logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕಷ್ಟದ ಸಮಯದಲ್ಲಿ ತನಗೆ ನೆರವಾದವರನ್ನು ನೆನೆದ ವಿನೋದ್ ಕಾಂಬ್ಳಿ; ಆರೋಗ್ಯ ಸಮಸ್ಯೆ ಬಗ್ಗೆ ತೆರೆದಿಟ್ಟ ಮಾಜಿ ಕ್ರಿಕೆಟಿಗ

ಕಷ್ಟದ ಸಮಯದಲ್ಲಿ ತನಗೆ ನೆರವಾದವರನ್ನು ನೆನೆದ ವಿನೋದ್ ಕಾಂಬ್ಳಿ; ಆರೋಗ್ಯ ಸಮಸ್ಯೆ ಬಗ್ಗೆ ತೆರೆದಿಟ್ಟ ಮಾಜಿ ಕ್ರಿಕೆಟಿಗ

Prasanna Kumar P N HT Kannada

Dec 14, 2024 07:56 AM IST

google News

ಕಷ್ಟದ ಸಮಯದಲ್ಲಿ ತನಗೆ ನೆರವಾದವರನ್ನು ನೆನೆದ ವಿನೋದ್ ಕಾಂಬ್ಳಿ; ಆರೋಗ್ಯ ಸಮಸ್ಯೆ ಬಗ್ಗೆ ತೆರೆದಿಟ್ಟ ಮಾಜಿ ಕ್ರಿಕೆಟಿಗ

    • Vinod Kambli: ಕಷ್ಟದ ಸಮಯದಲ್ಲಿ ತನಗೆ ನೆರವಾದವರನ್ನು ವಿನೋದ್ ಕಾಂಬ್ಳಿ ನೆನೆದಿದ್ದಾರೆ. ಇದೇ ಮೊದಲ ಬಾರಿಗೆ ಆರೋಗ್ಯ ಸಮಸ್ಯೆ ಬಗ್ಗೆಯೂ ತೆರೆದಿಟ್ಟಿದ್ದಾರೆ.
ಕಷ್ಟದ ಸಮಯದಲ್ಲಿ ತನಗೆ ನೆರವಾದವರನ್ನು ನೆನೆದ ವಿನೋದ್ ಕಾಂಬ್ಳಿ; ಆರೋಗ್ಯ ಸಮಸ್ಯೆ ಬಗ್ಗೆ ತೆರೆದಿಟ್ಟ ಮಾಜಿ ಕ್ರಿಕೆಟಿಗ
ಕಷ್ಟದ ಸಮಯದಲ್ಲಿ ತನಗೆ ನೆರವಾದವರನ್ನು ನೆನೆದ ವಿನೋದ್ ಕಾಂಬ್ಳಿ; ಆರೋಗ್ಯ ಸಮಸ್ಯೆ ಬಗ್ಗೆ ತೆರೆದಿಟ್ಟ ಮಾಜಿ ಕ್ರಿಕೆಟಿಗ (Screengrab)

ಎರಡು ವಾರಗಳ ಹಿಂದೆ ಮಾಜಿ ಕೋಚ್​ ರಮಾಕಾಂತ್ ಅಚ್ರೇಕರ್ ಅವರ ಸ್ಮರಣಾರ್ಥ ಕಾರ್ಯಕ್ರಮದ ಬಳಿಕ ಇದೇ ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್​ ಅವರ ಬಾಲ್ಯ ಸ್ನೇಹಿತ ವಿನೋದ್ ಕಾಂಬ್ಳಿ ಅವರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ತೆರೆದಿಟ್ಟಿದ್ದಾರೆ. ಮೂತ್ರದ ಸೋಂಕಿನ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿದ 52 ವರ್ಷದ ಕಾಂಬ್ಳಿ, ಇದರಿಂದಾಗಿ ತಾನು ಕುಸಿದು ಬಿದಿದ್ದೆ ಎಂದಿದ್ದಾರೆ. ತನ್ನ ಕಷ್ಟದ ಸಮಯದಲ್ಲಿ ಪತ್ನಿ ಆಂಡ್ರಿಯಾ, ಮಗ ಜೀಸಸ್ ಕ್ರಿಸ್ಟಿಯಾನೊ ಮತ್ತು ಮಗಳು ಜೊಹಾನ್ನಾ ಬಂಡೆಯಂತೆ ನಿಂತಿದ್ದರು. ತುಂಬಾ ಸಹಾಯ ಮಾಡಿದರು ಎಂದು ಕಾಂಬ್ಳಿ ನೆನೆದಿದ್ದಾರೆ. ಇದೇ ವೇಳೆ ಸಚಿನ್ ತೆಂಡೂಲ್ಕರ್ ನೆರವಾಗಿದ್ದನ್ನೂ ನೆನಪಿಸಿಕೊಂಡಿದ್ದಾರೆ.

ಆಪ್ತ ಸ್ನೇಹಿತ ಸಚಿನ್ ತೆಂಡೂಲ್ಕರ್ ಜೊತೆಗೆ ರಮಾಕಾಂತ್​ರ ಸ್ಮಾರಕದ ಉದ್ಘಾಟನೆ ವೇಳೆ ಕಾಣಿಸಿಕೊಂಡಿದ್ದ ಕಾಂಬ್ಳಿ ಆರೋಗ್ಯ ಹದಗೆಟ್ಟಿದ್ದನ್ನು ಕಂಡು ಭಾರತೀಯ ಕ್ರಿಕೆಟ್ ವಲಯವು ಕಳವಳ ವ್ಯಕ್ತಪಡಿಸಿತ್ತು. ಕಾರ್ಯಕ್ರಮದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ಕೈ ಹಿಡಿದು ಬಿಡಲು ಕಾಂಬ್ಳಿ ನಿರಾಕರಿಸಿದ್ದರು. ಇದು ಅವರ ಪಾಲಿಗೆ ಸಂತಸದ ವಿಷಯವಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಕಾಂಬ್ಳಿ ಅಚ್ರೇಕರ್ ಅವರ ನೆಚ್ಚಿನ ಹಾಡನ್ನೂ ಹಾಡಿದರು. ಆದರೆ ಅವರ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಕಾಂಬ್ಳಿ ಪರಿಸ್ಥಿತಿಯು ಕ್ರಿಕೆಟ್ ವಲಯವನ್ನು ಚಿಂತೆಗೀಡು ಮಾಡಿತು. 15 ದಿನಗಳ ನಂತರ ಮಾತನಾಡಿದ ಕಾಂಬ್ಳಿ, ಸಮಸ್ಯೆಗಳ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

‘ಪತ್ನಿ ಮತ್ತು ಮಕ್ಕಳು ಚೆನ್ನಾಗಿ ನೋಡಿಕೊಂಡರು’

ನಾನು ಈಗ ಉತ್ತಮವಾಗಿದ್ದೇನೆ. ನನ್ನ ಹೆಂಡತಿ ನನ್ನನ್ನು ತುಂಬಾ ನೋಡಿಕೊಳ್ಳುತ್ತಾರೆ. ಆಕೆ ನನ್ನನ್ನು 3 ವಿಭಿನ್ನ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾಳೆ. ಮೂತ್ರದ ಸಮಸ್ಯೆಯಿಂದ ಬಳಲುತ್ತಿರುವ ನನ್ನನ್ನು ಮಗ ಜೀಸಸ್ ಕ್ರಿಸ್ಟಿಯಾನೊ ಎತ್ತಿಕೊಂಡು ಹೋಗುತ್ತಿದ್ದರು. ನನ್ನನ್ನು ಮತ್ತೆ ನಡೆದಾಡುವಂತೆ ಮಾಡಿದ್ದಾನೆ. 10 ವರ್ಷದ ನನ್ನ ಮಗಳು ಮತ್ತು ನನ್ನ ಹೆಂಡತಿ ನನಗೆ ತುಂಬಾ ನೆರವಾಗಿದ್ದಾರೆ. ಒಂದು ತಿಂಗಳ ಹಿಂದೆ ನನ್ನ ತಲೆ ತಿರುಗಿತ್ತು. ನಾನು ಕುಸಿದು ಕೆಳಗೆ ಬಿದ್ದೆ. ಹೀಗಾಗಿ ವೈದ್ಯರು ನನಗೆ ದಾಖಲಾಗಲು ಹೇಳಿದರು. ನನ್ನನ್ನು ಮೂರು ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಿಸಬೇಕಾಯಿತು. ಅಜಯ್ ಜಡೇಜಾ ನನ್ನನ್ನು ಭೇಟಿ ಮಾಡಲು ಬಂದಿದ್ದರು ಎಂದು ಭಾರತದ ಮಾಜಿ ಬ್ಯಾಟರ್​, ವಿಕ್ಕಿ ಲಾಲ್ವಾನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೇವಲ 3 ಮತ್ತು 4 ನೇ ಟೆಸ್ಟ್​ಗಳಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕಗಳೊಂದಿಗೆ ತಮ್ಮ ಟೆಸ್ಟ್ ವೃತ್ತಿಜೀವನ ಪ್ರಾರಂಭಿಸಿದ್ದ ಕಾಂಬ್ಳಿ ಅವರ ವೃತ್ತಿಜೀವನ ಸಂಪೂರ್ಣವಾಗಿ ಪ್ರಾರಂಭವಾಗುವ ಮೊದಲೇ ಕೆಳಮುಖವಾಗಿ ಸಾಗಿತು. ಅವರ ಟೆಸ್ಟ್ ವೃತ್ತಿಜೀವನವು 1995ರಲ್ಲಿ ಅಂತ್ಯಗೊಂಡಿತು. 17 ಪಂದ್ಯಗಳಿಂದ 54ಕ್ಕಿಂತ ಹೆಚ್ಚು ಸರಾಸರಿಯನ್ನು ಹೊಂದಿದ್ದರು. ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಕೇವಲ 2 ವರ್ಷಗಳ ನಂತರ ಹಠಾತ್ತನೆ ಕೊನೆಗೊಂಡಿತು. 2000 ರವರೆಗೆ ಭಾರತ ತಂಡದ ಪರ ಆಡುವುದನ್ನು ಮುಂದುವರಿಸಿದರೂ ಕಾಂಬ್ಳಿ 9 ಬಾರಿ ಕಂಬ್ಯಾಕ್ ಮಾಡಿದ್ದರು. ಅವರು ಕೊನೆಯ ಬಾರಿಗೆ ಭಾರತವನ್ನು ಪ್ರತಿನಿಧಿಸಿದಾಗ ಅವರಿಗೆ ಕೇವಲ 28 ವರ್ಷ.

ಸಚಿನ್ ಆಸ್ಪತ್ರೆಯ ಬಿಲ್ ನೋಡಿಕೊಂಡಿದ್ದರು ಎಂದ ಕಾಂಬ್ಳಿ

ನಿವೃತ್ತಿಯ ನಂತರ ಕಾಂಬ್ಳಿ 2004 ರವರೆಗೆ ಮುಂಬೈ ಪರ ಕೆಲವು ದೇಶೀಯ ಕ್ರಿಕೆಟ್ ಆಡಿದರು. ಆದರೆ ಮೈದಾನದ ಹೊರಗಿನ ಚಟುವಟಿಕೆಗಳು ಅವರ ಮೈದಾನದಲ್ಲಿನ ಪ್ರದರ್ಶನಗಳಿಗಿಂತ ಹೆಚ್ಚು ಸದ್ದು ಮಾಡಿದವು. 2009ರಲ್ಲಿ ರಿಯಾಲಿಟಿ ಶೋ ಒಂದರಲ್ಲಿ ಮಾತನಾಡಿದ ಕಾಂಬ್ಳಿ, ಸಚಿನ್ ಮಾಡಿದ್ದ ನೆರವುಗಳನ್ನು ನೆನೆದಿದ್ದಾರೆ. ಅಲ್ಲದೆ, 2009 ರಲ್ಲಿ ಇಬ್ಬರ ನಡುವೆ ಏರ್ಪಟ್ಟ ಮುನಿಸು ಏರ್ಪಟ್ಟಿತ್ತು. ಆಗ ಸಚಿನ್ ನನಗೆ ಸಹಾಯ ಮಾಡಿರಲಿಲ್ಲ. ಆದರೆ ಇದೀಗ ಸ್ಪಷ್ಟನೆ ನೀಡಿದ್ದಾರೆ. 2013ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ತೆಂಡೂಲ್ಕರ್ ಅವರೇ ವೈದ್ಯಕೀಯ ಬಿಲ್‌ಗಳನ್ನು ನೋಡಿಕೊಂಡಿದ್ದರು ಎಂದು ಮಾಜಿ ಬ್ಯಾಟರ್ ಬಹಿರಂಗಪಡಿಸಿದ್ದಾರೆ.

ಸಚಿನ್ ಸಹಾಯ ಮಾಡಲಿಲ್ಲ ಎಂಬುದು ನನ್ನ ತೀವ್ರವಾಗಿ ಘಾಸಿಗೊಳಿಸಿತ್ತು. ನಾನು ತುಂಬಾ ಹತಾಶೆಗೊಂಡಿದ್ದೆ. ಆದರೆ 2013 ರಲ್ಲಿ ನನ್ನ ಎರಡು ಶಸ್ತ್ರಚಿಕಿತ್ಸೆಗಳಿಗೆ ಹಣ ನೀಡುವುದು ಸೇರಿದಂತೆ ಸಚಿನ್ ನನಗಾಗಿ ಎಲ್ಲವನ್ನೂ ಮಾಡಿದರು. ನಾವು ಮಾತನಾಡಿದ್ದೇವೆ. ಇದು ಬಾಲ್ಯದ ಸ್ನೇಹವು ನೆನಪಿಸಿತ್ತು. ಸಚಿನ್ ಹೇಗೆ ಆಡಬೇಕೆಂದು ನನಗೆ ಹೇಳಿಕೊಟ್ಟಿದ್ದರು. ನಾನು 9 ಬಾರಿ ಕಂಬ್ಯಾಕ್ ಮಾಡಿದ್ದೇನೆ ಎಂದ ಅವರು ಇದೇ ವೇಳೆ ಭಾರತೀಯ ತಂಡದೊಂದಿಗಿನ ವೈಭವದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ವಾಂಖೆಡೆಯಲ್ಲಿ ನಾನು ಗಳಿಸಿದ ದ್ವಿಶತಕವನ್ನು ನಾನು ಹೆಚ್ಚು ನೆನಪಿಸಿಕೊಳ್ಳುತ್ತೇನೆ. ನನ್ನೊಂದಿಗೆ ಅಚ್ರೇಕರ್ ಸರ್ ಇದ್ದರು. ಅದು ಅದ್ಭುತ ತಂಡವಾಗಿತ್ತು. ನಮ್ಮಲ್ಲಿ ಅನಿಲ್ ಕುಂಬ್ಳೆ, ರಾಜೇಶ್ ಚೌಹಾಣ್, ವೆಂಕಟೇಶ್ ಪ್ರಸಾದ್ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ