ಕಳಪೆ ಫಾರ್ಮ್ ಬೆನ್ನಲ್ಲೇ ನಿವೃತ್ತಿ ಕುರಿತು ಹೆಚ್ಚಿದ ಚರ್ಚೆ; ಕೊನೆಗೂ ಊಹಾಪೋಹಗಳಿಗೆ ತೆರೆ ಎಳೆದ ರೋಹಿತ್ ಶರ್ಮಾ -Video
Dec 18, 2024 04:11 PM IST
ನಿವೃತ್ತಿ ಕುರಿತ ಊಹಾಪೋಹಗಳಿಗೆ ರೋಹಿತ್ ಶರ್ಮಾ ತೆರೆ ಎಳೆದಿದ್ದಾರೆ
- ಕಳೆದ 13 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಕೇವಲ 152 ರನ್ ಮಾತ್ರ ಗಳಿಸಿದ್ದಾರೆ. ಹೀಗಾಗಿ ಹಿಟ್‌ಮ್ಯಾನ್ ಕಳಪೆ ಫಾರ್ಮ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅದರ ಬೆನ್ನಲ್ಲೇ ನಿವೃತ್ತಿ ಬಗ್ಗೆ ಮಾತುಕತೆ ಹೆಚ್ಚಾಗಿದ್ದು, ಈ ಬಗ್ಗೆ ಖುದ್ದು ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ಬ್ರಿಸ್ಬೇನ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಪಂದ್ಯವು ಡ್ರಾ ಆಗಿದೆ. ಸರಣಿಯಲ್ಲಿ ಆಡಿದ ಸತತ ಎರಡು ಪಂದ್ಯಗಳಲ್ಲಿಯೂ ನಾಯಕ ರೋಹಿತ್ ಶರ್ಮಾ ವೈಫಲ್ಯ ಅನುಭವಿಸಿದ್ದಾರೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದ ಹಿಟ್‌ಮ್ಯಾನ್ 27 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ನಿರ್ಗಮಿಸಿದರು. ಆ ಮೂಲಕ ಭಾರತದ ಪರ ಸತತ ಕಳಪೆ ಪ್ರದರ್ಶನ ಮುಂದುವರೆದಿದೆ. ಕಳೆದ 13 ಇನ್ನಿಂಗ್ಸ್‌ಗಳಲ್ಲಿ, ರೋಹಿತ್ 11.83ರ ಸರಾಸರಿಯಲ್ಲಿ ಕೇವಲ 152 ರನ್ ಮಾತ್ರ ಗಳಿಸಿದ್ದಾರೆ. ಇದರಲ್ಲಿ ಏಕೈಕ ಅರ್ಧಶತಕ ಮಾತ್ರ ಸೇರಿದೆ. ಹೀಗಾಗಿ ರೋಹಿತ್ ನಿವೃತ್ತಿ ಕುರಿತ ಚರ್ಚೆಗಳು ಹೆಚ್ಚುತ್ತಿದೆ.
ಆಸೀಸ್ ವಿರುದ್ಧದ ಸರಣಿಯ ಸತತ ಮೂರನೇ ಇನ್ನಿಂಗ್ಸ್‌ನಲ್ಲಿಯೂ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಹಿಟ್‌ಮ್ಯಾನ್, ಕ್ರೀಸ್‌ನಲ್ಲಿ ತಾಳ್ಮೆಯಿಂದ ಆಡುವ ಪ್ರಯತ್ನ ಮಾಡಿದರು. ಆದರೆ, 37 ವರ್ಷದ ಆಟಗಾರ ಕ್ರೀಸ್‌ಕಚ್ಚಿ ಆಡಲು ಸಾಧ್ಯವಾಗಲಿಲ್ಲ. ಔಟಾದ ನಂತರ ನಿರಾಶೆಗೊಂಡ ಅವರು ಪೆವಿಲಿಯನ್ ಕಡೆ ಮರಳುವಾಗ ತಮ್ಮ ಗ್ಲೌಸ್‌ಗಳನ್ನು ಪೆವಿಲಿಯನ್ ಮುಂಭಾಗದ ಜಾಹೀರಾತು ಫಲಕದ ಹಿಂದೆ ಬಿಟ್ಟು ಹೋದರು. ಇದು ಸೋಷಿಯಲ್ ಮೀಡಿಯಾದಲ್ಲಿ ವಿವಿಧ ರೀತಿಯ ಚರ್ಚೆಗಳನ್ನು ಹುಟ್ಟುಹಾಕಿತು.
ಈ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರೋಹಿತ್ ತಮ್ಮ ಟೆಸ್ಟ್ ವೃತ್ತಿಜೀವನದ ಅಂತ್ಯದ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಅಭಿಮಾನಿಗಳು ಊಹಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ಚುಟುಕು ಸ್ವರೂಪದಿಂದ ನಿವೃತ್ತಿ ಘೋಷಿಸಿರುವ ಅವರು, ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ನಂತರ ಏಕದಿನ ಸ್ವರೂಪದಿಂದಲೂ ಹಿಂದೆ ಸರಿಯುವ ಸಾಧ್ಯತೆ ಇದೆ. ಅದಕ್ಕೂ ಮುನ್ನವೇ ಟೆಸ್ಟ್ ಕ್ರಿಕೆಟ್‌ನಿಂದ ಹಿಂದೆ ಸರಿದರೂ ಅಚ್ಚರಿ ಇಲ್ಲ.
ಸುನಿಲ್ ಗವಾಸ್ಕರ್ ಹೇಳಿದ್ದೇನು?
ಈ ನಡುವೆ, ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯಲ್ಲಿ ರೋಹಿತ್ ಶರ್ಮಾ ತಮ್ಮ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎಂದು ಭಾರತದ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಮಂಗಳವಾರ ಹೇಳಿದ್ದಾರೆ. ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಗಳಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ಹಿಟ್‌ಮ್ಯಾನ್, ಇದೀಗ ಆಸೀಸ್ ವಿರುದ್ಧವೂ ಬ್ಯಾಟ್ ಬೀಸಲು ಹೆಣಗಾಡುತ್ತಿದ್ದಾರೆ. ಆ ನಂತರದಿಂದ 37 ವರ್ಷದ ಆಟಗಾರ ಟೀಕೆಗೆ ಗುರಿಯಾಗಿದ್ದಾರೆ. ನಿವೃತ್ತಿ ಮಾತ್ರವಲ್ಲದೆ ಕ್ರಿಕೆಟ್‌ಗೆ ವಿದಾಯ ಹೇಳುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್‌ಗೆ ಆರಂಭಿಕ ಸ್ಥಾನವನ್ನು ಬಿಟ್ಟುಕೊಟ್ಟ ರೋಹಿತ್, ಆ ನಂತರ 6ನೇ ಕ್ರಮಾಂಕದಲ್ಲಿಯೂ ಅಬ್ಬರಿಸಿಲ್ಲ. ಸರಣಿಯಲ್ಲಿ ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಕೇವಲ 19 ರನ್ ಮಾತ್ರ ಗಳಿಸಿದ್ದಾರೆ.
ರೋಹಿತ್ ಆಯ್ಕೆದಾರರಿಗಾಗಿ ಕಾಯುವುದಿಲ್ಲ: ಗವಾಸ್ಕರ್
ಗಬ್ಬಾ ಟೆಸ್ಟ್‌ನ 5 ನೇ ದಿನದಂದು ಎಬಿಸಿ ಸ್ಪೋರ್ಟ್ ಜತೆಗೆ ಮಾತನಾಡಿದ ಗವಾಸ್ಕರ್, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಭಾರತದ ನಾಯಕನ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೆ ರೋಹಿತ್ ಶರ್ಮಾ ಕಾಯುವುದಿಲ್ಲ. ಆಸ್ಟ್ರೇಲಿಯಾದಲ್ಲಿ ಅವರ ಕಳಪೆ ಫಾರ್ಮ್ ಮುಂದುವರಿದರೆ ಸರಣಿಯ ಕೊನೆಯಲ್ಲಿ ತಕ್ಷಣವೇ ನಾಯಕನ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಹೇಳಿದರು.
“ಮುಂದಿನ ಎರಡು ಪಂದ್ಯಗಳಲ್ಲಿ ಆಡಲು ರೋಹಿತ್‌ಗೆ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಅದಂತೂ ಖಚಿತ. ಆದರೆ ಮುಂದೆಯೂ ಅವರು ರನ್ ಗಳಿಸದಿದ್ದರೆ, ಬಹುಶಃ ಸರಣಿಯ ಕೊನೆಯಲ್ಲಿ ಅವರು ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ನನ್ನ ಭಾವನೆ,” ಎಂದು ಗವಾಸ್ಕರ್ ಹೇಳಿದರು.ಜ
“ಅವರು ತುಂಬಾ ಆತ್ಮಸಾಕ್ಷಿಯ ಕ್ರಿಕೆಟಿಗ. ಅವರು ತಂಡಕ್ಕೆ ಹೊರೆಯಾಗಲು ಬಯಸುವುದಿಲ್ಲ. ಹೀಗಾಗಿ ಮುಂದಿನ ಎರಡು ಪಂದ್ಯಗಳಲ್ಲಿಯೂ ರನ್ ಗಳಿಸದಿದ್ದರೆ, ಅವರು ಸ್ವತಃ ಕೆಳಗಿಳಿಯುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದಿದ್ದಾರೆ.
ರೋಹಿತ್ ಏನಂದ್ರು
ಆರ್ ಅಶ್ವಿನ್ ನಿವೃತ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ತಮ್ಮ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡರು. “ನಾನು ಚೆನ್ನಾಗಿ ಬ್ಯಾಟಿಂಗ್ ಮಾಡಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಹಾನಿ ಇಲ್ಲ. ಆದ್ರೆ ನನ್ನ ಯೋಚನೆಗಳ ಬಗ್ಗೆ ನನಗೆ ಸ್ಪಷ್ಟನೆ ಇದೆ. ನಾನು ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂಬುದು ನನಗೆ ಗೊತ್ತಿದೆ. ಇದಕ್ಕೆ ಸ್ವಲ್ಪ ಸಮಯ ಬೇಕು ಅಷ್ಟೇ. ಆಟಕ್ಕೆ ಸ್ವಲ್ಪ ಸಮಯ ಕೊಟ್ಟರೆ ಎಲ್ಲವೂ ಸರಿಹೋಗಲಿದೆ. ನನ್ನ ದೇಹ, ನನ್ನ ಮನಸು ಸರಿಯಾಗಿ ಸ್ಪಂದಿಸುವವರೆಗೂ ಆಟ ಮುಂದುವರೆಯಲಿದೆ. ಸದ್ಯ ನನ್ನ ಬಗ್ಗೆ ನನಗೆ ಖುಷಿಯಿದೆ,” ಎಂದು ಅವರು ಹೇಳಿದ್ದಾರೆ.