logo
ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪ ಆದ ಖುಷಿಯಲ್ಲಿ ಸಿದ್ದೇಗೌಡ, ವಿಚಾರ ತಿಳಿದು ಆಶ್ಚರ್ಯ ವ್ಯಕ್ತಪಡಿಸಿದ ಸ್ನೇಹಿತರು; ಲಕ್ಷ್ಮೀ ನಿವಾಸ ಧಾರಾವಾಹಿ

ಅಪ್ಪ ಆದ ಖುಷಿಯಲ್ಲಿ ಸಿದ್ದೇಗೌಡ, ವಿಚಾರ ತಿಳಿದು ಆಶ್ಚರ್ಯ ವ್ಯಕ್ತಪಡಿಸಿದ ಸ್ನೇಹಿತರು; ಲಕ್ಷ್ಮೀ ನಿವಾಸ ಧಾರಾವಾಹಿ

Rakshitha Sowmya HT Kannada

Dec 21, 2024 11:59 AM IST

google News

ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 20ರ ಎಪಿಸೋಡ್‌

  • Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 20ರ ಎಪಿಸೋಡ್‌ನಲ್ಲಿ ಪೇರೆಂಟ್ಸ್‌ ಮೀಟಿಂಗ್‌ಗೆ ಇಬ್ಬರೂ ಬರುವಂತೆ ಸಿದ್ದು ಹಾಗೂ ಭಾವನಾಗೆ ಖುಷಿ ಹೇಳುತ್ತಾಳೆ. ನಾನು ಬರುತ್ತೇನೆ ಎಂದು ಸಿದ್ದು ಒಪ್ಪಿಕೊಳ್ಳುತ್ತಾನೆ. ನಾನು ಅಪ್ಪ ಆಗಿಬಿಟ್ಟೆ ಎಂದು ಖುಷಿಯಿಂದ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಾನೆ.  

ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 20ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 20ರ ಎಪಿಸೋಡ್‌ (PC: Zee Kannada)

Lakshmi Nivasa Serial: ಕೆಲಸ ಕಳೆದುಕೊಂಡ ಭಾವನಾಗೆ ಸಿದ್ದೇಗೌಡ ಸಮಾಧಾನ ಮಾಡಿದ್ದಾನೆ, ಅವಳಿಗೆ ಗೊತ್ತಾಗದಂತೆ ಮತ್ತೊಂದು ಕೆಲಸ ಕೊಡಿಸಿದ್ದಾನೆ. ಈ ಕೆಲಸವನ್ನು ಕೂಡಾ ಸಿದ್ದೇಗೌಡ ಕೊಡಿಸಿದ್ದು ಎಂಬ ನಿಜ ಭಾವನಾಗೆ ಗೊತ್ತಾಗದೆ, ಅವಳು ಸಂತೋಷ ವ್ಯಕ್ತಪಡಿಸುತ್ತಾಳೆ. ಸಿದ್ದುವಿಗೆ ಥ್ಯಾಂಕ್ಸ್ ಹೇಳುತ್ತಾಳೆ. ರೇಣುಕಾಗೆ ಭಾವನಾ ಕೆಲಸಕ್ಕೆ ಹೋಗುವುದು ಇಷ್ಟವಿಲ್ಲ, ಅದೇ ಸಮಯಕ್ಕೆ ಮನೆಯಲ್ಲೇ ಮಾಡುವ ಕೆಲಸ ಸಿಕ್ಕಿದ್ದರಿಂದ ಭಾವನಾ ಖುಷಿಯಾಗುತ್ತಾಳೆ.

ಖುಷಿ ಸ್ಕೂಲ್‌ಗೆ ಪೇರೆಂಟ್‌ ಮೀಟಿಂಗ್‌ ಹೋಗಲು ಖುಷಿಯಾದ ಸಿದ್ದು

ಭಾವನಾ, ಸಿದ್ದು ಇಬ್ಬರೂ ಖುಷಿಯನ್ನು ಭೇಟಿ ಆಗುತ್ತಾರೆ. ಪುಟ್ಟ ಖುಷಿಗೆ ಸಿದ್ದು ಐಸ್‌ಕ್ರೀಮ್‌ ಕೊಡಿಸುತ್ತಾನೆ. ನೀವಿಬ್ಬರೂ ಒಟ್ಟಿಗೆ ನನ್ನನ್ನು ಭೇಟಿ ಆಗಲು ಬಂದಿದ್ದೀರಿ, ಇಬ್ಬರೂ ಫ್ರೆಂಡ್ಸ್‌ ಆಗಿಬಿಟ್ರಾ ಎಂದು ಖುಷಿ ಕೇಳುತ್ತಾಳೆ. ಭಾವನಾ ಹೌದು ಎನ್ನುತ್ತಾಳೆ. ಇದನ್ನು ಕೇಳಿ ಸಿದ್ದು ಖುಷಿ ಆಗುತ್ತಾನೆ. ನಾನು ಒಂದು ವಿಚಾರ ಹೇಳುವುದನ್ನೇ ಮರೆತೆ. ಸ್ಕೂಲ್‌ನಲ್ಲಿ ಪೇರೆಂಟ್ಸ್‌ ಮೀಟಿಂಗ್‌ ಇದೆ, ಅಪ್ಪ ಅಮ್ಮ ಇಬ್ಬರೂ ಬರಬೇಕು ಎನ್ನುತ್ತಾಳೆ. ಸರಿ ನಾನು ಬರುವೆ ಎಂದು ಭಾವನಾ ಹೇಳಿದಾಗ, ನೀವು ಮಾತ್ರವಲ್ಲ ಸಿದ್ದು ಅಂಕಲ್ ಕೂಡಾ ಬರಬೇಕು ಎಂದು ಖುಷಿ ಹಟ ಹಿಡಿಯುತ್ತಾಳೆ. ಮಗುವಿನ ಮನಸ್ಸು ನೋಯಿಸಲು ಇಷ್ಟವಿಲ್ಲದೆ ಸಿದ್ದು ಸರಿ ನಾನೂ ಮೀಟಿಂಗ್‌ ಬರುವೆ ಎನ್ನುತ್ತಾನೆ. ಇದರಿಂದ ಖುಷಿಗೆ ಸಂತೋಷವಾದರೂ, ಭಾವನಾಗೆ ಇರಿಸುಮುರಿಸಾಗುತ್ತದೆ.

ರಾತ್ರಿ ಸಿದ್ದು ಬಹಳ ಖುಷಿಯಾಗಿರುತ್ತಾನೆ. ಅವನನ್ನು ಗಮನಿಸುವ ಸ್ನೇಹಿತರು ನಿಮ್ಮ ಖುಷಿಗೆ ಕಾರಣವೇನು ಎಂದು ಕೇಳುತ್ತಾರೆ. ನಾನು ಅಪ್ಪ ಆಗಿಬಿಟ್ಟೆ ಎನ್ನುತ್ತಾನೆ. ಆ ಮಾತು ಕೇಳಿ ಸ್ನೇಹಿತರು ಶಾಕ್‌ ಆಗುತ್ತಾರೆ. ಅತ್ತಿಗೆ ಇಷ್ಟು ಬೇಗ ನಿಮ್ಮನ್ನು ಒಪ್ಪಿಕೊಂಡ್ರಾ ಎಂದು ಕೇಳುತ್ತಾರೆ. ಅವರ ಅನುಮಾನವನ್ನು ಅರ್ಥ ಮಾಡಿಕೊಂಡ ಸಿದ್ದು, ಭಾವನಾ ಮನೆಯಲ್ಲಿ ಖುಷಿ ಎಂಬ ಮಗು ಇದೆಯಲ್ಲಾ , ಆ ಮಗುವಿನ ಸ್ಕೂಲ್‌ಗೆ ನಾವಿಬ್ಬರೂ ಅಪ್ಪ-ಅಮ್ಮನಾಗಿ ಪೇರೆಂಟ್ಸ್‌ ಮೀಟಿಂಗ್‌ಗೆ ಹೋಗುತ್ತಿದ್ದೇವೆ ಎನ್ನುತ್ತಾನೆ. ಅದನ್ನು ಕೇಳಿದ ಸ್ನೇಹಿತರು ಇದಾ ವಿಚಾರ ಎನ್ನುತ್ತಾರೆ. ಸಿದ್ದುವಿನ ಖುಷಿ ಕಂಡು ನೀಲು ಅವನನ್ನೇ ಕೇಳಿ ವಿಚಾರ ತಿಳಿದುಕೊಳ್ಳುತ್ತಾಳೆ. ಇವರಿಬ್ಬರೂ ಖುಷಿಯಾಗಿರಬಾರದು, ಅದಕ್ಕಾಗಿ ಏನಾದರೂ ಮಾಡಬೇಕು ಎಂದುಕೊಳ್ಳುತ್ತಾಳೆ.

ಮಗನ ಮನೆಯಲ್ಲಿ ವಾಚ್‌ಮ್ಯಾನ್‌ ಕೆಲಸ ಆರಂಭಿಸಿದ ಶ್ರೀನಿವಾಸ್

ಇತ್ತ ಶ್ರೀನಿವಾಸ್‌ 11 ಸಾವಿರ ಸಂಬಳಕ್ಕೆ ನೈಟ್‌ ವಾಚ್‌ಮ್ಯಾನ್‌ ಕೆಲಸ ಮಾಡಿಕೊಳ್ಳಲು ಒಪ್ಪುತ್ತಾನೆ. ನಾನು ಮಗನ ಮನೆಗೆ ವಾಚ್‌ಮ್ಯಾನ್‌ ಆಗಿರುವ ವಿಚಾರ ಶ್ರೀನಿವಾಸ್‌ಗೆ ಗೊತ್ತಿಲ್ಲ. ಸಂತೋಷ್‌ಗೆ ಕೂಡಾ ಅಪ್ಪನೇ ನನ್ನ ಮನೆ ಕಾವಲು ಕಾಯುತ್ತಿರುವುದು ಎಂದು ಇನ್ನೂ ಗೊತ್ತಾಗಿಲ್ಲ. ಹೆಂಡತಿ ಲಕ್ಷ್ಮೀಗೆ ಶ್ರೀನಿವಾಸ್‌ ಸುಳ್ಳು ಹೇಳಿ ಕೆಲಸಕ್ಕೆ ಹೊರಡುತ್ತಾನೆ. ವೀಣಾಗೆ ಲಕ್ಷ್ಮೀ ವಿಚಾರ ತಿಳಿಸಿ, ಅವರು ಕೆಲಸಕ್ಕೆ ಹೋಗುವುದು ಯಾರಿಗೂ ಗೊತ್ತಾಗಬಾರದು ಎನ್ನುತ್ತಾಳೆ. ಗಂಡನಿಗೆ ಗೊತ್ತಾದರೆ ಮನೆಗೆ ಹಣ ಕೊಡುವುದನ್ನೆ ನಿಲ್ಲಿಸಿಬಿಡುತ್ತಾರೆ ಎಂದು ವೀಣಾ ಕೂಡಾ ಸರಿ ನಾನು ಯಾರಿಗೂ ಹೇಳುವುದಿಲ್ಲ ಎನ್ನುತ್ತಾಳೆ.‌

ಮನೆಗೆ ವಾಪಸ್‌ ಹೊರಟ ವೆಂಕಿ, ಚೆಲ್ವಿ

ಮತ್ತೊಂದೆಡೆ ವೆಂಕಿ ಹಾಗೂ ಚೆಲ್ವಿ ಮನೆಗೆ ಹೊರಡಲು ಸಿದ್ಧರಾಗುತ್ತಾರೆ. ಆದರೆ ಅವರನ್ನು ಕಳಿಸಿಕೊಡಲು ಜಾನು ಒಪ್ಪುವುದಿಲ್ಲ. ನಾನು ನಿಮ್ಮನ್ನು ಕರೆದುಕೊಂಡು ಹೊರಗೆ ಹೋಗಬೇಕೆಂದುಕೊಂಡಿದ್ದೇನೆ, ನೀವು ಇದ್ದರೆ ನಾನು ಬಹಳ ಖುಷಿಯಾಗುತ್ತೇನೆ ಎನ್ನುತ್ತಾಳೆ. ವೆಂಕಿ , ಚೆಲ್ವಿ ಹೋಗುತ್ತಿರುವುದಕ್ಕೆ ಜಯಂತ್‌ ಖುಷಿಯಾದರೂ ಅಜ್ಜಿ ಕೂಡಾ ಇಲ್ಲಿಂದ ಹೋದರೆ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಾನೆ. ಅದರೆ ಜಾನು ಬಲವಂತಕ್ಕೆ ವೆಂಕಿ-ಚೆಲ್ವಿ ಇಬ್ಬರೂ ಉಳಿದುಕೊಂಡದ್ದರಿಂದ ಸಿಟ್ಟಾಗುತ್ತಾನೆ. ಆದರೆ ಜಾನುಗಾಗಿ ಸಿಟ್ಟು ತೋರಿಸಿಕೊಳ್ಳದೆ ಸುಮ್ಮನಾಗುತ್ತಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ