logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮಯಾಂಕ್ ಯಾದವ್ ಟಿ20 ವಿಶ್ವಕಪ್​ಗೆ​ ಆಯ್ಕೆ ಆಗಬೇಕಾ; ಮಹತ್ವದ ಹೇಳಿಕೆ ನೀಡಿದ ವೇಗಿಯ ಕೋಚ್​ ದೇವಾಂಗ್ ಗಾಂಧಿ

ಮಯಾಂಕ್ ಯಾದವ್ ಟಿ20 ವಿಶ್ವಕಪ್​ಗೆ​ ಆಯ್ಕೆ ಆಗಬೇಕಾ; ಮಹತ್ವದ ಹೇಳಿಕೆ ನೀಡಿದ ವೇಗಿಯ ಕೋಚ್​ ದೇವಾಂಗ್ ಗಾಂಧಿ

Prasanna Kumar P N HT Kannada

Mar 31, 2024 05:39 PM IST

google News

ಮಯಾಂಕ್ ಯಾದವ್ ಕುರಿತು ಮಹತ್ವದ ಹೇಳಿಕೆ ನೀಡಿದ ವೇಗಿಯ ಕೋಚ್​ ದೇವಾಂಗ್ ಗಾಂಧಿ

    • Mayank Yadav : ಜೂನ್​ 1ರಿಂದ ವೆಸ್ಟ್​ ಇಂಡೀಸ್ ಮತ್ತು ಯುಎಸ್​​​ಎನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಮಯಾಂಕ್ ಯಾದವ್​ ಅವರನ್ನು ಆಯ್ಕೆ ಮಾಡಬೇಕೆಂಬ ಕೂಗು ಕೇಳಿಬಂದ ಬೆನ್ನಲ್ಲೇ ಆತನ ಕೋಚ್ ದೇವಾಂಗ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಮಯಾಂಕ್ ಯಾದವ್ ಕುರಿತು ಮಹತ್ವದ ಹೇಳಿಕೆ ನೀಡಿದ ವೇಗಿಯ ಕೋಚ್​ ದೇವಾಂಗ್ ಗಾಂಧಿ
ಮಯಾಂಕ್ ಯಾದವ್ ಕುರಿತು ಮಹತ್ವದ ಹೇಳಿಕೆ ನೀಡಿದ ವೇಗಿಯ ಕೋಚ್​ ದೇವಾಂಗ್ ಗಾಂಧಿ

ಮಯಾಂಕ್ ಯಾದವ್ (Mayank Yadav) ತನ್ನ ಐಪಿಎಲ್ ಚೊಚ್ಚಲ ಪಂದ್ಯದ ಮೂಲಕ ತನ್ನ ಬಿರುಸಿನ ವೇಗದಿಂದ ಕ್ರಿಕೆಟ್​​ ಜಗತ್ತನ್ನೇ ತಲ್ಲಣಗೊಳಿಸಿದ್ದಾರೆ. ಮಾಜಿ ಕ್ರಿಕೆಟರ್​​ಗಳು, ಕ್ರಿಕೆಟ್ ಪಂಡಿತರು ಮತ್ತು ತಜ್ಞರು ಮಯಾಂಕ್​ ಬೌಲಿಂಗ್​ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ #MayankYadav ಎಂದು ಟಾಪ್ ಟ್ರೆಂಡ್ ಕೂಡ ಆಗುತ್ತಿದೆ. ಗಂಟೆಗೆ 155.8 ಕಿ.ಮೀ ವೇಗದಲ್ಲಿ ಚೆಂಡೆಸೆದು ಸಂಚಲನ ಮೂಡಿಸಿರುವ ಮಯಾಂಕ್​ ಯಾದವ್ ಅವರನ್ನು ಟಿ20 ವಿಶ್ವಕಪ್​​ 2024ಕ್ಕೆ ಆಯ್ಕೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ.

ಜೂನ್​ 1ರಿಂದ ವೆಸ್ಟ್​ ಇಂಡೀಸ್ ಮತ್ತು ಯುಎಸ್​​​ಎನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಮಯಾಂಕ್ ಯಾದವ್​ ಅವರನ್ನು ಆಯ್ಕೆ ಮಾಡಬೇಕೆಂಬ ಕೂಗು ಕೇಳಿಬಂದ ಬೆನ್ನಲ್ಲೇ ಆತನ ಕೋಚ್ ದೇವಾಂಗ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಟಿ20 ವಿಶ್ವಕಪ್​ಗೆ ಆಯ್ಕೆಯ ರೇಸ್​ಗೆ ಬರಲು ಮಯಾಂಕ್ ಏನು ಮಾಡಬೇಕು ಎಂದು ವಿವರಿಸಿದ್ದಾರೆ. ಟೈಮ್ಸ್​ ನೌ ವೆಬ್​ಸೈಟ್​ ನೀಡಿದ ಸಂದರ್ಶನದಲ್ಲಿ ರಾಷ್ಟ್ರೀಯ ಮಾಜಿ ಆಯ್ಕೆಗಾರ ಹಾಗೂ ಪ್ರಸ್ತುತ ದೆಹಲಿ ರಣಜಿ ತಂಡದ ಕೋಚ್ ದೇವಾಂಗ್ ಗಾಂಧಿ ಈ ಬಗ್ಗೆ ಮಾತನಾಡಿದ್ದಾರೆ.

ದೇವಾಂಗ್ ಗಾಂಧಿ ಹೇಳಿದ್ದೇನು?

'ಕಳೆದ ವರ್ಷ ದೆಹಲಿಗಾಗಿ ಆಡುತ್ತಿದ್ದಾಗ, ಅವರು ಗಂಟೆಗೆ 145+ ಕಿ.ಮೀ ಬೌಲಿಂಗ್ ಮಾಡುತ್ತಿದ್ದರು. ಆ ಬಳಿಕ ಗಾಯಗೊಂಡರು. ಗಾಯದ ನಂತರ ಆತ ನಿಜವಾಗಿಯೂ ತಮ್ಮ ಫಿಟ್​​ನೆಸ್​​ನಲ್ಲಿ ಶ್ರಮಿಸಿದ್ದಾರೆ. ಯಾವುದೇ ಆಟಗಾರ ಉತ್ತಮ ಪ್ರದರ್ಶನ ನೀಡುವಾಗ ಗಾಯಗೊಂಡರೆ ವಿಚಲಿತನಾಗುತ್ತಾನೆ. ಆದರೆ ಮಯಾಂಕ್ ಗೊಂದಲಕ್ಕೆ ಒಳಗಾಗದೆ ಕಠಿಣ ಪರಿಶ್ರಮ ಹಾಕಿದ್ದಾರೆ' ಎಂದು ದೇವಾಂಗ್ ಗಾಂಧಿ ಹೇಳಿದ್ದಾರೆ.

'ಫಿಟ್​ನೆಸ್​ಗೆ ಹೆಚ್ಚು ಕೆಲಸ ಮಾಡಿದ ಮಯಾಂಕ್ ಹಿಂದೆಂದಿಗಿಂತಲೂ ಹೆಚ್ಚಿನ ವೇಗವನ್ನು ಪಡೆಯಲು ಇದು ಒಂದು ಪ್ರಮುಖ ಕಾರಣವಾಗಿದೆ. ಆತ ಖಂಡಿತವಾಗಿಯೂ 145ಕ್ಕಿಂತ ಹೆಚ್ಚು ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಆದರೆ ಗಂಟೆಗೆ 155 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವುದನ್ನು ನೋಡಲು ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ' ಸ್ಪೋರ್ಟ್ಸ್ ನೌ ಜತೆಗಿನ ವಿಶೇಷ ಚಾಟ್‌ನಲ್ಲಿ ಗಾಂಧಿ ಸಂತಸಪಟ್ಟರು.

'ಕೆಲವೊಮ್ಮೆ ಗಾಯಗೊಂಡ ಕ್ಷಣಗಳು ಆಟಗಾರರನ್ನು ಮಾನಸಿಕ ಮತ್ತು ದೈಹಿಕವಾಗಿ ಬಲಪಡಿಸುತ್ತವೆ. ಅದಕ್ಕೆ ಸಾಕ್ಷಿ ಮಯಾಂಕ್. ಈ ಹಂತದಲ್ಲಿ ಆತ ಹೊರಗೆ ಹೋಗಿ ಹೆಚ್ಚು ಕ್ರಿಕೆಟ್ ಆಡಬೇಕಾಗಿದೆ. ಬ್ಯಾಕ್-ಟು-ಬ್ಯಾಕ್ ಪಂದ್ಯಗಳನ್ನು ಆಡುವ ಮೂಲಕ ಮತ್ತಷ್ಟು ಪಳಗಬೇಕು. ಈ ಹಂತದಲ್ಲಿ ಅವರು ಸಾಧ್ಯವಾದಷ್ಟು ಆಡಬೇಕು. ರಣಜಿ ಆಡುವಾಗ ಸಾಕಷ್ಟು ಯೋಜನೆಗಳನ್ನು ಮಾಡಬೇಕು. ಕೆಲಸದ ಹೊರೆ ಹೇಗೆ ಸಮತೋಲನಗೊಳಿಸಬೇಕು ಎಂಬುದನ್ನು ತಿಳಿಯಬೇಕು ಎಂದು ಮಯಾಂಕ್ ಕೋಚ್ ಸಲಹೆ ನೀಡಿದ್ದಾರೆ.

2016-17 ರಿಂದ 2020-21ರ ಸೀಸನ್‌ವರೆಗೆ ಭಾರತದ ಹಿರಿಯ ರಾಷ್ಟ್ರೀಯ ಆಯ್ಕೆಗಾರರಾಗಿದ್ದ ಗಾಂಧಿ ಅವರು ಮಯಾಂಕ್ ಟಿ20 ವಿಶ್ವಕಪ್​ ಆಡಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಅವರು ಟಿ20 ವಿಶ್ವಕಪ್ ಆಡಬೇಕೇ ಬೇಡವೇ ಎಂಬುದನ್ನು 'ಸಮಯವೇ ಹೇಳುತ್ತದೆ. ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರೆ, ಉತ್ತಮ ಪ್ರದರ್ಶನ ತೋರುತ್ತಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಪ್ರದರ್ಶನ ನೀಡಿದಂತೆಯೇ ಮಯಾಂಕ್ ಟೂರ್ನಿಯಲ್ಲಿ ಪ್ರದರ್ಶನ ನೀಡಿದರೆ, ಟಿ20 ವಿಶ್ವಕಪ್​​​ಗೆ ಆಯ್ಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದ್ದಾರೆ.

ಏಪ್ರಿಲ್ ಕೊನೆಯ ವಾರದಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾಗುವ ನಿರೀಕ್ಷೆ ಇದೆ. ಈಗಾಗಲೇ ಹಲವರನ್ನು ಆಯ್ಕೆ ಮಾಡಬೇಕೇ ಬೇಡವೇ ಎಂಬ ಚರ್ಚೆಗಳು ಶುರುವಾಗಿವೆ. ಇದೀಗ ಈ ಚರ್ಚೆಗೆ ಮಯಾಂಕ್ ಯಾದವ್ ಹೆಸರು ಹೊಸ ಸೇರ್ಪಡೆಯಾಗಿದೆ. ಐಪಿಎಲ್‌ನ ಪ್ರತಿ ಪಂದ್ಯದಲ್ಲೂ ಪರಿಣಾಮಕಾರಿ ಪ್ರದರ್ಶನ ನೀಡಿದರೆ, ಅವರ ವಿಶ್ವಕಪ್ ಕನಸನ್ನು ಜೀವಂತವಾಗಿರಿಸುತ್ತದೆ. ಆದರೆ ಅವರು ಅವಕಾಶ ಪಡೆಯುತ್ತಾರೆಯೇ ಇಲ್ಲವೇ ಎಂಬುದನ್ನು ಕಾದುನೋಡೋಣ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ