ಭಾರತ ತಂಡವನ್ನು ಮತ್ತೆ ಟಾರ್ಗೆಟ್ ಮಾಡಿದ ಆಸ್ಟ್ರೇಲಿಯನ್ ಮೀಡಿಯಾ: ರವೀಂದ್ರ ಜಡೇಜಾ ಪತ್ರಿಕಾಗೋಷ್ಠಿಯಲ್ಲಿ ವಿವಾದ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ತಂಡವನ್ನು ಮತ್ತೆ ಟಾರ್ಗೆಟ್ ಮಾಡಿದ ಆಸ್ಟ್ರೇಲಿಯನ್ ಮೀಡಿಯಾ: ರವೀಂದ್ರ ಜಡೇಜಾ ಪತ್ರಿಕಾಗೋಷ್ಠಿಯಲ್ಲಿ ವಿವಾದ

ಭಾರತ ತಂಡವನ್ನು ಮತ್ತೆ ಟಾರ್ಗೆಟ್ ಮಾಡಿದ ಆಸ್ಟ್ರೇಲಿಯನ್ ಮೀಡಿಯಾ: ರವೀಂದ್ರ ಜಡೇಜಾ ಪತ್ರಿಕಾಗೋಷ್ಠಿಯಲ್ಲಿ ವಿವಾದ

Australian media: ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ರವೀಂದ್ರ ಜಡೇಜಾ, ಇಂಗ್ಲಿಷ್ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ ಎಂದು ಸುಳ್ಳು ಸುದ್ದಿಗಳನ್ನು ಆಸೀಸ್ ಮಾಧ್ಯಮಗಳು ಹಬ್ಬಿಸುತ್ತಿವೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಭಾರತ ತಂಡವನ್ನು ಮತ್ತೆ ಟಾರ್ಗೆಟ್ ಮಾಡಿದ ಆಸ್ಟ್ರೇಲಿಯನ್ ಮೀಡಿಯಾ: ರವೀಂದ್ರ ಜಡೇಜಾ ಪತ್ರಿಕಾಗೋಷ್ಠಿಯಲ್ಲಿ ವಿವಾದ
ಭಾರತ ತಂಡವನ್ನು ಮತ್ತೆ ಟಾರ್ಗೆಟ್ ಮಾಡಿದ ಆಸ್ಟ್ರೇಲಿಯನ್ ಮೀಡಿಯಾ: ರವೀಂದ್ರ ಜಡೇಜಾ ಪತ್ರಿಕಾಗೋಷ್ಠಿಯಲ್ಲಿ ವಿವಾದ

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರ ಮಧ್ಯೆ ಸ್ಲೆಡ್ಜಿಂಗ್​ ನಡೆಯುವುದು ಸಹಜ. ಪಂದ್ಯ ನಡೆಯುವಾಗ ಅಥವಾ ಪತ್ರಿಕಾಗೋಷ್ಠಿ.. ಹೀಗೆ ಭಾರತೀಯ ಆಟಗಾರರನ್ನು ಉದ್ದೇಶಪೂರ್ವಕವಾಗಿ ಕಾಲೆಳೆಯುತ್ತಾರೆ. ಇದು ಈ ಹಿಂದೆ ಕೂಡ ನಡೆದಿದೆ. ಇದೀಗ ಈ ತಂತ್ರವನ್ನು ಆಸೀಸ್ ಮಾಧ್ಯಮಗಳು ಅನುಕರಿಸುತ್ತಿವೆ. ಪದೆ ಪದೆ ಭಾರತೀಯ ತಂಡವನ್ನು ಟಾರ್ಗೆಟ್ ಮಾಡುವ ಮೂಲಕ ಆಟಗಾರರ ಆತ್ಮವಿಶ್ವಾಸ ಕುಗ್ಗಿಸುವ ಕೆಲಸ ಮಾಡುತ್ತಿದೆ. ಗುರುವಾರ (ಡಿಸೆಂಬರ್ 19) ಭಾರತದ ಮಾಜಿ ನಾಯಕನ ಆಗಮನದ ಸಂದರ್ಭದಲ್ಲಿ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ಮತ್ತು ಚಾನೆಲ್ 7 ಮಹಿಳಾ ರಿಪೋರ್ಟರ್​ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಇದೀಗ ಆಲ್​ರೌಂಡರ್ ರವೀಂದ್ರ ಜಡೇಜಾ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿವೆ.

ಆಸ್ಟ್ರೇಲಿಯನ್ ಮಾಧ್ಯಮಗಳು ಮತ್ತೊಮ್ಮೆ ಭಾರತ ತಂಡದ ಆಟಗಾರರನ್ನು ಟಾರ್ಗೆಟ್ ಮಾಡಿವೆ ಎಂಬುದಕ್ಕೆ ಜಡೇಜಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆಯೇ ಸಾಕ್ಷಿ. ಇದು ವಿವಾದಕ್ಕೆ ಗುರಿಯಾಗಿದೆ. ಮೆಲ್ಬೋರ್ನ್​ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಡಿಸೆಂಬರ್​ 21ರ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಇಂಗ್ಲಿಷ್​ನಲ್ಲಿ ಉತ್ತರಿಸಲು ನಿರಾಕರಿಸಿದ್ದಾರೆ ಎಂಬ ಸುದ್ದಿಗಳನ್ನು ಹಬ್ಬಿಸಿವೆ. ಮಾಧ್ಯಮಗಳ ಪ್ರಶ್ನೆಗಳಿಗೆ ಇಂಗ್ಲೀಷ್​ನಲ್ಲಿ ಉತ್ತರಿಸಲು ಜಡೇಜಾ ನಿರಾಕರಿಸಿದ್ದಾರೆ ಎಂದು ಚಾನೆಲ್ 7 ವರದಿ ಮಾಡಿದೆ.

ಎಂಸಿಜಿಯಲ್ಲಿ ಮೊದಲ ಅಭ್ಯಾಸದ ನಂತರ ಜಡೇಜಾ ಪತ್ರಿಕಾಗೋಷ್ಠಿ ನಡೆಸಿದ್ದರು. ಆದರೆ ಬಿಸಿಸಿಐ ಆಯೋಜನೆ ಮಾಡಿದ್ದ ಸುದ್ದಿಗೋಷ್ಠಿಗೆ ಭಾರತದ ಪತ್ರಕರ್ತರಿಗೆ ಆಹ್ವಾನ ನೀಡಿತ್ತು. ಆಸ್ಟ್ರೇಲಿಯಾವು ತಮ್ಮ ಪತ್ರಕರ್ತರನ್ನು ಆಹ್ವಾನಿಸಿತು. ಆದರೆ, ಸಮಯದ ಅಭಾವದಿಂದ ಪ್ರಶ್ನೆಗಳನ್ನು ಕೇಳಲು ಅವಕಾಶವಿರಲಿಲ್ಲ. ವಾಸ್ತವ ಏನೆಂದರೆ ಜಡೇಜಾ ಇಂಗ್ಲಿಷ್​ನಲ್ಲಿ ಉತ್ತರಿಸಲು ನಿರಾಕರಿಸಲಿಲ್ಲ. ಭಾರತೀಯರು ಕೇಳಿದ ಪ್ರಶ್ನೆಗಳಿಗೆ ಹಿಂದಿಯಲ್ಲೇ ಉತ್ತರಿಸಿದರು. ಆದರೆ ಇಂಗ್ಲಿಷ್​ನಲ್ಲಿ ಪ್ರಶ್ನೆಗಳನ್ನು ಕೇಳಿರಲಿಲ್ಲ. ಇದರ ಬೆನ್ನಲ್ಲೇ ಸುಳ್ಳು ಸುದ್ದಿ ಹಬ್ಬಿಸಿವೆ.

ಆರೋಪ ಮತ್ತು ವಾಸ್ತವ

ಆಸೀಸ್ ಮಾಧ್ಯಮಗಳ ಆರೋಪ 1: ಸ್ಟಾರ್ ಆಲ್​ರೌಂಡರ್​ ಇಂಗ್ಲಿಷ್​​ನಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.

ವಾಸ್ತವ: ಹಿಂದಿ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದರಿಂದ ಅವರು ಹೆಚ್ಚಿನ ಪ್ರಶ್ನೆಗಳಿಗೆ ಹಿಂದಿಯಲ್ಲಿ ಉತ್ತರಿಸಿದರು. ಯಾವುದೇ ಆಸ್ಟ್ರೇಲಿಯಾದ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲಿಲ್ಲ.

ಆಸೀಸ್ ಮಾಧ್ಯಮಗಳ ಆರೋಪ 2: ನಾನು ಬಸ್ಸಿಗೆ ಹೋಗಬೇಕು ಎಂದು ಪತ್ರಿಕಾಗೋಷ್ಠಿ ಮುಕ್ತಾಯಗೊಳಿಸಿದರು.

ವಾಸ್ತವ: ಜಡೇಜಾ ಹೀಗೆ ಹೇಳಿಯೇ ಇಲ್ಲ.

ಆಸೀಸ್ ಮಾಧ್ಯಮಗಳ ಆರೋಪ 3: ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಆಹ್ವಾನ ಮಾಡಿದ್ದರೂ ಈ ಪತ್ರಿಕಾಗೋಷ್ಠಿ ಭಾರತೀಯ ಮಾಧ್ಯಮಗಳಿಗೆ ಮಾತ್ರ ಎಂದು ಭಾರತದ ಮಾಧ್ಯಮ ತಂಡ ಹೇಳಿದೆ.

ವಾಸ್ತವ: ಪತ್ರಿಕಾಗೋಷ್ಠಿಯು ಭಾರತೀಯ ಮಾಧ್ಯಮಗಳಿಗೆ ಮೀಸಲಾಗಿತ್ತು. ಈ ಬಗ್ಗೆ ಭಾರತೀಯ ಮಾಧ್ಯಮಗಳ ವಾಟ್ಸಪ್​ ಗ್ರೂಪ್​ಗೆ ಹಾಕಲಾಗಿತ್ತು. ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿತ್ತು.

ಅನುಚಿತವಾಗಿ ವರ್ತಿಸಿದ ಆಸೀಸ್ ಪತ್ರಕರ್ತರು

ಪತ್ರಿಕಾಗೋಷ್ಠಿ ಮುಗಿದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿತು. ಆಸ್ಟ್ರೇಲಿಯಾ ಪತ್ರಕರ್ತರೊಬ್ಬರು ಭಾರತೀಯ ಮಾಧ್ಯಮ ವ್ಯವಸ್ಥಾಪಕ ಮೌಲಿನ್ ಪಾರಿಖ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಯಾವುದೇ ಪ್ರಶ್ನೆ ಕೇಳಲಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ನೀವು ಪ್ರಶ್ನೆಗಳನ್ನು ಕೇಳಿದ್ದರೆ ನಿಮಗೆ ಇಂಗ್ಲಿಷ್​ನಲ್ಲೇ ಉತ್ತರ ಕೊಡುತ್ತಿದ್ದರು. ಆದರೆ ನೀವು ಕೇಳಲಿಲ್ಲ ಎಂದು ಪಾರಿಖ್ ವಿವರಿಸಲು ಪ್ರಯತ್ನಿಸಿದರು. ಆದರೆ ಆಸ್ಟ್ರೇಲಿಯನ್ ಕ್ಯಾಮೆರಾಪರ್‌ಸನ್‌ಗಳು ಒಪ್ಪಿಗೆಯಿಲ್ಲದೆ ಘಟನೆ ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ಪಾರಿಖ್ ಅವರ ಆಕ್ಷೇಪದ ಹೊರತಾಗಿಯೂ ಸೆರೆ ಹಿಡಿದರು. ಇದು ಆಕ್ರೋಶಕ್ಕೆ ಕಾರಣ ಆಯಿತು. ಆಸೀಸ್ ಮಾಧ್ಯಮಗಳನ್ನು ಸತ್ಯಗಳನ್ನು ತಿರುಚುವ ಮೂಲಕ ಮತ್ತು ಭಾರತ ಮಾಧ್ಯಮ ನಿರ್ವಾಹಕರನ್ನು ಗುರಿಯಾಗಿಸಿ ನಿರ್ಣಾಯಕ ಪಂದ್ಯಗಳಿಗೂ ಮುನ್ನ ಅನಗತ್ಯ ಗೊಂದಲ ಸೃಷ್ಟಿಸುವ ಉದ್ದೇಶ ತೋರಿಸಿ ಪಕ್ಷಪಾತದ ಕಥೆಗಳನ್ನು ಪ್ರಕಟಿಸಲು ಪ್ರಾರಂಭಿಸಿವೆ.

ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ಅವರ ಅನುಮತಿಯಿಲ್ಲದೆ ಅವರ ಮಕ್ಕಳ ಚಿತ್ರೀಕರಣ ನಡೆಸಲು ಮುಂದಾದ ಚಾನೆಲ್ 7 ಅವರ ಖಾಸಗಿತನವನ್ನು ಅತಿಕ್ರಮಿಸಿತು. ಕೊಹ್ಲಿಯಂತಹ ಸೂಪರ್​ ಸ್ಟಾರ್​ನನ್ನು ಸಾರ್ವಜನಿಕ ವಲಯದಲ್ಲಿ ಚಿತ್ರೀಕರಿಸುವುದನ್ನು ಮಾಧ್ಯಮಗಳು ತಡೆಯುವ ಯಾವುದೇ ಲಿಖಿತ ನಿಯಮವಿಲ್ಲ. ಆದರೆ, ಅವರ ಕುಟುಂಬವನ್ನು, ವಿಶೇಷವಾಗಿ ಅವರ ಮಕ್ಕಳನ್ನು ಸೆರೆ ಹಿಡಿಯಲು ಕೊಹ್ಲಿ ಅನುಮತಿ ಕಡ್ಡಾಯ. ಇದಕ್ಕಾಗಿ ಕೊಹ್ಲಿ ತಾಳ್ಮೆ ಕಳೆದುಕೊಂಡರು. ಚಾನೆಲ್ 7 ಮಹಿಳಾ ವರದಿಗಾರ್ತಿಯೊಂದಿಗೆ ವಾಗ್ವಾದ ನಡೆಸಿದರು. ಭಾರತೀಯ ಪತ್ರಕರ್ತರೊಬ್ಬರ ಪ್ರಕಾರ, ಕೊಹ್ಲಿ ತಾಳ್ಮೆ ಕಳೆದುಕೊಳ್ಳಲಿಲ್ಲ. ವಾಸ್ತವವಾಗಿ, ಅವರು ಆಸ್ಟ್ರೇಲಿಯಾದ ಮಾಧ್ಯಮಗಳ ವಿನಂತಿ ಮಾಡಿಕೊಂಡರು ಎಂದಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ 1-1 ರಲ್ಲಿ ಸಮಬಲಗೊಂಡಿದೆ.

Whats_app_banner