ರನೌಟ್ ಆಗದಿದ್ದರೂ ಚೆಂಡಿನಿಂದ ಪೆಟ್ಟು ತಿಂದ ರವೀಂದ್ರ ಜಡೇಜಾ ಔಟಾಗಿದ್ದೇಕೆ; ಕ್ರಿಕೆಟ್ ನಿಯಮ ಹೇಳುವುದೇನು?
May 12, 2024 09:55 PM IST
ರನೌಟ್ ಆಗದಿದ್ದರೂ ಚೆಂಡಿನಿಂದ ಪೆಟ್ಟು ತಿಂದ ರವೀಂದ್ರ ಜಡೇಜಾ ಔಟಾಗಿದ್ದೇಕೆ; ಕ್ರಿಕೆಟ್ ನಿಯಮ ಹೇಳುವುದೇನು?
- Ravindra Jadeja : ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ರನೌಟ್ ಆಗದಿದ್ದರೂ ಔಟ್ ಕೊಟ್ಟಿದ್ದೇಕೆ? ಇಲ್ಲಿದೆ ವಿವರ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮತ್ತೊಂದು ವಿವಾದ ದಾಖಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ರನ್ ಚೇಸ್ನ 16ನೇ ಓವರ್ನಲ್ಲಿ ರವೀಂದ್ರ ಜಡೇಜಾ ಔಟಾಗಿದ್ದು ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಸಂಜು ಸ್ಯಾಮ್ಸನ್ ಎಸೆದ ಥ್ರೋ ವಿಕೆಟ್ಗೆ ಬೀಳದಿದ್ದರೂ ಔಟ್ ಕೊಟ್ಟಿದ್ದು ಎಲ್ಲರನ್ನೂ ಅಚ್ಚರಿಗೆ ದೂಡಿದೆ.
ಸಂಜು ಸ್ಯಾಮ್ಸನ್ ಅವರ ಸ್ಟ್ರೈಟ್ ಥ್ರೋ ಸ್ಟಾರ್ ಆಲ್ರೌಂಡರ್ ದೇಹಕ್ಕೆ ಬಡಿಯಿತು. ವಿಕೆಟ್ ಬೀಳದೆ, ರನೌಟ್ ಆಗದಿದ್ದರೂ ಚೆಂಡಿನಿಂದ ಪೆಟ್ಟು ತಿಂದ ರವೀಂದ್ರ ಜಡೇಜಾ ಔಟಾಗಿದ್ದೇಕೆ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಅದರಲ್ಲೂ ಸಿಎಸ್ಕೆ ಫ್ಯಾನ್ಸ್ ಅಂಪೈರ್ಗಳ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಈ ಔಟ್ ಅನ್ನು ಫೀಲ್ಡಿಂಗ್ಗೆ ಅಡ್ಡಿಪಡಿಸಿದ್ದಕ್ಕೆ ನೀಡಲಾಗಿದೆ. ಅಬ್ಸ್ಟ್ರಕ್ಟಿಂಗ್ ದ ಫೀಲ್ಡ್ ಎಂಬ ಔಟ್ಗೆ (OBS) ಗುರಿಯಾಗಿದ್ದಾರೆ. ಐಪಿಎಲ್ನಲ್ಲಿ ಒಬಿಎಸ್ ಆದ ಮೊದಲ ಆಟಗಾರ ಎನಿಸಿದ್ದಾರೆ.
ರವೀಂದ್ರ ಜಡೇಜಾ ಔಟಾಗಿದ್ದೇಗೆ?
ಆವೇಶ್ ಖಾನ್ ಎಸೆದ 16ನೇ ಓವರ್ನ 5ನೇ ಎಸೆತದ ಶಾರ್ಟ್ ಲೆಂಗ್ತ್ ಡೆಲಿವರಿಯನ್ನು ಥರ್ಡ್ ಮ್ಯಾನ್ ಕಡೆಗೆ ಬಾರಿಸಿದ ರವೀಂದ್ರ ಜಡೇಜಾ, ಒಂದು ರನ್ ಪೂರೈಸಿ ಮತ್ತೊಂದು ರನ್ಗಾಗಿ ಪಿಚ್ನ ಅರ್ಧಭಾಗಕ್ಕೆ ಬಂದೇ ಬಿಟ್ಟರು. ಆಗ ನಾಯಕ ಋತುರಾಜ್ ಗಾಯಕ್ವಾಡ್, ಜಡ್ಡುಗೆ ಬೇಡವೆಂದು ಸಿಗ್ನಲ್ ಕೊಟ್ಟರು. ಅಷ್ಟರಲ್ಲಾಗಲೇ ಫೀಲ್ಡರ್ ಚೆಂಡು ಫೀಲ್ಡರ್ ಕೈಯಿಂದ ವಿಕೆಟ್ ಕೀಪರ್ ಕೈ ಸೇರಿತ್ತು. ತಕ್ಷಣವೇ ಸಂಜು ಚೆಂಡನ್ನು ನಾನ್ಸ್ಟೈಕರ್ ವಿಕೆಟ್ಗೆ ಎಸೆದರು.
ಆದರೆ, ವಿಕೆಟ್ ಕೀಪರ್ ಕೈ ಸೇರಿದ್ದನ್ನು ನೋಡಿ ಹಿಂದಕ್ಕೆ ಮರಳಿದ ಜಡ್ಡು, ಓಡುವ ದಿಕ್ಕನ್ನು ಬದಲಿಸಿ ಫೀಲ್ಡಿಂಗ್ಗೆ ಅಡ್ಡಿಪಡಿಸಿದರು. ಸಂಜು ಥ್ರೋ ಮಾಡಿದ್ದು ಎಲ್ಲಿಗೆ ಬೀಳುತ್ತದೆ ಎಂಬ ಅರಿವಿದ್ದರೂ ಉದ್ದೇಶಪೂರ್ವಕವಾಗಿ ಫೀಲ್ಡಿಂಗ್ಗೆ ಅಡ್ಡಿಪಡಿಸಿದರು. ಚೆಂಡು ಕೈಗೆ ಸಿಕ್ಕ ಕೆಲವೇ ಸೆಕೆಂಡ್ಗಳಲ್ಲಿ ಸ್ಯಾಮ್ಸನ್, ಥ್ರೋ ಮಾಡಿದರು. ಆದರೆ ಆ ಚೆಂಡು ನೇರವಾಗಿ ಜಡ್ಡುಗೆ ಬಿತ್ತು. ಹೀಗಾಗಿ ಉದ್ದೇಶಪೂರ್ವಕವಾಗಿ ಫೀಲ್ಡಿಂಗ್ಗೆ ಅಡ್ಡಿಪಡಿಸಿದ ಕಾರಣ ಔಟ್ ಎಂದು ಪರಿಗಣಿಸಲಾಯಿತು.
ಅಬ್ಸ್ಟ್ರಕ್ಟಿಂಗ್ ದ ಫೀಲ್ಡ್ ಔಟ್ ಎಂದರೇನು?
ಕ್ರಿಕೆಟ್ ಕ್ರೀಡೆಯಲ್ಲಿ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡುವ ಒಂಬತ್ತು ವಿಧಾನಗಳಲ್ಲಿ ಇದು ಒಂದು. ನಿಮಯ 37.2 ರಂತೆ ನಿಯಂತ್ರಣ ಮೀರಿದ ಸಂದರ್ಭಗಳನ್ನು ಹೊರತುಪಡಿಸಿ, ಬ್ಯಾಟರ್ ಔಟಾಗಿದ್ದರೂ ಫೀಲ್ಡಿಂಗ್ಗೆ ಅಡ್ಡಿಪಡಿಸಿದರೆ ಮತ್ತು ರನೌಟ್, ಕ್ಯಾಚ್ ಅಥವಾ ಇತರೆ ಸಂದರ್ಭದಲ್ಲಿ ಚೆಂಡಿಗೆ ಉದ್ದೇಶಪೂರ್ವಕವಾಗಿ ಪದ ಪ್ರಯೋಗ ಮಾಡುವುದಾಗಲಿ ಅಥವಾ ಆ್ಯಕ್ಷನ್ ಮೂಲಕ ಅಡ್ಡಿಪಡಿಸಲು ಪ್ರಯತ್ನಿಸಿದರೆ ಆ ಬ್ಯಾಟರ್ನನ್ನು ಔಟ್ ಎಂದು ಪರಿಗಣಿಸಲಾಗುತ್ತದೆ ಎಂದು ಎಂಸಿಸಿ ಕ್ರಿಕೆಟ್ ನಿಯಮ 37.1.1 ಹೇಳುತ್ತದೆ.
ನಿಯಂತ್ರಣ ಮೀರಿದ ಸಂದರ್ಭಗಳಲ್ಲಿ ಹೊರತುಪಡಿಸಿ ಬೌಲರ್ ನೀಡಿದ ಚೆಂಡನ್ನು ಸ್ವೀಕರಿಸುವ ಸಮಯದಲ್ಲಿ ಅವನು/ಅವಳು ಉದ್ದೇಶಪೂರ್ವಕವಾಗಿ ಬ್ಯಾಟ್ ಹಿಡಿದಿಲ್ಲದ ಕೈಯಿಂದ ಚೆಂಡನ್ನು ಹೊಡೆದರೆ, ಔಟ್ ಕೊಡಲಾಗುತ್ತದೆ ಎಂದು ಎಂಸಿಸಿ ಕ್ರಿಕೆಟ್ ನಿಯಮ 37.1.2 ಹೇಳುತ್ತದೆ. ಹಾಗೆಯೇ ಚೆಂಡನ್ನು ಎರಡು ಬಾರಿ ಹೊಡೆಯಲು ಪ್ರಯತ್ನಿಸುವುದು ಸಹ ಅಪರಾಧ ಎಂದು ನಿಯಮ 34 ಹೇಳುತ್ತದೆ.
ಆರ್ಆರ್ ವಿರುದ್ಧ ಸಿಎಸ್ಕೆ ಗೆಲುವು
ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 62ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ನಡೆಸಿತು. ಆದರೆ ಬೌಲರ್ಗಳಿಗೆ ಪಿಚ್ನಲ್ಲಿ ಬ್ಯಾಟಿಂಗ್ ಮಾಡಲು ತತ್ತರಿಸಿದ ಆರ್ಆರ್ ಬ್ಯಾಟರ್ಸ್, 20 ಓವರ್ಗಳಲ್ಲಿ 141 ರನ್ ಗಳಿಸಲಷ್ಟೇ ಶಕ್ತರಾದರು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ ಬ್ಯಾಟರ್ಸ್ ಕೂಡ ರನ್ ಗಳಿಸಲು ಪರದಾಡಿದರು. ಅಂತಿಮವಾಗಿ 19ನೇ ಓವರ್ನಲ್ಲಿ ಸಿಎಸ್ಕೆ ಗೆದ್ದು ಬೀಗಿತು. ಅಲ್ಲದೆ, ಪ್ಲೇಆಫ್ ಆಸೆಯನ್ನೂ ಜೀವಂತವಾಗಿಟ್ಟುಕೊಂಡಿತು.