Salaar Booking: ಕರ್ನಾಟಕದಲ್ಲಿ ಸಲಾರ್ ಸಿನಿಮಾ ಟಿಕೆಟ್ ಬುಕ್ಕಿಂಗ್ ಇಂದಿನಿಂದ ಆರಂಭ; ಹೊಂಬಾಳೆ ಫಿಲ್ಮ್ಸ್‌ನಿಂದ ಪ್ರಕಟಣೆ
Dec 15, 2023 02:03 PM IST
Salaar Booking: ಕರ್ನಾಟಕದಲ್ಲಿ ಸಲಾರ್ ಸಿನಿಮಾ ಟಿಕೆಟ್ ಬುಕ್ಕಿಂಗ್ ಇಂದಿನಿಂದ ಆರಂಭ
- Salaar CeaseFire Bookings Open: ಮುಂದಿನ ವಾರ ಬಿಡುಗಡೆಯಾಗಲಿರುವ ಸಲಾರ್ ಕೇಸ್‌ಫೈರ್ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಇಂದಿನಿಂದಲೇ ಆರಂಭವಾಗಲಿದೆ. ಕರ್ನಾಟಕದಲ್ಲಿ ಬುಕ್ಕಿಂಗ್ ಓಪನ್, ಸೀಮಿತ ಪರದೆಗಳು ಮಾತ್ರ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.
ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ಮತ್ತು ಪ್ರಶಾಂತ್ ನೀಲ್ ಅವರ ಈ ವರ್ಷದ ಬಹುನಿರೀಕ್ಷಿತ ಚಿತ್ರ ಸಲಾರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ವಾರ ಬಿಡುಗಡೆಯಾಗಲಿರುವ ಸಲಾರ್ ಸಿನಿಮಾದ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ ಇಂದಿನಿಂದ ಆರಂಭವಾಗಲಿದೆ. "ಸಲಾರ್ ಕೇಸ್‌ಫೈರ್ ಕರ್ನಾಟಕ ಬುಕ್ಕಿಂಗ್ ಇಂದು ಸಂಜೆ 6.49 ಗಂಟೆಯಿಂದ ಆರಂಭ, ಸೀಮಿತ ಪರದೆಗಳಲ್ಲಿ ಮಾತ್ರ ಬುಕ್ಕಿಂಗ್‌ಗೆ ಅವಕಾಶ" ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ಈ ಮೂಲಕ ಇಂದಿನಿಂದಲೇ ಸಲಾರ್ ಹವಾ ಶುರುವಾಗುವ ಸೂಚನೆಯಿದೆ. ಸಾಕಷ್ಟು ಜನರು ಇಂದಿನಿಂದಲೇ ಟಿಕೆಟ್ ಬುಕ್ಕಿಂಗ್ ಮಾಡುವ ಸೂಚನೆಯಿದೆ. ಈ ಮೂಲಕ ಸಿನಿಮಾ ಬಿಡುಗಡೆಗೆ ಮುನ್ನವೇ ಹಲವು ಕೋಟಿ ರೂಪಾಯಿ ಗಳಿಕೆ ಮಾಡುವ ಸಾಧ್ಯತೆಯಿದೆ.
ಸದ್ಯ ಸಲಾರ್ ಸಿನಿಮಾ ಟಿಕೆಟ್ ಕರ್ನಾಟಕದಲ್ಲಿ ಇಂದಿನಿಂದ ಬುಕ್ಕಿಂಗ್ ಆರಂಭವಾಗಲಿದೆ. ಈ ಸುದ್ದಿ ಬರೆಯುವ ಸಮಯದವರೆಗೆ ಬೇರೆ ರಾಜ್ಯಗಳಲ್ಲಿ ಬುಕ್ಕಿಂಗ್ ಓಪನ್ ಎಂದು ಹೊಂಬಾಳೆ ಫಿಲ್ಮ್ಸ್ ಯಾವುದೇ ಪ್ರಕಟಣೆ ಹೊರಡಿಸಿರಲಿಲ್ಲ. ಈ ಮೂಲಕ ಈ ಸಿನಿಮಾದ ಟಿಕೆಟ್ ಬುಕ್ಕಿಂಗ್ ಕರ್ನಾಟಕದಿಂದಲೇ ಆರಂಭವಾಗುವ ಸಾಧ್ಯತೆಯಿದೆ. ಈಗಾಗಲೇ ಕೆಜಿಎಫ್, ಕಾಂತಾರದಂತಹ ಭರ್ಜರಿ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಇದೀಗ ಸಲಾರ್ ಅದೃಷ್ಟವನ್ನು ಕರ್ನಾಟಕದಿಂದಲೇ ಆರಂಭಿಸುವಂತೆ ಕಾಣಿಸುತ್ತಿದೆ.
ಬುಕ್ಕಿಂಗ್ ಓಪನ್ ಪ್ರಕಟಣೆಗೆ ಸಾಕಷ್ಟು ಜನರು ಖುಷಿ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 22ರಂದು ಬಿಡುಗಡೆಯಾಗಲಿರುವ ಸಿನಿಮಾಕ್ಕೆ ಈಗಲೇ ಟಿಕೆಟ್ ಬುಕ್ಕಿಂಗ್ ಮಾಡಿ ಸೀಟು ಕಾದಿರಿಸಲು ಬಯಸಿರುವುದಾಗಿ ಸಾಕಷ್ಟು ಜನರು ಹೇಳಿದ್ದಾರೆ. ಒಟ್ಟಾರೆ. ಡಿಸೆಂಬರ್ 22, 23, 24ರಂದು ಬಹುತೇಕ ಎಲ್ಲಾ ಚಿತ್ರಮಂದಿರಗಳು ಹೌಸ್‌ಫುಲ್ ಆಗುವ ಸಾಧ್ಯತೆಯಿದೆ. ಇದೇ ಸಮಯದಲ್ಲಿ ಶಾರೂಖ್ ಖಾನ್ ಅವರ ಡಂಕಿ ಸಿನಿಮಾವು ಬಿಡುಗಡೆಯಾಗುತ್ತಿದೆ. ಈ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಇರಲಿದೆ.
ಹೊಂಬಾಳೆ ಫಿಲ್ಮ್ ನಿರ್ಮಾಣದ ಸಲಾರ್ ಸಿನಿಮಾ ಇದೇ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ. ಇತ್ತೀಚಿಗೆ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಆಕ್ಷನ್ ಇರುವ ಡ್ರಾಮಾಗಿದ್ದು, ಈ ಚಿತ್ರದಲ್ಲಿ ತೆಲುಗು ಮೂಲದ ಮಲಯಾಳಂ ನಟ ಪೃಥ್ವಿರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೃತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಲಾರ್ ಸಿನಿಮಾದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ಆಕಾಶ ಗಡಿಯ ದಾಟಿ ತಂದಾನೋ ಬೆಳಕು ಕೋಟಿ, ಭೂಮಿ ಕುಲಕ್ಕೆ ಕೇಳದೇನೆ ಜೀವ ಕೊಟ್ಟಂತೆ...., ಕಣ್ಣ ಕಾಯೋ ರೆಪ್ಪೆ ಅವನೇ ಕಾವಲಾದಂತೆ... ಎಂಬ ಹಾಡಿಗೆ ಅಭಿಮಾನಿಗಳು ಖುಷಿಪಟ್ಟಿದ್ದರು. ಈ ಹಾಡಿನ ಕನ್ನಡ ಲಿರಿಕ್ಸ್ ಅನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಈಗಾಗಲೇ ಪ್ರಕಟಿಸಿದೆ. ಇದನ್ನು ಓದಿ: ಹೃದಯ ನವಿರೇಳಿಸುವ ಸಲಾರ್ ಸಿನಿಮಾದ ಮೊದಲ ಹಾಡು ಬಿಡುಗಡೆ; ಆಕಾಶ ಗಡಿಯ ದಾಟಿ ಹಾಡಿನ ಕನ್ನಡ ಲಿರಿಕ್ಸ್ ಇಲ್ಲಿದೆ ನೋಡಿ