ಆರ್ಸಿಬಿಯಿಂದ ದಿನೇಶ್ ಕಾರ್ತಿಕ್ಗೆ ಬಂಪರ್ ಆಫರ್; ವಿದಾಯ ಹೇಳಿದ ಒಂದೇ ತಿಂಗಳಿಗೆ ಮಹತ್ವದ ಹುದ್ದೆ
Jul 01, 2024 12:17 PM IST
ಆರ್ಸಿಬಿಯಿಂದ ದಿನೇಶ್ ಕಾರ್ತಿಕ್ಗೆ ಬಂಪರ್ ಆಫರ್; ವಿದಾಯ ಹೇಳಿದ ಒಂದೇ ತಿಂಗಳಿಗೆ ಮಹತ್ವದ ಹುದ್ದೆ
- Dinesh Karthik: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಮಗ್ ಕೋಚ್ ಆಗಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ನೇಮಕಗೊಂಡಿದ್ದಾರೆ.
ನಿವೃತ್ತಿ ಘೋಷಿಸಿದ ಒಂದೇ ತಿಂಗಳ ನಂತರ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengalur) ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಟಿ20 ವಿಶ್ವಕಪ್ 2024ರಲ್ಲಿ ಅನುಭವಿ ಕ್ರಿಕೆಟಿಗ ತನ್ನ ಕಾಮೆಂಟರಿ ಕರ್ತವ್ಯ ಪೂರೈಸಿದ 2 ದಿನಗಳ ನಂತರ ಜುಲೈ 1ರಂದು ಸೋಮವಾರ ಫ್ರಾಂಚೈಸಿ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ದೊಡ್ಡ ಘೋಷಣೆ ಮಾಡಿದೆ.
ದಿನೇಶ್ ಕಾರ್ತಿಕ್ 2008ರ ಆವೃತ್ತಿಯ ಐಪಿಎಲ್‌ನಿಂದಲೂ ನಿರಂತರ ಆಡುತ್ತಿದ್ದಾರೆ. ಒಟ್ಟು 257ರ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್ಕೆ ನಾಯಕ ರೋಹಿತ್ ಶರ್ಮಾ ನಂತರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಜಂಟಿ 2ನೇ ಆಟಗಾರರಾಗಿದ್ದಾರೆ. ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ 264 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಅಗ್ರಸ್ಥಾನ ಪಡೆದಿದ್ದಾರೆ. ಕಾರ್ತಿಕ್ ಈಗ ಬೆಂಗಳೂರಿಗೆ ತುಂಬಾ ವಿಭಿನ್ನವಾದ ಪಾತ್ರ ವಹಿಸಿಕೊಳ್ಳಲು ಸಿದ್ಧವಾಗಿದ್ದಾರೆ.
ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ತಮ್ಮ ಫಿನಿಷರ್ ಆಗಿ ಕಾಣಿಸಿಕೊಂಡಿದ್ದ ದಿನೇಶ್ ಕಾರ್ತಿಕ್, ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಟೂರ್ನಿಯ ಆರಂಭದಲ್ಲೇ ಇದೇ ನನ್ನ ಕೊನೆಯ ಐಪಿಎಲ್ ಎಂದು ಹೇಳಿದ್ದ ಡಿಕೆ, ಎಲಿಮಿನೇಟರ್ನಲ್ಲಿ ಸೋತ ನಂತರ ಕ್ರಿಕೆಟ್‌ನಿಂದ ಹಿಂದೆ ಸರಿದರು. ಕಾರ್ತಿಕ್ ಅವರು ತಮ್ಮ 39ನೇ ಹುಟ್ಟುಹಬ್ಬದಂದು ಜೂನ್ 1 ರಂದು ನಿವೃತ್ತಿ ಘೋಷಿಸಿದ್ದರು. ಸರಿಯಾಗಿ ಒಂದು ತಿಂಗಳ ನಂತರ, ಅನುಭವಿ ಬ್ಯಾಟರ್ ಅಧಿಕೃತವಾಗಿ ಮತ್ತೊಂದು ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ನಮ್ಮ ವಿಕೆಟ್ ಕೀಪರ್ ಅನ್ನು ಮತ್ತೊಮ್ಮೆ ಸ್ವಾಗತಿಸಿ. ದಿನೇಶ್ ಕಾರ್ತಿಕ್ ಹೊಸ ಅವತಾರದಲ್ಲಿ ಆರ್ಸಿಬಿಗೆ ಮರಳುತ್ತಿದ್ದಾರೆ. ಇನ್ಮುಂದೆ ಡಿಕೆ ಆರ್ಸಿಬಿ ಪುರುಷರ ತಂಡದ ನೂತನ ಬ್ಯಾಟಿಂಗ್ ಕೋಚ್, ಮೆಂಟರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಕ್ರಿಕೆಟ್‌ನಿಂದ ಮನುಷ್ಯನನ್ನು ಹೊರ ಹಾಕಬಹುದು. ಆದರೆ, ಕ್ರಿಕೆಟ್‌ನಿಂದ ಮನುಷ್ಯನನ್ನು ಹೊರಹಾಕಲು ಸಾಧ್ಯವಿಲ್ಲ ಎಂದು ಆರ್ಸಿಬಿ ಪೋಸ್ಟ್ ಹಾಕಿದೆ. ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನಿವೃತ್ತಿ ಹೇಳಿದಾಗ ಫ್ಯಾನ್ಸ್ ಬೇಸರಕ್ಕೆ ಒಳಗಾಗಿದ್ದರು.
ದಿನೇಶ್ ಕಾರ್ತಿಕ್ ಐಪಿಎಲ್ ವೃತ್ತಿಜೀವನ
2008ರಿಂದ ಐಪಿಎಲ್ ಈವರೆಗೂ ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್ 257 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಐಪಿಎಲ್ನಲ್ಲಿ 250+ ಪಂದ್ಯಗಳನ್ನು ಆಡಿದ ಕೆಲವೇ ಆಟಗಾರರ ಪೈಕಿ ಡಿಕೆ ಕೂಡ ಒಬ್ಬರು. 234 ಇನ್ನಿಂಗ್ಸ್ಗಳಲ್ಲಿ 22 ಅರ್ಧಶತಕ ಬಾರಿಸಿರುವ ಹಿರಿಯ ಆಟಗಾರ 26.32ರ ಬ್ಯಾಟಿಂಗ್ ಸರಾಸರಿಯಲ್ಲಿ 4842 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ರೇಟ್ 135.36 ಹೊಂದಿದ್ದಾರೆ. 466 ಫೋರ್, 161 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಡಿಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್
2004 ಸೆಪ್ಟೆಂಬರ್ 5ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ ಹಿರಿಯ ಆಟಗಾರ 20 ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಸೇವೆ ಸಲ್ಲಿಸಿದ್ದಾರೆ. 94 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 30.21ರ ಬ್ಯಾಟಿಂಗ್ ಸರಾಸರಿಯಲ್ಲಿ 1752 ರನ್ ಗಳಿಸಿದ್ದಾರೆ. 26 ಟೆಸ್ಟ್ಗಳಲ್ಲಿ ಬ್ಯಾಟ್ ಬೀಸಿರುವ ವಿಕೆಟ್ ಕೀಪರ್, 25ರ ಸರಾಸರಿಯಲ್ಲಿ 1025 ರನ್ ಕಲೆ ಹಾಕಿದ್ದಾರೆ. 60 ಟಿ20ಐ ಪಂದ್ಯಗಳಲ್ಲಿ 26.38ರ ಸರಾಸರಿಯಲ್ಲಿ 686 ರನ್ ಬಾರಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 1 ಶತಕ (ಟೆಸ್ಟ್ನಲ್ಲಿ) ಮಾತ್ರ ದಾಖಲಿಸಿದ್ದಾರೆ.