ಭಾರತದ ವಿರುದ್ಧ 4 ಟೆಸ್ಟ್​​​ ಪಂದ್ಯಗಳಲ್ಲಿ 3ನೇ ಶತಕ, ಮತ್ತೆ ತಲೆನೋವಾದ ಟ್ರಾವಿಸ್ ಹೆಡ್; 100 ಸಮೀಪಿಸಿದ ಬ್ಯಾಟಿಂಗ್ ಸರಾಸರಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದ ವಿರುದ್ಧ 4 ಟೆಸ್ಟ್​​​ ಪಂದ್ಯಗಳಲ್ಲಿ 3ನೇ ಶತಕ, ಮತ್ತೆ ತಲೆನೋವಾದ ಟ್ರಾವಿಸ್ ಹೆಡ್; 100 ಸಮೀಪಿಸಿದ ಬ್ಯಾಟಿಂಗ್ ಸರಾಸರಿ

ಭಾರತದ ವಿರುದ್ಧ 4 ಟೆಸ್ಟ್​​​ ಪಂದ್ಯಗಳಲ್ಲಿ 3ನೇ ಶತಕ, ಮತ್ತೆ ತಲೆನೋವಾದ ಟ್ರಾವಿಸ್ ಹೆಡ್; 100 ಸಮೀಪಿಸಿದ ಬ್ಯಾಟಿಂಗ್ ಸರಾಸರಿ

Travis Head: ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್​ ಟ್ರಾವಿಸ್ ಹೆಡ್ ಅವರು ಸತತ 2ನೇ ಶತಕ ಸಿಡಿಸಿ ಮಿಂಚಿದ್ದಾರೆ. 160 ಎಸೆತಗಳಲ್ಲಿ 18 ಬೌಂಡರಿ ಸಹಿತ 152 ರನ್ ಬಾರಿಸಿದ್ದಾರೆ.

ಭಾರತದ ವಿರುದ್ಧ 4 ಟೆಸ್ಟ್​​​ ಪಂದ್ಯಗಳಲ್ಲಿ 3ನೇ ಶತಕ, ಮತ್ತೆ ತಲೆನೋವಾದ ಟ್ರಾವಿಸ್ ಹೆಡ್; 100ರ ಗಡಿ ದಾಟಿದ ಬ್ಯಾಟಿಂಗ್ ಸರಾಸರಿ
ಭಾರತದ ವಿರುದ್ಧ 4 ಟೆಸ್ಟ್​​​ ಪಂದ್ಯಗಳಲ್ಲಿ 3ನೇ ಶತಕ, ಮತ್ತೆ ತಲೆನೋವಾದ ಟ್ರಾವಿಸ್ ಹೆಡ್; 100ರ ಗಡಿ ದಾಟಿದ ಬ್ಯಾಟಿಂಗ್ ಸರಾಸರಿ (AP)

ಬಾರ್ಡರ್ ಗವಾಸ್ಕರ್​ ಟ್ರೋಫಿಯ ಮೂರನೇ ಟೆಸ್ಟ್​ ಪಂದ್ಯದಲ್ಲೂ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್, ಶತಕ ಸಿಡಿಸಿ ಭಾರತ ತಂಡಕ್ಕೆ ಮತ್ತೆ ತಲೆನೋವಾಗಿ ಪರಿಣಮಿಸಿದ್ದಾರೆ. ಪಿಂಕ್ ಬಾಲ್ ಟೆಸ್ಟ್​ನಲ್ಲಿ​ ಭರ್ಜರಿ ಸೆಂಚುರಿ ಸಿಡಿಸಿ ರೋಹಿತ್​ ಪಡೆಯ ಸೋಲಿಗೆ ಕಾರಣಕರ್ತರಾಗಿದ್ದ ಹೆಡ್​, ಬ್ರಿಸ್ಬೇನ್​​ ಟೆಸ್ಟ್​​ನಲ್ಲೂ ಮೂರಂಕಿ ದಾಟಿದ್ದು, ಪ್ರಥಮ ಇನ್ನಿಂಗ್ಸ್​​ನಲ್ಲಿ ಬೃಹತ್ ಮೊತ್ತ ಕಲೆ ಹಾಕಲು ನೆರವಾಗಿದ್ದಾರೆ. ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬಿರುಗಾಳಿ ಬ್ಯಾಟಿಂಗ್ ನಡೆಸಿದ ಹೆಡ್, 160 ಎಸೆತಗಳಲ್ಲಿ 18 ಬೌಂಡರಿ ಸಹಿತ 152 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಕೊನೆಯ 4 ಟೆಸ್ಟ್​​​ ಪಂದ್ಯಗಳಲ್ಲಿ ಹೆಡ್​, ಮೂರನೇ ಶತಕ ಸಿಡಿಸಿದ್ದಾರೆ. ಇದು ಭಾರತದ ವಿರುದ್ಧ ಸತತ 2ನೇ ಹಾಗೂ ಒಟ್ಟು 3ನೇ ಟೆಸ್ಟ್​ ಶತಕ.

ವೃತ್ತಿಜೀವನದಲ್ಲಿ 9ನೇ ಟೆಸ್ಟ್ ಶತಕ ಸಿಡಿಸಿದ ಹೆಡ್, ಇಂದು (ಡಿಸೆಂಬರ್ 15) 115 ಎಸೆತಗಳಲ್ಲಿ 100ರ ಗಡಿ ದಾಟಿದರು. ಈ ಹಿಂದೆ 2023ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ 163 ರನ್ ಬಾರಿಸಿ ಪ್ರಶಸ್ತಿ ಗೆಲುವಿಗೆ ಸಹಾಯ ಮಾಡಿದ್ದ ಹೆಡ್​, ಆ ಬಳಿಕ ಭಾರತದ ವಿರುದ್ಧ ಕಣಕ್ಕಿಳಿದಿದ್ದೇ ಪರ್ತ್​ ಟೆಸ್ಟ್​ನಲ್ಲಿ. ಈ ಪಂದ್ಯದಲ್ಲಿ ಶತಕ ಸಿಡಿಸಲು ವಿಫಲವಾಗಿದ್ದರು. ಆದರೆ ಇದೀಗ ಅಡಿಲೇಡ್​, ಬ್ರಿಸ್ಬೇನ್ ಟೆಸ್ಟ್​​ನಲ್ಲಿ ಶತಕ ಬಾರಿಸಿದ್ದಾರೆ. ಅಡಿಲೇಡ್​ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್​ನಲ್ಲಿ 141 ಎಸೆತಗಳಲ್ಲಿ 140 ರನ್ ಗಳಿಸಿದ್ದ ಹೆಡ್, ಆಸೀಸ್​ಗೆ 10 ವಿಕೆಟ್​ಗಳ ಗೆಲುವು ತಂದುಕೊಟ್ಟಿದ್ದರು. ಅಚ್ಚರಿ ಏನೆಂದರೆ ಹೆಡ್ ಶತಕ ಸಿಡಿಸಿದ ಎಲ್ಲಾ ಪಂದ್ಯಗಳಲ್ಲೂ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಗಬ್ಬಾ ಟೆಸ್ಟ್​​ನಲ್ಲೂ ಭಾರತ ತಂಡಕ್ಕೆ ಆತಂಕ ಮೂಡಿಸಿದೆ.

ಬಿಜಿಟಿಯಲ್ಲಿ 100+ ಬ್ಯಾಟಿಂಗ್ ಸರಾಸರಿ

ಅಲ್ಲದೆ, ಹೆಡ್​ ಶತಕ ಬಾರಿಸಿದ ಯಾವುದೇ ಪಂದ್ಯದಲ್ಲೂ ಆಸ್ಟ್ರೇಲಿಯಾ ಸೋತ ಇತಿಹಾಸ ಹೊಂದಿಲ್ಲ. ಒಂದು ವೇಳೆ ಈ ಪಂದ್ಯ ಸೋತರೆ ಟೀಮ್ ಇಂಡಿಯಾದ ಡಬ್ಲ್ಯುಟಿಸಿ ಫೈನಲ್​ ಕನಸು ಬಹುತೇಕ ಭಗ್ನಗೊಳ್ಳಲಿದೆ. ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಹೆಡ್, 98ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಪರ್ತ್​ ಟೆಸ್ಟ್​ನ 2ನೇ ಇನ್ನಿಂಗ್ಸ್​​ನಲ್ಲಿ 89 ರನ್ ಸಿಡಿಸಿದ್ದ ಹೆಡ್​, ಇದೀಗ ಸತತ ಶತಕ ಬಾರಿಸಿದ್ದಾರೆ. ಭಾರತದ ವಿರುದ್ಧ ತಮ್ಮ ವೃತ್ತಿಜೀವನದಲ್ಲಿ 59.20ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇದೀಗ ಮುಂದಿನ ಎರಡು ಟೆಸ್ಟ್​​ಗಳಲ್ಲೂ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.

ಸ್ಮಿತ್-ಹೆಡ್ ದ್ವಿಶತಕದ ಜೊತೆಯಾಟ

ಟ್ರಾವಿಸ್ ಹೆಡ್ ಜೊತೆಗೆ ಸ್ಟೀವ್ ಸ್ಮಿತ್ ಕೂಡ ಶತಕ ಬಾರಿಸಿದ್ದಾರೆ. 190 ಎಸೆತಗಳಲ್ಲಿ 12 ಬೌಂಡರಿ ಸಹಿತ 101 ರನ್ ಬಾರಿಸಿ ಔಟಾದರು. ತಂಡದ ಮೊತ್ತ 3 ವಿಕೆಟ್ ನಷ್ಟಕ್ಕೆ 75 ರನ್ ಆಗಿದ್ದಾಗ ಒಂದಾದ ಸ್ಮಿತ್-ಹೆಡ್ ಜೋಡಿ, 4ನೇ ವಿಕೆಟ್​ಗೆ 241 ರನ್​ ಪಾಲುದಾರಿಕೆ ಒದಗಿಸಿತು. ಇಬ್ಬರ ಅಬ್ಬರಕ್ಕೆ ಸುಸ್ತಾದ ಭಾರತೀಯ ಬೌಲರ್​ಗಳು ವಿಕೆಟ್ ಪಡೆಯಲು ಹೆಣಗಾಡಿದರು. ಹೆಡ್​-ಸ್ಮಿತ್ ಅಬ್ಬರದ ನಡುವೆಯೂ ಮಿಂಚಿದ ಜಸ್ಪ್ರೀತ್ ಬುಮ್ರಾ 5 ವಿಕೆಟ್​ ಉರುಳಿಸಿದರು. ಮೊದಲ ದಿನದಾಟದಂದು ಮಳೆಯ ಕಾರಣ 13.2 ಓವರ್​​ಗಳಿಗೆ ಸ್ಥಗಿತಗೊಂಡಿತ್ತು. ಆದರೆ ಎರಡನೇ ದಿನದಾಟದಂದು ಮಳೆ ಬಿಡುವು ನೀಡಿದೆ. ಎರಡನೇ ದಿನದ ಅಂತ್ಯಕ್ಕೆ 101 ಓವರ್​ ಆಡಿರುವ ಆಸೀಸ್ 7 ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿದೆ.

Whats_app_banner