22 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಗೆದ್ದ ಪಾಕಿಸ್ತಾನ; ರಿಜ್ವಾನ್ ನಾಯಕತ್ವಕ್ಕೆ ಗೆಲುವಿನ ಆರಂಭ
ಮೊಹಮ್ಮದ್ ರಿಜ್ವಾನ್ ನಾಯಕತ್ವದ ಮೊದಲ ಸರಣಿಯಲ್ಲಿಯೇ ಪಾಕಿಸ್ತಾನ ಕ್ರಿಕೆಟ್ ತಂಡವು ಆಸ್ಟ್ರೇಲಿಯಾವನ್ನು ಏಕದಿನ ಸರಣಿಯಲ್ಲಿ 2-1 ಅಂತರದಿಂದ ಸೋಲಿಸಿದೆ. 22 ವರ್ಷಗಳಲ್ಲಿ ಆಸ್ಟ್ರೇಲಿಯಾದ ನೆಲದಲ್ಲಿ ಪಾಕಿಸ್ತಾನದ ಮೊದಲ ಸರಣಿ ಗೆಲುವು ಇದಾಗಿದೆ.
ಆಸ್ಟ್ರೇಲಿಯಾ ನೆಲದಲ್ಲಿ ಪಾಕಿಸ್ತಾನ ಇತಿಹಾಸ ನಿರ್ಮಿಸಿದೆ. ಪರ್ತ್ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡಗಳ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಪಾಕ್ ತಂಡವು ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ನಡೆದ ಮೊದಲ ಸರಣಿಯಲ್ಲಿಯೇ ಪಾಕ್ ತಂಡ ಭರ್ಜರಿ ಯಶಸ್ಸು ಗಳಿಸಿದೆ. 2-1 ಅಂತರದಿಂದ ಸರಣಿ ಗೆಲ್ಲುವ ಮೂಲಕ, ಬರೋಬ್ಬರಿ 22 ವರ್ಷಗಳ ನಂತರ ಆಸೀಸ್ ತಂಡವನ್ನು ಅದರದ್ದೇ ನೆಲದಲ್ಲಿ ಸೋಲಿಸಿದ ಸಾಧನೆ ಮಾಡಿದೆ. ಕೊನೆಯ ಬಾರಿಗೆ 2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕ್ ಆಸೀಸ್ ನೆಲದಲ್ಲಿ ಸರಣಿ ಒಲಿಸಿಕೊಂಡಿತ್ತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಕೇವಲ 140 ರನ್‌ಗಳಿಗೆ ಆಲೌಟ್ ಆಯ್ತು. ಇದಕ್ಕೂ ಹಿಂದೆ ಎರಡನೇ ಏಕದಿನ ಪಂದ್ಯದಲ್ಲಿಯೂ ಆಸೀಸ್ ಬ್ಯಾಟಿಂಗ್ ಲೈನಪ್ ಕುಸಿದ ಕಾರಣ, ಪಾಕ್ ಸುಲಭ ಗೆಲುವು ಒಲಿಸಿಕೊಂಡಿತ್ತು. ಇಂದು ಸರಣಿಯ ಕೊನೆಯ ಪಂದ್ಯದಲ್ಲೂ ಇದು ಪುನರಾವರ್ತನೆಯಾಯ್ತು. ಉತ್ತಮ ಫಾರ್ಮ್‌ನಲ್ಲಿದ್ದ ಪಾಕಿಸ್ತಾನದ ಬೌಲರ್‌ಗಳು, ಪಂದ್ಯದ ಲಾಭ ಪಡೆದರು. ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಸ್ಟೀವ್ ಸ್ಮಿತ್ ಅವರಂತಹ ಆಟಗಾರರಿದ್ದರೂ, ತಂಡದ ಗೆಲುವು ಸಾಧ್ಯವಾಗಲಿಲ್ಲ.
ಸರಣಿಯ ಮೂರೂ ಪಂದ್ಯಗಳು ಕಡಿಮೆ ಮೊತ್ತಕ್ಕೆ ಸಾಕ್ಷಿಯಾದವು. ಎಂಸಿಜಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿಯೂ ಪಾಕ್ ಸೋಲಿನ ಭೀತಿಯಲ್ಲಿತ್ತು. ಆದರೆ ಪ್ಯಾಟ್ ಕಮಿನ್ಸ್ ತಮ್ಮ ತಂಡವನ್ನು ಬ್ಯಾಟಿಂಗ್ ಮೂಲಕ ಗೆಲುವಿನ ದಡ ಸೇರಿಸಿದರು. ಆ ಬಳಿಕ ಅಡಿಲೇಡ್ ಓವಲ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 163 ರನ್‌ಗಳಿಗೆ ಆಲೌಟ್ ಆಯ್ತು. ಪಾಕ್ ಸುಲಭವಾಗಿ ಗುರಿ ತಲುಪಿ 9 ವಿಕೆಟ್‌ಗಳಿಂದ ಗೆದ್ದಿತು.
ಸರಣಿಯ ಮೂರು ಪಂದ್ಯಗಳಲ್ಲಿ ಹ್ಯಾರಿಸ್ ರೌಫ್ 10 ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ 8 ವಿಕೆಟ್ ಕಬಳಿಸಿದರು. ಸೈಮ್ ಅಯೂಬ್ ಮತ್ತು ಅಬ್ದುಲ್ಲಾ ಶಫೀಕ್ ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಕೊಟ್ಟರು.
22 ವರ್ಷಗಳಲ್ಲಿ ಮೊದಲ ಗೆಲುವು
ಆಸ್ಟ್ರೇಲಿಯಾದಲ್ಲಿ ಕಳೆದ 22 ವರ್ಷಗಳಲ್ಲಿ ಪಾಕಿಸ್ತಾನ ಇದೇ ಮೊದಲ ಬಾರಿಗೆ ಸರಣಿ ಗೆಲುವು ದಾಖಲಿಸಿದೆ. 2009ರಲ್ಲಿ 5-0 ಮತ್ತು 2016ರಲ್ಲಿ 4-1 ಅಂತರದಿಂದ ಸತತವಾಗಿ ಸೋಲನುಭವಿಸಿತ್ತು. ಕೊನೆಯ ಬಾರಿಗೆ ಸರಣಿ ಗೆದ್ದಾಗ, ಪಾಕಿಸ್ತಾನವನ್ನು ವಕಾರ್ ಯೂನಿಸ್ ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ಪಾಕಿಸ್ತಾನವು ಮೊದಲ ಪಂದ್ಯದಲ್ಲಿ ಸೋತು 1-0 ಹಿನ್ನಡೆಯಿಂದ ಕಂಬ್ಯಾಕ್ ಮಾಡಿ ಕೊನೆಗೆ 2-1 ಅಂತರದಿಂದ ಸರಣಿ ಗೆದ್ದಿತ್ತು.
ಪಾಕ್ ತಂಡಕ್ಕೆ ಹೆಚ್ಚಿದ ಆತ್ಮವಿಶ್ವಾಸ
2024ರ ಮೊದಲಾರ್ಧದಲ್ಲಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ವೈಟ್‌ವಾಶ್ ಆಗಿತ್ತು. ಆ ನಂತರ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿ ಸೋತಿತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬೆನ್ನಲ್ಲೇ ಈಗ ಆಸ್ಟ್ರೇಲಿಯಾದಲ್ಲಿ ಗೆಲುವು ಒಲಿಸಿಕೊಂಡಿದೆ. ಹೀಗಾಗಿ 2025ರ ಆರಂಭದಲ್ಲಿ ತವರು ನೆಲದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತಂಡಕ್ಕೆ ಸಾಕಷ್ಟು ಆತ್ಮವಿಶ್ವಾಸ ಬಂದಿದೆ.
ಮುಂದೆ ನವೆಂಬರ್ 14ರಂದು ಬ್ರಿಸ್ಬೇನ್‌ನ ಗಬ್ಬಾದಲ್ಲಿ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಗೆ ಉಭಯ ತಂಡಗಳು ಈಗ ತಯಾರಿ ನಡೆಸಲಿವೆ.