ಪರ್ತ್ ಟೆಸ್ಟ್ ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಸೋಲಿಗೆ ಕಾರಣವೇನು?; ಪಟ್ಟಿಯನ್ನೇ ಬಿಚ್ಚಿಟ್ಟ ನಾಯಕ ಪ್ಯಾಟ್ ಕಮ್ಮಿನ್ಸ್
ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆದ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸೀಸ್ ಪಡೆ 295 ರನ್ ಗಳಿಂದ ಹೀನಾಯವಾಗಿ ಸೋಲು ಕಂಡಿದೆ. ನಾಯಕ ಕಮ್ಮಿನ್ಸ್ ಆಸ್ಟ್ರೇಲಿಯಾ ತಂಡದ ಸೋಲಿಗೆ ಕಾರಣಗಳನ್ನು ತಿಳಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ 2024-25 ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಜಯಭೇರಿ ಬಾರಿಸಿದೆ. ಈ ಮೂಲಕ ಬರೋಬ್ಬರಿ 16 ವರ್ಷಗಳ ಬಳಿಕ ಪರ್ತ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಗೆಲುವಿನ ಸಾಧನೆಯನ್ನು ಮಾಡಿದೆ. ಪಂದ್ಯದ ಬಳಿಕ ಮಾತನಾಡಿರುವ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ತಂಡದ ಸೋಲಿಗೆ ಕಾರಣಗಳ ಪಟ್ಟಿಯನ್ನು ಬಿಚ್ಚಿಟ್ಟಿದ್ದಾರೆ. ನಮ್ಮ ಸಿದ್ಧತೆ ಉತ್ತಮವಾಗಿತ್ತು , ಆದರೆ ಕೆಲವು ಪ್ಲಾನ್ ಗಳು ಸರಿಯಾಗಿ ವರ್ಕೌಟ್ ಆಗಲಿಲ್ಲ. ಮೊದಲ ದಿನದ ಕೊನೆಯ ಸೆಷನ್ ನಲ್ಲಿ ವಿಕೆಟ್ ಗಳು ಬೀಳದಿದ್ದರೆ, ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಅಡಿಲೇಡ್ ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಗೂ ಮುನ್ನ ಈ ಸೋಲಿನ ಬಗ್ಗೆ ಸಾಕಷ್ಟು ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
"ಇದು ತುಂಬಾ ನಿರಾಶಾದಾಯಕ ಸೋಲು. ಈ ಪಂದ್ಯಕ್ಕೆ ಮೊದಲು ನಾವು ಉತ್ತಮ ಸಿದ್ಧತೆ ನಡೆಸಿದ್ದೇವೆ ಎಂದು ನಾವು ಭಾವಿಸಿದ್ದೇವೆ. ಎಲ್ಲರೂ ಅದ್ಭುತವಾಗಿ ಆಡುತ್ತಿದ್ದರು. ಯೋಜನೆಗಳು ಬಹಳಷ್ಟು ಸರಿಯಾಗಿ ನಡೆಯದ ಆಟಗಳಲ್ಲಿ ಇದು ಒಂದಾಗಿದೆ. ಸೋಲಿನ ನಂತರ ಸಾಧ್ಯವಾದಷ್ಟು ಬೇಗ ಲಯಕ್ಕೆ ಬರಲು ಬಯಸುತ್ತೀನಿ, ಆದರೆ ನಾವು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದು ಅಡಿಲೇಡ್ ಗೆ ಇಳಿಯುತ್ತೇವೆ ಎಂದಿದ್ದಾರೆ.
ಭಾರತ ನಮ್ಮ ಗೆಲುವಿಗೆ ಎಲ್ಲೂ ಅವಕಾಶ ನೀಡಲಿಲ್ಲ, ಕೆಲವು ವಿಭಿನ್ನ ಅಂಶಗಳಿದ್ದವು. ಮೊದಲ ದಿನದ ಕೊನೆಯಲ್ಲಿ, ನಾವು ಅದೊಂದು ಅವಧಿಯನ್ನು ದಾಟಿದ್ದರೆ, ಎರಡನೇ ದಿನ ವಿಷಯಗಳು ವಿಭಿನ್ನವಾಗಿರುತ್ತಿದ್ದವು. ಬ್ಯಾಟಿಂಗ್ ನಲ್ಲಿ ಸಾಕಷ್ಟು ಅನುಭವವಿದೆ. ನೆಟ್ ಗಳಲ್ಲಿ ಸಾಕಷ್ಟು ಸಂಭಾಷಣೆ, ಸಾಕಷ್ಟು ಸಮಯ ಇರುತ್ತದೆ. ನಾವು ವಿಭಿನ್ನವಾಗಿ ಏನು ಮಾಡಬಹುದಿತ್ತು ಎಂಬುದರ ಬಗ್ಗೆ ಸಂಭಾಷಣೆಗಳು ನಡೆಯುತ್ತವೆ ಎಂದು ಪ್ಯಾಟ್ ತಿಳಿಸಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 150 ರನ್ ಸರ್ವ ಪತನ ಕಂಡಿತ್ತು, ಆದರೆ ಜಸ್ಪ್ರೀತ್ ಬುಮ್ರಾ ಅವರ ಬಿರುಗಾಳಿಯ ಬೌಲಿಂಗ್ ಎದುರು ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್ ನಲ್ಲಿ 104 ರನ್ ಗಳಿಗೆ ಆಲೌಟ್ ಆಗುವಂತೆ ಮಾಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 46 ರನ್ ಗಳ ಮುನ್ನಡೆ ಸಾಧಿಸಿತ್ತು. ನಂತರ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತ ಪೇರಿಸಿತ್ತು.
ಯಶಸ್ವಿ ಜೈಸ್ವಾಲ್-ಕೆಎಲ್ ರಾಹುಲ್ ಉತ್ತಮ ಅಡಿಪಾಯ, ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಅವರ ಶತಕಗಳ ನೆರವಿನಿಂದ ಬುಮ್ರಾ ಪಡೆ 6 ವಿಕೆಟ್ ಗಳಿಗೆ 487 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅಲ್ಲದೆ, ಆಸ್ಟ್ರೇಲಿಯಾಗೆ 533 ರನ್ ಗಳ ಟಾರ್ಗೆಟ್ ನೀಡಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ 238 ರನ್ ಗಳಿಗೆ ಸರ್ವ ಪತನ ಕಂಡಿತು. ಈ ಮೂಲಕ ಭಾರತ 295 ರನ್ ಗಳ ಭರ್ಜರಿ ಜಯ ಸಾಧಿಸಿತು. ಅಲ್ಲದೆ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.