ದೇಗುಲ ದರ್ಶನ: ಸ್ವಾಮಿಮಲೈನ ಸ್ವಾಮಿನಾಥ ಸ್ವಾಮಿ ದೇವಸ್ಥಾನದ ಐತಿಹ್ಯ ಗೊತ್ತೆ? ಶಿವನಿಗೆ ಪ್ರಣವ ಮಂತ್ರ ತಿಳಿಸಿದ ಸುಬ್ರಹ್ಮಣ್ಯಸ್ವಾಮಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೇಗುಲ ದರ್ಶನ: ಸ್ವಾಮಿಮಲೈನ ಸ್ವಾಮಿನಾಥ ಸ್ವಾಮಿ ದೇವಸ್ಥಾನದ ಐತಿಹ್ಯ ಗೊತ್ತೆ? ಶಿವನಿಗೆ ಪ್ರಣವ ಮಂತ್ರ ತಿಳಿಸಿದ ಸುಬ್ರಹ್ಮಣ್ಯಸ್ವಾಮಿ

ದೇಗುಲ ದರ್ಶನ: ಸ್ವಾಮಿಮಲೈನ ಸ್ವಾಮಿನಾಥ ಸ್ವಾಮಿ ದೇವಸ್ಥಾನದ ಐತಿಹ್ಯ ಗೊತ್ತೆ? ಶಿವನಿಗೆ ಪ್ರಣವ ಮಂತ್ರ ತಿಳಿಸಿದ ಸುಬ್ರಹ್ಮಣ್ಯಸ್ವಾಮಿ

Swaminatha Swamy Temple: ತಮಿಳುನಾಡಿನ ಕುಂಭಕೋಣಂ ಸಮೀಪದ ಸ್ವಾಮಿಮಲೈನ ವಿಶ್ವವಿಖ್ಯಾತ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. ಶ್ರೀ ಸುಬ್ರಹ್ಮಣ್ಯನು ಶಿವನಿಗೆ ಇಲ್ಲಿ ಪ್ರಣವ ಮಂತ್ರ ಅಂದರೆ ಓಂ ಪದದ ಅರ್ಥವನ್ನು ತಿಳಿಸುತ್ತಾನೆ.

ದೇಗುಲ ದರ್ಶನ: ಸ್ವಾಮಿಮಲೈನ ಸ್ವಾಮಿನಾಥ ಸ್ವಾಮಿ ದೇವಸ್ಥಾನದ ಐತಿಹ್ಯ ಗೊತ್ತೆ? ಶಿವನಿಗೆ  ಪ್ರಣವ ಮಂತ್ರ ತಿಳಿಸಿದ ಸುಬ್ರಹ್ಮಣ್ಯಸ್ವಾಮಿ
ದೇಗುಲ ದರ್ಶನ: ಸ್ವಾಮಿಮಲೈನ ಸ್ವಾಮಿನಾಥ ಸ್ವಾಮಿ ದೇವಸ್ಥಾನದ ಐತಿಹ್ಯ ಗೊತ್ತೆ? ಶಿವನಿಗೆ ಪ್ರಣವ ಮಂತ್ರ ತಿಳಿಸಿದ ಸುಬ್ರಹ್ಮಣ್ಯಸ್ವಾಮಿ (wikipedia)

Swaminatha Swamy Temple: ತಮಿಳುನಾಡಿನ ತಂಜಾವೂರ್ ಜಿಲ್ಲೆಯ ಕುಂಭಕೋಣಂ ಕಾವೇರಿ ನದಿಯ ದಡದಲ್ಲಿ ಇದೆ. ಇಲ್ಲಿರುವ ಸ್ವಾಮಿಮಲೈನಲ್ಲಿ ಇರುವ ವಿಶ್ವವಿಖ್ಯಾತ ದೇವಾಲಯವೇ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ. ಈ ದೇವಾಲಯವನ್ನು ಸ್ವಾಮಿನಾಥ ಸ್ವಾಮಿ ಎಂದೇ ಹೇಳಲಾಗುತ್ತದೆ. ಇದು ಶ್ರೀ ಸುಬ್ರಹ್ಮಣ್ಯಸ್ವಾಮಿಯ ಮತ್ತೊಂದು ಹೆಸರಾಗಿದೆ. ಇಲ್ಲಿನ ಪ್ರದಾನ ದೇವತೆಯೇ ಸ್ವಾಮಿನಾಥಸ್ವಾಮಿ. ಇದರ ಜೊತೆಯಲ್ಲಿ ಪಾರ್ವತಿಯ ಮತ್ತೊಂದು ರೂಪವಾದ ಮೀನಾಕ್ಷಿ ಮತ್ತು ಸುಂದರೇಶ್ವರ್ ರೂಪದಲ್ಲಿನ ಶಿವನ ದೇಗುಲಗಳಿವೆ.

ಶಿವನಿಗೆ ಪ್ರಣವ ಮಂತ್ರ ತಿಳಿಸಿದ ಸುಬ್ರಹ್ಮಣ್ಯಸ್ವಾಮಿ

ಸಾಕ್ಷಾತ್ ಶ್ರೀ ಪರಮಶಿವನಿಗೆ ಅವರ ಮಗನಾದ ಶ್ರೀ ಸುಬ್ರಹ್ಮಣ್ಯಸ್ವಾಮಿ ಗುರುವಾಗುತ್ತಾನೆ. ಶಿವನಿಗೆ ಪಾಠ ಹೇಳಿದ ಸ್ಥಳವೇ ಇದಾಗಿದೆ. ಶ್ರೀ ಸುಬ್ರಹ್ಮಣ್ಯನು ಶಿವನಿಗೆ ಇಲ್ಲಿ ಪ್ರಣವ ಮಂತ್ರ ಅಂದರೆ ಓಂ ಪದದ ಅರ್ಥವನ್ನು ತಿಳಿಸುತ್ತಾನೆ.

ಗಣೇಶನು ಪಾರ್ವತಿಗೆ ಪ್ರಿಯ ಮಗನಾಗಿರುತ್ತಾನೆ. ಇದೇ ರೀತಿ ಶಿವನಿಗೆ ಸುಬ್ರಹ್ಮಣ್ಯೇಶ್ವರನು ಪ್ರೀತಿಯ ಮಗನಾಗಿರುತಾನೆ. ಸುಬ್ರಹ್ಮಣ್ಯೇಶ್ವರನು ಮುಂಗೋಪ ಹೊಂದಿರುತ್ತಾನೆ. ಒಮ್ಮೆ ಬ್ರಹ್ಮನು ಶಿವನನ್ನು ಕಾಣಲು ಕೈಲಾಸಕ್ಕೆ ಬರುತ್ತಾನೆ. ಆ ವೇಳೆಯಲ್ಲಿ ಕೈಲಾಸದ ದ್ವಾರದಲ್ಲಿಯೇ ಶ್ರೀ ಸುಬ್ರಹ್ಮಣ್ಯೇಶ್ವರನು ನಿಂತಿರುತ್ತಾನೆ. ಆದರೆ, ಬ್ರಹ್ಮನು ಅವನನ್ನು ನೋಡದಂತೆ ವರ್ತಿಸುತ್ತಾನೆ.

ಬ್ರಹ್ಮನಿಗೆ ಪಾಠ ಕಲಿಸಿದ ಬಾಲ ಸುಬ್ರಹ್ಮಣ್ಯ

ಸುಬ್ರಹ್ಮಣ್ಯೇಶ್ವರನಿಗೆ ಉತ್ತಮ ಮಂತ್ರಶಕ್ತಿ ಮತ್ತು ಜ್ಯೋತಿಷ್ಯ ವಿದ್ಯೆಯು ತಿಳಿದಿರುತ್ತದೆ. ಬ್ರಹ್ಮನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆದರೆ, ಅವಮಾನವನ್ನು ತಾಳದ ಸುಬ್ರಹ್ಮಣ್ಯೇಶ್ವರನು ಬ್ರಹ್ಮನನ್ನು ಕುರಿತು ನೀನು ಹೇಗೆ ಭೂಮಿಯ ಮೇಲೆ ಜೀವಿಗಳನ್ನು ಸೃಷ್ಟಿ ಮಾಡಿದೆ ಎಂದು ಕೇಳುತ್ತಾನೆ. ಆಗ ಬ್ರಹ್ಮನು ವೇದಗಳ ಸಹಾಯದಿಂದ ಜೀವಿಗಳ ಸೃಷ್ಟಿಯನ್ನು ಮಾಡಿದ್ದಾಗಿ ತಿಳಿಸುತ್ತಾನೆ. ಸುಬ್ರಹ್ಮಣ್ಯ ಸ್ವಾಮಿಗೆ ಸಮಾಧಾನವಾಗುವುದಿಲ್ಲ. ಬ್ರಹ್ಮನಲ್ಲಿ ವೇದಗಳ ಪಾರಾಯಣ ಮಾಡಲು ತಿಳಿಸುತ್ತಾನೆ.

ಆಗ ಬ್ರಹ್ಮನು ಮೊದಲು ಓಂಕಾರವನ್ನು ಉಚ್ಚಾರ ಮಾಡಿ ವೇದವನ್ನು ಪಠಿಸಲು ಆರಂಭಿಸುತ್ತಾನೆ.

ಸುಬ್ರಹ್ಮಣ್ಯೇಶ್ವರನು "ಮೊದಲು ನನಗೆ ಓಂ ಮಂತ್ರದ ಅರ್ಥವನ್ನು ತಿಳಿಸು" ಎಂದು ಕೇಳುತ್ತಾನೆ. ಬ್ರಹ್ಮನು ಓರ್ವ ಬಾಲಕನಿಂದ ಇಂತಹ ಪ್ರಶ್ನೆಯನ್ನು ನಿರೀಕ್ಷೆ ಮಾಡಿರುವುದಿಲ್ಲ. ಆಗ ಸುಬ್ರಹ್ಮಣ್ಯೇಶ್ವರನಿಗೆ ಓಂಕಾರದ ಮಹತ್ವವನ್ನು ತಿಳಿಸಲು ವಿಫಲನಾಗುತ್ತಾನೆ. ಇದರಿಂದ ವಿಚಲಿತನಾದ ಸುಬ್ರಹ್ಮಣ್ಯೇಶ್ವರನು ಕೋಪಗೊಂಡು ಬ್ರಹ್ಮನ ಹಣೆಯ ಮೇಲೆ ಬಲವಾಗಿ ಗುದ್ದುತ್ತಾನೆ. ತನ್ನ ಮಂತ್ರ ವಿದ್ಯೆಯಿಂದ ಬ್ರಹ್ಮನನ್ನು ಬಂಧಿಸಿ ಬಿಡುತ್ತಾನೆ. ಇದರಿಂದ ಸಕಲ ಲೋಕಗಳಲ್ಲಿಯೂ ಅಲ್ಲೂಲಕಲ್ಲೋಲವಾಗುತ್ತದೆ.

ಬ್ರಹ್ಮ ಲೋಕದಲ್ಲಿ ಬ್ರಹ್ಮನನ್ನು ಕಾಣಲು ಬಂದ ದೇವತೆಗಳಿಗೆ ಬ್ರಹ್ಮನಿರದೇ ಆಶ್ಚರ್ಯವಾಗುತ್ತದೆ. ಬ್ರಹ್ಮನು ಎಲ್ಲಿರುವನೆಂದು ತಿಳಿಯಲು ಸಹ ಸಾಧ್ಯವಾಗದೆ ಹೋಗುತ್ತಾರೆ. ಆದರೆ, ಸುಬ್ರಹ್ಮಣ್ಯ ಸ್ವಾಮಿಯು ಬ್ರಹ್ಮನು ಮಾಡುತ್ತಿದ್ದ ಕೆಲಸವನ್ನು ತಾನೇ ಮಾಡಲು ಆರಂಭಿಸುತ್ತಾನೆ. ಅಂದರೆ, ಸೃಷ್ಠಿಯ ಕಾಯಕವನ್ನು ಆರಂಭಿಸುತ್ತಾನೆ.

ಆಶ್ಚರ್ಯಗೊಂಡ ದೇವತೆಗಳಿಗೆ ಪರಿಸ್ಥಿತಿಯ ನಿಜ ಸ್ವರೂಪ ಅರ್ಥವಾಗುತ್ತದೆ. ಆಗ ಸುಬ್ರಹ್ಮಣ್ಯ ಸ್ವಾಮಿಗೆ ಬ್ರಹ್ಮನನ್ನು ಬಿಡುಗಡೆಗೊಳಿಸಲು ಕೇಳುತ್ತಾರೆ. ಆದರೆ ಸ್ವಾಭಿಮಾನಿಯಾದ ಸುಬ್ರಮಣ್ಯನು ಬ್ರಹ್ಮನನ್ನು ಬಿಡುಗಡೆ ಮಾಡುವುದಿಲ್ಲ. ವಿಧಿ ಇಲ್ಲದೆ ದೇವತೆಗಳು ವೈಕುಂಠಕ್ಕೆ ತರಲಿ ಭಗವಾನ್ ವಿಷ್ಣುವಿನ ಸಹಾಯವನ್ನು ಕೇಳುತ್ತಾರೆ. ಆದರೆ ಸುಬ್ರಹ್ಮಣ್ಯ ವಿಷ್ಣುವಿನ ಬೇಡಿಕೆಯನ್ನು ಸಹ ತಿರಸ್ಕರಿಸುತ್ತಾನೆ. ಬೇರೆ ದಾರಿ ಇಲ್ಲದೆ ಎಲ್ಲರೂ ಶಿವನ ಬಳಿ ಬಂದು ಬ್ರಹ್ಮನನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಸುಬ್ರಹ್ಮಣ್ಯ ಸ್ವಾಮಿಗೆ ತಿಳಿಸುವಂತೆ ಕೇಳುತ್ತಾರೆ. ಆಗ ಶಿವನು ಎಲ್ಲರನ್ನೂ ಸಮಾಧಾನಗೊಳಿಸಿ ಬ್ರಹ್ಮನನ್ನು ಬಂಧನದಿಂದ ಬಿಡುಗಡೆ ಮಾಡಿಸುವೆನೆಂದು ತಿಳಿಸುತ್ತಾನೆ.

ಶಿವನಿಂದ ಮೆಚ್ಚುಗೆ ಪಡೆದ ಸುಬ್ರಹ್ಮಣ್ಯಸ್ವಾಮಿ

ಶಿವನು ಸುಬ್ರಹ್ಮಣ್ಯನಿಗೆ ಬ್ರಹ್ಮನನ್ನು ಬಂಧಮುಕ್ತಗೊಳಿಸಲು ಹೇಳುತ್ತಾನೆ. ಆದರೆ, ಕೋಪದಲ್ಲಿರುವ ಸುಬ್ರಹ್ಮಣ್ಯನು ಸಾಧ್ಯವಿಲ್ಲವೆಂದು ತಿಳಿಸುತ್ತಾನೆ. ಆಗ ಶಿವನು ಬುದ್ಧಿವಂತಿಕೆಯಿಂದ ಸುಬ್ರಹ್ಮಣ್ಯನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುತ್ತಾನೆ. ಅವನನ್ನು ರಮಿಸಿ ಪ್ರೀತಿಯಿಂದ ಬ್ರಹ್ಮನನ್ನು ಬಿಡುವಂತೆ ಕೇಳುತ್ತಾನೆ. ಆಗ ಸುಬ್ರಹ್ಮಣ್ಯನು ಜೀವಿಗಳನ್ನು ಸೃಷ್ಟಿಸುವ ಬ್ರಹ್ಮನಿಗೆ ಓಂಕಾರದ ಮಂತ್ರದ ಅರ್ಥವೇ ತಿಳಿದಿಲ್ಲ. ಆದ್ದರಿಂದ, ಅವನು ನಾನು ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸುತ್ತಾನೆ. ಸಹನೆ ಕಳೆದುಕೊಂಡ ಶಿವನು ಹಾಗಾದರೆ ನಿನಗೆ ಓಂಕಾರದ ಮಹತ್ವ ತಿಳಿದಿದೆಯೇ ಎಂದು ಕೇಳುತ್ತಾನೆ. ಆಗ ಸಂತೋಷಗೊಂಡ ಸುಬ್ರಹ್ಮಣ್ಯನು ತನ್ನ ಮುದ್ದು ನುಡಿಗಳಿಂದ ತನಗೆ ಜನ್ಮ ನೀಡಿದ ಶಿವನಿಗೆ ಓಂಕಾರದ ಮಹತ್ವವನ್ನು ವಿವರಿಸುತ್ತಾನೆ. ಈ ಪ್ರಸಂಗ ನಡೆದದ್ದು ಇದೇ ದೇವಾಲಯದಲ್ಲಿ ಎಂದು ತಿಳಿದು ಬರುತ್ತದೆ.

ಆದ್ದರಿಂದ, ಇಂದಿಗೂ ಇಲ್ಲಿ ಮೊದಲ ಪೂಜೆಯನ್ನು ಸಲ್ಲಿಸಿ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಆರಂಭಿಸುತ್ತಾರೆ. ಇಲ್ಲಿ ಪೂಜೆಯನ್ನು ಸಲ್ಲಿಸಿದ್ದಲ್ಲಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆಯೂ ಜನರಲ್ಲಿ ಇದೆ.

ಲೇಖನ: ಎಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.