ಇದೆಂತಹ ಅಚ್ಚರಿ; ಕೇವಲ 36 ಗಂಟೆಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮೂವರು ಆಟಗಾರರು ನಿವೃತ್ತಿ!
Dec 15, 2024 04:03 PM IST
ಮೊಹಮ್ಮದ್ ಇರ್ಫಾನ್ ಸೇರಿ ಕೇವಲ 36 ಗಂಟೆಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮೂವರು ಆಟಗಾರರು ನಿವೃತ್ತಿ ಘೋಷಿಸಿದ್ದಾರೆ.
- ಇಮಾದ್ ವಾಸಿಮ್ ಮತ್ತು ಮೊಹಮ್ಮದ್ ಅಮೀರ್ ನಂತರ ಮೊಹಮ್ಮದ್ ಇರ್ಫಾನ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 42ನೇ ವಯಸ್ಸಿನಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಒಂದೂವರೆ ದಿನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾಕಿಸ್ತಾನ ತಂಡದ ಮೂವರು ಕ್ರಿಕೆಟಿಗರು ನಿವೃತ್ತಿ ಘೋಷಿಸಿದ್ದಾರೆ. 36 ಗಂಟೆಗಳಲ್ಲಿ ಒಬ್ಬ ಸ್ಪಿನ್ನರ್ ಮತ್ತು ಇಬ್ಬರು ವೇಗಿಗಳು ವಿದಾಯ ಹೇಳಿದ್ದಾರೆ. ಮೊದಲು ಇಮಾದ್ ವಾಸೀಂ, ನಂತರ ಮೊಹಮ್ಮದ್ ಅಮೀರ್ ಬಳಿಕ ಮೊಹಮ್ಮದ್ ಇರ್ಫಾನ್ ಕ್ರಿಕೆಟ್ಗೆ ರಿಟೈರ್ ಆಗಿದ್ದಾರೆ. ತಮ್ಮ ನಿವೃತ್ತಿ ವಿಚಾರವನ್ನು ಇರ್ಫಾನ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಪಾಕಿಸ್ತಾನ ಪರ ಕೊನೆಯದಾಗಿ ಆಡಿದ್ದು 2019ರಲ್ಲಿ.ಐದು ವರ್ಷಗಳ ಹಿಂದೆ ಕೊನೆಯ
ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ 42 ವರ್ಷದ ಮೊಹಮ್ಮದ್ ಇರ್ಫಾನ್ ದೇಶೀಯ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದರು. ಜೊತೆಗೆ ಟಿ20 ಲೀಗ್ಗಳಲ್ಲೂ ಆಡುತ್ತಿದ್ದರು. ಇದರ ನಡುವೆ ಪಾಕಿಸ್ತಾನ ರಾಷ್ಟ್ರೀಯ ತಂಡಕ್ಕೆ ಮರಳುವ ನಿರೀಕ್ಷೆ ಹೊಂದಿದ್ದರು. ಆದರೆ ಅವಕಾಶ ಪಡೆಯುವಲ್ಲಿ ವಿಫಲರಾದ ಇರ್ಫಾನ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಸಹ ಆಟಗಾರರು, ಕೋಚ್ಗಳು ಮತ್ತು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಎಡಗೈ ಬೌಲರ್, ಅತಿ ಎತ್ತರದ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು.
ತನ್ನ ನಿವೃತ್ತಿಯ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಾನು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನನ್ನ ತಂಡದ ಸದಸ್ಯರು, ತರಬೇತುದಾರರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ಉತ್ಸಾಹ ಮತ್ತು ಮರೆಯಲಾಗದ ನೆನಪುಗಳಿಗೆ ಧನ್ಯವಾದಗಳು. ಮತ್ತು ನನಗೆ ಎಲ್ಲವನ್ನೂ ನೀಡಿದ ಕ್ರೀಡೆಯನ್ನು ಬೆಂಬಲಿಸುವುದನ್ನು ಮತ್ತು ಆಚರಿಸುವುದನ್ನು ನಾನು ಮುಂದುವರಿಸುತ್ತೇನೆ ಎಂದು ಭಾವುಕರಾಗಿದ್ದಾರೆ.
ಮೊಹಮ್ಮದ್ ಇರ್ಫಾನ್ ವೃತ್ತಿಜೀವನ
7 ಅಡಿ 1 ಇಂಚು ಎತ್ತರದ ಎಡಗೈ ವೇಗದ ಬೌಲರ್ ಇರ್ಫಾನ್ ಅವರನ್ನು ಸಾರ್ವಕಾಲಿಕ ಅತಿ ಎತ್ತರದ ಅಂತಾರಾಷ್ಟ್ರೀಯ ಕ್ರಿಕೆಟಿಗ ಎಂದು ಪರಿಗಣಿಸಲಾಗಿದೆ. ಟೆಸ್ಟ್, ಏಕದಿನ ಹಾಗೂ ಟಿ20 ಸೇರಿ ಒಟ್ಟು 86 ಪಂದ್ಯಗಳಲ್ಲಿ ಪಾಕಿಸ್ತಾನ ದೇಶವನ್ನು ಪ್ರತಿನಿಧಿಸಿದ್ದಾರೆ. 2010 ರಿಂದ 16ರ ತನಕ ಅವರು ಪ್ರಮುಖ ಬೌಲರ್ ಆಗಿದ್ದರು. ತನ್ನ ವೃತ್ತಿಜೀವನದಲ್ಲಿ ಒಟ್ಟು 109 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್ನಲ್ಲಿ 4 ಪಂದ್ಯಗಳಲ್ಲಿ 10 ವಿಕೆಟ್, 60 ಏಕದಿನಗಳಲ್ಲಿ 83 ವಿಕೆಟ್, 22 ಟಿ20 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ.
ಎತ್ತರದ ಬೌಲರ್ ಆಗಿದ್ದ ಇರ್ಫಾನ್ ಬೌನ್ಸರ್ ಎಸೆಯುವುದಕ್ಕೆ ಪ್ರಸಿದ್ಧಿಯಾಗಿದ್ದರು. ಆದರೆ, ಗಾಯಗಳು ತಮ್ಮ ವೃತ್ತಿಜೀವನವನ್ನು ಮೊಟಕುಗೊಳಿಸಿದವು. 2015ರ ವಿಶ್ವಕಪ್ ಅಭಿಯಾನದಲ್ಲಿ ಸೊಂಟದ ಒತ್ತಡದ ಮುರಿತಕ್ಕೆ ಒಳಗಾಗಿದ್ದರು. ಇದಲ್ಲದೆ, ಅವರು ಶಿಸ್ತಿನ ಸಮಸ್ಯೆಯನ್ನೂ ಎದುರಿಸಿದ್ದರು. 2017ರಲ್ಲಿ ಬುಕ್ಕಿಯೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಕಾರಣಕ್ಕೆ 6 ತಿಂಗಳು ಬ್ಯಾನ್ ಆಗಿದ್ದರು. 2010ರಲ್ಲಿ ಪಾಕಿಸ್ತಾನ ಪರ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. 2012ರಲ್ಲಿ ಟಿ20, 2013ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಇಮಾದ್, ಅಮೀರ್ ನಿವೃತ್ತಿ
ಮೊಹಮ್ಮದ್ ಇರ್ಫಾನ್ಗೂ ಮುನ್ನ ಮೊಹಮ್ಮದ್ ಅಮೀರ್ ಮತ್ತು ಇಮಾದ್ ವಾಸೀಂ ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ನಂಬರ್ 1 ಆಲ್ರೌಂಡರ್ ಆಗಿದ್ದ ಇಮಾದ್ ಅವರು 55 ಏಕದಿನ, 75 ಟಿ20 ಆಡಿದ್ದರು. ಒಟ್ಟು 1,540 ರನ್, 117 ವಿಕೆಟ್ ಪಡೆದಿದ್ದರು. ಮತ್ತೊಂದೆಡೆ ಮೊಹಮ್ಮದ್ ಅಮೀರ್ ಒಟ್ಟು 3ನೇ ಬಾರಿಗೆ ನಿವೃತ್ತಿ ಘೋಷಿಸಿದ್ದಾರೆ. 159 ಪಂದ್ಯಗಳಲ್ಲಿ 271 ವಿಕೆಟ್ ಪಡೆದಿದ್ದಾರೆ. ಫಿಕ್ಸಿಂಗ್ನಲ್ಲಿ ಸಿಲುಕಿ ಪಾಕಿಸ್ತಾನ ತಂಡದಿಂದ ಬ್ಯಾನ್ ಕೂಡ ಆಗಿದ್ದರು. 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.