logo
ಕನ್ನಡ ಸುದ್ದಿ  /  ಕ್ರಿಕೆಟ್  /  ನಾನೀಗ ನಿವೃತ್ತಿಯಾಗಲ್ಲ, ವಿಶ್ವಕಪ್ ಗೆಲ್ಲುವುದೇ ನನ್ನ ಧ್ಯೇಯ; ತನ್ನ ಕೊನೆಯ ಆಸೆಗಳನ್ನು ಬಿಚ್ಚಿಟ್ಟ ರೋಹಿತ್​ ಶರ್ಮಾ

ನಾನೀಗ ನಿವೃತ್ತಿಯಾಗಲ್ಲ, ವಿಶ್ವಕಪ್ ಗೆಲ್ಲುವುದೇ ನನ್ನ ಧ್ಯೇಯ; ತನ್ನ ಕೊನೆಯ ಆಸೆಗಳನ್ನು ಬಿಚ್ಚಿಟ್ಟ ರೋಹಿತ್​ ಶರ್ಮಾ

Prasanna Kumar P N HT Kannada

Apr 12, 2024 09:28 PM IST

google News

ವಿಶ್ವಕಪ್ ಗೆಲ್ಲುವ ಆಸೆಯನ್ನು ಹೊರಹಾಕಿದ ರೋಹಿತ್​ ಶರ್ಮಾ.

    • Rohit Sharma : 2023ರ ಏಕದಿನ ವಿಶ್ವಕಪ್ ಸೋಲಿನ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ, ತನ್ನ ನಿವೃತ್ತಿ ಬಗ್ಗೆಯೂ ತಿಳಿಸಿದ್ದಾರೆ. ಅಲ್ಲದೆ, ಕೆಲವು ವರ್ಷಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡುವ ಸುಳಿವನ್ನೂ ನೀಡಿದ್ದಾರೆ.
ವಿಶ್ವಕಪ್ ಗೆಲ್ಲುವ ಆಸೆಯನ್ನು ಹೊರಹಾಕಿದ ರೋಹಿತ್​ ಶರ್ಮಾ.
ವಿಶ್ವಕಪ್ ಗೆಲ್ಲುವ ಆಸೆಯನ್ನು ಹೊರಹಾಕಿದ ರೋಹಿತ್​ ಶರ್ಮಾ.

2023ರ ಏಕದಿನ ಕ್ರಿಕೆಟ್ ವಿಶ್ವಕಪ್​ ಟೂರ್ನಿ (ODI World Cup) ಮುಕ್ತಾಯಗೊಂಡು ಆರು ತಿಂಗಳಾದರೂ ನೋವು ಇನ್ನೂ ಮಾಸಿಲ್ಲ. ಫೈನಲ್​​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ (India vs Australia) ಹೃದಯ ವಿದ್ರಾವಕ ಸೋಲಿಗೆ ಶರಣಾಯಿತು. 140 ಕೋಟಿಗೂ ಅಧಿಕ ಭಾರತೀಯ ಜನರ ಕನಸು ಭಗ್ನಗೊಂಡಿತ್ತು ನವೆಂಬರ್ 19ರಂದು. ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ (Rohit Sharma) ಮತ್ತೊಮ್ಮೆ ಈ ಘಟನೆಯನ್ನು ನೆನೆಸಿಕೊಂಡಿದ್ದಾರೆ. ಭಾರತಕ್ಕೆ ವಿಶ್ವಕಪ್ ಗೆಲ್ಲಲೇಬೇಕು ಎಂದು ಹೇಳಿರುವ ರೋಹಿತ್​, 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಸುಳಿವು ನೀಡಿದ್ದಾರೆ.

ರೋಹಿತ್ 2024ರ ಐಪಿಎಲ್​ನಲ್ಲಿ ತಮ್ಮ ಛಾಪು ಮೂಡಿಸಲು ಪ್ರಾರಂಭಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕತ್ವದ ಜವಾಬ್ದಾರಿಯಿಂದ ಬಿಡುಗಡೆಗೊಂಡ ಹಿಟ್‌ಮ್ಯಾನ್ ಈಗ ಬ್ಯಾಟಿಂಗ್‌ನತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಅದರಲ್ಲೂ ಜೂನ್ 2ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಬ್ಯಾಟಿಂಗ್​​ನಲ್ಲಿ ಸಂಪೂರ್ಣ ರಿಧಮ್ ಕಂಡುಕೊಳ್ಳುತ್ತಿದ್ದಾರೆ. 36 ವರ್ಷದ ರೋಹಿತ್ ಈಗ ತಮ್ಮ ವೃತ್ತಿಜೀವನದ ಕೊನೆಯ ಹಂತವನ್ನು ಎದುರಿಸುತ್ತಿದ್ದು, ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಕಪ್ ಗೆಲ್ಲುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ.

ಏಪ್ರಿಲ್ 30ರಂದು ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ರೋಹಿತ್​, ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಪಣತೊಟ್ಟಿದ್ದಾರೆ. ನಿವೃತ್ತಿಯಾಗುವುದಕ್ಕೂ ಮುನ್ನ ಭಾರತದ ಪರ ಐಸಿಸಿ ಟೂರ್ನಿಗಳನ್ನು ಗೆಲ್ಲುವ ಹಸಿವು ಹೊಂದಿದ್ದಾರೆ. ಪ್ರಸಿದ್ಧ ಟಾಕ್ ಶೋ 'ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್'ನಲ್ಲಿ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. 2007ರ ಟಿ20 ವಿಶ್ವಕಪ್​​ನಲ್ಲಿ ಭಾರತ ತಂಡದ ಭಾಗವಾಗಿದ್ದ ಹಿಟ್​ಮ್ಯಾನ್, 2011ರ ಏಕದಿನ ವಿಶ್ವಕಪ್​ಗೆ ಆಯ್ಕೆಯಾಗಿರಲಿಲ್ಲ. ಜೂನ್‌ನಲ್ಲಿ 2024ರ T20 ವಿಶ್ವಕಪ್‌ ಸೇರಿದಂತೆ ಭಾರತ ಪರ ಕೆಲವು ವರ್ಷಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡುವ ಸುಳಿವನ್ನೂ ಬಿಟ್ಟುಕೊಟ್ಟಿದ್ದಾರೆ.

ನಾನೀಗಲೇ ನಿವೃತ್ತಿಯಾಗಲ್ಲ ಎಂದ ಹಿಟ್​ಮ್ಯಾನ್

ಇದೇ ವೇಳೆ ಅನುಭವಿ ಆರಂಭಿಕ ಆಟಗಾರ, 2023ರ ವಿಶ್ವಕಪ್‌ನಲ್ಲಿ ಸೋಲಿನ ಬಗ್ಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿವೃತ್ತಿ ಕುರಿತು ತುಟಿ ಬಿಚ್ಚಿದ್ದಾರೆ. 'ನಿಜವಾಗಿಯೂ ನಾನು ನಿವೃತ್ತಿಯ ಬಗ್ಗೆ ಯೋಚಿಸಿಲ್ಲ. ಆದರೆ, ಎಲ್ಲಿಯವರೆಗೂ ಆಡುತ್ತೇನೆ ಎಂಬದು ನನಗೆ ತಿಳಿದಿಲ್ಲ. ನಾನು ಇದೀಗ ಚೆನ್ನಾಗಿ ಆಡುತ್ತಿದ್ದೇನೆ. ಆದ್ದರಿಂದ ಇನ್ನೂ ಕೆಲವು ವರ್ಷಗಳ ಕಾಲ ಆಡುವುದನ್ನು ಮುಂದುವರಿಸುತ್ತೇನೆ. ನಂತರ ಏನಾಗುತ್ತದೆ ನನಗೆ ಗೊತ್ತಿಲ್ಲ ಎಂದು ರೋಹಿತ್​ ಶರ್ಮಾ ಹೇಳಿಕೆ ನೀಡಿದ್ದಾರೆ.

ನಾನು ನಿಜವಾಗಿಯೂ ಭಾರತದ ಪರ ಈ ವರ್ಷ ಟಿ20 ವಿಶ್ವಕಪ್ ಮತ್ತು 2025ರಲ್ಲಿ ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ಬಯಸುತ್ತೇನೆ. ಅದರಲ್ಲೂ 50 ಓವರ್​​ಗಳ ಏಕದಿನ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ. ಏಕೆಂದರೆ 50 ಓವರ್‌ಗಳ ವಿಶ್ವಕಪ್ ಅನ್ನು ನೋಡುತ್ತಾ ಬೆಳೆದಿದ್ದೇವೆ. 2025ರಲ್ಲಿ ಲಾರ್ಡ್ಸ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯುತ್ತಿದೆ. ಆಶಾದಾಯಕವಾಗಿ ನಾವು ಅದನ್ನು ಗೆಲ್ಲಲು ಪ್ರಯತ್ನಿಸುತ್ತೇವೆ ಎಂದು ಹಿಟ್​ಮ್ಯಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ ಸೋಲಿನ ಕುರಿತು ರೋಹಿತ್​ ಮಾತು

2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ದುರಂತ ಸೋಲಿನ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದ್ದಾರೆ. 'ನನಗೆ 50 ಓವರ್‌ಗಳ ವಿಶ್ವಕಪ್ ನಿಜವಾದ ವಿಶ್ವಕಪ್. ನಾವು ಆ ವಿಶ್ವಕಪ್ ನೋಡುತ್ತಾ ಬೆಳೆದಿದ್ದೇವೆ. ಅದಕ್ಕಿಂತ ಮುಖ್ಯವಾಗಿ, ಭಾರತದಲ್ಲಿ, ನಮ್ಮ ಮನೆಯ ಪ್ರೇಕ್ಷಕರ ಮುಂದೆ ನಡೆಯುತ್ತಿತ್ತು. ಫೈನಲ್‌ವರೆಗೂ ನಾವು ಚೆನ್ನಾಗಿ ಆಡಿದ್ದೆವು. ನಾವು ಸೆಮಿ-ಫೈನಲ್‌ನಲ್ಲಿ ಗೆದ್ದಾಗ, ನಾವು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದೇವೆ, ನಾವು ಎಲ್ಲಾ ಸರಿಯಾದ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ನಾನು ಭಾವಿಸಿದೆವು'

ಆದರೆ, ಫೈನಲ್​ನಲ್ಲಿ ಸೋಲಿಗೆ ಒಂದೇ ಒಂದು ಕಾರಣ ನನ್ನ ಮನಸ್ಸಿಗೆ ಬರಲಿಲ್ಲ. ನಾವು ಉತ್ತಮ ಕ್ರಿಕೆಟ್ ಆಡಿದ್ದೆವು. ವಿಶ್ವಕಪ್ ಗೆಲ್ಲುವ ಆತ್ಮವಿಶ್ವಾಸವಿತ್ತು. ನಾವೆಲ್ಲರೂ ಒಂದಲ್ಲ ಒಂದು ದಿನ ಕೆಟ್ಟ ದಿನವನ್ನು ಎದುರಿಸುತ್ತೇವೆ. ಅದರಂತೆ ನಾವು ಎದುರಿಸಿದ ಕೆಟ್ಟ ದಿನ ವಿಶ್ವಕಪ್ ಸೋತ ದಿನವೇ ಆಗಿತ್ತು ಎಂದು ನಾನು ಭಾವಿಸುತ್ತೇನೆ. ಫೈನಲ್​ನಲ್ಲಿ ನಾವು ಕೆಟ್ಟ ಕ್ರಿಕೆಟ್ ಆಡಿದ್ದೇವೆ ಎಂದು ಭಾವಿಸಬೇಡಿ. ಆದರೆ ಕೆಲವು ವಿಷಯಗಳು ಅಂದುಕೊಂಡಂತೆ ನಡೆಯಲಿಲ್ಲ. ಆಸ್ಟ್ರೇಲಿಯಾ ನಮಗಿಂತ ಸ್ವಲ್ಪ ಉತ್ತಮವಾಗಿತ್ತು ಎಂದು ನೋವು ವ್ಯಕ್ತಪಡಿಸಿದ್ದಾರೆ ಹಿಟ್​ಮ್ಯಾನ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ