‘ಮದ್ವಿ ಆಗಿ ತುಂಬ ದಿನಾ ಆಯ್ತು’ ಎಂದು ಧರ್ಮಸ್ಥಳದಲ್ಲಿ ಪತ್ನಿ ಪಾರ್ವತಿಯನ್ನು ಪರಿಚಯಿಸಿದ ಯೂಟ್ಯೂಬರ್ ಶಿವಪುತ್ರ ಯಶಾರದಾ
Sep 27, 2024 10:53 AM IST
ಯೂಟ್ಯೂಬರ್ ಶಿವಪುತ್ರ ಯಶಾರದಾ ಪತ್ನಿ ಇವರೇ ನೋಡಿ
- Shivaputra Yasharada: ಉತ್ತರ ಕರ್ನಾಟಕದ ಖ್ಯಾತ ಯೂಟ್ಯೂಬರ್ ಶಿವಪುತ್ರ ಯಶಾರದಾ ಸದ್ದಿಲ್ಲದೆ ಮದುವೆ ಸುದ್ದಿ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪತ್ನಿ ಜತೆಗಿನ ಫೋಟೋ ಹಂಚಿಕೊಂಡು, ಅವರ ಫ್ಯಾನ್ಸ್‌ಗೆ ಸ್ವೀಟ್ ಸರ್ಪ್ರೈಸ್ ನೀಡಿದ್ದಾರೆ. ಅಷ್ಟಕ್ಕೂ ಶಿವಪುತ್ರ ಪತ್ನಿ ಸಹ ಓರ್ವ ನಟಿ.
Shivaputra Yasharadha Wife: ಸೋಷಿಯಲ್ ಮೀಡಿಯಾ ಯೂಟ್ಯೂಬ್‌ನಲ್ಲಿ ಕಾಮಿಡಿ ವಿಡಿಯೋಗಳ ಮೂಲಕವೇ ಉತ್ತರ ಕರ್ನಾಟಕ ಭಾಗದ ಸಾಕಷ್ಟು ಮಂದಿ ಕ್ರಾಂತಿ ಮಾಡುತ್ತಿದ್ದಾರೆ. ಮಿಲಿಯನ್‌ಗಟ್ಟಲೇ ಸಬ್‌ಸ್ಕ್ರೈಬ್ ಸಂಪಾದಿಸಿದ್ದಾರೆ. ಯಾರ ಹಂಗಿಲ್ಲದೆ, ಯೂಟ್ಯೂಬ್‌ನಲ್ಲಿಯೇ ಲಕ್ಷಾಂತರ ರೂಪಾಯಿ ಗಳಿಕೆ ಕಾಣುತ್ತಿದ್ದಾರೆ. ಆ ಪೈಕಿ ಅದೇ ಉತ್ತರ ಕರ್ನಾಟಕದ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಶಿವಪುತ್ರ ಯಶಾರದಾ ಸಹ ಒಬ್ಬರು. ಯೂಟ್ಯೂಬ್‌ನಲ್ಲಿ shivaputra yasharadha comedy shows ಮೂಲಕ ತಮ್ಮ ಕಾಮಿಡಿ ಸ್ಕಿಟ್‌ಗಳ ಮೂಲಕವೇ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ.
ಆದರೆ, ಇದೇ ಶಿವಪುತ್ರ ಯಶಾರದಾ ಅವರ ಮದುವೆ ಆಗಿದೆ ಎಂಬ ವಿಚಾರ ನಿಮಗೆ ಗೊತ್ತಿದೆಯೇ? ಇಲ್ಲಿಯವರೆಗೂ ಶಿವಪುತ್ರ ಸ್ಟಿಲ್ ಸಿಂಗಲ್ ಎಂದು ಅಂದುಕೊಂಡವರೇ ಹೆಚ್ಚು. ಅವರ ಕೆಲವು ವೀಕ್ಷಕರು ನಿಮ್ಮ ಮದುವೆ ಯಾವಾಗ ಎಂದೂ ಪ್ರಶ್ನೆ ಮಾಡಿದಾಗ, ಅದಕ್ಕೆ ಉತ್ತರಿಸುತ್ತಿರಲಿಲ್ಲ ಶಿವಪುತ್ರ. ಆದರೆ, ಅಸಲಿಯತ್ತು ಮಾತ್ರ ಬೇರೆಯೇ ಇದೆ. ಅಂದರೆ, ಈಗಾಗಲೇ ಶಿವಪುತ್ರ ಅವರ ಮದುವೆ ಆಗಿದೆ! ಮದುವೆ ಆದ ವಿಚಾರವನ್ನಷ್ಟೇ ಅಲ್ಲದೆ, ತಮ್ಮ ಪತ್ನಿ ಯಾರೆಂದೂ ಫೋಟೋ ಸಮೇತ ಹೇಳಿಕೊಂಡಿದ್ದಾರೆ ಶಿವಪುತ್ರ. ಜತೆಗೆ ಮದುವೆ ಹೇಗೆ ನಡೆಯಿತು ಎಂದೂ ಬರೆದುಕೊಂಡಿದ್ದಾರೆ.
ಬಸವನ ಬಾಗೇವಾಡಿಯಲ್ಲಿ ತಮ್ಮದೇ ಆದ ಏಳೆಂಟು ಗೆಳೆಯರ ತಂಡ ಕಟ್ಟಿಕೊಂಡಿರುವ ಶಿವಪುತ್ರ, ವಾರಕ್ಕೆರಡರಂತೆ ಕಾಮಿಡಿ ಕಿರುಚಿತ್ರಗಳನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡುತ್ತ ಬಂದಿದ್ದಾರೆ. ಅದರಂತೆ, ಯೂಟ್ಯೂಬ್‌ನಲ್ಲಿ 19 ಲಕ್ಷಕ್ಕೂ (1.96 ಮಿಲಿಯನ್) ಅಧಿಕ ಸಬ್‌ಸ್ಕ್ರೈಬರ್ಸ್ ಹೊಂದಿರುವ ಶಿವಪುತ್ರ ಅವರಿಗೆ, ಇನ್‌ಸ್ಟಾಗ್ರಾಂನಲ್ಲೂ 12 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಈಗ ತಿಂಗಳಿಗೆ ಲಕ್ಷಗಟ್ಟಲೇ ಆದಾಯ ಗಳಿಸುತ್ತಿರುವ ಶಿವಪುತ್ರ, ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿದ್ದರು.
ಲವ್ ಮ್ಯಾರೇಜ್ ಅಥವಾ ಅರೇಂಜ್ಡ್?
ಸೋಷಿಯಲ್ ಮೀಡಿಯಾದಲ್ಲಿ ಹಾಸ್ಯ ನಟ ಶಿವಪುತ್ರ ತಮ್ಮ ಪತ್ನಿ ಜತೆಗಿನ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿದ ಬಹುತೇಕರು, ಅಚ್ಚರಿಗೊಳಗಾಗಿದ್ದಾರೆ. ಏಕೆಂದರೆ, ಇಲ್ಲಿಯವರೆಗೂ ಶಿವಪುತ್ರ ಇನ್ನೂ ಮದುವೆ ಆಗಿಲ್ಲ ಎಂದುಕೊಂಡವರೇ ಹೆಚ್ಚು. ಇದೀಗ ಪತ್ನಿ ಪಾರ್ವತಿ ದಾವಣಗೆರೆ ಅವರ ಜತೆಗಿನ ಫೋಟೋ ಶೇರ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. "ಧರ್ಮಸ್ಥಳ with my ಲವ್" ಎಂಬ ಕ್ಯಾಪ್ಶನ್ ಜತೆಗೆ ಪತ್ನಿಯೊಟ್ಟಿಗೆ ನಿಂತ ಫೋಟೋ ಹಾಕಿ ಫ್ಯಾನ್ಸ್‌ಗೆ ಸರ್ಪ್ರೈಸ್ ನೀಡಿದ್ದಾರೆ. ಈ ಫೋಟೋ ನೋಡಿದ ಬಹುತೇಕರು, ಇದು ಜೋಕ್ ಎಂದು ತಮಾಷೆ ಮಾಡಿದ್ದಾರೆ. ಬಳಿಕ ಮತ್ತೊಂದು ಕಾಮೆಂಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸರಳ ವಿವಾಹಕ್ಕೆ ನೆಟ್ಟಿಗರ ಮೆಚ್ಚುಗೆ
"ಕಮೆಂಟ್ ಮಾಡಿದ ಎಲ್ಲ ಸ್ನೇಹಿತರಿಗೆ ದನ್ಯವಾದಗಳು ಮದುವೆ ಆಗಿ ತುಂಬಾ ದಿನಗಳು ಆಯ್ತು ನಾನು ತಡವಾಗಿ ನಿಮಗೆ ತಿಳಸಿದೆ ಅದಕ್ಕೆ ಕ್ಷಮೆ ಇರಲಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಸರಳ ವಿವಾಹ" ಎಂದಿದ್ದಾರೆ ಶಿವಪುತ್ರ. ಬಳಿಕ ಸಾಕಷ್ಟು ಮಂದಿ ನೆಟ್ಟಿಗರು, ಶಿವ ಪಾರ್ವತಿಗೆ ಶುಭವಾಗಲಿ ಎಂದು ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ. ಸಂತೋಷದ ಜೀವನ ನಿಮ್ಮದಾಗಲಿ ಎಂದು ಹರಸಿದ್ದಾರೆ. "ನಂಗ ಗೊತ್ತಿತ್ತು ಶಿವಪಾರ್ವತಿ ಒಂದು ಆಗ್ತಾರೆ ಅಂತಾ", "ಯಪ್ಪಾ ಒಮ್ಮೆ ಹಾರ್ಟ್ ಅಟ್ಯಾಕ್ ಆದಂಗ್ ಆಯ್ತೋ ಮಾರಾಯ", "ಕಡಿಮಿ ಕರ್ಚನ್ಯಾಗ ಮದುವಿ ಆದ್ಯಲಾ ಉಳಸ ಎಷ್ಟರ ರೊಕ್ಕಾ ಉಳಸ್ತಿ ಉಳಸ" ಎಂದು ಸಾಕಷ್ಟು ಮಂದಿ ಉತ್ತರ ಕರ್ನಾಟಕ ಭಾಷೆಯ ಸೊಗಡಿನಲ್ಲೇ ಶುಭ ಹಾರೈಸಿದ್ದಾರೆ.
ಸ್ಕಿಟ್ ಮೂಲಕವೇ ಚಿಗುರಿದ ಪ್ರೀತಿ..
15ರಿಂದ 20 ನಿಮಿಷಗಳ ಅವಧಿಯ ಸ್ಕಿಟ್‌ನಲ್ಲಿ ಕಾಮಿಡಿಯನ್ನೇ ಪ್ರಧಾನವಾಗಿಸಿಕೊಂಡು, ಎಲ್ಲರನ್ನು ನಗಿಸುವ ಕಾಯಕ ಮುಂದುವರಿಸಿದ್ದಾರೆ ಶಿವಪುತ್ರ ಯಶಾರದಾ. ಪ್ರತಿ ಸ್ಕಿಟ್‌ನಲ್ಲಿ ಬೇರೆ ಬೇರೆ ಮಹಿಳಾ ಕಲಾವಿದರಿಗೆ ಅವಕಾಶ ನೀಡುತ್ತ ಬರುತ್ತಿದ್ದಾರೆ. ಅದೇ ರೀತಿ ಶಿವಪುತ್ರ ಅವರ ತಂದಡದ ಜತೆಗೆ ಪಾರ್ವತಿ ದಾವಣಗೆರೆ ಸಾಕಷ್ಟು ಸ್ಕಿಟ್‌ಗಳಲ್ಲಿ ನಟಿಸಿದ್ದಾರೆ. ಈ ನಟನೆ ವೇಳೆಯೇ ಈ ಜೋಡಿ ನಡುವೆ ಪ್ರೀತಿ ಚಿಗುರಿದೆ. ಈಗ ಯಾರಿಗೂ ಗೊತ್ತಾಗದ ಹಾಗೆ, ಸರಳ ರೀತಿಯಲ್ಲಿ ವಿವಾಹವೂ ನಡೆದಿದೆ. ಮದುವೆಯಾಗಿ ತುಂಬ ದಿನಗಳು ಕಳೆದಿದ್ದರೂ, ಇದೀಗ ಧರ್ಮಸ್ಥಳದಲ್ಲಿ ಮಂಜುನಾಥನ ಸನ್ನಿಧಿಯಲ್ಲಿ ಪತ್ನಿಯನ್ನು ಪರಿಚಯಿಸಿದ್ದಾರೆ.