ಆರ್‌ಸಿಬಿ ಸ್ಟಾರ್ ಎಲ್ಲಿಸ್ ಪೆರ್ರಿಗೆ ಆಗಿದೆ ಡಿವೋರ್ಸ್; ಕ್ರಿಕೆಟ್ ಲೋಕದ ಬ್ಯೂಟಿಯನ್ನೇ ಬೇಡವೆಂದ ಪುಣ್ಯಾತ್ಮ ಯಾರೆಂದ ನೆಟ್ಟಿಗರು
Mar 21, 2024 04:45 PM IST
ಆರ್‌ಸಿಬಿ ಸ್ಟಾರ್ ಎಲ್ಲಿಸ್ ಪೆರ್ರಿಗೆ ಆಗಿದೆ ಡಿವೋರ್ಸ್
- Ellyse Perry : ಆರ್‌ಸಿಬಿ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಟಾಪ್ ಟ್ರೆಂಡ್ನಲ್ಲಿದ್ದಾರೆ. ಅವರ ವೈಯಕ್ತಿಕ ಜೀವನದ ಕುರಿತು ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಅವರ ವಿವಾಹದ ಬಗ್ಗೆ.
ವುಮೆನ್ಸ್ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯಲ್ಲಿ (Womens Premier League 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ನೆರವಾದ ಆಸ್ಟ್ರೇಲಿಯಾದ ವಿಶ್ವಶ್ರೇಷ್ಠ ಆಲ್ರೌಂಡರ್ ಎಲ್ಲಿಸ್ ಪೆರ್ರಿ (Ellyse Perry), ಪ್ರಸ್ತುತ ಇಂಟರ್ನ್ಯಾಷನಲ್ ಕ್ರಶ್ ಆಗಿದ್ದಾರೆ. ಡಬ್ಲ್ಯುಪಿಎಲ್ನಲ್ಲಿ ಪೆರ್ರಿ ಆಟಕ್ಕೆ ಕ್ಲೀನ್ ಬೋಲ್ಡ್ ಆಗಿರುವ ಭಾರತೀಯ ಕ್ರಿಕೆಟ್ ಪ್ರೇಮಿಗಳು ಆಕೆಯ ಸೌಂದರ್ಯಕ್ಕೂ ಮಾರುಹೋಗಿದ್ದಾರೆ.
ಆರ್‌ಸಿಬಿ ಪ್ರಮುಖ ಆಟಗಾರ್ತಿ ಎಲ್ಲಿಸ್ ಪೆರ್ರಿ ಸದ್ಯ ಭಾರಿ ಟ್ರೆಂಡ್ನಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಪೆರ್ರಿ ಅವರೇ ಕಾಣುತ್ತಿದ್ದಾರೆ. ಸದ್ಯ ಆಕೆಯ ಕ್ರಿಕೆಟ್ ಸಾಧನೆಗಳ ಜೊತೆಗೆ ವೈಯಕ್ತಿಕ ಬದುಕಿನ ಕುರಿತು ಅಭಿಮಾನಿಗಳನ್ನು ಗೂಗಲ್ನಲ್ಲಿ ಕೆದುಕುತ್ತಿದ್ದಾರೆ. ಅಲ್ಲದೆ, ಅವರ ಬಾಯ್ಫ್ರೆಂಡ್ ಯಾರು, ಮದುವೆ.. ಹೀಗೆ ಎಲ್ಲವನ್ನೂ ಹುಡುಕಿದ್ದಾರೆ. ಹೀಗೆ ಗೂಗಲ್ ಸರ್ಚ್ ಮಾಡಿದವರಿಗೆ ಅಚ್ಚರಿಯ ಉತ್ತರವೊಂದು ಸಿಕ್ಕಿದ್ದು, ಹೌಹಾರಿದ್ದಾರೆ.
ರಗ್ಬಿ ಆಟಗಾರನನ್ನು ಮದುವೆಯಾಗಿದ್ದ ಪೆರ್ರಿ
ಗೂಗಲ್ನಲ್ಲಿ ಹೆಚ್ಚಾಗಿ ಹುಡುಕಾಟ ಆಗಿರುವ ಪದ ಅಂದರೆ ಎಲ್ಲಿಸ್ ಪೆರ್ರಿ ಬಾಯ್ಫ್ರೆಂಡ್ ಯಾರು? ಇದಕ್ಕೆ ಉತ್ತರ ನೋಡಿದವರು ಅಚ್ಚರಿಗೆ ಒಳಗಾಗಿದ್ದಾರೆ. ಹೌದು, ಪೆರ್ರಿ ಅವರಿಗೆ 2015ರಲ್ಲಿ ವಿವಾಹವಾಗಿದೆ. ಆದರೆ ದುರಾದೃಷ್ಟವಶಾತ್ ಡಿವೋರ್ಸ್ ಕೂಡ ಆಗಿದೆ. ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರು ಖ್ಯಾತ ರಗ್ಬಿ ಆಟಗಾರ ಮ್ಯಾಟ್ ಟೂಮುವಾ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ ಐದು ವರ್ಷಗಳ ನಂತರ ವಿಚ್ಛೇದನ ಪಡೆದರು.
ಟೂಮುವಾ ಮೆಲ್ಬೋರ್ನ್ ರೆಬೆಲ್ಸ್ ತಂಡವನ್ನು ಪ್ರತಿನಿಧಿಸುವ ವೃತ್ತಿಪರ ರಗ್ಬಿ ಆಟಗಾರರಾಗಿದ್ದರು. ಮೊದಲು ಇಬ್ಬರ ವಿಚ್ಛೇದನದ ಸುದ್ದಿ ವದಂತಿಗಳು ಹರಡಿದ್ದವು. ಆದರೆ, ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಕ್ರಿಕೆಟ್ ಅವಾರ್ಡ್ಸ್‌ನಲ್ಲಿ ಪೆರ್ರಿ ತನ್ನ ಮದುವೆಯ ಉಂಗುರವಿಲ್ಲದೆ ಕಾಣಿಸಿಕೊಂಡ ನಂತರ ದಾಂಪತ್ಯದಲ್ಲಿ ಬಿರುಕು ಉಂಟಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಅಂದು ಪೆರ್ರಿ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿ ಪಡೆದರು.
ಜಂಟಿ ಹೇಳಿಕೆ ಬಿಡಗಡೆ ಮಾಡಿದ ಪೆರ್ರಿ ಮತ್ತು ಟೂಮುವಾ
ಸುಮಾರು ಐದು ವರ್ಷಗಳ ಕಾಲ ಒಟ್ಟಿಗೆ ಇದ್ದ ಈ ಜೋಡಿ, 2020ರಲ್ಲಿ ತಮ್ಮ ಪ್ರತ್ಯೇಕತೆಯ ಜಂಟಿ ಹೇಳಿಕೆಯ ಮೂಲಕ ಘೋಷಿಸಿದ್ದರು. ಒಬ್ಬರಿಗೊಬ್ಬರು ಅತ್ಯಂತ ಗೌರವದಿಂದ ಈ ವರ್ಷದ ಆರಂಭದಲ್ಲಿ ನಾವು ಬೇರ್ಪಡಲು ನಿರ್ಧರಿಸಿದ್ದೇವೆ ಎಂದಿದ್ದರು. ಇದು ಸರಿಯಾದ ಕ್ರಮ ಎಂದು ನಾವು ಭಾವಿಸಿದ್ದೇವೆ. ಇದು ವಿಕಸನಗೊಂಡ ವಿಷಯ ಮತ್ತು ಪರಸ್ಪರ ನಿರ್ಧಾರವಾಗಿದೆ. ನಮ್ಮ ಗೌಪ್ಯತೆ ಗೌರವಿಸಲು ಎಲ್ಲರಿಗೂ ಮನವಿ ಮಾಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದರು.
ಡಬ್ಲ್ಯುಪಿಎಲ್ನಲ್ಲಿ ಪೆರ್ರಿ ಪ್ರದರ್ಶನ
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಎಲ್ಲಿಸ್ ಪೆರ್ರಿ ಅವರು ಅದ್ಭುತ ಪ್ರದರ್ಶನ ನೀಡಿದರು. ಕಣಕ್ಕಿಳಿದ 9 ಪಂದ್ಯಗಳಲ್ಲಿ 69.40ರ ಬ್ಯಾಟಿಂಗ್ ಸರಾಸರಿಯಲ್ಲಿ 347 ರನ್ ಗಲೆ ಹಾಕಿದ್ದಾರೆ. 125.72ರ ಸ್ಟ್ರೈಕ್ರೇಟ್ನಲ್ಲಿ ರನ್ ಕಲೆ ಹಾಕಿದ್ದಾರೆ. ಅವರು 41 ಬೌಂಡರಿ, 7 ಸಿಕ್ಸರ್ ಸಿಡಿಸಿದ್ದಾರೆ. ಬೌಲಿಂಗ್ನಲ್ಲೂ 7 ವಿಕೆಟ್ ಪಡೆದಿದ್ದಾರೆ.