ಆರ್‌ಸಿಬಿ ಕುರಿತ ಸ್ಟ್ಯಾಂಡ್ ಅಪ್ ಕಾಮಿಡಿಗೆ ಸ್ವಲ್ಪವೂ ನಗದ ಪ್ರೇಕ್ಷಕರು; ಜೋಕ್‌ಗಿಂತ ಮೌನವೇ ಮಜವಾಗಿದೆ ಎಂದ ನೆಟ್ಟಿಗರು -Video
Jun 21, 2024 06:04 PM IST
ಆರ್‌ಸಿಬಿ ಕುರಿತ ಸ್ಟ್ಯಾಂಡ್ ಅಪ್ ಕಾಮಿಡಿಗೆ ಸ್ವಲ್ಪವೂ ನಗದ ಪ್ರೇಕ್ಷಕರು
- ಆರ್‌ಸಿಬಿ ಕುರಿತು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಒಬ್ಬರು ಮಾಡಿದ ಹಾಸ್ಯಕ್ಕೆ ಪ್ರೇಕ್ಷಕರು ಸ್ವಲ್ಪವೂ ನಗದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೇಕ್ಷಕರ ಮೌನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಒಬ್ಬರು ಮಾಡಿದ ತಮಾಷೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರು ಕಾಮಿಡಿ ಕ್ಲಬ್‌ನಲ್ಲಿ ಯುವತಿಯೊಬ್ಬಳು ಆರ್‌ಸಿಬಿ ಕುರಿತಾಗಿ ಮಾಡಿದ ತಮಾಷೆಗೆ ಪ್ರೇಕ್ಷಕರು ಸ್ವಲ್ಪವೂ ನಗದೆ ಮೌನವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ಬಳಗ ಎಷ್ಟು ದೊಡ್ಡದು ಎಂಬುದು ಇದರಿಂದ ಸಾಬೀತಾಗುತ್ತಿದೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ಆರ್‌ಸಿಬಿ ಕುರಿತು ಕಾಮಿಡಿ ಮಾಡಲು ಹೋದ ಯುವತಿಯ ಕಾಮಿಡಿಗೆ ನೆಟ್ಟಿಗರು ಆಯ್ಯೋ ಪಾಪ ಎನ್ನುತ್ತಿದ್ದಾರೆ.
ಐಪಿಎಲ್‌ನ ಸತತ 17ನೇ ಆವೃತ್ತಿ ಬಳಿಕವೂ ಆರ್‌ಸಿಬಿ ತಂಡದ ಟ್ರೋಫಿ ಬರ ಮುಂದುವರೆದಿದೆ. ಈ ಬಾರಿಯ ಟೂರ್ನಿಯ ದ್ವಿತಿಯಾರ್ಧದಲ್ಲಿ ಅಮೋಘ ಕಂಬ್ಯಾಕ್ ಮಾಡಿದ ಆರ್‌ಸಿಬಿ, ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ಗೆ ಲಗ್ಗೆ ಹಾಕಿತ್ತು. ಆದರೆ, ಎಲಿಮನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಮುಗ್ಗರಿಸಿತು. ಆದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರೇಜ್ ಮಾತ್ರ ಹಾಗೆಯೇ ಉಳಿದಿದೆ. ಫ್ಯಾನ್ಸ್ ಮಾತ್ರ ತಂಡವನ್ನು ಇನ್ನೂ ಬೆಂಬಲಿಸುತ್ತಿದ್ದು, ಟ್ರೋಫಿ ಗೆಲುವು ಸಾಧಿಸಿಲ್ಲ ಎಂಬುದನ್ನೇ ಮರೆತು ಸಪೋರ್ಟ್ ಮಾಡಿದ್ದಾರೆ. ಇದೇ ಕಾರಣದಿಂದ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮಾಡಿದ ಜೋಕ್‌ಗೆ ಒಬ್ಬರೂ ನಗದೆ ಮೌನವಾಗಿದ್ದಾರೆ.
ಜನಪ್ರಿಯ ಕಾಮಿಡಿ ಕ್ಲಬ್‌ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಧೈರ್ಯದಿಂದ ಪ್ರೇಕ್ಷಕರನ್ನು ಎದುರಿಸಿದರು. “ಪತಾ ಹೈ, ಬೆಂಗಳೂರು ಮೇ ಆರ್‌ಸಿಬಿ ಕೋ ಅಂಧಾ ಸಪೋರ್ಟ್ ಕರ್ನೆ ಕಿ ಏಕ್ ಬಿಮಾರಿ ಹೈ (ಬೆಂಗಳೂರಿನಲ್ಲಿ ಆರ್‌ಸಿಬಿಯನ್ನು ಕುರುಡರಂತೆ ಬೆಂಬಲಿಸುವುದು ಒಂದು ರೋಗವಾಗಿದೆ)” ಎಂದು ಯುವತಿ ಹೇಳಿದ್ದಾಳೆ. ಆದರೆ, ಇದು ತಮಾಷೆಯಂತೆ ಅಭಿಮಾನಿಗಳಿಗೆ ಅನಿಸಿಲ್ಲ. ಹೀಗಾಗಿ ಯಾರೂ ನಗಲಿಲ್ಲ.
ಇಷ್ಟಕ್ಕೆ ಸುಮ್ಮನಾಗದ ಯುವತಿ, ತನ್ನ ತಮಾಷೆಯನ್ನು ಮುಂದುವರೆಸಿದ್ದಾಳೆ. ಆರ್‌ಸಿಬಿ ಬಗ್ಗೆಯೇ ಟೀಕಿಸುತ್ತಾ ಅಭಿಮಾನಿಗಳು ನಗುತ್ತಾರಾ ಎಂದು ಕಾದಿದ್ದಾಳೆ. ಆದರೆ, ಆಕೆಯ ಎಲ್ಲಾ ಜೋಕ್‌ಗಳು ವಿಫಲವಾದವು. ಪ್ರೇಕ್ಷಕರು ಕನಿಷ್ಠ ಮುಗುಳ್ನಗಲೂ ಇಲ್ಲಿ. ಆಕೆಯ ಹಾಸ್ಯದ ಪ್ರಯತ್ನವೇ ವಿಫಲವಾಯ್ತು.
ವಿಡಿಯೋ ಇಲ್ಲಿದೆ
ಬೆಂಗಳೂರು ಕಾಮಿಡಿ ಕ್ಲಬ್ ಪ್ರೇಕ್ಷಕರು ಆಕೆಯ ಪ್ರಯತ್ನವನ್ನು ದಯೆಯಿಂದ ಸ್ವೀಕರಿಸಿಲ್ಲ. ಇದನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಬಳಕೆದಾರರೊಬ್ಬರು, ಆಕೆಯ ಕಾಮಿಡಿಗಿಂತ ಅಲ್ಲಿ ನೆರೆದಿದ್ದವರ ಮೌನವೇ ಮಜವಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಕೆಲವರು ಯುವತಿಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಯಾರೂ ನಗದಿದ್ದರೂ ಆಕೆ ಹಾಸ್ಯವನ್ನು ಮುಂದುವರಿಯುತ್ತಿರುವುದು ಒಳ್ಳೆಯದು. ಪ್ರತಿಯೊಬ್ಬ ಕಾಮಿಡಿಯನ್ ಇದನ್ನು ಅನುಭವಿಸುತ್ತಾನೆ" ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದಿದ್ದಾರೆ.
“ನಾನು ಆಕೆಯ ಧೈರ್ಯ ಮತ್ತು ಪ್ರಯತ್ನವನ್ನು ಶ್ಲಾಘಿಸುತ್ತೇನೆ. ಅವಳು ಹೇಳಿದ ರೀತಿ ಗಮನ ಸೆಳೆಯಲಿಲ್ಲ. ಆದರೆ ಆಕೆಯ ಜೋಕ್‌ಗಳು ತಮಾಷೆಯಾಗಿದ್ದವು” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.