ಹೈಪ್ ಹೆಚ್ಚಿದ್ದರೂ, ಕಲೆಕ್ಷನ್ ನೀರಸ! ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡದ ವಿಜಯ್ ಸೇತುಪತಿಯ ವಿಡುದಲೈ ಪಾರ್ಟ್ 2
ವಿಜಯ್ ಸೇತುಪತಿ ಕ್ರೈಮ್ ಥ್ರಿಲ್ಲರ್ ವಿಡುದಲೈ 2 ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆಯಾಗಿದೆ. ಸಾಕಷ್ಟು ಹೈಪ್ ಸೃಷ್ಟಿಸಿಕೊಂಡಿದ್ದ ಈ ಸಿನಿಮಾ, ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂಥ ಕಲೆಕ್ಷನ್ ಮಾಡಿಲ್ಲ.
Viduthalai Part 2 Box office Collection Day 1: ವಿಜಯ್ ಸೇತುಪತಿ, ಸೂರಿ, ಮಂಜು ವಾರಿಯರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ತಮಿಳಿನ ವಿಡುದಲೈ 2 ಸಿನಿಮಾ ಶುಕ್ರವಾರ (ಡಿಸೆಂಬರ್ 20) ಬಿಡುಗಡೆ ಆಗಿದೆ. ನಿರ್ದೇಶಕ ವೆಟ್ರಿಮಾರನ್ ಅವರ ಸಿನಿಮಾ ಎಂಬ ಕಾರಣಕ್ಕೂ ವಿಡುದಲೈ ಚಿತ್ರ ಕುತೂಹಲ ಕೆರಳಿಸಿತ್ತು. ಆದರೆ, ಕಲೆಕ್ಷನ್ ವಿಚಾರದಲ್ಲಿ ಯಾಕೋ ಈ ಸಿನಿಮಾ ಮಂಕಾದಂತಿದೆ. ಹೈಪ್ ಗಮನಿಸಿದರೆ ಈ ಸಿನಿಮಾ ನಿರೀಕ್ಷೆ ಮಟ್ಟ ಮುಟ್ಟದೆ, ಕಡಿಮೆ ಕಲೆಕ್ಷನ್ ಮಾಡಿದೆ.
ಇಂಡಸ್ಟ್ರಿ ಟ್ರ್ಯಾಕರ್ ಸಾಕ್ನಿಲ್ಕ್ ಪ್ರಕಾರ, ವೆಟ್ರಿ ಮಾರನ್ ನಿರ್ದೇಶನದ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಕೇವಲ 7 ಕೋಟಿ ಗಳಿಸಲಷ್ಟೇ ಶಕ್ತವಾಗಿದೆ. ತಮಿಳಿನಲ್ಲಿ ಮೊದಲ ದಿನ 6.6 ಕೋಟಿ ರೂಪಾಯಿ ಮತ್ತು ತೆಲುಗಿನಿಂದ ಮೊದಲ ದಿನ ಕೇವಲ 40 ಲಕ್ಷ ಗಳಿಕೆ ಕಂಡಿದೆ.
ಪಾರ್ಟ್ 1 ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಆದರೆ, ಎರಡನೇ ಭಾಗ ಅದ್ಯಾಕೋ ಹೆಚ್ಚು ಸದ್ದು ಮಾಡುತ್ತಿಲ್ಲ. ಬಿಡುಗಡೆ ಆದ ಮೊದಲ ದಿನ ವಿಡುದಲೈ ಚಿತ್ರಕ್ಕೆ ತಮಿಳಿನಲ್ಲಿ 32.30% ಆಕ್ಯುಪೆನ್ಸಿ ಸಿಕ್ಕಿತ್ತು. ತೆಲುಗಿನಲ್ಲಿ 18.05% ಆಕ್ಯುಪೆನ್ಸಿಯನ್ನು ಹೊಂದಿತ್ತು. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈ ಸಿನಿಮಾ ಪುಟಿದೇಳುತ್ತಾ ಎಂಬ ಪ್ರಶ್ನೆ ಮೂಡಿದೆ.
ಎಲ್ರೆಡ್ ಕುಮಾರ್ ಮತ್ತು ವೆಟ್ರಿಮಾರನ್ ನಿರ್ಮಿಸಿರುವ ಈ ಚಿತ್ರವು ಜಯಮೋಹನ್ ಅವರ ಸಣ್ಣ ಕಥೆ ತುನೈವನ್ ಆಧರಿಸಿ ನಿರ್ಮಾಣ ಮಾಡಲಾಗಿದೆ. ಪ್ರತ್ಯೇಕತಾವಾದಿ ಗುಂಪಿನ ನಾಯಕನೊಂದಿಗೆ ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬನ ಕಥೆಯನ್ನೇ ಈ ಚಿತ್ರದ ಕಥಾವಸ್ತುವಾಗಿ ಮಾಡಿಕೊಂಡಿದ್ದಾರೆ ವೆಟ್ರಿಮಾರನ್.
ಭವಾನಿ ಶ್ರೀ, ಗೌತಮ್ ವಾಸುದೇವ್, ರಾಜೀವ್ ಮೆನನ್, ಬೋಸ್ ವೆಂಕಟ್, ವಿನ್ಸೆಂಟ್ ಅಶೋಕನ್, ಅನುರಾಗ್ ಕಶ್ಯಪ್, ಇಳವರಸು, ಬಾಲಾಜಿ ಶಕ್ತಿವೇಲ್, ಸರವಣ ಸುಬ್ಬಯ್ಯ, ತಮಿಜ್, ಚೇತನ್, ಆರ್ಯನ್, ಮುನ್ನಾರ್, ರಮೇಶ್, ಪಾವೆಲ್ ನವಗೀತನ್, ಸರ್ದಾರ್ ಸತ್ಯ ಮತ್ತು ಕೆನ್ ಕರುಣಾಸ್ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.