ಕೃಷ್ಣನ್ ಶ್ರೀಜಿತ್ ಸ್ಫೋಟಕ 150, ಮುಂಬೈ ವಿರುದ್ಧ 383 ರನ್ ಗುರಿ ಬೆನ್ನಟ್ಟಿ ಗೆದ್ದ ಕರ್ನಾಟಕ; ಅಯ್ಯರ್ ವೇಗದ ಶತಕ ವ್ಯರ್ಥ
Dec 21, 2024 06:20 PM IST
ಕೃಷ್ಣನ್ ಶ್ರೀಜಿತ್ ಸ್ಫೋಟಕ 150, ಮುಂಬೈ ವಿರುದ್ಧ 383 ರನ್ ಗುರಿ ಬೆನ್ನಟ್ಟಿ ಗೆದ್ದ ಕರ್ನಾಟಕ; ಅಯ್ಯರ್ ವೇಗದ ಶತಕ ವ್ಯರ್ಥ
- Karnataka vs Mumbai: ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ವಿರುದ್ಧ ಕರ್ನಾಟಕ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಕೃಷ್ಣನ್ ಶ್ರೀಜಿತ್ ಸ್ಫೋಟಕ 150 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಇಂದಿನಿಂದ (ಡಿಸೆಂಬರ್ 21) ಆರಂಭಗೊಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಆರಂಭಿಕ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಕೃಷ್ಣನ್ ಶ್ರೀಜಿತ್ (150) ಅಬ್ಬರಕ್ಕೆ ಮಂಡಿಯೂರಿದ ಮುಂಬೈ ಹೀನಾಯ ಸೋಲಿಗೆ ಶರಣಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡವು ಪೇರಿಸಿದ್ದ 383 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ, ಇನ್ನೂ 22 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ನಗೆ ಬೀರಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಇದರೊಂದಿಗೆ ಬೃಹತ್ ಟಾರ್ಗೆಟ್ ಅನ್ನು ಚೇಸ್ ಮಾಡುವ ಮೂಲಕ ದಾಖಲೆ ಕೂಡ ಬರೆದಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸೇಡಿಯಂ ಬಿ ಗ್ರೌಂಡ್ನಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಜಯಿಸಿದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 382 ರನ್ಗಳ ಬೃಹತ್ ಮೊತ್ತ ಪೇರಿಸಿತು. ಶ್ರೇಯಸ್ ಅಯ್ಯರ್ ವೇಗದ ಶತಕ (114 ರನ್) ಸಿಡಿಸಿದರೆ, ಹಾರ್ದಿಕ್ ತಮೋರ್ 84, ಶಿವಂ ದುಬೆ 63 ರನ್ ಚಚ್ಚಿದರು. ಗುರಿ ಬೆನ್ನಟ್ಟಿದ ಕರ್ನಾಟಕ 46.2 ಓವರ್ಗಳಲ್ಲಿ 383 ರನ್ ಬಾರಿಸಿ ಗೆದ್ದು ಬೀಗಿತು. ಶ್ರೀಜಿತ್ ಕೃಷ್ಣನ್ 150* ರನ್ ಸಿಡಿಸಿದರು.
ಶ್ರೇಯಸ್ ಅಯ್ಯರ್, ಶಿವಂ ದುವೆ ಅಬ್ಬರ
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಆಂಗ್ಕ್ರಿಶ್ ರಘುವಂಶಿ (6) ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ವಿದ್ಯಾದರ್ ಪಾಟೀಲ್ ಆರಂಭಿಕ ಆಘಾತ ನೀಡಿದರು. ಆದರೆ, ಆಯುಷ್ ಮ್ಹಾತ್ರೆ ಮತ್ತು ಹಾರ್ದಿಕ್ ತಮೋರ್ ಅದ್ಭುತ ಜೊತೆಯಾಟವಾಡಿದರು. ಇಬ್ಬರು ಸಹ ಅರ್ಧಶತಕ ಬಾರಿಸಿದರು. ಎರಡನೇ ವಿಕೆಟ್ಗೆ 141 ರನ್ಗಳ ಪಾಲುದಾರಿಕೆ ಒದಗಿಸಿದರು. ಆಯುಷ್ 82 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 78 ರನ್ ಗಳಿಸಿ ಪ್ರವೀಣ್ ದುಬೆ ಬೌಲಿಂಗ್ನಲ್ಲಿ ಔಟಾದರು. ಬಳಿಕ ಹಾರ್ದಿಕ್ 94 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 84 ರನ್ ಪೇರಿಸಿದರು. ಶ್ರೇಯಸ್ ಗೋಪಾಲ್ ವಿಕೆಟ್ ಪಡೆದರು.
ನಾಲ್ಕನೇ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿದರು. ಅಯ್ಯರ್ ಬರುವುದಕ್ಕೂ ಮುನ್ನ ತಂಡ ಸುಸ್ಥಿತಿಯಲ್ಲಿತ್ತು. ಆರಂಭದಿಂದಲೇ ವೇಗದ ಬ್ಯಾಟಿಂಗ್ಗೆ ಕೈ ಹಾಕಿದ ಅಯ್ಯರ್, ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದರು. ಇದರ ಮಧ್ಯೆ ಸೂರ್ಯಕುಮಾರ್ 20 ರನ್ ಸಿಡಿಸಿ ಔಟಾದರು. ಬಳಿಕ ಅಯ್ಯರ್ಗೆ ಶಿವಂ ದುವೆ ಜೋಡಿಯಾದರು. ಇಬ್ಬರ ಜುಗಲ್ಬಂದಿ ಕರ್ನಾಟಕಕ್ಕೆ ತಲೆನೋವು ತರಿಸಿತು. 5ನೇ ವಿಕೆಟ್ಗೆ ಅಜೇಯ 148 ರನ್ಗಳ ಜೊತೆಯಾಟ ಬಂತು. ಅಯ್ಯರ್ 55 ಎಸೆತಗಳಲ್ಲಿ 114 ರನ್ ಬಾರಿಸಿದರೆ, ದುಬೆ 36 ಎಸೆತಗಳಲ್ಲಿ ತಲಾ 5 ಸಿಕ್ಸರ್, ಬೌಂಡರಿ ಸಹಿತ 63 ರನ್ ಚಚ್ಚಿದರು.
ಶ್ರೀಜಿತ್, ಅನೀಶ್, ಪ್ರವೀಣ್ ಆಟಕ್ಕೆ ಮುಂಬೈ ಕಂಗಾಲು
ಬೃಹತ್ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ಉತ್ತಮ ಆರಂಭ ಪಡೆಯುವ ಮುನ್ಸೂಚನೆ ನೀಡಿತು. ಆದರೆ, ತಂಡದ ಮೊತ್ತ 36 ರನ್ ಆಗಿದ್ದಾಗ ನಿಕಿನ್ ಜೋನ್ಸ್ (21), ಜುನೇದ್ ಖಾನ್ ಬೌಲಿಂಗ್ನಲ್ಲಿ ಹೊರ ನಡೆದರು. ಉತ್ತಮ ಲಯದಲ್ಲಿದ್ದ ಮಯಾಂಕ್ ಅಗರ್ವಾಲ್ 47 ರನ್ ಸಿಡಿಸಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಬಳಿಕ ಒಂದಾದ ಅನೀಶ್ ಕೆವಿ ಮತ್ತು ಕೃಷ್ಣನ್ ಶ್ರೀಜಿತ್ ಅವರು ಬೌಲರ್ಗಳ ವಿರುದ್ಧ ದಂಡಯಾತ್ರೆ ನಡೆಸಿದರು. ಈ ಜೋಡಿ ಮೂರನೇ ವಿಕೆಟ್ಗೆ 94 ರನ್ ಪೇರಿಸಿತು. ವೇಗವಾಗಿ ಬ್ಯಾಟಿಂಗ್ ನಡೆಸಿದ ಪರಿಣಾಮ ಗುರಿ ಕಡಿಮೆ ಆಗುತ್ತಾ ಹೋಯಿತು. ಇದು ಒತ್ತಡವನ್ನೂ ಕಡಿಮೆ ಮಾಡಿತು.
ಅನೀಶ್ 66 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ಗಳ ಸಹಿತ 82 ರನ್ ಗಳಿಸಿದರು. ಬಳಿಕ ಶ್ರೀಜಿತ್ಗೆ ಜೊತೆಯಾದ ಪ್ರವೀಣ್ ದುಬೆ 4ನೇ ವಿಕೆಟ್ಗೆ 183 ರನ್ ಪೇರಿಸಲು ನೆರವಾದರು. ಇದೇ ವೇಳೆ ಶ್ರೀಜಿತ್ 101 ಎಸೆತಗಳಲ್ಲಿ 20 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 150 ರನ್ ಪೇರಿಸಿದರು. ಪ್ರವೀಣ್ ದುಬೆ 50 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 65 ರನ್ ಬಾರಿಸಿ ಔಟಾಗದೆ ಉಳಿದರು. ಇವರಿಬ್ಬರ ಹೋರಾಟಕ್ಕೆ ಮುಂಬೈ ಬೌಲರ್ಗಳು ಪರದಾಡಿದರು. ಬೃಹತ್ ಗುರಿಯನ್ನು ಡಿಪೆಂಡ್ ಮಾಡಿಕೊಳ್ಳುವ ಲೆಕ್ಕಚಾರ ಹಾಕಿಕೊಂಡಿದ್ದ ಮುಂಬೈಗೆ ಈ ಜೋಡಿ ಆಘಾತ ನೀಡಿತು.