OTT Thriller: ತಮಿಳಿನ ಸೂಪರ್‌ಹಿಟ್ ಜೈಲ್ ಥ್ರಿಲ್ಲರ್ ಜಾನರ್‌ನ ಸೊರ್ಗವಾಸಲ್ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ
Sorgavaasal OTT Release Date: ತಮಿಳು ಥ್ರಿಲ್ಲರ್ ಚಿತ್ರ ಸೊರ್ಗವಾಸಲ್ ಒಟಿಟಿಗೆ ಪದಾರ್ಪಣೆ ಮಾಡಲು ಸಜ್ಜಾಗಿದೆ. ಚಿತ್ರದ ಸ್ಟ್ರೀಮಿಂಗ್ ದಿನಾಂಕ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಚಿತ್ರ ಯಾವಾಗ ಮತ್ತು ಎಲ್ಲಿ ಸ್ಟ್ರೀಮಿಂಗ್ ಆಗಲಿದೆ? ಇಲ್ಲಿದೆ ವಿವರ.
Sorgavaasal OTT Release Date: ಆರ್ ಜೆ ಬಾಲಾಜಿ ಮತ್ತು ಸೆಲ್ವರಾಘವನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ ತಮಿಳಿನ ಸೊರ್ಗವಾಸಲ್ ಸಿನಿಮಾ ನವೆಂಬರ್ 29ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿದ್ಧಾರ್ಥ್ ವಿಶ್ವನಾಥನ್ ನಿರ್ದೇಶಿಸಿದ, ಜೈಲ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಈಗ ಇದೇ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ. ತಾನು ಮಾಡದ ಅಪರಾಧಕ್ಕಾಗಿ ಜೈಲು ಸೇರಿದ ವ್ಯಕ್ತಿಯ ಸುತ್ತ ಇಡೀ ಕಥೆ ಸುತ್ತುತ್ತದೆ.
'ಸೊರ್ಗವಾಸಲ್' ಚಿತ್ರವನ್ನು ಸಿದ್ಧಾರ್ಥ್ ವಿಶ್ವನಾಥ್ ನಿರ್ದೇಶಿಸಿದ್ದಾರೆ. ಈ ಚಿತ್ರವು 1999ರ ಮದ್ರಾಸ್ ಕೇಂದ್ರ ಕಾರಾಗೃಹದ ಗಲಭೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಆರ್ ಜೆ ಬಾಲಾಜಿ, ಸೆಲ್ವರಾಘವನ್, ಕರುಣಾಸ್, ಸಾನಿಯಾ ಇಳಪ್ಪನ್, ನಾಟಿ ಸುಬ್ರಮಣ್ಯಂ, ಶರಾಫುದ್ದೀನ್, ಬಾಲಾಜಿ ಶಕ್ತಿವೇಲ್ ಮತ್ತು ಹಕ್ಕಿಮ್ ಶಾ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಯಾವಾಗ ಬಿಡುಗಡೆ?
ಸೊರ್ಗವಾಸಲ್ ಸಿನಿಮಾ ಡಿಸೆಂಬರ್ 27 ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ವಿಚಾರವನ್ನು ನೆಟ್‌ಫ್ಲಿಕ್ಸ್ ಇಂದು (ಡಿಸೆಂಬರ್ 22) ಅಧಿಕೃತವಾಗಿ ಘೋಷಿಸಿದೆ. ಇದಕ್ಕೂ ಮೊದಲೇ ಡಿಸೆಂಬರ್ 27ರಂದು ಈ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಲಿದೆ ಎಂಬ ಸುದ್ದಿ ಹಬ್ಬಿತ್ತು. ಆ ಅದು ನಿಜವಾಗಿದೆ. ಅಧಿಕೃತವಾಗಿಯೇ ನೆಟ್‌ಫ್ಲಿಕ್ಸ್ ಬಹಿರಂಗಪಡಿಸಿದೆ.
ಎಷ್ಟು ಭಾಷೆಗಳಲ್ಲಿ ಲಭ್ಯ?
ಸೊರ್ಗವಾಸಲ್ ಸಿನಿಮಾ ಮೂಲ ತಮಿಳಿನಲ್ಲಿ ನಿರ್ಮಾಣವಾಗಿದೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ಬೇರೆ ಭಾಷೆಗಳ ಬಗ್ಗೆ ಮಾಹಿತಿ ಇಲ್ಲ. ಆದಾಗ್ಯೂ, ತಮಿಳು ಜೊತೆಗೆ ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ ಎಂದೇ ಹೇಳಲಾಗುತ್ತಿದೆ. ಅದೆಲ್ಲದಕ್ಕೂ ಡಿಸೆಂಬರ್ 27ರ ವರೆಗೆ ಕಾಯಲೇಬೇಕು.
ಸ್ವೈಪ್ ರೈಟ್ ಸ್ಟುಡಿಯೋಸ್ ಮತ್ತು ಥಿಂಕ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿದ್ಧಾರ್ಥ್ ರಾವ್ ಮತ್ತು ಪಲ್ಲವಿ ಸಿಂಗ್, ಸೊರ್ಗವಾಸಲ್ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಕ್ರಿಸ್ಟೋ ಕ್ಸೇವಿಯರ್ ಸಂಗೀತ ನೀಡಿದ್ದಾರೆ. ಪ್ರಿನ್ಸ್ ಆಂಡರ್ಸನ್ ಅವರ ಛಾಯಾಗ್ರಹಣ, ಸೆಲ್ವ ಆರ್ ಕೆ ಸಂಕಲನವಿದೆ.
ಏನಿದು ಕಥೆ?
ಪಾರ್ಥಿಬನ್ ಅಲಿಯಾಸ್ ಪಾರ್ಥಿ (ಆರ್ ಜೆ ಬಾಲಾಜಿ) ಚೆನ್ನೈನಲ್ಲಿ ಸಣ್ಣ ರಸ್ತೆಬದಿಯ ಫುಡ್ ಕಾರ್ಟ್ ನಡೆಸುತ್ತಿರುತ್ತಾನೆ. ಜೀವನದಲ್ಲಿ ಮುಂದೊಂದು ದಿನ ದೊಡ್ಡ ಹೋಟೆಲ್ ತೆರೆದು ರೇವತಿಯನ್ನು (ಸಾನಿಯಾ ಅಯ್ಯಪ್ಪನ್) ಮದುವೆಯಾಗುವ ಕನಸು ಆತನದ್ದು. ಹೀಗಿರುವಾಗಲೇ ನಿವೃತ್ತ ಐಎಎಸ್ ಅಧಿಕಾರಿ ಷಣ್ಮುಗಂ, ಪಾರ್ಥಿ ಫುಡ್ ಸೆಂಟರ್‌ನಲ್ಲಿಯೇ ಸಾವನ್ನಪ್ಪುತ್ತಾರೆ. ಅದು ಪಾರ್ಥಿಬನ್ ಮೇಲೆ ಬರುತ್ತದೆ. ಇತ್ತ ಪಾರ್ಥಿ ತಾನು ಈ ಕೊಲೆ ಮಾಡಿಲ್ಲ ಎಂದು ಸಾಬೀತುಪಡಿಸಲು ಹೆಣಗಾಡುತ್ತಾನೆ. ಜೈಲಿಗೂ ಹೋಗುತ್ತಾನೆ. ಕೊನೆಗೆ ಆ ಆರೋಪದ ಮೇಲೆ ಆತ ಹೊರಬರುತ್ತಾನಾ? ಆ ಪ್ರಕ್ರಿಯೆಯೇ ಈ ಸಿನಿಮಾ.