ಆವೇಶಂ, ಪುಷ್ಪ 2 ಬಳಿಕ ಬಾಲಿವುಡ್‌ನತ್ತ ಫಹಾದ್ ಫಾಸಿಲ್; ಈಡಿಯಟ್ಸ್ ಆಫ್ ಇಸ್ತಾನ್‍ಬುಲ್‍ನಲ್ಲಿ ನಟಿಸ್ತಾರಂತೆ ಮಲಯಾಳಂ ನಟ
Dec 11, 2024 10:45 AM IST
ಬಾಲಿವುಡ್‌ನತ್ತ ಫಹಾದ್ ಫಾಸಿಲ್; ಈಡಿಯಟ್ಸ್ ಆಫ್ ಇಸ್ತಾನ್‍ಬುಲ್‍ನಲ್ಲಿ ನಟನೆ ಸಾಧ್ಯತೆ
- Fahadh Faasil: ಕಳೆದ 15 ವರ್ಷಗಳಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣದ ನಾಲ್ಕೂ ಭಾಷೆಗಳಲ್ಲಿ ನಟಿಸಿದ್ದಾರೆ. ಈಗ ಮೊದಲ ಬಾರಿಗೆ ಬಾಲಿವುಡ್‍ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಇಮ್ತಿಯಾಜ್ ಅಲಿ ನಿರ್ದೇಶನದ ಹೊಸ ಚಿತ್ರದ ಮೂಲಕ ಅವರು ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರಂತೆ. (ವರದಿ: ಚೇತನ್ ನಾಡಿಗೇರ್)
ಬೆಂಗಳೂರು: ಕಳೆದ 15 ವರ್ಷಗಳಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣದ ನಾಲ್ಕೂ ಭಾಷೆಗಳಲ್ಲಿ ನಟಿಸಿದ್ದಾರೆ. ಈಗ ಅವರು ಮೊದಲ ಬಾರಿಗೆ ಬಾಲಿವುಡ್‍ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.
ಈ ವರ್ಷ ‘ಆವೇಶಂ’, ‘ಪುಷ್ಪ 2’ ಮುಂತಾದ ಯಶಸ್ವಿ ಚಿತ್ರಗಳ ಭಾಗವಾಗುವುದರ ಜೊತೆಗೆ, ತಮ್ಮ ವಿಶಿಷ್ಟ ಅಭಿನಯದಿಂದ ಗಮನಸೆಳೆದಿರುವ ಫಹಾದ್ ಫಾಸಿಲ್, ಇದೀಗ ಬಾಲಿವುಡ್‍ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತತಿದೆ. ಈ ಹಿಂದೆ ‘ಜಬ್ ವೀ ಮೆಟ್’ ಮುಂತಾದ ಹಿಟ್ ಚಿತ್ರಗಳನ್ನು ನೀಡಿರುವ ಇಮ್ತಿಯಾಜ್ ಅಲಿ ನಿರ್ದೇಶನದ ಹೊಸ ಚಿತ್ರದ ಮೂಲಕ ಅವರು ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರಂತೆ.
ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ದಿಲ್ಜಿತ್ ಸಿಂಗ್ ದೊಸಾಂಜ್ ಮತ್ತು ಪರಿಣಿತಿ ಚೋಪ್ರಾ ಅಭಿನಯದ ‘ಅಮರ್ ಸಿಂಗ್ ಚಮ್ಕೀಲಾ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಇಮ್ತಿಯಾಜ್, ಇದೀಗ ‘ಈಡಿಯಟ್ಸ್ ಆಫ್ ಇಸ್ತಾನ್‍ಬುಲ್’ ಎಂಬ ಚಿತ್ರ ಮಾಡುವುದಕ್ಕೆ ಹೊರಟಿದ್ದಾರಂತೆ. ಈ ಚಿತ್ರದ ಮೂಲಕ ಫಹಾದ್ ಅವರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸುವುದು ಇಮ್ತಿಯಾಜ್ ಯೋಚನೆ.
‘ಈಡಿಯಟ್ಸ್ ಆಫ್ ಇಸ್ತಾನ್‍ಬುಲ್’ ಒಂದು ರೊಮ್ಯಾಂಟಿಕ್ ಕಾಮಿಡಿಯಾಗಿದ್ದು, ಎರಡು ಪ್ರಮುಖ ಪಾತ್ರಗಳು ಇಸ್ತಾನ್‍ಬುಲ್ ನಗರಕಕ್ಕೆ ಹೋದಾಗ ಏನೆಲ್ಲಾ ಆಗುತ್ತದೆ ಎಂಬುದನ್‍ನು ತಮಾಷೆಯಾಗಿ ತೋರಿಸಲಾಗುತ್ತದಂತೆ. ಈಗಾಗಲೇ ಫಹಾದ್ ಮತ್ತು ಇಮ್ತಿಯಾಜ್ ನಡುವೆ ಮಾತುಕತೆ ನಡೆದಿದ್ದು, ಚಿತ್ರದಲ್ಲೂ ನಟಿಸುವುದಕ್ಕೆ ಫಹಾದ್ ಒಪ್ಪಿದ್ದಾರೆ ಮತ್ತು 2025ರ ಆರಂಭದಲ್ಲಿ ಚಿತ್ರದ ಕೆಲಸಗಳು ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಫಹಾದ್ ಜೊತೆಗೆ ಇನ್ನೊಂದು ಪ್ರಮುಖ ಪಾತ್ರದಲ್ಲಿ ‘ಅನಿಮಲ್’ ಖ್ಯಾತಿಯ ತೃಪ್ತಿ ದಿಮ್ರಿ ಸಹ ನಟಿಸುತ್ತಿದ್ದಾರೆ. ‘ಅನಿಮಲ್’ನಿಂದ ಜನಪ್ರಿಯತೆ ಪಡೆದುಕೊಂಡ ತೃಪ್ತಿ, ಇತ್ತೀಚೆಗೆ ಬಿಡುಗಡೆಯಾದ ‘ಭೂಲ್ ಬುಲಯ್ಯ’ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದ ಯಶಸ್ಸಿನಿಂದ ಅವರು ಬೇಡಿಕೆಯ ನಟಿಯಾಗಿದ್ದಾರೆ. ‘ಭೂಲ್ ಬುಲಯ್ಯ’ ಅಲ್ಲದೆ, ‘ವಿಕ್ಕಿ ವಿದ್ಯಾ ಕಾ ವೋ ವಾಲ ವೀಡಿಯೋ’ ಎಂಬ ಚಿತ್ರದಲ್ಲೂ ಅವರು ನಟಿಸಿದ್ದು, ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ಫಹಾದ್ ಜೊತೆಗೆ ತೆರೆ ಹಂಚಿಕೊಳ್ಳುವುದಕ್ಕೆ ತಯಾರಾಗಿದ್ದಾರೆ ವಿದ್ಯಾ.
ಈ ಮಧ್ಯೆ, ‘ಪುಷ್ಪ 2’ ಚಿತ್ರದಲ್ಲಿನ ಫಹಾದ್ ಫಾಸಿಲ್ ಪಾತ್ರದ ಮೂಲಕ ಕ್ಷತ್ರಿಯರಿಗೆ ಅವಮಾನ ಮಾಡಲಾಗಿದೆ ಎಂದು ಕರ್ಣಿ ಸೇನಾ ಆರೋಪಿಸಿದ್ದು, ಶೇಖಾವತ್ ಎಂಬ ಪದವನ್ನು ತೆಗೆಯದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸೇನೆಯ ಅಧ್ಯಕ್ಷ ರಾಜ್ ಶೇಖಾವತ್ ಎಚ್ಚರಿಸಿದ್ದಾರೆ.
- ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: ಉಡುಪಿ ಅಷ್ಟಮಿಗೆ ರಂಗು ತಂದ ಆವೇಶಂ ರಂಗ: ಫಹಾದ್ ಫಾಸಿಲ್ ಅಭಿಮಾನಿಗಳಿಗೆ ಖುಷಿಯೋ ಖುಷಿ, ಉಂದು ಕರಾವಳಿ ಬ್ರೋ