ರೋಹಿತ್ ಶರ್ಮಾ ಇನ್, ಅಶ್ವಿನ್ ವಾಪಸ್, ಮೂವರು ಔಟ್; ಆಸ್ಟ್ರೇಲಿಯಾ ವಿರುದ್ಧ ಪಿಂಕ್ ಬಾಲ್ ಟೆಸ್ಟ್‌ಗೆ ಭಾರತ ಸಂಭಾವ್ಯ XI
Nov 27, 2024 09:11 AM IST
ಶುಭ್ಮನ್ ಗಿಲ್, ರೋಹಿತ್ ಇನ್, ಅಶ್ವಿನ್ ರಿಟರ್ನ್, ಮೂವರು ಔಟ್; ಆಸ್ಟ್ರೇಲಿಯಾ ವಿರುದ್ಧ ಪಿಂಕ್ ಬಾಲ್ ಟೆಸ್ಟ್‌ಗೆ ಭಾರತ ಸಂಭಾವ್ಯ XI
- India Playing XI: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಅಥವಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಿದ್ಧತೆ ಆರಂಭಿಸಿದೆ. ಆದರೆ ಭಾರತದ ಪ್ಲೇಯಿಂಗ್ 11ನಲ್ಲಿ ಮಹತ್ವದ ಮೂರು ಬದಲಾವಣೆಯಾಗುವ ಸಾಧ್ಯತೆ ಇದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಪರ್ತ್ನ ಆಪ್ಟಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 295 ರನ್‌ಗಳ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇದು ಅಸಾಧಾರಣ ಗೆಲುವು ಅಂದರೂ ತಪ್ಪಾಗಲ್ಲ. ಏಕೆಂದರೆ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್ಗೆ ಸರ್ವಪತನ ಕಂಡಿದ್ದ ಭಾರತ ತಂಡ ಬೌಲಿಂಗ್ನಲ್ಲಿ ಪರಾಕ್ರಮ ಮೆರೆಯಿತು. ಆತಿಥೇಯ ಆಸ್ಟ್ರೇಲಿಯಾವನ್ನು 104 ರನ್ಗೆ ಆಲೌಟ್ ಮಾಡಿ ಅಚ್ಚರಿಗೊಳಿಸಿತು. ಅಲ್ಲದೆ, ಭಾರತ ತಂಡ 46 ರನ್‌ಗಳ ಮುನ್ನಡೆ ಕೂಡ ಪಡೆಯಿತು. ಜಸ್ಪ್ರೀತ್ ಬುಮ್ರಾ 5 ವಿಕೆಟ್ ಉರುಳಿಸಿ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ್ರು.
2ನೇ ಇನ್ನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಆಸೀಸ್ ಬೌಲರ್‌ಗಳ ವಿರುದ್ಧ ದಂಡಯಾತ್ರೆ ನಡೆಸಿದರು. ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು. 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 487 ರನ್ ಗಳಿಸಿದ ಭಾರತ ಡಿಕ್ಲೇರ್ ಮಾಡಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ 534 ರನ್‌ಗಳ ಬೃಹತ್ ಗುರಿ ನೀಡಿತು. ಆದರೆ ಗುರಿ ಬೆನ್ನಟ್ಟಲಾಗದ ಆತಿಥೇಯರು 238 ರನ್‌ಗಳಿಗೆ ಆಲೌಟ್ ಆದರು. ಇದರೊಂದಿಗೆ 295 ರನ್‌ಗಳ ಅಂತರದಿಂದ ಆಸೀಸ್ ತವರಿನಲ್ಲಿ ಹೀನಾಯ ಸೋಲಿಗೆ ಶರಣಾಯಿತು. ಇದೀಗ ಎರಡನೇ ಪಂದ್ಯಕ್ಕೆ ಉಭಯ ತಂಡಗಳು ಸಿದ್ಧತೆ ಆರಂಭಿಸಿವೆ. ಆದರೆ ಪ್ಲೇಯಿಂಗ್ ಪ್ರಮುಖ ಬದಲಾವಣೆ ಕಾಣಲಿವೆ.
ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಶಿಫ್ಟ್
ಗೆಲುವಿನ ನಂತರ ಭಾರತ ತಂಡ ಉತ್ಸುಕರಾಗಿದ್ದರೂ ಅಡಿಲೇಡ್‌ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಅಥವಾ 2ನೇ ಟೆಸ್ಟ್‌ಗೆ ಹೊಸ ತಂತ್ರಗಾರಿಕೆ ರೂಪಿಸಬೇಕಿದೆ. ಪಿತೃತ್ವ ರಜೆ ಪಡೆದು ಮೊದಲ ಟೆಸ್ಟ್ ಪಂದ್ಯ ಆಡದ ನಾಯಕ ರೋಹಿತ್ ಶರ್ಮಾ ಇದೀಗ ತಂಡಕ್ಕೆ ಮರಳಿದ್ದಾರೆ. ರೋಹಿತ್ ಟೀಮ್ ಇಂಡಿಯಾಗೆ ಸೇರ್ಪಡೆಗೊಂಡಿದ್ದು, ಅಡಿಲೇಡ್‌ನಲ್ಲಿ ತಂಡ ಮುನ್ನಡೆಸಲಿದ್ದಾರೆ. ಪರ್ತ್‌ನಲ್ಲಿ ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ 2ನೇ ಟೆಸ್ಟ್‌ಗೆ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಿದೆ.
ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮೊದಲ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದೇ ಪ್ರದರ್ಶನ 2ನೇ ಟೆಸ್ಟ್ನಲ್ಲೂ ಮುಂದುವರೆಸುವ ಉತ್ಸಾಹದಲ್ಲಿದ್ದಾರೆ. ಗಾಯದ ಕಾರಣ ಹೊರಗುಳಿದಿದ್ದ ಶುಭ್ಮನ್ ಗಿಲ್ ಸಹ ತಂಡವನ್ನು ಕೂಡಿಕೊಳ್ಳುವುದು ಖಚಿತವಾಗಿದೆ. ಶುಭ್ಮನ್ ಗಿಲ್ ಅವರ ಗಾಯದ ಬಗ್ಗೆ ಸ್ಪಷ್ಟವಾದ ಅಪ್ಡೇಟ್ ಸಿಕ್ಕಿಲ್ಲ. ಆದರೆ ಅವರು ಫಿಟ್ನೆಸ್ ಅನ್ನು ಮರಳಿ ಪಡೆಯಲು ಸಾಕಷ್ಟು ಸಮಯ ಇದೆ. ಏಕೆಂದರೆ ಎರಡನೇ ಪಂದ್ಯ ನಡೆಯುವುದು ಡಿಸೆಂಬರ್ 6ರಂದು. ಒಂದು ಗಿಲ್ ಮರಳಿದರೆ, ದೇವದತ್ ಪಡಿಕ್ಕಲ್ ಸ್ಥಾನ ಬಿಟ್ಟುಕೊಡಬೇಕು.
ಆಗ ಧ್ರುವ್ ಜುರೆಲ್, ಕೆಎಲ್ ರಾಹುಲ್ಗೆ ತನ್ನ ಸ್ಥಾನವನ್ನು ಬಿಟ್ಟು ಕೊಡಬೇಕು. ವಿಕೆಟ್ ಕೀಪರ್ ಬ್ಯಾಟರ್ ಸ್ಥಾನದಲ್ಲಿ ರಿಷಭ್ ಪಂತ್ ಮುಂದುವರೆಯಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿಯದ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಪೈಕಿ ಅಶ್ವಿನ್‌ಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಅಡಿಲೇಡ್ ಪಿಚ್ ಕಂಡಿಷನ್ ಸ್ಪಿನ್ನರ್ಗಳಿಗೆ ನೆರವಾಗುವ ಸಾಧ್ಯತೆ ಇದೆ. ಹೀಗಾಗಿ, ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ. ಇದೇ ಕಾರಣಕ್ಕಾಗಿ ಆರ್ ಅಶ್ವಿನ್ ಅವರನ್ನು ಆಡುವ 11ರ ಬಳಗಕ್ಕೆ ಕರೆ ತರುವ ಅವಕಾಶವಿದೆ.
ವೇಗದ ಆಲ್ರೌಂಡರ್ ನಿತೀಶ್ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆ ಅವರನ್ನು ಮುಂದುವರೆಸುವ ಸಾದ್ಯತೆಯೂ ದಟ್ಟವಾಗಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ಸಹ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯಲು ಚಿಂತನೆ ನಡೆಸಿದ್ದು, ವಾಷಿಂಗ್ಟನ್ ಸುಂದರ್ ಅವರನ್ನು ಕೈಬಿಡಬಹುದು. ಅಡಿಲೇಡ್ ಪರಿಸ್ಥಿತಿಗಳು ಅಶ್ವಿನ್‌ಗೆ ಹೆಚ್ಚು ಸರಿಹೊಂದಬಹುದು. ಹೀಗಾಗಿ ಸುಂದರ್ ಈ ಟೆಸ್ಟ್ನಿಂದ ಹೊರಗುಳಿಯಬಹುದು.
2ನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಇಲೆವೆನ್
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ಆರ್ ಅಶ್ವಿನ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ.