Vinod Raj: ಪದೇಪದೆ ನನ್ನ ಹುಟ್ಟಿನ ಮೂಲ ಕೆದಕಬೇಡಿ! ಅಪ್ಪ ಯಾರು ಎಂಬ ಬಗ್ಗೆ ಕೇಳಿದ್ದಕ್ಕೆ ವಿನೋದ್ ರಾಜ್ ಕೊಟ್ಟ ಉತ್ತರವಿದು
Nov 24, 2024 11:03 AM IST
ಅಪ್ಪ ಯಾರು ಎಂಬ ಬಗ್ಗೆ ಕೇಳಿದ್ದಕ್ಕೆ ವಿನೋದ್ ರಾಜ್ ಕೊಟ್ಟ ಉತ್ತರವಿದು
- Vinod Raj about his Birth: ನಟ, ಲೀಲಾವತಿ ಪುತ್ರ ವಿನೋದ್ ರಾಜ್ ಮತ್ತೆ ತಮ್ಮ ಹುಟ್ಟಿನ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಳೆ ವರ್ಷವಷ್ಟೇ ಈ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈಗ ಮತ್ತೆ ಈ ಬಗ್ಗೆ ಪ್ರಶ್ನೆ ಎದುರಾದಾಗ, ಹುಟ್ಟಿನ ವಿಚಾರ ಕೆದಕಬೇಡಿ ಎಂದಿದ್ದಾರೆ.
Vinod Raj: ಲೀಲಾವತಿ ಪುತ್ರ ವಿನೋದ್ ರಾಜ್, ಸದ್ಯ ಬೆಂಗಳೂರು ಹೊರ ವಲಯದ ನೆಲಮಂಗಲದ ಬಳಿಯ ಸೋಲದೇವನಹಳ್ಳಿಯಲ್ಲಿ ವಾಸವಿದ್ದಾರೆ. ನಟನೆಯಿಂದ ದೂರವಿದ್ದರೂ, ಚಿತ್ರೋದ್ಯಮಕ್ಕೆ ಹತ್ತಿರದಲ್ಲಿದ್ದಾರೆ. ಆಗಾಗ ಸಿನಿಮಾರಂಗದ ಆಪ್ತರ ಜತೆ ಭೇಟಿ, ಮಾತುಕತೆಗಳೂ ನಡೆಯುತ್ತಿರುತ್ತವೆ. ಈ ನಡುವೆ, ಸುಮ್ಮನಿದ್ದರೂ ಕಾಂಟ್ರವರ್ಸಿಗಳ ವಿಚಾರದಲ್ಲಿಯೂ ಸುದ್ದಿಯಾಗುತ್ತಿರುತ್ತಾರೆ ವಿನೋದ್ ರಾಜ್. ಕಳೆದ ವರ್ಷವಷ್ಟೇ ತಮ್ಮ ಹುಟ್ಟಿನ ವಿಚಾರ ದೊಡ್ಡ ಸದ್ದು ಮಾಡಿತ್ತು. ಅದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದರು ವಿನೋದ್ ರಾಜ್. ಈಗ ಮತ್ತೆ ಆ ಮೂಲದ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ದೊಡ್ಡೋವ್ರ ಬಗ್ಗೆ ವಿನೋದ್ ರಾಜ್ ಹೇಳಿದ್ದೇನು?
ದಿವಂಗತ ನಟಿ ಲೀಲಾವತಿ ಅವರ ಮನೆಯಲ್ಲಿ ವಿನೋದ್ ರಾಜ್ ಅವರನ್ನು ಕಂಕುಳಲ್ಲಿ ಕೂರಿಸಿಕೊಂಡ ರಾಜ್‌ಕುಮಾರ್ ಚಿತ್ರವಿದೆ. ಆ ಚಿತ್ರ ನೋಡಿದ ವಿನೋದ್ ಕುಮಾರ್, "ನಮ್ಮ ದೊಡ್ಡೋವ್ರು" ಎಂದಿದ್ದಾರೆ. ಮುಂದುವರಿದು ಜನ ಮಾತನಾಡಿಕೊಳ್ಳುವ ರೀತಿಗೂ, ಮೂಲ ಕೆದಕುವ ಅವರ ಕುತೂಹಲದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. "ಕಾಂಟ್ರವರ್ಸಿಗೆಲ್ಲ ಕಿವಿಗೊಡಲ್ಲ. ಜನ ಏನಾದ್ರೂ ಕಾಮೆಂಟ್ ಮಾಡಿಕೊಳ್ಳಲಿ, ನಾವು ಕಾಮೆಂಟ್ ಮಾಡಲ್ಲ" ಎಂದಿದ್ದಾರೆ.
ಜನ ಕೆದಕುತ್ತಾರೆ, ನಾನು ಕಿವಿಗೊಡಲ್ಲ
ಸೋಷಿಯಲ್ ಮೀಡಿಯಾದಲ್ಲಿ ಆಗಾಗ ನಟ ವಿನೋದ್ ರಾಜ್ ಅವರ ತಂದೆ ಯಾರು, ಹಿರಿಯ ನಟಿ ಲೀಲಾವತಿ ಅವರ ಪತಿ ಯಾರು ಎಂಬಿತ್ಯಾದಿ ವಿಚಾರಗಳು ಮುನ್ನೆಲೆಗೆ ಬರುತ್ತಿರುತ್ತವೆ. ಈ ಬಗ್ಗೆ ಸಾಕಷ್ಟು ಬಾರಿ ವಿನೋದ್ ರಾಜ್ ಹೇಳಿಕೊಂಡಿದ್ದಿದೆ. ಈಗ ಮತ್ತೊಮ್ಮೆ ಮಾತನಾಡಿದ್ದಾರೆ. "ನಾವು ಏನು ಯೋಚನೆ ಮಾಡ್ತಿದ್ದೇವೆ ಎಂದರೆ, ನಾನು ಯಾರು ಅನ್ನೋದಕ್ಕಿಂತ ನಾನು ಏನು ಅನ್ನೋದು ಮುಖ್ಯ. ಇವತ್ತು ನಾನು ಏನು ಮಾಡ್ತಿದ್ದೇನೆ. ಈ ಭೂಮಿ ಮೇಲೆ ನಾನ್ಯಾಕೆ ಬಂದೆ ಅನ್ನೋದು ಮುಖ್ಯ. ಹೀಗುವಾಗ ಈ ಭೂಮಿಗೆ, ಈ ಜನತೆಗೆ ಏನು ಕೊಟ್ಟು ಹೋದೆ ಅನ್ನೋದು ಮುಖ್ಯ. ನಮ್ಮ ಅಮ್ಮ ಏನು ಕೊಟ್ಟು ಹೋದ್ರು ಅನ್ನೋದು ನನಗೆ ಮುಖ್ಯ. ಆದ್ರೆ ಜನ ಕೆದಕುತ್ತಾರೆ. ಅವೆಲ್ಲದಕ್ಕೂ ಉತ್ತರ ಕೊಡಲು ಸಾಧ್ಯ ಇಲ್ಲ" ಎಂದಿದ್ದಾರೆ.
ಹುಟ್ಟಿನ ಮೂಲ ಹುಡುಕಬೇಡಿ..
"ನಮ್ಮ ನಡುವೆ ಸಾಕಷ್ಟು ಜಾತಿಗಳಿವೆ. ಎಲ್ಲರೂ ಅವರವರ ಮೂಲ ಹುಡುಕಿಕೊಂಡು ಹೋದರೆ, ಯಾರೂ ಉದ್ಧಾರ ಆಗೋಕೆ ಆಗಲ್ಲ. ಎಲ್ಲ ಜಾತಿಗಳಲ್ಲೂ ತಪ್ಪಿದೆ. ಏರುಪೇರುಗಳಿವೆ, ಅಲ್ಲೋಲ ಕಲ್ಲೋಲಗಳಿವೆ. ಒಬ್ಬರನ್ನ ನೋಡಿ, ಅವರತ್ರ ಇಲ್ಲದನ್ನ ನಾವು ತಗೊಳೋ ಸ್ಥಿತಿ ಬಂದಿದೆ. ಕೊನೆಗೆ ಯಾರ ಪಾದ ಸೇರಲು ಹೋಗ್ತಿದ್ದೇವೆ. ಆ ಗೋವಿಂದನ ಪಾದ, ಇಲ್ಲ ಅಲ್ಲಾಹುನ ಪಾದ, ಇಲ್ಲ ಯೇಸು ಪಾದ.. ನಮಗ್ಯಾರೋ ಅಲ್ಲಿಗೇ ನಾವು ಸೇರುತ್ತೇವೆ. ನಾವು ಕುಡಿಯಲು ಹೋಗುವುದು ಆ ನೀರನ್ನು ಮಾತ್ರ, ಮೂಲ ಹುಡುಕಬಾರದು. ಋಷಿ ಮೂಲ, ನದಿ ಮೂಲ ಯಾರೂ ಕೇಳಬಾರದು. ಅದು ತಪ್ಪು" ಎಂದು ಪರೋಕ್ಷವಾಗಿ ತಮ್ಮ ಹುಟ್ಟಿನ ಮೂಲ ಹುಡುಕಬೇಡಿ" ಎಂದು ಕಲಾಮಾಧ್ಯಮ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಮ್ಮನ ಸ್ಮಾರಕ ಸರ್ಕಾರಕ್ಕೆ ಹಸ್ತಾಂತರ
ಸೋಲದೇವನಹಳ್ಳಿಯ ಮನೆಯ ಬಳಿ ಅಮ್ಮ ಲೀಲಾವತಿ ಅವರ ಸ್ಮಾರಕ ನಿರ್ಮಿಸಿದ್ದಾರೆ ವಿನೋದ್ ರಾಜ್. ಸರ್ಕಾರದ ನೆರವು ಬಯಸದೇ, ತಮ್ಮದೇ ಖರ್ಚಿನಲ್ಲಿ ಅದನ್ನು ನಿರ್ಮಿಸಿದ್ದಾರೆ. ಈ ಬಗ್ಗೆಯೂ ಮಾತನಾಡಿದ ಅವರು, ನನ್ನ ಕಾಲದ ವರೆಗೂ ಅದನ್ನು ಸಂಪೂರ್ಣವಾಗಿ ನಡೆಸುತ್ತೇನೆ. ಮುಂದೊಂದು ದಿನ ಈ ಸ್ಮಾರಕ ನಿರ್ವಹಣೆ ನನ್ನ ಕೈಯಿಂದ ಆಗದಿದ್ದರೆ, ನಾನಿಲ್ಲದ ಮೇಲೆಯೂ ಇದು ಚೆನ್ನಾಗಿರಬೇಕು. ಹಾಗಾಗಿ ಸರ್ಕಾರಕ್ಕೆ ಹಸ್ತಾಂತರಿಸುವ ಪ್ಲಾನ್ ಇದೆ. ಈ ಸ್ಮಾರಕ ನಿರ್ವಹಣೆಗೆ ಎಷ್ಟು ಖರ್ಚಾಗಬಹುದೋ ಅದಿಷ್ಟನ್ನು ನಾನು ಕೊಟ್ಟೇ ಹೋಗುವೆ. ಸರ್ಕಾರದ ದುಡ್ಡು ನಮಗೆ ಬೇಡ ಎಂದೂ ಹೇಳಿದ್ದಾರೆ.