UI Review: U ಕುರಿತು I ಮಾಡುತ್ತಿರುವ ವಿಮರ್ಶೆ ಇದಲ್ಲ, ನನ್ನ ಅಭಿಪ್ರಾಯವಷ್ಟೆ!; ರಾಜೀವ್ ಹೆಗ್ಡೆ ಬರಹ
ಜಾತಿ, ಧರ್ಮ ಹಾಗೂ ರಾಜಕೀಯ ಲೋಕವನ್ನು ಉಪೇಂದ್ರ ಅವರು ʼಪ್ರಜಾಕೀಯʼದ ಆಯಾಮದಲ್ಲಿ ಮಾಡಿರುವ ಸಿನೆಮಾವೇ ʼUIʼ. ಸಿನೆಮಾದಲ್ಲಿ ಎಲ್ಲ ಕಡೆ ನೇರ, ದಿಟ್ಟವಾಗಿರುವ ಕೆಲವು ಡೈಲಾಗ್‌ಗಳು ಬರುತ್ತವೆ. ಈ ಡೈಲಾಗ್‌ಗಳನ್ನು ಎಲ್ಲರೂ, ಎಲ್ಲ ಹಂತದಲ್ಲಿಯೂ ಒಪ್ಪಿಕೊಳ್ಳುವುದು ಕಷ್ಟ ಅಥವಾ ವಾಸ್ತವಿಕ ಜಗತ್ತಿನಲ್ಲಿ ಅನುಷ್ಠಾನ ಕೂಡ ಕಷ್ಟಸಾಧ್ಯವಾಗಬಹುದು.- ರಾಜೀವ ಹೆಗ್ಡೆ ಬರಹ
ʼUIʼ ಸಿನೆಮಾ ನೋಡಿದೆ, ಆದರೆ ನಿಜವಾಗಿಯೂ ʼಬುದ್ಧಿವಂತʼ ಉಪೇಂದ್ರರ ಚಿತ್ರದಲ್ಲಿ ಅರ್ಥವಾಗದ ಮಣ್ಣಗಂಟಿ ಅತಿ ಬುದ್ಧಿವಂತಿಕೆ ಅಥವಾ ದಡ್ಡತನ ಏನಿದೆ ಎನ್ನುವುದೊಂದೇ ನನಗೆ ಅರ್ಥವಾಗಲಿಲ್ಲ. ನೇರವಾಗಿ ಹೇಳಬೇಕೆಂದರೆ ಉಪೇಂದ್ರ ಅರ್ಥವಾಗುವುದಿಲ್ಲ, ಅತಿ ಬುದ್ಧಿವಂತರ ಸಿನೆಮಾ, ಸಿನೆಮಾವನ್ನು ಅರಿಯಲು ಮೂರ್ನಾಲ್ಕು ಬಾರಿ ನೋಡಬೇಕು ಎನ್ನುವುದೆಲ್ಲ ಪಕ್ಕಾ ಪ್ರಚಾರದ ಗಿಮಿಕ್ ಅಷ್ಟೇ. ಪ್ರಜಾಕೀಯ ಪಕ್ಷದಲ್ಲಿ ಮತದಾರರ ತಲೆಗೆ ಹುಳಬಿಟ್ಟು ಕೈ ತೊಳೆದುಕೊಂಡಂತೆ ʼUIʼ ಸಿನೆಮಾದಲ್ಲಿ ನೋಡುಗರ ತಲೆಗೆ ಹುಳಬಿಟ್ಟಿದ್ದೇನೆ ಎನ್ನುವ ಭ್ರಮೆ ಸೃಷ್ಟಿಸಿ ನಿರ್ದೇಶಕ ಉಪೇಂದ್ರ ನಿರಾಳರಾಗಿ ಹಾಕಿದ ದುಡ್ಡನ್ನು ಎಣಿಸಿಕೊಳ್ಳುತ್ತಿದ್ದಾರೆ. ಅದುವೇ ನಿಜವಾದ ಮನರಂಜನಾ ಲೋಕ.
ʼUIʼ ಸಿನೆಮಾ ಘೋಷಣೆಯಾದ ದಿನವೇ ಉಪೇಂದ್ರರ ಈ ಪ್ರಯತ್ನವನ್ನು ನೋಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೆ. ಇದಾದ ಬಳಿಕ ಅವರು ನಡೆಸಿದ ಪ್ರಜಾಕೀಯ ಪಕ್ಷವು ಹೊಸ ಚಿತ್ರದ ಪ್ರಚಾರಕ್ಕೆ ಮಾಡುತ್ತಿರುವ ಒಂದು ಸ್ಟಂಟ್ ಆಗಿರಬಹುದು ಎಂದು ಕೂಡ ನಾನು ಎಲ್ಲೋ ಬರೆದ ನೆನಪು. ಸಿನೆಮಾ ನೋಡಿ ಹೊರಬಂದ ಬಳಿಕವೂ ಆ ಮಾತಿಗೆ ನಾನು ಬದ್ಧವಾಗಿದ್ದೇನೆ. ಒಟ್ಟಿನಲ್ಲಿ ಈ ಉಪೇಂದ್ರ ಏನೋ ಹೊಸದೊಂದು ಸಾಹಸ ಮಾಡುತ್ತಾರೆ ಎನ್ನುವ ನಂಬಿಕೆ ನನ್ನದು. ಅದೇ ಕಾರಣದಿಂದ ʼUIʼ ಸಿನೆಮಾವನ್ನೂ ನಿನ್ನೆ ತಡರಾತ್ರಿ ನೋಡಿದೆ.
ಯಾವುದೇ ಚಿತ್ರಗಳಿಗೆ ಸಂಬಂಧಿಸಿ ನಾನು ಯೂಟ್ಯೂಬ್ ರಿವ್ಯೂಗಳನ್ನು ನೋಡುವುದಿಲ್ಲ. ನನಗಿಷ್ಟವಾದವರ ಕೆಲವರ ಬರಹಗಳನ್ನು ತಪ್ಪದೇ ಓದುತ್ತೇನೆ. ಅದರ ಜತೆಗೆ ಉಪೇಂದ್ರ ಮಾಡಿದ್ದೆಲ್ಲ ಸರಿ ಎನ್ನುವವರ ಬರಹವನ್ನು ಕಳೆದೆರಡು ದಿನಗಳಿಂದ ಓದುವುದನ್ನು ತಪ್ಪಿಸಿಕೊಂಡಿದ್ದೆ. ಕೆಲ ಆಯ್ದ ಬರಹಗಳ ಜತೆಗೆ ಒಂದಿಷ್ಟು ರೀಲ್ಸ್‌ಗಳು ಗೊಂದಲ ಮೂಡಿಸಿದ್ದವು. ಹಾಗೆಯೇ ಅತಿಯಾದ ಕುತೂಹಲಕ್ಕೂ ಕಾರಣವಾಗಿತ್ತು. ಈ ಸಿನೆಮಾ ಭಯಂಕರ ಬುದ್ಧಿವಂತಿಕೆ ಹೊಂದಿರಬಹುದು ಅಥವಾ ತೀರಾ ಕೆಟ್ಟದಾಗಿರಬಹುದು ಅಥವಾ ರೋಮಾಂಚನಕಾರಿ ಆಗಿರಬಹುದು ಎಂದುಕೊಂಡು ಚಿತ್ರಮಂದಿರಕ್ಕೆ ಪ್ರವೇಶಿಸಿದ್ದೆ.
ನನಗಿಷ್ಟವಾದ ಅಂಶಗಳು....
* ಚಿತ್ರದಲ್ಲಿ ಸತ್ಯ ಹಾಗೂ ಕಲ್ಕಿ ಎನ್ನುವ ಎರಡು ಪ್ರಮುಖ ಪಾತ್ರಗಳು ಬರುತ್ತವೆ. ಕಲ್ಕಿಯ ಜಗತ್ತನ್ನು ನಮ್ಮ ಮೆದುಳಿಗೆ ಹೋಲಿಸಿ, ಅಲ್ಲಿಂದ ಸತ್ಯ ಹೊರಬರುವ ಕಲ್ಪನೆ ಅದ್ಭುತ ಎನಿಸಿತು.
* ಕತ್ತರಿ ಸೀನನಿಂದ ರಾಜಕಾರಣಿಯ ಹುಟ್ಟು ಹಾಗೂ ನಂತರ ಆತನ ಬೆಳವಣಿಗೆಯನ್ನು ಇಂದಿನ ಹಲವು ರಾಜಕಾರಣಿಗಳಿಗೆ ತಾಕುವಂತೆ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ.
* ಚಿತ್ರದ ನಾಯಕಿಯ ಬೆಡ್‌ರೂಮ್ ಅಥವಾ ಕೋಣೆಯನ್ನು ತುಂಬಾ ವಿಭಿನ್ನವಾಗಿ ತೋರಿಸಿದ್ದಾರೆ. ಅಷ್ಟೊಂದು ರಸಿಕತೆ ಹಾಗೂ ಶೃಂಗಾರಮಯವಾಗಿ ಉಪೇಂದ್ರ, ರವಿಚಂದ್ರನ್ ಮಾತ್ರ ಪ್ರಚುರಪಡಿಸಬಲ್ಲರು.
* ಬುದ್ಧಿವಂತಿಕೆ ಎನ್ನುವುದನ್ನು ಒಂದು ಬ್ರಾಂಡ್ ಆಗಿ ಮಾಡಿಕೊಂಡು ಉಪೇಂದ್ರ ಅರ್ಥವಾಗದ ನಿರ್ದೇಶಕ ಎನ್ನುವ ಸಮೂಹ ಸನ್ನಿ ಮಾಡುವ ಪ್ರಯತ್ನದ ಪ್ರಚಾರದ ಗಿಮಿಕ್‌ನ್ನು ಚಿತ್ರದೊಳಗಿನ ಚಿತ್ರದಲ್ಲಿ ಹಾಗೂ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸೊಗಸಾಗಿ ಮಾಡಲಾಗುತ್ತಿದೆ.
* ಸಿನೆಮಾದ ಹಲವೆಡೆ ಚಿತ್ರದ ಸೆಟ್ಟಿಂಗ್ ನ್ಯಾಚುರಲ್ ಎನಿಸದಿದ್ದರೂ, ಕೆಲವೆಡೆ ಮೇಕಿಂಗ್ ಚೆಂದವಾಗಿದೆ. ಹಿನ್ನೆಲೆ ಸಂಗೀತಕ್ಕೆ ಮಾತ್ರ ಪೂರ್ಣಾಂಕದ ಜತೆಗೆ ಕೃಪಾಂಕವನ್ನೂ ಕೊಡಲೇಬೇಕು.
ಅರ್ಥವಾಗದಿರುವುದು ಏನಿದೆ?
ಸಿನೆಮಾವು ಮೂರು ಕಾಲಘಟ್ಟದಲ್ಲಿ ಹೋಗುತ್ತದೆ. ಎರಡು ಕಾಲ ಘಟ್ಟದಲ್ಲಿಯೂ ಉಪೇಂದ್ರರ ವಿಭಿನ್ನವಾದ ʼಪ್ರಜಾಕೀಯʼ ಆಲೋಚನೆ ಲಹರಿಗಳು ಹರಿದಾಡುತ್ತವೆ. ನಿರ್ದೇಶಕರ ಹಾಲಿ ಕಾಲಘಟ್ಟವು ಸಾಮಾನ್ಯ ಜನರ ಚಿಂತನೆಯನ್ನು ಹೇಳಿ, ಕೊನೆಗೊಂದು ಎಂದಿನಂತೆ ಜವಾಬ್ದಾರಿಯಿಲ್ಲದ ಹುಳವೊಂದನ್ನು ಬಿಡುವ ಕೆಲಸ ಮಾಡುತ್ತದೆ. ಇದನ್ನು ಹೊರತುಪಡಿಸಿ ಉಪ್ಪಿಯ ಸಿನೆಮಾಗಳ ಟ್ರೇಡ್ ಮಾರ್ಕ್‌ಗಳಾಗಿರುವ ಒಂದಿಷ್ಟು ಡೈಲಾಗ್‌ಗಳಿವೆ. ಇಂತಹ ಡೈಲಾಗ್‌ಗಳಿಗೆ ಆ ಕ್ಷಣದಲ್ಲಿ ಸೀಟಿ ಬರುವುದಂತೂ ಪಕ್ಕಾ. ಸಿನೆಮಾ ಆರಂಭದಿಂದ ಕೊನೆಯವರೆಗೆ ಇದೆಲ್ಲ ಅರ್ಥವಾಗದ ವಿಚಾರ ಏನಿದೆ ಎನ್ನುವುದು ಗೊತ್ತಾಗಲೇ ಇಲ್ಲ. ಪ್ರತಿ ಬಾರಿಯೂ ಬುದ್ಧಿವಂತರ ಸಿನೆಮಾ ಎನ್ನುವ ಟ್ಯಾಗ್‌ಲೈನ್ ಕೊಡುತ್ತಿದ್ದ ಉಪೇಂದ್ರ, ಈ ಬಾರಿ ವಿಡಂಬನಾತ್ಮಕವಾಗಿ ʼದಡ್ಡರು ಸಿನೆಮಾ ನೋಡಿʼ ಎಂದಿದ್ದಾರೆ.
ಜಾತಿ, ಧರ್ಮ ಹಾಗೂ ರಾಜಕೀಯ ಲೋಕವನ್ನು ಉಪೇಂದ್ರ ಅವರು ʼಪ್ರಜಾಕೀಯʼದ ಆಯಾಮದಲ್ಲಿ ಮಾಡಿರುವ ಸಿನೆಮಾವೇ ʼUIʼ. ಸಿನೆಮಾದಲ್ಲಿ ಎಲ್ಲ ಕಡೆ ನೇರ, ದಿಟ್ಟವಾಗಿರುವ ಕೆಲವು ಡೈಲಾಗ್‌ಗಳು ಬರುತ್ತವೆ. ಈ ಡೈಲಾಗ್‌ಗಳನ್ನು ಎಲ್ಲರೂ, ಎಲ್ಲ ಹಂತದಲ್ಲಿಯೂ ಒಪ್ಪಿಕೊಳ್ಳುವುದು ಕಷ್ಟ ಅಥವಾ ವಾಸ್ತವಿಕ ಜಗತ್ತಿನಲ್ಲಿ ಅನುಷ್ಠಾನ ಕೂಡ ಕಷ್ಟಸಾಧ್ಯವಾಗಬಹುದು. ಇದು ಖುದ್ದು ಪ್ರಜಾಕೀಯದ ಸ್ಥಾಪಕ ಹಾಗೂ ʼUIʼ ನಿರ್ದೇಶಕ ಉಪೇಂದ್ರರಿಗೂ ಅನ್ವಯವಾಗಬಹುದು. ಹೀಗಾಗಿ ಈ ಡೈಲಾಗ್‌ನ್ನು ತಮಗೆ ಅನ್ವಯ ಮಾಡಿಕೊಂಡು ಗೊಂದಲಕ್ಕೆ ಬಿದ್ದವರು, ಈ ಚಿತ್ರ ಒಮ್ಮೆ ನೋಡಿದರೆ ಅರ್ಥವಾಗುವುದಿಲ್ಲ ಎನ್ನಬಹುದಷ್ಟೆ. ನಿಮ್ಮ ಬಗ್ಗೆ ನಿಮಗೆ ಸ್ಪಷ್ಟತೆ ಇದ್ದರೆ, ಇದೊಂದು ಟಿಪಿಕಲ್ ಉಪೇಂದ್ರ ಸಿನೆಮಾವೆಂದು ಚಿತ್ರಮಂದಿರದಿಂದ ಹೊರಗೆ ಬರುತ್ತೀರಿ.
ವಾಸ್ತವಕ್ಕೆ ದೂರವಾದದ್ದು...
ಚಿತ್ರದಲ್ಲಿ ದೇಶದ ಭದ್ರತೆ, ಧರ್ಮ, ಅಭಿವೃದ್ಧಿ ಕುರಿತು ಕೆಲವು ವಿಚಾರಗಳು ಬರುತ್ತವೆ. ಇವೆಲ್ಲ ಪ್ರಜಾಕೀಯದ ಬಗ್ಗೆ ಉಪೇಂದ್ರರ ಸಂದರ್ಶನಗಳಲ್ಲಿಯೂ ಬರುತ್ತವೆ. ಆರಂಭವೇ ಆಗದ ಕೆಲ ಅದ್ಭುತ ಸ್ಟಾರ್ಟಪ್ ಕಲ್ಪನೆಗಳ ಪಿಪಿಟಿಯಂತೆ ಇವು ಚೆಂದವಾಗಿ ಕಾಣಿಸಬಹುದು. ಕಲ್ಪನೆಯ ಸುಂದರವಾದ ಜಗತ್ತನ್ನು ಹೊರತುಪಡಿಸಿ ವಾಸ್ತವದಲ್ಲಿ ಇವೆಲ್ಲ ತುಂಬಾ ಕ್ಲೀಷೆ ಎನಿಸಬಹುದು. ಉಪೇಂದ್ರರ ರೀತಿಯಲ್ಲಿ ಆಲೋಚಿಸಿದರೆ ಮೂರು ಗಂಟೆಗಳ ಕಾಲ ಪಿವಿಆರ್‌ನಲ್ಲಿ ಕುಳಿತು ವಿದ್ಯುತ್ ಖರ್ಚು ಮಾಡಿದ್ದು ಕೂಡ ಭೂತಾಯಿ ಮೇಲೆ ಮಾಡಿದ ಅತ್ಯಾಚಾರವಾಗುತ್ತದೆ. ಸಿನೆಮಾದಲ್ಲಿನ ಒಂದು ಆಯಾಮವನ್ನು ಒಪ್ಪಬೇಕಿದ್ದರೆ, ಈ ಸಿನೆಮಾ ನೋಡುವುದೇ ದೊಡ್ಡ ತಪ್ಪಾಗುತ್ತದೆ.
ಅಂದ್ಹಾಗೆ ʼUIʼ ಸಿನೆಮಾ ಕೂಡ ಪ್ರಜಾಕೀಯದ ರೀತಿ ಉತ್ತರವಿಲ್ಲ ಹಲವು ಪ್ರಶ್ನೆ, ಅಸ್ಪಷ್ಟತೆಯನ್ನು ಹೊಂದಿದೆ. ಹಲವು ಉಪೇಂದ್ರ ಅಭಿಮಾನಿಗಳು ಇಂತಹ ಅಸ್ಪಷ್ಟತೆಯನ್ನು ಜನಸಾಮಾನ್ಯರಿಗೆ ಅರ್ಥವಾಗದ ಉಪೇಂದ್ರ, ಅತಿಯಾದ ಬುದ್ಧಿವಂತಿಕೆ, ಭವಿಷ್ಯವನ್ನು ಕಾಣುವ ಉಪೇಂದ್ರ ಎಂದು ಬುರುಡೆ ಬಿಡುತ್ತಾರೆ. ಪ್ರಚಲಿತ ಸಮಸ್ಯೆಗೆ ನೇರವಾಗಿ ಪರಿಹಾರ ಸೂಚಿಸದೇ ಗೋಡೆ ಮೇಲೆ ದೀಪ ಇಡುವುದನ್ನು ಬುದ್ಧಿವಂತಿಕೆ ಎಂದು ಖಂಡಿತ ಹೇಳಲಾಗದು.
ಕೊನೆಯದಾಗಿ: ʼUIʼ ಸಿನೆಮಾದಲ್ಲಿ ಎ, ಉಪೇಂದ್ರ, ರಕ್ತಕಣ್ಣೀರು, ಸೂಪರ್ ಹಾಗೂ ಅತಿ ಮುಖ್ಯವಾಗಿ ಪ್ರಜಾಕೀಯದ ಉಪೇಂದ್ರ ಕಾಣಿಸುತ್ತಾರೆ. ಉಪೇಂದ್ರರ ಬಹುರೂಪವನ್ನು ಒಂದೇ ಸೂರಿನಡಿಯಲ್ಲಿ ನೋಡಬೇಕಿದ್ದರೆ ʼUIʼ ನೋಡಿ ಬನ್ನಿ. ಈ ಬುದ್ಧಿವಂತಿಕೆ, ದಡ್ಡತನ ಎನ್ನುವುದನ್ನೆಲ್ಲ ಮರೆತು ಸಾಮಾನ್ಯ ಪ್ರೇಕ್ಷಕನಾಗಿ ಹೋಗಿಬನ್ನಿ.