ಶ್ರೇಷ್ಠಾ-ತಾಂಡವ್ ಕಳ್ಳಾಟ ಗೊತ್ತಿದ್ದರೂ ಸತ್ಯ ಮುಚ್ಚಿಟ್ಟ ಪೂಜಾ ಕೆನ್ನೆಗೆ ಬಾರಿಸಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
Sep 17, 2024 09:08 AM IST
ಶ್ರೇಷ್ಠಾ-ತಾಂಡವ್ ಕಳ್ಳಾಟ ಗೊತ್ತಿದ್ದರೂ ಸತ್ಯ ಮುಚ್ಚಿಟ್ಟ ಪೂಜಾ ಕೆನ್ನೆಗೆ ಬಾರಿಸಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೋಮವಾರದ ಎಪಿಸೋಡ್. ಮದುವೆ ತಡೆಯಲು ಒಳಗೆ ಹೋಗಲು ಪ್ರಯತ್ನಿಸುವ ಕುಸುಮಾಳನ್ನು ರೆಸಾರ್ಟ್ ಸಿಬ್ಬಂದಿ ತಡೆಯುತ್ತಾರೆ. ಅಷ್ಟರಲ್ಲಿ ಪೂಜಾ ಕೂಡಾ ಅಲ್ಲಿಗೆ ಬರುತ್ತಾಳೆ. ಸತ್ಯ ಗೊತ್ತಿದ್ದರೂ ಇಷ್ಟು ದಿನಗಳ ಕಾಲ ಸತ್ಯ ಮುಚ್ಚಿಟ್ಟಿದ್ದ ಪೂಜಾ ಮೇಲೆ ಕುಸುಮಾ ಕೋಪಗೊಳ್ಳುತ್ತಾಳೆ.
Bhagyalakshmi Serial: ಮಹೇಶನ ಕಾವಲಿನಲ್ಲಿದ್ದ ಪೂಜಾಳನ್ನು ಭಾಗ್ಯಾ ಕಾಪಾಡುತ್ತಾಳೆ. ಅಕ್ಕನ ಬಳಿ ಮಾತನಾಡುತ್ತಾ ಕೂತರೆ ನೂರೆಂಟು ಪ್ರಶ್ನೆ ಕೇಳುತ್ತಾಳೆ, ಅತ್ತ ಮದುವೆ ನಿಲ್ಲಿಸಲೂ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಪೂಜಾ ಯಾರ ಕಣ್ಣಿಗೂ ಕಾಣದೆ ಅಲ್ಲಿಂದ ಎಸ್ಕೇಪ್ ಆಗುತ್ತಾಳೆ. ತಂಗಿ ಮತ್ತೆ ಎಲ್ಲಿ ಹೋದಳು ಎಂದು ಭಾಗ್ಯಾ ಗಾಬರಿ ಆಗುತ್ತಾಳೆ.
ಶ್ರೇಷ್ಠಾಗೆ ಚಳಿ ಬಿಡಿಸಲು ಮದುವೆ ಮನೆಗೆ ಹೊರಟ ಭಾಗ್ಯ
ಇದೆಲ್ಲಾ ಶ್ರೇಷ್ಠಾ ಮಾಡಿದ ಪ್ಲ್ಯಾನ್ ಎಂದು ತಿಳಿದ ಭಾಗ್ಯಾ, ಅವಳನ್ನು ವಿಚಾರಿಸಿಕೊಳ್ಳಲು ಮದುವೆ ಮನೆಗೆ ಹೋಗಲು ಮುಂದಾಗುತ್ತಾಳೆ. ಸುಂದ್ರಿಗೆ ಕರೆ ಮಾಡುವ ಪೂಜಾ ಹೇಗಾದರೂ ಮಾಡಿ ಭಾಗ್ಯಾಳನ್ನು ಅವಾಯ್ಡ್ ಮಾಡು, ಅವಳು ಮದುವೆ ಮನೆಗೆ ಹೋಗದಂತೆ ತಡೆ ಎಂದು ಮನವಿ ಮಾಡುತ್ತಾಳೆ. ಆದರೆ ಭಾಗ್ಯಾ ಮಾತ್ರ ಸುಂದ್ರಿ ಮಾತನ್ನು ಕೇಳಲು ತಯಾರಿರುವುದಿಲ್ಲ. ಬೇರೆ ದಾರಿ ಕಾಣದೆ ಸುಂದ್ರಿ ನಾನು ಹಾಗೂ ಮಹೇಶ ತರುಣ್ ನಿಜವಾದ ಅಪ್ಪ ಅಮ್ಮ ಅಲ್ಲ, ದುಡ್ಡಿಗಾಗಿ ಈ ರೀತಿ ನಾಟಕ ಮಾಡುತ್ತಿದ್ದೇವೆ ಎನ್ನುತ್ತಾಳೆ. ಈ ಮಾತು ಕೇಳಿ ಭಾಗ್ಯಾ ಇನ್ನಷ್ಟು ಕೋಪಗೊಳ್ಳುತ್ತಾಳೆ. ಆ ಶ್ರೇಷ್ಠಾಗಾದರೂ ಬುದ್ಧಿ ಇಲ್ಲ. ಆದರೆ ನೀವು ದುಡ್ಡಿಗಾಗಿ ಮತ್ತೊಬ್ಬರ ಜೀವನದಲ್ಲಿ ಆಟ ಆಡಲು ಹೇಗಾದರೂ ಮನಸ್ಸು ಬಂತು. ಇಷ್ಟೆಲ್ಲಾ ನಾಟಕ ಮಾಡಿದ ಶ್ರೇಷ್ಠಾಳನ್ನು ಬಿಡುವ ಮಾತೇ ಇಲ್ಲ, ಅವಳಿಗೆ ಸರಿಯಾಗಿ ಬುದ್ದಿ ಕಲಿಸುತ್ತೇನೆ ಎಂದು ಭಾಗ್ಯಾ ಅಲ್ಲಿಂದ ಹೊರಡುತ್ತಾಳೆ.
ಇತ್ತ ಕುಸುಮಾ ಪ್ರಯಾಣಿಸುತ್ತಿದ್ದ ಆಟೋ, ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಅತ ದುಡ್ಡಿಗಾಗಿ ಡಿಮ್ಯಾಂಡ್ ಮಾಡುತ್ತಾನೆ. ನಾನು ಇಲ್ಲಿಂದ ಹೋಗಬೇಕು, ನಾಳೆ ದುಡ್ಡು ಕೊಡುತ್ತೇನೆ ಎಂದು ಎಷ್ಟು ಮನವಿ ಮಾಡಿದರೂ ಆತ ಕೇಳಲು ತಯಾರಿಲ್ಲ, ಬೇಸರಗೊಂಡ ಕುಸುಮಾ ಚಿನ್ನದ ಬಳೆಯನ್ನು ಆತನ ಮುಖಕ್ಕೆ ಎಸೆದು ಪೊಲೀಸರ ಮಾತನ್ನು ಕೇಳದೆ ಅಲ್ಲಿಂದ ಓಡಿ ಬರುತ್ತಾಳೆ. ಮದುವೆ ಮನೆಗೆ ತಲುಪಲು ಯಾವ ವಾಹನವೂ ದೊರೆಯದೆ ಓಡುತ್ತಲೇ ಮದುವೆ ಮನೆ ಸೇರುತ್ತಾಳೆ. ಆದರೆ ಅಲ್ಲಿ ರೆಸಾರ್ಟ್ ಸಿಬ್ಬಂದಿ ಕುಸುಮಾಳನ್ನು ಒಳಗೆ ಬಿಡುವುದಿಲ್ಲ. ಈ ಮದುವೆ ನಿಲ್ಲಿಸಬೇಕು, ಅವನು ನನ್ನ ಮಗ ದಯವಿಟ್ಟು ನನ್ನನ್ನು ಒಳಗೆ ಹೋಗಲು ಬಿಡಿ ಎಂದು ಮನವಿ ಮಾಡಿದರೂ ಕುಸುಮಾಳನ್ನು ಹೊರ ತಬ್ಬುತ್ತಾರೆ. ಕೆಳಗೆ ಬೀಳುತ್ತಿದ್ದ ಕುಸುಮಾಳನ್ನು ಪೂಜಾ ಹಿಡಿದುಕೊಳ್ಳುತ್ತಾಳೆ.
ಪೂಜಾ ಮೇಲೆ ಕೋಪಗೊಂಡ ಕುಸುಮಾ
ನಾನು ಒಳಗೆ ಹೋಗಬೇಕು, ಈ ಮದುವೆ ನಡೆದರೆ ಭಾಗ್ಯಾ ಜೀವನ ಹಾಳಾಗುತ್ತದೆ ಎಂದು ಕುಸುಮಾ, ಪೂಜಾ ಬಳಿ ಗೋಳು ತೋಡಿಕೊಳ್ಳುತ್ತಾಳೆ. ಅತ್ತೆಗೆ ವಿಚಾರ ಗೊತ್ತಿಗಿದೆ ಎಂದು ಪೂಜಾ ಆಶ್ಚರ್ಯಪಡುತ್ತಾಳೆ. ಹೌದು ಅತ್ತೆ ನನಗೂ ವಿಚಾರ ಗೊತ್ತು. ಇದೇ ಕಾರಣಕ್ಕೆ ನಾನು ಬಹಳ ದಿನಗಳಿಂದ ಶ್ರೇಷ್ಠಾ ಮನೆಯಲ್ಲಿ ಉಳಿದುಕೊಂಡಿದ್ದೇನೆ. ಅವರ ಪ್ರತಿ ನಡೆಯನ್ನೂ ಗಮನಿಸುತ್ತಿದ್ದೆ, ಈ ಮದುವೆ ತಡೆಯಲೇಬೇಕು ಎನ್ನುತ್ತಾಳೆ. ಪೂಜಾಗೆ ವಿಚಾರ ಗೊತ್ತಿದ್ದರೂ ಇಷ್ಟು ದಿನಗಳ ಕಾಲ ಮುಚ್ಚಿಟ್ಟಿದ್ದಕ್ಕೆ ಕುಸುಮಾ ಕೋಪಗೊಂಡು ಪೂಜಾ ಕೆನ್ನೆಗೆ ಬಾರಿಸುತ್ತಾಳೆ. ನಿನ್ನನು ಏನಂದುಕೊಂಡಿದ್ದೀಯ? ಎಲ್ಲಾ ವಿಚಾರ ಗೊತ್ತಿದ್ದರೂ ಇಷ್ಟು ದಿನಗಳು ಏಕೆ ಮುಚ್ಚಿಟ್ಟಿದ್ದೆ? ಎಂದು ಕುಸುಮಾ ಪ್ರಶ್ನಿಸುತ್ತಾಳೆ. ನಾನು ಬಹಳ ಸಾರಿ ಹೇಳಬೇಕೆಂದುಕೊಂಡೆ, ಆದರೆ ಅದು ಸಾಧ್ಯವಾಗಲಿಲ್ಲ, ಒಂದು ವೇಳೆ ಹೇಳಿದ್ದರೂ ನೀವು ನಂಬುತ್ತಿರಲಿಲ್ಲ ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಕುಸುಮಾ ಮೌನವಾಗಿ ನಿಲ್ಲುತ್ತಾಳೆ.
ಭಾಗ್ಯಾ ಹಾಗೂ ಪೂಜಾ ಒಟ್ಟಿಗೆ ಸೇರಿ ಮದುವೆ ನಿಲ್ಲಿಸುತ್ತಾರಾ? ಶ್ರೇಷ್ಠಾ ಮೇಲೆ ಕೋಪಗೊಂಡ ಭಾಗ್ಯಾ ಕೂಡಾ ಮದುವೆ ಮನೆಗೆ ಬರುತ್ತಾಳಾ? ಮುಂದಿನ ಎಪಿಸೋಡ್‌ಗಳಲ್ಲಿ ನೋಡಬೇಕು.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್