ಇಷ್ಟು ವರ್ಷ ನಾನು ಸಹಿಸಿಕೊಂಡಿದ್ದನ್ನು ಚುಕ್ತಾ ಮಾಡುವ ಸಮಯ ಬಂದಿದೆ, ತಾಂಡವ್ ಎದುರು ರೆಬೆಲ್ ಆದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
Dec 19, 2024 10:01 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 18ರ ಎಪಿಸೋಡ್
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 18ರ ಎಪಿಸೋಡ್‌ನಲ್ಲಿ ತಾಂಡವ್-ಶ್ರೇಷ್ಠಾ ಮದುವೆಯನ್ನು ಭಾಗ್ಯಾ ತಡೆಯುತ್ತಾಳೆ. 18 ವರ್ಷಗಳ ಕಾಲ ನೀವು ಕೊಟ್ಟ ಹಿಂಸೆಯನ್ನು ನಾನು ಸಹಿಸಿಕೊಂಡು ಬಂದಿದ್ದೇನೆ, ಈಗ ಎಲ್ಲವನ್ನೂ ಚುಕ್ತಾ ಮಾಡುತ್ತೇನೆ ಎಂದು ತಾಂಡವ್ ಸವಾಲು ಹಾಕುತ್ತಾಳೆ.
Bhagyalakshmi Serial: ಅಪ್ಪ-ಅಮ್ಮ ಇನ್ನು ಜೊತೆಯಾಗಿರುವುದಿಲ್ಲ, ನಾವು ಮೊದಲಿನಂತೆ ಒಟ್ಟಿಗೆ ಇರಲಾಗುವುದಿಲ್ಲ ಎಂದು ತಿಳಿದಾಗಿನಿಂದ ಗುಂಡಣ್ಣ ಹಾಸಿಗೆ ಹಿಡಿದಿದ್ದಾನೆ. ಗಂಡ ಹೆಂಡತಿ ಜಗಳದಲ್ಲಿ ಮಕ್ಕಳಿಗೆ ಸಮಸ್ಯೆ ಉಂಟು ಮಾಡಬೇಡಿ ಎಂದು ಡಾಕ್ಟರ್ ಭಾಗ್ಯಾಗೆ ಸಲಹೆ ನೀಡುತ್ತಾರೆ. ಭಾಗ್ಯಾಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಅಷ್ಟರಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಭಾಗ್ಯಾಗೆ ಗೊತ್ತಾಗುತ್ತದೆ.
ಮೂರನೇ ಬಾರಿಯೂ ತಾಂಡವ್-ಶ್ರೇಷ್ಠಾ ಮದುವೆಗೆ ಬ್ರೇಕ್
ಮದುವೆ ವಿಚಾರ ಕೇಳಿ ಭಾಗ್ಯಾಗೆ ಸಿಟ್ಟು ಬರುತ್ತದೆ. ಕೂಡಲೇ ತನ್ನ ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ಪೂಜಾ ಹಾಗೂ ಸುಂದ್ರಿಯನ್ನು ಕರೆಯುತ್ತಾಳೆ. ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ಮಕ್ಕಳು, ಅತ್ತೆ ಮಾವನ ಬಟ್ಟೆಗಳನ್ನು ಪ್ಯಾಕ್ ಮಾಡಿ ಎನ್ನುತ್ತಾಳೆ. ಭಾಗ್ಯಾ ಇದ್ದಕ್ಕಿದ್ದಂತೆ ಈ ರೀತಿ ಏಕೆ ನಡೆದುಕೊಳ್ಳುತ್ತಿದ್ದಾಳೆ ಎಂದು ತಿಳಿದು ಎಲ್ಲರೂ ಗಾಬರಿ ಆಗುತ್ತಾರೆ. ಏನಾಯ್ತು ಎಂದು ಕೇಳಿದರೂ ಭಾಗ್ಯಾ ಏನೂ ಹೇಳುವುದಿಲ್ಲ. ನೀವು ಹೇಳುತ್ತಿದ್ದು ನಿಜ ಅತ್ತೆ ತಾಳ್ಮೆಗೂ ಮಿತಿ ಇರಬೇಕು, ಅದನ್ನು ಮೀರಿದರೆ ಸಮಸ್ಯೆ, ನಿಮ್ಮ ಮೊಮ್ಮಗ ಇಲ್ಲಿ ಜ್ವರದಿಂದ ನರಳಾಡುತ್ತಿದ್ದರೆ, ಅಲ್ಲಿ ನಿಮ್ಮ ಮಗ ಹಾಗೂ ಆ ಶ್ರೇಷ್ಠಾ ಮಾಡಬಾರದ ಕೆಲಸ ಮಾಡುತ್ತಿದ್ದಾರೆ, ನನಗೆ ಕೆಲಸ ಇದೆ ಹೋಗುತ್ತೇನೆ ಎಂದು ಅಲ್ಲಿಂದ ಗಡಿಬಿಡಿಯಿಂದ ಹೊರಡುತ್ತಾಳೆ.
ನಾವು ಮತ್ತೆ ಮನೆಗೆ ವಾಪಸ್ ಹೋಗುತ್ತಿದ್ದೇವೆ ಎಂದು ತಿಳಿದು ಮಕ್ಕಳು ಖುಷಿಯಾಗುತ್ತಾರೆ, ಆದರೆ ಕುಸುಮಾ, ಧರ್ಮರಾಜ್ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇತ್ತ ಶ್ರೇಷ್ಠಾ-ತಾಂಡವ್ ಮದುವೆ ಖುಷಿಯಲ್ಲಿರುತ್ತಾರೆ. ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಪೊಲೀಸರು ಮನೆಯೊಳಗೆ ಬರುತ್ತಾರೆ. ಮೊದಲ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆ ಆಗುತ್ತಿದ್ದೀರ? ಇಬ್ಬರನ್ನೂ ಅರೆಸ್ಟ್ ಮಾಡಿ ಎಂದು ಇನ್ಸ್‌ಪೆಕ್ಟರ್ ಹೇಳುತ್ತಾರೆ. ಪೊಲೀಸರನ್ನು ನೋಡುತ್ತಿದ್ದಂತೆ ಶ್ರೇಷ್ಠಾ, ತಾಂಡವ್ ಶಾಕ್ ಆಗುತ್ತಾರೆ. ನೀವು ರಾಂಗ್ ಅಡ್ರೆಸ್‌ಗೆ ಬಂದಿದ್ದೀರ ಎನ್ನುತ್ತಾರೆ. ಅಷ್ಟಕ್ಕೂ ನಿಮಗೆ ಯಾರು ಕಂಪ್ಲೇಂಟ್ ಕೊಟ್ಟಿದ್ದು ಎಂದು ತಾಂಡವ್ ಕೇಳುತ್ತಾನೆ. ನಾನೇ ಎನ್ನುತ್ತಾ ಭಾಗ್ಯಾ ಮನೆ ಒಳಗೆ ಬರುತ್ತಾಳೆ.
ಗಂಡನಿಗೆ ಸವಾಲು ಹಾಕಿದ ಭಾಗ್ಯಾ
ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿ ನನ್ನ ದಾರಿ ನನಗೆ ನಿನ್ನ ದಾರಿ ನಿನಗೆ ಎಂದು ಹೇಳಿಹೋದವಳು ಮತ್ತೆ ಏಕೆ ಬಂದೆ ಎಂದು ತಾಂಡವ್ ಕೇಳುತ್ತಾನೆ. ಜೀವನಪೂರ್ತಿ ನನ್ನನ್ನು ದಡ್ಡಿ ದಡ್ಡಿ ಎನ್ನುತ್ತಿದ್ದ ನೀವು ಶ್ರೇಷ್ಠಾ ಯಾವ ರೀತಿ ಬುದ್ಧಿವಂತೆ ಎಂದು ಅವಳನ್ನು ಮದುವೆ ಆಗಲು ಹೊರಿಟಿದ್ದೀರಿ? ಡಿವೋರ್ಸ್ ಪೇಪರ್‌ಗೆ ಸಹಿ ಹಾಕಿದ ಮಾತ್ರಕ್ಕೆ ಹೇಗೆ ಡಿವೋರ್ಸ್ ಆಗುತ್ತದೆ. ನಮ್ಮ ಕೇಸ್ ಇನ್ನೂ ಕೋರ್ಟ್‌ಗೆ ಹೋಗಿಲ್ಲ, ನ್ಯಾಯಾಲಯದಲ್ಲಿ ಏನೂ ಇತ್ಯರ್ಥವಾಗಿಲ್ಲ. ಕೋರ್ಟ್ ನಮ್ಮಿಬ್ಬರನ್ನು ದೂರ ಮಾಡುವವರೆಗೆ ನಾವಿಬ್ಬರೂ ಗಂಡ ಹೆಂಡತಿನೇ ಎನ್ನುತ್ತಾಳೆ. ಹೆಂಡತಿ ಇರುವಾಗಲೇ, ಇನ್ನೊಬ್ಬಳನ್ನು ಮದುವೆ ಆಗುವುದು ಕಾನೂನು ಪ್ರಕಾರ ತಪ್ಪು ಎಂದು ಭಾಗ್ಯಾ ಹೇಳುತ್ತಾಳೆ.
ನಿನ್ನ ಜೊತೆ ಮಾತನಾಡಬೇಕು ಬಾ ಎಂದು ತಾಂಡವ್ ಭಾಗ್ಯಾಳನ್ನು ಬೇರೆಡೆ ಕರೆದೊಯ್ಯುತ್ತಾನೆ. ಶ್ರೇಷ್ಠಾ ಅವರನ್ನು ಹಿಂಬಾಳಿಸಲು ಹೋದಾಗ ಇನ್ಸ್‌ಪೆಕ್ಟರ್ ತಡೆಯುತ್ತಾರೆ. ಅವರೇನೋ ಗಂಡ ಹೆಂಡತಿ ಮಾತನಾಡಲು ಹೋಗುತ್ತಾರೆ, ನಿನಗೆ ಅಲ್ಲೇನು ಕೆಲಸ? ನೋಡೋಕೆ ಲಕ್ಷಣವಾಗಿದ್ದೀಯ, ನಿನಗೆ ಇದೆಲ್ಲಾ ಏಕೆ ಬೇಕು? ನೀನೂ ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಜೀವನ ಹಾಳು ಮಾಡಲು ನಿನಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳುತ್ತಾರೆ. ಅಷ್ಟರಲ್ಲಿ ಧರ್ಮರಾಜ್, ಕುಸುಮಾ, ಮಕ್ಕಳು, ಸುನಂದಾ, ವಿಠಲ್ ಮೂರ್ತಿ ಎಲ್ಲರೂ ಮನೆಗೆ ವಾಪಸ್ ಆಗುತ್ತಾರೆ. ಅವರು ತಾಂಡವ್ ಅಪ್ಪ ಅಮ್ಮ ಎಂದು ತಿಳಿದು ಪುರೋಹಿತರೂ ಕೂಡಾ ಕೋಪಗೊಳ್ಳುತ್ತಾರೆ. ಮದುವೆ ಆಗಿ ಮಕ್ಕಳು ಇರುವವನನ್ನು ಮದುವೆ ಆಗಲು ಹೊರಟಿದ್ದೀಯ , ನಾನಂತೂ ಈ ಮದುವೆ ಮಾಡುವುದಿಲ್ಲ ಎಂದು ಶ್ರೇಷ್ಠಾ ತಾಂಡವ್ ಇಬ್ಬರಿಗೂ ಛೀಮಾರಿ ಹಾಕಿ ಅಲ್ಲಿಂದ ಹೊರಡುತ್ತಾರೆ.
ನಾನು ಏನೇ ಆದರೂ ಇಂದು ತಾಂಡವ್‌ನನ್ನು ಮದುವೆ ಆಗೇ ಆಗುತ್ತೇನೆ ಎಂದು ಶ್ರೇಷ್ಠಾ ಪಟ್ಟು ಹಿಡಿದು ಕೂರುತ್ತಾಳೆ. ತಾಂಡವ್ ಕೂಡಾ ನಾನು ಇಂದು ಶ್ರೇಷ್ಠಾಳನ್ನು ಮದುವೆ ಆಗೇ ಆಗುತ್ತೇನೆ ಎನ್ನುತ್ತಾನೆ. 18 ವರ್ಷಗಳು ನೀವು ಕೊಟ್ಟ ಹಿಂಸೆಯನ್ನು ಸಹಿಸಿಕೊಂಡು ಸಾಕಾಗಿದೆ, ಎಲ್ಲವನ್ನೂ ಚುಕ್ತಾ ಮಾಡುವ ಸಮಯ ಬಂದಿದೆ. ಇವತ್ತು ನಾನಾ ನೀವಾ ನೋಡೇ ಬಿಡೋಣ ಎಂದು ಸವಾಲು ಹಾಕುತ್ತಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್