logo
ಕನ್ನಡ ಸುದ್ದಿ  /  ಮನರಂಜನೆ  /  ಬಾರ್‌ಗೆ ಬಂದು ಕಂಠಪೂರ್ತಿ ಕುಡಿದ ತಾಂಡವ್‌, ಇತ್ತ ಗಂಡನಿಗೆ ಅಗುಳು ಅನ್ನ ಉಳಿಸದೆ ಊಟ ಮಾಡಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಬಾರ್‌ಗೆ ಬಂದು ಕಂಠಪೂರ್ತಿ ಕುಡಿದ ತಾಂಡವ್‌, ಇತ್ತ ಗಂಡನಿಗೆ ಅಗುಳು ಅನ್ನ ಉಳಿಸದೆ ಊಟ ಮಾಡಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Dec 23, 2024 09:58 AM IST

google News

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 22ರ ಎಪಿಸೋಡ್‌

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 22ರ ಎಪಿಸೋಡ್‌ನಲ್ಲಿ ಸೂರು ಕಳೆದುಕೊಂಡ ಶ್ರೇಷ್ಠಾ ಹೋಟೆಲ್‌ಗೆ ಹೋಗಿ ರೂಮ್‌ ಮಾಡುತ್ತಾಳೆ. ತಾಂಡವ್‌ಗೆ ಕರೆ ಮಾಡಿದರೂ ಅವನು ಕಾಲ್‌ ರಿಸೀಲ್‌ ಮಾಡುವುದಿಲ್ಲ. ತಾಂಡವ್‌ ಬಾರ್‌ಗೆ ಹೋಗಿ ಕಂಠಪೂರ್ತಿ ಕುಡಿಯುತ್ತಾನೆ. ಇತ್ತ ಭಾಗ್ಯಾ ಗಂಡನ ಬಗ್ಗೆ ಕೇರ್‌ ಮಾಡದೆ ತನ್ನ ಪಾಡಿಗೆ ಊಟ ಮಾಡಿ ಮುಗಿಸುತ್ತಾಳೆ. 

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 22ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 22ರ ಎಪಿಸೋಡ್‌ (PC: Jio Cinema)

Bhagyalakshmi Serial: ಭಾಗ್ಯಾ ಈಗ ಮೊದಲಿನಂತೆ ಇಲ್ಲ, ಸಾಕಷ್ಟು ಬದಲಾಗಿದ್ದಾಳೆ. ಮೊದಲೆಲ್ಲಾ ಗಂಡ ತನ್ನನ್ನು ಏನೇ ಬೈದರೂ,ಎಷ್ಟು ನಿರ್ಲಕ್ಷಿಸಿದರೂ ಗಂಡನ ಮೇಲಿನ ಪ್ರೀತಿಯಿಂದ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ. ಗಂಡ ಸ್ವಲ್ಪ ಅರಚಾಡಿದರೂ ಆತನ ಬಾಯಿ ಮುಚ್ಚಿಸುವಷ್ಟು ಭಾಗ್ಯಾಗೆ ಧೈರ್ಯ ಬಂದಿದೆ.

ಹೋಟೆಲ್‌ನಲ್ಲಿ ರೂಮ್‌ ಮಾಡಿದ ಶ್ರೇಷ್ಠಾ

ಇತ್ತ ಶ್ರೇಷ್ಠಾ ತಾಂಡವ್‌ನನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾಳೆ. ಜೊತೆಗೆ ಬಾಡಿಗೆಗೆ ಇದ್ದ ಮನೆಯಿಂದ ಹೊರ ಬಂದಿದ್ದಾಳೆ. ಭಾಗ್ಯಾ ಮಾತು ಕೇಳಿ ತಾಂಡವ್‌ ಶ್ರೇಷ್ಠಾಳನ್ನು ಹೊರ ಹಾಕಿದ್ದಾನೆ. ಇಂಥ ಹುಡುಗಿ ಸಹವಾಸವೇ ಬೇಡ ಎಂದು ಮನೆ ಓನರ್‌ ಕೂಡಾ ಶ್ರೇಷ್ಠಾಳನ್ನು ಹೊರ ಹಾಕಿದ್ದಾರೆ. ನನಗೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದ್ದರೂ ತಾಂಡವ್‌ ಮಾತ್ರ ನನಗೆ ಕರೆ ಮಾಡಿ ಹೇಗಿದ್ದೀಯ ಎಂದು ವಿಚಾರಿಸಿಲ್ಲವೆಂದು ಶ್ರೇಷ್ಠಾ ಸಿಟ್ಟಾಗುತ್ತಾಳೆ. ಇದಕ್ಕೆಲ್ಲಾ ಭಾಗ್ಯಾ ಕಾರಣ, ಅವಳನ್ನು ಮಾತ್ರ ಸುಮ್ಮನೆ ಬಿಡುವುದಿಲ್ಲ. ಬುದ್ಧಿ ಕಲಿಸಿಯೇ ಕಲಿಸುತ್ತೇನೆ, ತಾಂಡವ್‌ ದೂರವಾದಷ್ಟು ಅವನನ್ನು ಪಡೆದುಕೊಳ್ಳಬೇಕೆಂಬ ಹಟ ಹೆಚ್ಚಾಗುತ್ತಿದೆ, ಅವನು ಕಾಲ್‌ ಮಾಡದಿದ್ದರೆ ಏನಂತೆ ನಾನೇ ಮಾಡುತ್ತೇನೆ ಎಂದು ಶ್ರೇಷ್ಠಾ, ತಾಂಡವ್‌ಗೆ ಕರೆ ಮಾಡುತ್ತಾಳೆ. ಶ್ರೇಷ್ಠಾ ಕರೆ ಮಾಡಿದ್ದನ್ನು ನೋಡಿ ತಾಂಡವ್‌ ಭಯದಿಂದಲೇ ರಿಸೀವ್‌ ಮಾಡುತ್ತಾನೆ.

ಬಾರ್‌ಗೆ ಬಂದು ಕುಡಿದು ತೂರಾಡಿದ ತಾಂಡವ್‌

ಬೆಳಗ್ಗಿನಿಂದ ಇಷ್ಟೆಲ್ಲಾ ಆದರೂ ನೀನು ನನಗೆ ಕರೆ ಮಾಡಿ ಏನೂ ವಿಚಾರಿಸಿಲ್ಲ ಎನ್ನುತ್ತಾಳೆ. ನನ್ನ ಕಷ್ಟ ನನಗೆ, ಅಂತದರಲ್ಲಿ ನಿನಗೆ ಬೇರೆ ಕಾಲ್‌ ಮಾಡಿ ವಿಚಾರಿಸಬೇಕಿತ್ತಾ ಎಂದು ತಾಂಡವ್‌ ಕೋಪದಿಂದ ಪೋನ್ ಕಟ್‌ ಮಾಡುತ್ತಾನೆ. ಶ್ರೇಷ್ಠಾ, ಹೋಟೆಲ್‌ವೊಂದರಲ್ಲಿ ರೂಮ್‌ ಮಾಡಿ ಅಲ್ಲಿಗೆ ಲಗ್ಗೇಜ್‌ ಶಿಫ್ಟ್‌ ಮಾಡುತ್ತಾಳೆ. ಇತ್ತ ತಾಂಡವ್‌ ಬಾರ್‌ಗೆ ಬಂದು ಡ್ರಿಂಕ್ಸ್‌ ಆರ್ಡರ್ ಮಾಡುತ್ತಾನೆ. ಶ್ರೇಷ್ಠಾ ಮತ್ತೆ ಕಾಲ್‌ ಮಾಡುತ್ತಾಳೆ. ಆದರೆ ಎಷ್ಟು ಕರೆ ಮಾಡಿದರೂ ತಾಂಡವ್‌ ಫೋನ್‌ ರಿಸೀವ್‌ ಮಾಡುವುದಿಲ್ಲ. ಕಂಠಪೂರ್ತಿ ಕುಡಿಯುತ್ತಾನೆ. ಭಾಗ್ಯಾ ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕಿದ್ದು, ಮದುವೆ ನಿಲ್ಲಿಸಿದ್ದು , ಪೊಲೀಸರಿಗೆ ದೂರು ನೀಡಿದ್ದು, ತನ್ನ ವಿರುದ್ಧ ಮಾತನಾಡಿದ್ದು, ನಾನು ಬದಲಾಗಿದ್ದೇನೆ, ಏನಾದರೂ ಮಾತನಾಡುವ ಮುನ್ನ ಎಚ್ಚರಿಕೆಯಿಂದ ಮಾತನಾಡಿ ಎಂದು ಗತ್ತಿನಿಂದ ಹೇಳಿದ್ದು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾನೆ. ನಾನು ನಿನ್ನನ್ನು ಮನೆಯಿಂದ ಹೊರ ಹಾಕೇ ಹಾಕುತ್ತೇನೆ ಎಂದು ಕುಡಿದ ಮತ್ತಿನಲ್ಲಿ ಗೊಣಗುತ್ತಾನೆ.

ಗಂಡನ ಬಗ್ಗೆ ತಲೆ ಕೆಡಿಸಿಕೊಳ್ಳದ ಭಾಗ್ಯಾ

ಇತ್ತ ಮನೆಯಲ್ಲಿ ಎಲ್ಲರೂ ಬಹಳ ದಿನಗಳ ನಂತರ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಎಲ್ಲರದ್ದೂ ಊಟ ಆಯ್ತಲ್ವಾ ಭಾಗ್ಯಾ, ಇನ್ನು ನೀನು ಊಟ ಮಾಡು ಎಂದು ಕುಸುಮಾ ಹೇಳುತ್ತಾಳೆ. ತಾಂಡವ್‌ ಎಲ್ಲೂ ಕಾಣದನ್ನು ಗಮನಿಸುವ ಸುನಂದಾ, ನಿನ್ನ ಗಂಡ ಎಲ್ಲಿ ಎಂದು ಭಾಗ್ಯಾಗೆ ಕೇಳುತ್ತಾಳೆ. ನನಗೇನು ಗೊತ್ತು ಎಂದು ಭಾಗ್ಯಾ ಉತ್ತರಿಸುತ್ತಾಳೆ. ಮಗಳ ಉತ್ತರ ಕೇಳಿ ‍ಆಶ್ಚರ್ಯ ವ್ಯಕ್ತಪಡಿಸಿದ ಸುನಂದಾ, ಇದೇನು ಈ ರೀತಿ ಉತ್ತರ ಕೊಡುತ್ತಿದ್ದೀಯ ಎಂದು ಕೇಳುತ್ತಾಳೆ. ಮತ್ತೇನು ಹೇಳುವುದು, ಅವರಿಗೆ ಹೆಂಡತಿ, ಮನೆ ಮಕ್ಕಳು ಎಂಬ ಜವಾಬ್ದಾರಿ ಇಲ್ಲ, ಯಾವಾಗಲೂ ನಾವೇ ಏಕೆ ಅವರಿಗೆ ಕರೆ ಮಾಡಿ ವಿಚಾರಿಸಿಕೊಳ್ಳಬೇಕು, ಅವರ ಬಳಿಯೂ ಮೊಬೈಲ್‌ ಇದೆ ಅವರೇ ಕರೆ ಮಾಡಿ ಇಂಥ ಕಡೆ ಇದ್ದೀನಿ ಅಂಥ ಹೇಳಬಹುದಲ್ವಾ ಎನ್ನುತ್ತಾಳೆ.

ಮಗಳ ವರ್ತನೆ ಕಂಡು ಆಶ್ಚರ್ಯ ವ್ಯಕ್ತಪಡಿಸಿದ ಸುನಂದಾ

ಭಾಗ್ಯಾ ಪಾತ್ರೆಯಲ್ಲಿ ಅಗುಳು ಅನ್ನ ಉಳಿಸದೆ ಎಲ್ಲವನ್ನೂ ಬಡಿಸಿಕೊಂಡು ತಿನ್ನುತ್ತಾಳೆ. ಭಾಗ್ಯಾ ವರ್ತನೆ ಕಂಡು ಸುನಂದಾ ನಿನ್ನ ಗಂಡನಿಗೆ ಊಟ ಇಡು ಎನ್ನುತ್ತಾಳೆ. ಅದಕ್ಕೆ ಪ್ರತಿಕ್ರಿಯಿಸುವ ಸುನಂದಾ ಇಷ್ಟು ದಿನ ಭಾಗ್ಯಾ, ತಾಂಡವ್ ಹೇಳಿದಂತೆ ಕೇಳುತ್ತಿದ್ದಳು, ಆದರೆ ಅವಳಿಗೆ ಏನು ಸಿಕ್ಕಿದೆ? ಅವನು ತಿರಸ್ಕಾರ ಮಾಡಿದ್ದಾನೆ. ಅವನು ಬದಲಾಗುತ್ತಾನೆ ಎಂಬ ನಂಬಿಕೆ ನಮಗೆ ಇಲ್ಲ. ಹೀಗೆ ಮಾಡಿದರೆ ಇನ್ನಾದರೂ ಬುದ್ಧಿ ಕಲಿಯಬಹುದು ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದೇವೆ ಎನ್ನುತ್ತಾಳೆ. ಭಾಗ್ಯಾ, ಸುನಂದಾ , ಧರ್ಮರಾಜ್‌ ಮಾತುಗಳನ್ನು ಕೇಳಿ ಸುನಂದಾ ಗೊಂದಲಕ್ಕೆ ಒಳಗಾಗುತ್ತಾಳೆ. ಭಾಗ್ಯಾ ಮಾತ್ರ ಇದಕ್ಕೂ ನನಗೂ ಏನೂ ಸಂಬಂಧ ಇಲ್ಲ ಎನ್ನುವಂತೆ ತನ್ನ ಪಾಡಿಗೆ ತಾನು ಊಟ ಮಾಡುತ್ತಾಳೆ.

ತಾಂಡವ್‌ ಕುಡಿದುಕೊಂಡು ಮನೆಗೆ ಬಂದು ಭಾಗ್ಯಾ ಎದುರು ಮಾತನಾಡುತ್ತಾನಾ? ಅಥವಾ ಭಾಗ್ಯಾ ಬದಲಾವಣೆಯನ್ನು ನೆನೆದು ಸುಮ್ಮನಿರುತ್ತಾನಾ? ಮುಂದಿನ ಎಪಿಸೋಡ್‌ನಲ್ಲಿ ಉತ್ತರ ದೊರೆಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ