ಚಾಂಪಿಯನ್ಸ್ ಟ್ರೋಫಿ ವಿವಾದ; ಟೀಮ್ ಇಂಡಿಯಾ ವಿರುದ್ಧ ಯಾವುದೇ ಪಂದ್ಯ ಆಡದಿರಲು ಪಾಕಿಸ್ತಾನ ನಿರ್ಧಾರ
Nov 11, 2024 10:59 AM IST
ಚಾಂಪಿಯನ್ಸ್ ಟ್ರೋಫಿ ವಿವಾದ; ಟೀಮ್ ಇಂಡಿಯಾ ವಿರುದ್ಧ ಯಾವುದೇ ಪಂದ್ಯ ಆಡದಿರಲು ಪಾಕ್ ನಿರ್ಧಾರ
- ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯದ ಪರಿಸ್ಥಿತಿ ಈಗ ಅತಂತ್ರವಾಗಿದೆ. ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರಾಕರಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಹಠಮಾರಿ ಧೋರಣೆ ಅನುಸರಿಸುತ್ತಿರುವಂತಿದೆ.
ಈ ಬಾರಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದೆ. ಕಳೆದ ಹಲವು ವರ್ಷಗಳಿಂದ ಎರಡೂ ತಂಡಗಳು ಐಸಿಸಿ ಅಥವಾ ಎಸಿಸಿ ಈವೆಂಟ್‌ಗಳಲ್ಲಿ ಮಾತ್ರ ಆಡುತ್ತಿವೆ. ಈಗ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿಯೂ ಬದಲಾಗುವ ಲಕ್ಷಣ ಕಂಡುಬರುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ಮುಂದೆ ಯಾವುದೇ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಆಗುವುದಿಲ್ಲ. ಇದಕ್ಕೆ ಕಾರಣ ಚಾಂಪಿಯನ್ಸ್ ಟ್ರೋಫಿ ವಿವಾದ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಪಾಕ್ ಪಂದ್ಯದ ಪರಿಸ್ಥಿತಿ ಸದ್ಯ ಅತಂತ್ರವಾಗಿದೆ. ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರಾಕರಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಹಠಮಾರಿ ಧೋರಣೆ ಅನುಸರಿಸುತ್ತಿರುವಂತಿದೆ. ಪಾಕಿಸ್ತಾನದ ಮಾಧ್ಯಮಗಳ ವರದಿಗಳ ಪ್ರಕಾರ, ಭಾರತ ತಂಡವು ಪಾಕಿಸ್ತಾನಕ್ಕೆ ಹೋಗದಿದ್ದರೆ, ಮುಂಬರುವ ಯಾವುದೇ ಪಂದ್ಯಾವಳಿಯಲ್ಲಿ ಪಾಕಿಸ್ತಾನವು ಟೀಮ್ ಇಂಡಿಯಾ ವಿರುದ್ಧ ಆಡುವುದಿಲ್ಲ.
ಪಾಕಿಸ್ತಾನ ಇಮೇಲ್ ಸ್ವೀಕರಿಸಿದೆ
ಮುಂದಿನ ವರ್ಷ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಾಗಿದೆ. ಆದರೆ ಟೀಮ್ ಇಂಡಿಯಾ ಅದರಲ್ಲಿ ಭಾಗವಹಿಸುವ ಬಗ್ಗೆ ಮೊದಲಿನಿಂದಲೂ ಅನುಮಾನವಿತ್ತು. ಕಳೆದ 16ರಿಂದ 17 ವರ್ಷಗಳಿಂದ ಭಾರತ ತಂಡ ಪಾಕಿಸ್ತಾನ ಪ್ರವಾಸ ಮಾಡಿಲ್ಲ. ಇದೀಗ ಈ ಬಾರಿಯೂ ಅದೇ ಪರಿಸ್ಥಿತಿ ಇದೆ. ಬಿಸಿಸಿಐ ಇತ್ತೀಚೆಗೆ ಐಸಿಸಿಗೆ ಇಮೇಲ್ ಮೂಲಕ ತಿಳಿಸಿದ್ದು, ಪಾಕಿಸ್ತಾನದಲ್ಲಿ ಭದ್ರತಾ ಕಾಳಜಿಯ ದೃಷ್ಟಿಯಿಂದ ಭಾರತ ಸರ್ಕಾರ ಟೀಮ್ ಇಂಡಿಯಾವನ್ನು ಚಾಂಪಿಯನ್ಸ್ ಟ್ರೋಫಿಗೆ ಕಳುಹಿಸಲು ನಿರಾಕರಿಸಿದೆ ಎಂದು ತಿಳಿಸಿದೆ. ಇದೀಗ ಭಾರತೀಯ ಮಂಡಳಿಯ ಈ ನಿಲುವಿನ ಬಗ್ಗೆ ಐಸಿಸಿ ಕೂಡ ಪಾಕ್ ಮಂಡಳಿಗೆ ಇಮೇಲ್ ಮೂಲಕ ಮಾಹಿತಿ ನೀಡಿದೆ.
ಎಂದಿಗೂ ಭಾರತದ ವಿರುದ್ಧ ಪಂದ್ಯಗಳನ್ನು ಆಡುವುದಿಲ್ಲ ಎಂದ ಪಾಕ್
ಭಾರತೀಯ ಕ್ರಿಕೆಟ್ ಮಂಡಳಿಯ ನಿರ್ಧಾರದ ಬಗ್ಗೆ ಐಸಿಸಿಯಿಂದ ಮಾಹಿತಿ ಪಡೆದಿರುವುದಾಗಿ ಪಿಸಿಬಿ ನವೆಂಬರ್ 10ರ ಭಾನುವಾರ ತಿಳಿಸಿದೆ. ಐಸಿಸಿಯಿಂದ ಇಮೇಲ್ ಅನ್ನು ಪಾಕಿಸ್ತಾನ ಸರ್ಕಾರಕ್ಕೆ ಕಳುಹಿಸಿದೆ ಮತ್ತು ಸರ್ಕಾರದಿಂದ ಸಲಹೆ ಕೇಳಿದೆ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕಿಂತ ಹೆಚ್ಚಿನದನ್ನು ಪಾಕಿಸ್ತಾನ ಮಂಡಳಿ ಹೇಳಿಲ್ಲ. ಆದರೆ ಈ ವಿಷಯದಲ್ಲಿ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ.
ಪಾಕಿಸ್ತಾನದ ಪತ್ರಕರ್ತ ಫೈಜಾನ್ ಲಖಾನಿ ಅವರು ಎಕ್ಸ್ ಪೋಸ್ಟ್‌ನಲ್ಲಿ, ‘ಭಾರತೀಯ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವವರೆಗೆ, ಮುಂಬರುವ ಯಾವುದೇ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾ ಜೊತೆ ಪ್ರತಿನಿಧಿಸುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ’ ಎಂದು ಮೂಲಗಳನ್ನು ಉಲ್ಲೇಖಿಸಿದ್ದಾರೆ. ಒಂದು ವೇಳೆ ಚಾಂಪಿಯನ್ ಟ್ರೋಫಿ ಟೂರ್ನಿಯ ನಾಕ್‌ಔಟ್ ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾದರೆ ಆ ಪಂದ್ಯವನ್ನೂ ಪಾಕಿಸ್ತಾನ ತಂಡ ಆಡಲು ನಿರಾಕರಿಸುತ್ತದಂತೆ.
ವರದಿ: ವಿನಯ್ ಭಟ್.
ಇದನ್ನೂ ಓದಿ | ಪಾಕಿಸ್ತಾನಕ್ಕೆ ಭಾರತ ಬರದಿದ್ದರೆ, ನಾವು ಕೂಡ..; ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರಶೀದ್ ಲತೀಫ್ ಎಚ್ಚರಿಕೆ