ಮುಂಬೈನಿಂದ ಸಾವಿರಾರು ಕಿಮೀ ದೂರದ ಲಂಡನ್ನಲ್ಲೇ ಮಗ ಅಕಾಯ್‌ಗೆ ಜನ್ಮ ನೀಡಲು ನಿರ್ಧರಿಸಿದ್ದೇಕೆ ವಿರುಷ್ಕಾ? ಇಲ್ಲಿದೆ ಕಾರಣ
Feb 22, 2024 01:08 PM IST
ಮುಂಬೈನಿಂದ ಸಾವಿರಾರು ಕಿಮೀ ದೂರದ ಲಂಡನ್ನಲ್ಲೇ ಮಗ ಅಕಾಯ್‌ಗೆ ಜನ್ಮ ನೀಡಲು ನಿರ್ಧರಿಸಿದ್ದೇಕೆ ವಿರುಷ್ಕಾ
- Anushka Sharma and Virat Kohli : ಮುಂಬೈನಿಂದ ಸಾವಿರಾರು ಕಿಲೋ ಮೀಟರ್ ದೂರದ ಲಂಡನ್ನಲ್ಲೇ ಹೆರಿಗೆ ಮಾಡಿಸಲು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ನಿರ್ಧರಿಸಿದ್ದೇಕೆ? ಇಲ್ಲಿದೆ ವಿವರ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (Anushka Sharma and Virat Kohli) ದಂಪತಿಗೆ ಗಂಡು ಮಗು ಜನನವಾಗಿದೆ. ಫೆಬ್ರವರಿ 15ರಂದು ಜೂನಿಯರ್ ವಿರಾಟ್ ಕೊಹ್ಲಿ ಜನಿಸಿದ್ದಾರೆ. ಈ ಫೆಬ್ರವರಿ 20ರಂದು ಅಧಿಕೃತಗೊಳಿಸಿ ಪೋಸ್ಟ್ ಹಾಕಿದ್ದರು. ಕಂದನಿಗೆ ಅಕಾಯ್ (Akaay) ಎಂದು ಹೆಸರು ಕೂಡ ಇಡಲಾಗಿದೆ. 2ನೇ ಮಗು ನಿರೀಕ್ಷೆಯ ಕುರಿತು 3-4 ತಿಂಗಳಿಂದ ಊಹಾಪೋಹ ಇದ್ದರೂ ಈ ಸೆಲೆಬ್ರೆಟಿ ಕಪಲ್ಸ್ ಇಷ್ಟು ದೊಡ್ಡ ಬೆಳವಣಿಗೆಯನ್ನು ತಿಂಗಳುಗಟ್ಟಲೇ ಮುಚ್ಚಿಟ್ಟಿದ್ದು ವಿಪರ್ಯಾಸವೇ ಸರಿ.
ಅನುಷ್ಕಾ ಗರ್ಭಿಣಿಯಾಗಿದ್ದಾರೆ ಎಂದು ಬಹಳ ದಿನಗಳಿಂದ ವದಂತಿ ಹಬ್ಬಿತ್ತು. ಏರ್ಪೋರ್ಟ್ ಸೇರಿದಂತೆ ಹಲವೆಡೆ ಅನುಷ್ಕಾ ಕಾಣಿಸಿದ ಸಂದರ್ಭದಲ್ಲಿ ಆಕೆ ಗರ್ಭಿಣಿಯಾಗಿದ್ದಾರೆ ಎನ್ನುವ ಫೋಟೋಗಳು ವೈರಲ್ ಆಗಿದ್ದವು. ಮತ್ತೊಂದು ಸಾಕ್ಷಿ ಎಂಬಂತೆ ಸಾರ್ವಜನಿಕವಾಗಿ ಗೈರು ಹಾಜರಾಗುತ್ತಿದ್ದದ್ದನ್ನು ಸಹ ಇಲ್ಲಿ ಉಲ್ಲೇಖಿಸಬಹುದು. ಆದರೆ ಈ ವಿಚಾರವನ್ನು ಈ ಜೋಡಿ ಎಲ್ಲೂ ಬಹಿರಂಗಗೊಳಿಸಿರಲಿಲ್ಲ. ಗಣ್ಯ ವ್ಯಕ್ತಿಗಳಾಗಿ ಇಷ್ಟರಮಟ್ಟಿಗೆ ಗೌಪ್ಯತೆ ಹೇಗೆ ಕಾಪಾಡಿಕೊಂಡರು ಎಂದು ಎಲ್ಲರೂ ಆಶ್ಚರ್ಯಕ್ಕೆ ಒಳಗಾಗಿದ್ದಾರೆ.
ಲಂಡನ್ನಲ್ಲಿ ಹೆರಿಗೆ ಮಾಡಿಸಲು ಕಾರಣವೇನು?
ಏಕೆಂದರೆ ಸೆಲೆಬ್ರೆಟಿಗಳ ಹಿಂದೆ ಮಾಧ್ಯಮದ ಕಣ್ಣುಗಳು ಸುತ್ತುತ್ತಲೇ ಇರುತ್ತವೆ. ಅವರು ಎಲ್ಲಿಯೇ ಹೋದರೂ ಅವರ ಹಿಂದೆ ಮೀಡಿಯಾ ಇರುತ್ತದೆ. ಇದರ ನಡುವೆಯೂ ಗೌಪ್ಯತೆ ಕಾಪಾಡಿಕೊಂಡಿದ್ದು ಅಚ್ಚರಿ ಮೂಡಿಸಿದೆ. ಈ ಮಧ್ಯೆ ಲಂಡನ್ನಲ್ಲೇ ಮಗುವಿಗೆ ಜನ್ಮ ನೀಡಲು ವಿರುಷ್ಕಾ ದಂಪತಿ ನಿರ್ಧರಿಸಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ನಿಖರ ಕಾರಣ ಇಲ್ಲಿದೆ. 2021ರಲ್ಲಿ ವಮಿಕಾ ಜನಿಸಿದ ವೇಳೆ ದೇಶದಲ್ಲಿ ಉನ್ಮಾದ ಹೆಚ್ಚಾಗಿತ್ತು. ಹೀಗಾಗಿ ದೇಶದಿಂದ ದೂರವಿರುವುದೇ ಉತ್ತಮ ಎಂದು ನಿರ್ಧರಿಸಿ ಲಂಡನ್ನಲ್ಲಿ ಹೆರಿಗೆ ಮಾಡಿಸಲು ತೀರ್ಮಾನಿಸಿದರು.
ವಿರಾಟ್ ಮತ್ತು ಅನುಷ್ಕಾ ಖಾಸಗಿ ಜೀವನಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಯಾವುದೇ ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲ್ಲ. ಲವ್, ಮದುವೆ, ವಮಿಕಾ ಜನನ, ಆಕೆಯ ಮುಖ ತೋರಿಸದಿರುವುದು ಸೇರಿದಂತೆ ಬಹುತೇಕ ವಿಷಯಗಳಲ್ಲಿ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ವಮಿಕಾ ಮುಖವನ್ನು ಇದುವರೆಗೂ ಸಾರ್ವಜನಿಕಗೊಳಿಸಿಲ್ಲ. ಈ ದಂಪತಿ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ ಅನುಷ್ಕಾ ಮತ್ತು ವಿರಾಟ್ ತಮ್ಮ ಮಗ ಅಕಾಯ್ ಹುಟ್ಟುವ ಒಂದೆರಡು ವಾರಗಳ ಮೊದಲು ಲಂಡನ್‌ಗೆ ಹಾರಿದ್ದರು.
ಅನಗತ್ಯ ಮಾಹಿತಿ ಸೋರಿಕೆಗೆ ಕ್ರಮ
ಅನುಷ್ಕಾ ಗರ್ಭಾವಸ್ಥೆಯಲ್ಲಿ ಸಮಸ್ಯೆ ಇತ್ತು ಎಂಬ ವರದಿಗಳು ಬಂದಿದ್ದವು. ಆದರೆ ಯಾರೊಬ್ಬರ ಯೋಗಕ್ಷೇಮ ಮತ್ತು ಆರೋಗ್ಯದ ಬಗ್ಗೆ ಊಹಾಪೋಹ ಮಾಡುವುದು ನಿಷ್ಪ್ರಯೋಜಕವಾಗಿದೆ. ಈ ಕುರಿತ ಅನಗತ್ಯ ಮಾಹಿತಿ ಸೋರಿಕೆ ಆಗುವುದನ್ನು ತಪ್ಪಿಸಲು, ಮಾಧ್ಯಮದ ನಡುವೆ ಅಂತರ ಕಾಯ್ದುಕೊಳ್ಳಲು ಮುಂಬೈನಿಂದ ಸಾವಿರಾರು ಮೈಲುಗಳು ದೂರಲ್ಲಿರುವ ಲಂಡನ್‌ಗೆ ತೆರಳಿದ್ದರು. ಅವರು ಸದ್ಯದಲ್ಲೇ ಯುಕೆಗೆ ತೆರಳುವ ಸಾಧ್ಯತೆ ಇದೆ. ಅಲ್ಲೇ ಮನೆ ಖರೀದಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
ಟೀಮ್ ಇಂಡಿಯಾದ ಸೂಪರ್ ಕ್ರಿಕೆಟರ್ ಆಗಿರುವ ವಿರಾಟ್ ಇನ್ನೂ ಕೆಲವು ವರ್ಷಗಳ ಕಾಲ ಸಕ್ರಿಯ ಕ್ರಿಕೆಟ್ ಹೊಂದಿರಲಿದ್ದಾರೆ. ಮೂರ್ನಾಲ್ಕು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ ಅನುಷ್ಕಾ ಶರ್ಮಾ ಈಗಾಗಲೇ ಸಿನಿಮಾ ಕ್ಷೇತ್ರದಿಂದ ಹಿಂದೆ ಸರಿದಿದ್ದು, ಕೇವಲ ನಿರ್ಮಾಪಕರಾಗಿ ಬದಲಾಗಿದ್ದಾರೆ. ಭವಿಷ್ಯದಲ್ಲಿ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲು ಬಯಸಿದ ಕಾರಣ ಲಂಡನ್ನಲ್ಲಿ ಮನೆ ಮಾಡಲು ನಿರ್ಧರಿಸಿದ್ದಾರೆ.