ನಾನು ನಿನಗಿಂತ ಫಾಸ್ಟ್ ಹಾಕ್ತೀನಿ; ಹರ್ಷಿತ್ ರಾಣಾ ಕೆಣಕಿದ್ದ ಮಿಚೆಲ್ ಸ್ಟಾರ್ಕ್ಗೆ ಯಶಸ್ವಿ ಜೈಸ್ವಾಲ್ ತಿರುಗೇಟು, ವಿಡಿಯೋ
Nov 24, 2024 06:13 AM IST
ನಾನು ನಿನಗಿಂತ ಫಾಸ್ಟ್ ಹಾಕ್ತೀನಿ; ಹರ್ಷಿತ್ ರಾಣಾ ಕೆಣಕಿದ್ದ ಮಿಚೆಲ್ ಸ್ಟಾರ್ಕ್ಗೆ ಯಶಸ್ವಿ ಜೈಸ್ವಾಲ್ ತಿರುಗೇಟು, ವಿಡಿಯೋ
- Yashasvi Jaiswal trolled Mitchell Starc: ಆಸೀಸ್ ಫಾಸ್ಟ್ ಬೌಲರ್ ಮಿಚೆಲ್ ಸ್ಟಾರ್ಕ್ ತಾನು ಬ್ಯಾಟಿಂಗ್ ನಡೆಸುವ ವೇಳೆ, ಭಾರತೀಯ ಬೌಲರ್ ಹರ್ಷಿತ್ ರಾಣಾ ಅವರನ್ನು ಕೆಣಕಿದ್ದರು. ಆದರೆ ಇದಕ್ಕೆ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಸ್ಲೆಡ್ಜಿಂಗ್ ನಡೆದಿದೆ. ಪರ್ತ್ನ ಆಪ್ಟಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಟೆಸ್ಟ್ನಲ್ಲಿ ಆಸೀಸ್ ಫಾಸ್ಟ್ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಬ್ಯಾಟಿಂಗ್ ನಡೆಸುವ ವೇಳೆ, ಭಾರತೀಯ ಬೌಲರ್ ಹರ್ಷಿತ್ ರಾಣಾ ಅವರನ್ನು ಕೆಣಕಿದ್ದರು. ಆದರೆ ಇದಕ್ಕೆ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲ್ಚಲ್ ಸೃಷ್ಟಿಸುತ್ತಿದೆ. ವಿರಾಟ್ ಕೊಹ್ಲಿಯಂತೆಯೇ ನೀನು ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಬ್ಯಾಟರ್ಗಳ ವೈಫಲ್ಯದಿಂದ 150 ರನ್ಗಳ ಸಾಧಾರಣ ಮೊತ್ತಕ್ಕೆ ಕುಸಿಯಿತು. ಆಸೀಸ್ ವೇಗಿಗಳು ಮಾರಕ ದಾಳಿ ನಡೆಸುವ ಮೂಲಕ ಪ್ರವಾಸಿಗರನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು. ಸ್ಕೋರ್ಗೆ ಪ್ರತ್ಯುತ್ತರ ನೀಡಲು ಹೊರಟ ಆಸ್ಟ್ರೇಲಿಯಾ ಬ್ಯಾಟರ್ಗಳು ಸಹ ತೀವ್ರ ವೈಫಲ್ಯ ಅನುಭವಿಸಿದರು. ಜಸ್ಪ್ರೀತ್ ಬುಮ್ರಾ ದಾಳಿಗೆ ಕಾಂಗರೂ ಪಡೆ ತತ್ತರಿಸಿತು. ಪರಿಣಾಮ ಮೊದಲ ಇನ್ನಿಂಗ್ಸ್ನಲ್ಲಿ 104 ರನ್ಗಳಿಗೆ ಆಲೌಟ್ ಆಯಿತು. ಅಲ್ಲದೆ, ಭಾರತ ಅಲ್ಪ ಮೊತ್ತವನ್ನು ಗಳಿಸಿಯೂ 46 ರನ್ಗಳ ಮುನ್ನಡೆ ಪಡೆಯುವ ಮೂಲಕ ಗಮನ ಸೆಳೆಯಿತು.
ಹರ್ಷಿತ್ ಕೆಣಕಿದ ಸ್ಟಾರ್ಕ್ಗೆ ಜೈಸ್ವಾಲ್ ತಿರುಗೇಟು
ಎರಡನೇ ದಿನದಂದು ಮಿಚೆಲ್ ಸ್ಟಾರ್ಕ್ ಭಾರತ ತಂಡವನ್ನು ಸರಿಯಾಗಿ ಕಾಡಿದರು. ರಕ್ಷಣಾತ್ಮಕ ಆಟವಾಡುವ ಮೂಲಕ ವಿಕೆಟ್ ಕಾಪಾಡಿದರು. 112 ಎಸೆತಗಳನ್ನು ಎದುರಿಸಿದ ಸ್ಟಾರ್ಕ್, 26 ರನ್ಗಳಿಸಿದರು. 127 ನಿಮಿಷಗಳ ಕಾಲ ಕ್ರೀಸ್ನಲ್ಲಿ ಉಳಿದಿದ್ದ ಸ್ಟಾರ್ಕ್, ಭಾರತೀಯ ಬೌಲರ್ಗಳಿಗೆ ಕಾಡಿದರು. ಈ ವೇಳೆ ಹರ್ಷಿತ್ ಬೌಲಿಂಗ್ ಮಾಡುವಾಗ, ನಾನು ನಿನಗಿಂತ ತುಂಬಾ ಫಾಸ್ಟ್ ಆಗಿ ಬೌಲಿಂಗ್ ಮಾಡಿತ್ತೇನೆ ಎಂದು ಕೆಣಕಿದ್ದರು. ಆದರೆ ಹರ್ಷಿತ್ ಯಾವುದೇ ಉತ್ತರ ನೀಡದೆ ಬೌಲಿಂಗ್ಗೆ ಮರಳಿದರು. ಇನ್ನಿಂಗ್ಸ್ ಮುಕ್ತಾಯದ ನಂತರ ಭಾರತ ಎರಡನೇ ಇನ್ನಿಂಗ್ಸ್ ಆರಂಭಿಸಿತು.
ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆಸೀಸ್ ಬೌಲರ್ಗಳಿಗೆ ಬೆಂಡೆತ್ತಿದರು. ವಿಕೆಟ್ ಕಳೆದುಕೊಳ್ಳದೆ, 172 ರನ್ ಗಳಿಸಿ ಎರಡನೇ ದಿನದಾಟವನ್ನು ಮುಗಿಸಿದರು. ಇಬ್ಬರೂ ಸಹ ಅರ್ಧಶತಕ ಸಿಡಿಸಿದರು. ಇಬ್ಬರ ಅಬ್ಬರಕ್ಕೆ ಬ್ರೇಕ್ ಹಾಕಲು ಆಸೀಸ್ ವೇಗಿಗಳು ಪರದಾಡುತ್ತಿದ್ದರು. ಆದರೆ ಟೀ ಬ್ರೇಕ್ಗೂ ಮುನ್ನ ಬೌಲಿಂಗ್ ಮಾಡುತ್ತಿದ್ದ ಮಿಚೆಲ್ ಸ್ಟಾರ್ಕ್ಗೆ ಯಶಸ್ವಿ ಜೈಸ್ವಾಲ್ ತಿರುಗೇಟು ನೀಡಿದ್ದು, ನೀವು ನಿಧಾನವಾಗಿ ಬಂದು ಬೌಲಿಂಗ್ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ.
ಹರ್ಷಿತ್ ರಾಣಾ ಕೆಣಕಿದ್ದ ಸ್ಟಾರ್ಕ್ಗೆ ಜೈಸ್ವಾಲ್ ತಿರುಗೇಟು ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ಯಾನ್ಸ್ ಇದನ್ನೇ ಮತ್ತಷ್ಟು ರೋಸ್ಟ್ ಮಾಡುತ್ತಿದ್ದಾರೆ. ರಾಣಾಗೆ ಸ್ಟಾರ್ಕ್‌ನ ಸ್ಲೆಡ್ಜ್‌ಗೆ ಜೈಸ್ವಾಲ್ ಅವರು ಮುಟ್ಟಿನೋಡಿಕೊಳ್ಳುವಂತೆ ಹೇಳಿದ್ದಾರೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಅವರ ಕ್ಲಬ್ಗೆ ನೀವು ಸೇರ್ಪಡೆ ಆಗಿದ್ದೀರಿ ಎಂದು ಜೈಸ್ವಾಲ್ಗೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಆಸೀಸ್ ಆಟಗಾರರು ಕೆಣಕುವುದಕ್ಕೆ ಇರುವುದು, ಅಂತಹವರಿಗೆ ನೀವು ಸರಿಯಾಗಿ ಮಾಂಜ ಕೊಟ್ಟಿದ್ದೀರಿ ಎಂದು ಹೇಳುತ್ತಿದ್ದಾರೆ. ಅತ್ತ ಬ್ಯಾಟ್ ಮೂಲಕವೂ, ಇತ್ತ ಬಾಯಿಯ ಮೂಲಕವೂ ಸರಿಯಾಗಿ ಉತ್ತರ ನೀಡಿದ್ದೀರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ರಾಹುಲ್-ಜೈಸ್ವಾಲ್ ಜುಗಲ್ಬಂದಿ
ಎರಡನೇ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅತ್ಯುದ್ಭುತ ಪ್ರದರ್ಶನ ನೀಡಿದರು. ಆಸೀಸ್ ಬೌಲರ್ಗಳನ್ನು ಸಿಕ್ಕಾಪಟ್ಟೆ ಕಾಡಿದರು. ಆತಿಥೇಯರು ವಿಕೆಟ್ ಪಡೆಯಲು ಪರದಾಟ ನಡೆಸಿದರು. ವಿಕೆಟ್ ನೀಡದೆ ದಿನದಾಟ ಮುಗಿಸಿರುವ ಟೀಮ್ ಇಂಡಿಯಾ 2ನೇ ದಿನದ ಅಂತ್ಯಕ್ಕೆ 172 ರನ್ ಗಳಿಸಿದೆ. ರಾಹುಲ್ 153 ಎಸೆತಗಳಲ್ಲಿ 4 ಬೌಂಡರಿ ಸಹಿತ 62 ರನ್ ಗಳಿಸಿದ್ದಾರೆ. ಜೈಸ್ವಾಲ್ 193 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ 90 ರನ್ ಬಾರಿಸಿ ಶತಕದ ಅಂಚಿನಲ್ಲಿದ್ದಾರೆ. ಇಬ್ಬರು ಅಜೇಯರಾಗಿದ್ದಾರೆ. ಭಾರತ ತಂಡದ ಒಟ್ಟು 218 ರನ್ಗಳ ಮುನ್ನಡೆಯಲ್ಲಿದ್ದು, ಮೂರನೇ ದಿನದಂದು ಬೃಹತ್ ಮೊತ್ತ ಕಲೆ ಹಾಕುವ ಲೆಕ್ಕಾಚಾರದಲ್ಲಿದೆ.