logo
ಕನ್ನಡ ಸುದ್ದಿ  /  ಮನರಂಜನೆ  /  ಗುರುಪ್ರಸಾದ್‌ಗೆ ಇಲ್ಲಿಂದ ಹೋಗೋದು ಇಷ್ಟ ಇರಲಿಲ್ಲ: ಅಂತ್ಯಸಂಸ್ಕಾರದ ವೇಳೆ ಹಲವು ನಾಟಕೀಯ ಬೆಳವಣಿಗೆಗಳು, ಆಸರೆಯಾದವರು ದುನಿಯಾ ವಿಜಯ್‌

ಗುರುಪ್ರಸಾದ್‌ಗೆ ಇಲ್ಲಿಂದ ಹೋಗೋದು ಇಷ್ಟ ಇರಲಿಲ್ಲ: ಅಂತ್ಯಸಂಸ್ಕಾರದ ವೇಳೆ ಹಲವು ನಾಟಕೀಯ ಬೆಳವಣಿಗೆಗಳು, ಆಸರೆಯಾದವರು ದುನಿಯಾ ವಿಜಯ್‌

Rakshitha Sowmya HT Kannada

Nov 04, 2024 01:37 PM IST

google News

ಪೋಸ್ಟ್‌ ಮಾರ್ಟಂ, ಅಂತ್ಯ ಸಂಸ್ಕಾರದ ಎಲ್ಲಾ ಹಂತದಲ್ಲೂ ಗುರುಪ್ರಸಾದ್‌ ಕುಟುಂಬಕ್ಕೆ ಆಸರೆಯಾಗಿ ನಿಂತ ದುನಿಯಾ ವಿಜಯ್

  • ನಿರ್ದೇಶಕ ಗುರುಪ್ರಸಾದ್‌ ಜೊತೆ ಹೆಚ್ಚು ಒಡನಾಟ ಇಲ್ಲದಿದ್ದರೂ ನಟ ದುನಿಯಾ ವಿಜಯ್‌ ಅವರ ಅಂತ್ಯಸಂಸ್ಕಾರದ ಸಮಯದಲ್ಲಿ ಕುಟುಂಬಕ್ಕೆ ಬಹಳ ಸಹಾಯ ಮಾಡಿದ್ದಾರೆ.  ಆಂಬ್ಯುಲೆನ್ಸ್‌ ಕೆಟ್ಟಿದ್ದರಿಂದ ಬೇರೊಂದು ವಾಹನ ತರಿಸಿ ಮೃತದೇಹವನ್ನು ಪೋಸ್ಟ್‌ ಮಾರ್ಟಂಗೆ ಕಳಿಸಿದ್ದಾರೆ. ವಿಜಯ್‌ ಸಹಾಯಕ್ಕೆ ಕುಟುಂಬದವರು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಪೋಸ್ಟ್‌ ಮಾರ್ಟಂ, ಅಂತ್ಯ ಸಂಸ್ಕಾರದ ಎಲ್ಲಾ ಹಂತದಲ್ಲೂ ಗುರುಪ್ರಸಾದ್‌ ಕುಟುಂಬಕ್ಕೆ ಆಸರೆಯಾಗಿ ನಿಂತ ದುನಿಯಾ ವಿಜಯ್
ಪೋಸ್ಟ್‌ ಮಾರ್ಟಂ, ಅಂತ್ಯ ಸಂಸ್ಕಾರದ ಎಲ್ಲಾ ಹಂತದಲ್ಲೂ ಗುರುಪ್ರಸಾದ್‌ ಕುಟುಂಬಕ್ಕೆ ಆಸರೆಯಾಗಿ ನಿಂತ ದುನಿಯಾ ವಿಜಯ್

ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಅವರ ಆತ್ಮಹತ್ಯೆ ಸುದ್ದಿ ಕನ್ನಡಿಗರಿಗೆ ಒಂದು ಬಗೆಯ ಅಚ್ಚರಿ ಹಾಗೂ ಆಘಾತವನ್ನು ತಂದಿದೆ. ಅದು ಯಾವ ಕಾರಣಕ್ಕೋ ಚಿತ್ರರಂಗದ ಪ್ರಮುಖ ನಾಯಕ ನಟರು ಅಥವಾ ಹಿರಿಯ ನಟರು ಯಾರೂ ಗುರು ಅಂತ್ಯಕ್ರಿಯೆಯಲ್ಲೂ ಕಾಣಿಸಿಕೊಳ್ಳಲಿಲ್ಲ. ಆದರೆ ದುನಿಯಾ ವಿಜಿ (ವಿಜಯ್ ಕುಮಾರ್) ಅವರ ಶ್ರಮ-ಪ್ರಯತ್ನ ಇಲ್ಲದಿದ್ದರೆ ಅಂತ್ಯಕ್ರಿಯೆ ಇರಲಿ, ಮರಣೋತ್ತರ ಪರೀಕ್ಷೆ ಸಹ ಭಾನುವಾರ (ನ 3) ಮುಗಿಯುವುದು ಕಷ್ಟವಾಗುತ್ತಿತ್ತು ಎಂದು ಮೂಲಗಳು ಹೇಳಿವೆ.

ಅಪಾರ್ಟ್‌ಮೆಂಟ್‌ನಿಂದ ಆಸ್ಪತ್ರೆ ದಾರಿಯಲ್ಲಿ ಕೆಟ್ಟು ನಿಂತ ಆಂಬ್ಯುಲೆನ್ಸ್‌

ಗುರುಪ್ರಸಾದ್ ದೇಹವನ್ನು ಮಾದನಾಯಕನಹಳ್ಳಿಯ ಅಪಾರ್ಟ್‌ಮೆಂಟ್‌ನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತರುವ ದಾರಿಯಲ್ಲಿ ಮೂರು ಬಾರಿ ಆಂಬ್ಯುಲೆನ್ಸ್ ಕೆಟ್ಟು ನಿಂತಿತ್ತು. ನಾಲ್ಕನೇ ಬಾರಿಗೆ ಯಶವಂತಪುರದ ಬಳಿ ಕೆಟ್ಟ ಗಾಡಿ ಮುಂದಕ್ಕೆ ಹೋಗಲೇ ಇಲ್ಲ. ಆ ವೇಳೆ ಕಲಾವಿದರ ಸಂಘದ ವ್ಯಕ್ತಿಯೊಬ್ಬರು, ಈ ದಿನ ಆಗಲ್ಲ, ತಮ್ಮ ಆಶ್ರಮದಲ್ಲಿ ದೇಹವನ್ನು ಇರಿಸಿ, ಮಾರನೇ ದಿನ ಅಂತಿಮ ವಿಧಿ-ವಿಧಾನಗಳನ್ನು ಮಾಡೋಣ ಎಂದು ಹೇಳಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಕನ್ನಡ ಸಿನಿಮಾ ನಟ ದುನಿಯಾ ವಿಜಿ ಇನ್ನೊಂದು ವಾಹನ ವ್ಯವಸ್ಥೆ ಮಾಡಿ, ಆಸ್ಪತ್ರೆಗೆ ದೇಹವನ್ನು ತಲುಪುವಂತೆ ಮಾಡಿದರು. ಪೋಸ್ಟ್ ಮಾರ್ಟಂ ನಂತರ ಕುಟುಂಬದ ಒಳಗಿನ ಗೊಂದಲದ ಕಾರಣಕ್ಕೆ ಅಂತಿಮ ವಿಧಿ ವಿಧಾನಗಳು ಹೇಗೆ ಮಾಡುವುದು ಎಂಬುದೇ ದೊಡ್ಡ ಚರ್ಚೆಗೆ ಕಾರಣವಾಯಿತು.

ಯಾವ ಪದ್ದತಿಯಂತೆ ಅಂತ್ಯಸಂಸ್ಕಾರ ಮಾಡುವುದು ಎಂಬ ಗೊಂದಲ

ಎರಡನೇ ಪತ್ನಿ ಒಕ್ಕಲಿಗರು. ಹೀಗಾಗಿ ಒಕ್ಕಲಿಗರ ಸಂಪ್ರದಾಯದಂತೆ ಮಾಡಬೇಕು ಎಂದು ಕೆಲವರು ಅಭಿಪ್ರಾಯಪಟ್ಟರು. ಆದರೆ ಹುಟ್ಟಿನಿಂದ ಗುರುಪ್ರಸಾದ್ ಬ್ರಾಹ್ಮಣರು. ಹೀಗಾಗಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿ, ಈ ಚರ್ಚೆಯೇ ಬಹುಹೊತ್ತು ನಡೆಯಿತು. ಹೊತ್ತು ಮೀರುತ್ತಿದ್ದ ಕಾರಣ, ತುರ್ತಾಗಿ ಏನಾದರೂ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇತ್ತು. ಆ ವೇಳೆ ಮತ್ತೊಮ್ಮೆ ಮಧ್ಯ ಪ್ರವೇಶಿಸಿದ ದುನಿಯಾ ವಿಜಿ, ಕುಟುಂಬ ಸದಸ್ಯರ ಮನವೊಲಿಸಿ, ಸಮಸ್ಯೆ ಬಗೆಹರಿಸಿದರು. ರಾತ್ರಿ ಇನ್ನೇನು ತಡವಾಗಿತ್ತು, ಸ್ಮಶಾನದಲ್ಲಿ ದಹನ ಸಾಧ್ಯವಿಲ್ಲ ಎಂಬ ಸನ್ನಿವೇಶ ಇದ್ದಾಗ ಅಲ್ಲಿಗೆ ತಮ್ಮ ಕೆಲ ಗೆಳೆಯರನ್ನು ಕಳಿಸಿ, ಮನವಿ ಮಾಡಿಕೊಂಡು ಅವಕಾಶ ಕೊಡುವಂತೆ ದುನಿಯಾ ವಿಜಿ ಅವರೇ ವಿನಂತಿಸಿಕೊಂಡರು. ಈ ಮನವಿಗೆ ಮಣಿದು ಸ್ಮಶಾನದ ಸಿಬ್ಬಂದಿ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಪತ್ರದಲ್ಲಿ ಸಮಸ್ಯೆ

ಸ್ಮಶಾನದಲ್ಲಿಯೂ ಅಂತ್ಯಸಂಸ್ಕಾರ ಬಗ್ಗೆ ಮತ್ತೊಮ್ಮೆ ಸಮಸ್ಯೆ ಎದುರಾಗಿತ್ತು. ಮರಣೋತ್ತರ ಪರೀಕ್ಷೆ ಪತ್ರದಲ್ಲಿ ಪೊಲೀಸರ ಮೊಹರು ಸಮಸ್ಯೆ ಇತ್ತು. ಸ್ಮಶಾನದ ಸಿಬ್ಬಂದಿ ಇದನ್ನು ತೋರಿಸಿ, ಪತ್ರವನ್ನು ಸರಿಪಡಿಸಿ ತರಬೇಕು ಎಂದು ತಾಕೀತು ಮಾಡಿದರು. ಗುರುಪ್ರಸಾದ್ ಅವರ ಕುಟುಂಬದ ಸದಸ್ಯರು ಮತ್ತೊಮ್ಮೆ ಕಂಗಾಲಾಗಿದ್ದರು. ಈ ವೇಳೆ ಮತ್ತೊಮ್ಮೆ ಮಧ್ಯಪ್ರವೇಶಿಸಿದ ದುನಿಯಾ ವಿಜಿ, ಪತ್ರದ ವಿಚಾರವಾಗಿ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಸರಿಪಡಿಸಿಕೊಡುತ್ತೇನೆ. ಈಗಾಗಲೇ ತಡವಾಗಿದೆ. ಇನ್ನು ಅಂತ್ಯಸಂಸ್ಕಾರಕ್ಕೆ ತಡ ಮಾಡಬೇಡಿ ಎಂದು ವಿನಂತಿಸಿಕೊಂಡರು. ಇಷ್ಟೆಲ್ಲ ಆದ ನಂತರವೇ ಅಂತಿಮ ವಿಧಿ- ವಿಧಾನಗಳು ಆರಂಭವಾದವು.‌

ಗುರುಪ್ರಸಾದ್‌ಗೆ ಇಲ್ಲಿಂದ ಹೋಗೋಕೆ ಇಷ್ಟ ಇರಲಿಲ್ಲ ಎಂದ ಸ್ಥಳೀಯರು

ನಿನ್ನೆ ಇಡೀ ದಿನ ಗುರುಪ್ರಸಾದ್ ಅವರ ಕುಟುಂಬದ ಜೊತೆಗಿದ್ದ ವ್ಯಕ್ತಿಯೊಬ್ಬರು ಈ ಎಲ್ಲ ವಿಚಾರಗಳನ್ನು 'ಎಚ್‌ಟಿ ಕನ್ನಡ' ಜಾಲತಾಣಕ್ಕೆ ವಿವರಿಸಿದರು. 'ಎಂಥ ವಿಚಿತ್ರ ನೋಡಿ, ಆ ಮನುಷ್ಯನಿಗೆ ಇಲ್ಲಿಂದ ಹೋಗುವುದು ಇಷ್ಟವೇ ಇಲ್ಲ. ಆತ್ಮಹತ್ಯೆ ಮಾಡಿಕೊಂಡ ಮೇಲೆ ಕನ್‌ಫ್ಯೂಸ್ ಆಗಿ, ಹೋಗಲ್ಲ ಅಂತ ಹಟ ಮಾಡ್ತಾ ಇದ್ದಾನೆ. ಇಷ್ಟು ಸಲ ಆಂಬ್ಯುಲೆನ್ಸ್ ರಿಪೇರಿ ಆಗುವುದೇನು, ಜೊತೆಗೆ ಪುರೋಹಿತರನ್ನು ಕರೆಸಿದರಲ್ಲ, ಅಲ್ಲಿಯೂ ಏನೋ ಗೊಂದಲ, ಅವರು ಬರುವುದರೊಳಗೂ ತಡ, ಕುಟುಂಬದ ಒಳಗೆ ಗೊಂದಲ, ಮರಣೋತ್ತರ ಪರೀಕ್ಷೆಯ ಆ ಪತ್ರದಲ್ಲಿ ಸೀಲ್ ಇಲ್ಲ. ದೇಹ-ಜೀವ-ಆತ್ಮ ಅಂತ ನಂಬುವವರಿಗೆ ಇದು ಗೊತ್ತಾಗುತ್ತೆ. ಗುರುಪ್ರಸಾದ್‌ಗೆ ಸಾಯೋದು, ಇಲ್ಲಿಂದ ಹೋಗೋದು ಇಷ್ಟ ಇರಲಿಲ್ಲ. ಈಗಲೂ ಬರೆದುಕೊಂಡು- ಓದಿಕೊಂಡು ಇದ್ದುಬಿಡ್ತೀನಿ ಅಂತ ಹಟ ಮಾಡ್ತಿದ್ದಾನೆ' ಎಂದು ಭಾವನಾತ್ಮಕವಾಗಿ ಹೇಳಿದರು.

ಎಲ್ಲಾ ಹಂತದಲ್ಲೂ ಗುರುಪ್ರಸಾದ್‌ ಕುಟುಂಬಕ್ಕೆ ಆಸರೆಯಾದ ದುನಿಯಾ ವಿಜಯ್

ಗುರುಪ್ರಸಾದ್ ಕುಟುಂಬದವರು ದುನಿಯಾ ವಿಜಿ ಅವರು ಮಾಡಿದ ಸಹಾಯಕ್ಕೆ ಬಹಳ ಭಾವುಕರಾದರು. ಗುರು ಜತೆಗೆ ಯಾವುದೇ ಒಡನಾಟ ಇಲ್ಲದ ವಿಜಿ, ಮುಂದೆ ನಿಂತು ಗೌರವಯುತವಾದ ಅಂತ್ಯಕ್ರಿಯೆಗೆ ಸಹಕರಿಸಿದ್ದಾರೆ ಎಂದು ಸ್ಮರಿಸಿದರು. ಒಂದು ಹಂತದಲ್ಲಿಯಂತೂ ಗುರುಪ್ರಸಾದ್ ಅವರ ಮೃತದೇಹದಿಂದ ವಾಸನೆ ಹೆಚ್ಚು ಬರುತ್ತಿದೆ ಎನ್ನುವ ಕಾರಣಕ್ಕೆ ನೀಲಗಿರಿ ಎಣ್ಣೆಯನ್ನೂ ತರಿಸಿ ವಿಜಿ ಹಚ್ಚಿದ್ದರು. 'ಕುಟುಂಬದ ಸದಸ್ಯರು ಹಾಗೂ ಹತ್ತಿರದ ಒಡನಾಡಿಗಳ ರೀತಿಯಲ್ಲಿಯೇ ಗುರುಪ್ರಸಾದ್ ಅವರ ಅಂತ್ಯಸಂಸ್ಕಾರಕ್ಕೆ ವಿಜಿ ನೆರವಾದರು. ಅಂಥ ಸಂಕಷ್ಟದ ಸಂದರ್ಭದಲ್ಲಿ ಕುಟುಂಬಕ್ಕೆ ವಿಜಯ್‌ ಆಸರೆಯಾಗಿದ್ದರು' ಎಂದು ಅವರು ಸ್ಮರಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ