 1 ಸಿಕ್ಸರ್ ಸಹಿತ 26 ರನ್ ಗಳಿಸಿದರು. ಇದೇ ವೇಳೆ ಕ್ಲಾಸೆನ್ ಕೇವಲ 25 ಎಸೆತಗಳಲ್ಲಿ ಅರ್ಧಶತಕವನ್ನೂ ಪೂರೈಸಿದರು. ಇದರೊಂದಿಗೆ ಕೊನೆಯ ಓವರ್ನಲ್ಲಿ ಗೆಲುವಿಗೆ 13 ರನ್ ಬೇಕಾಯಿತು.
ಆದರೆ ಹರ್ಷಿತ್ ರಾಣಾ ಎಸೆದ ಅಂತಿಮ ಓವರ್ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ಕ್ಲಾಸೆನ್ ಎರಡನೇ ಎಸೆತದಲ್ಲಿ ಸಿಂಗಲ್ ಪಡೆದರು. ಆದರೆ ಮೂರನೇ ಎಸೆತದಲ್ಲಿ ಶಹಬಾಜ್ ಅಹ್ಮದ್ ಔಟಾದರೆ, ಕ್ರೀಸ್ಗೆ ಬಂದ ಮಾರ್ಕೊ ಜಾನ್ಸನ್ ಸಿಂಗಲ್ ಪಡೆದು ಕ್ಲಾಸೆನ್ಗೆ ಸ್ಟ್ರೈಕ್ ಕೊಟ್ಟರು. ಆದರೆ, ಸೌತ್ ಆಫ್ರಿಕಾ ಆಟಗಾರ ಕ್ಯಾಚ್ ನೀಡಿ ಗೆಲುವಿನ ಅಂಚಿನಲ್ಲಿ ಎಡವಿದರು. ಕೊನೆಯ ಎಸೆತಕ್ಕೆ 5 ರನ್ ಬೇಕಿದ್ದ ವೇಳೆ ಸ್ಟ್ರೈಕ್ನಲ್ಲಿದ್ದ ಪ್ಯಾಟ್ ಕಮಿನ್ಸ್, ರನ್ ಗಳಿಸಲು ವಿಫಲರಾದರು. ಇದರೊಂದಿಗೆ ರೋಚಕ ಕದನದಲ್ಲಿ ಕೆಕೆಆರ್ಗೆ 4 ರನ್ಗಳ ರೋಚಕ ಗೆಲುವು ದಾಖಲಿಸಿತು. ಕೊನೆಯ ಓವರ್ನಲ್ಲಿ 13 ರನ್ ರಕ್ಷಿಸಿಕೊಂಡ ರಾಣಾ ಹೀರೋ ಆದರು.
ಕೆಕೆಆರ್ಗೆ ಸಾಲ್ಟ್-ರಸೆಲ್ ಆಸರೆ
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಫಿಲ್ ಸಾಲ್ಟ್ ಭರ್ಜರಿ ಆರಂಭದ ಭರವಸೆ ನೀಡಿದರೂ ಉಳಿದ ಆಟಗಾರರು ದಿಢೀರ್ ಕುಸಿತ ಕಂಡರು. ಆರಂಭಿಕನಾಗಿ ಬಡ್ತಿ ಪಡೆದ ಸುನಿಲ್ ನರೇನ್ (2), ವೆಂಕಟೇಶ್ ಅಯ್ಯರ್ (7), ನಿತೀಶ್ ರಾಣಾ (9) ಬೇಗನೇ ಔಟಾದರು. ನಾಯಕ ಶ್ರೇಯಸ್ ಅಯ್ಯರ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು.
ಭಾರಿ ಕುಸಿತ ಕಂಡು ಸಂಕಷ್ಟದಲ್ಲಿದ್ದ ಕೋಲ್ಕತ್ತಾಗೆ ರಮಣ್ದೀಪ್ ಸಿಂಗ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಆರಂಭಿಕನಾಗಿ ಆಡುತ್ತಿದ್ದ ಸಾಲ್ಟ್ ಇದೇ ವೇಳೆ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ರಮಣ್ದೀಪ್ 17 ಎಸೆತಗಳಲ್ಲಿ 4 ಸಿಕ್ಸರ್, 1 ಬೌಂಡರಿ ಸಹಿತ 35 ರನ್ ಗಳಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಸಾಲ್ಟ್ 40 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್ ಸಿಡಿಸಿ 54 ರನ್ ಗಳಿಸಿ ಔಟಾದರು.
119ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ವೇಳೆ ಆರ್ಭಟಿಸಿದ ಆ್ಯಂಡ್ರೆ ರಸೆಲ್, ಸಿಕ್ಸರ್ಗಳ ಸುರಿಮಳೆಗೈದರು. ಕೇವಲ 20 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದರು. ಎಸ್ಆರ್ಎಚ್ ಬೌಲರ್ಗಳಿಗೆ ಬೆಂಡೆತ್ತಿದ ರಸೆಲ್, ಕೇವಲ 25 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ನೆರವಿನಿಂದ ಅಜೇಯ 64 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಈ ವೇಳೆ ರಿಂಕು ಸಿಂಗ್ 23 ರನ್ ಚಚ್ಚಿ ಸಾಥ್ ನೀಡಿದರು. ಮಿಚೆಲ್ ಸ್ಟಾರ್ಕ್ ಅಜೇಯ 6 ರನ್ ಗಳಿಸಿದರು.