ವೃತ್ತಿಯಲ್ಲಿ ಸೆಕ್ಯುರಿಟಿ ಗಾರ್ಡ್, ಪ್ರವೃತ್ತಿಯಲ್ಲಿ ಜೀವವೈವಿಧ್ಯದ ಮಾಹಿತಿ ಕಣಜ; ಬೆಂಗಳೂರಿನ ಐಐಎಸ್ಸಿಯಲ್ಲಿದ್ದ ಪೊನ್ನಣ್ಣರ ಪರಿಸರ ಸೇವೆ
Dec 18, 2024 05:27 PM IST
ಪರಿಸರ ಪ್ರೀತಿಯ ಪೊನ್ನಣ್ಣ ಜೇನುನೊಣಗಳೊಂದಿಗೆ
ಕೊಡಗು ಮೂಲದವರಾದರೂ ಸೇನೆಯಲ್ಲಿ ನಾನಾ ಕಡೆ ಕೆಲಸ ಮಾಡಿ ನಂತರ ಬೆಂಗಳೂರಿನ ಐಐಎಸ್ಸಿಗೆ ಸೆಕ್ಯುರಿಟಿ ಸಿಬ್ಬಂದಿಯಾಗಿ ಬಂದ ಪೊನ್ನಣ್ಣ ಅವರ ಪರಿಸರ ಜ್ಞಾನ ಅನಾವರಣಗೊಳ್ಳುವ ಅವಧಿ. ಈಗಲೂ ಅವರ ಅಪರಿಮಿತ ಜ್ಞಾನ, ಬದ್ದತೆ ಬಗ್ಗೆಯೇ ಗೌರವ. ಅವರ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಒಳ ಹೋಗುವ ಮುನ್ನ ಭದ್ರತಾ ಸಿಬ್ಬಂದಿಯನ್ನು ದಾಟಿಕೊಂಡು ಹೋಗಬೇಕು. ಹಾಗೆ ನೀವು ಐಐಎಎಸ್ಸಿಗೆ ಹೋದಾಗ ಇವರನ್ನು ನೋಡಿರಲೂಬಹುದು. ಐಐಎಎಸ್ಸಿ ಬೆಂಗಳೂರು ಕೇಂದ್ರದಲ್ಲಿ ಸೆಕ್ಯುರಿಟಿ ಗಾರ್ಡ್. ಭದ್ರತೆಯನ್ನು ಅಚ್ಚುಕಟ್ಟಾಗಿ ಮಾಡುವುದು ಇವರ ನಿಷ್ಠೆ. ಆದರೆ ಇವರನ್ನು ಮಾತಿಗೆ ಎಳೆದರೆ ನಿಮಗೆ ಬ್ರಹ್ಮಾಂಡವೇ ತೆರೆದುಕೊಳ್ಳುವಷ್ಟು ಜ್ಞಾನ ಭಂಡಾರ ಇವರಲ್ಲಿದೆ. ಅದರಲ್ಲೂ ಪರಿಸರ, ಪ್ರಾಣಿಗಳು, ಜೀವವೈವಿಧ್ಯ, ಹಾವು, ಜೇನು.. ಹೀಗೆ ಹಲವು ವಿಷಯಗಳಲ್ಲಿ ಆಳವಾದ ಹಾಗೂ ನಿಖರವಾದ ಜ್ಞಾನವಿದೆ.ಅವರ ಹೆಸರು ಕೆ.ಎ. ಪೊನ್ನಣ್ಣ. ತಮ್ಮ ಜ್ಞಾನದ ಮೂಲಕವೇ ಐಐಎಸ್ಸಿಯಲ್ಲಿ ಹಲವು ರೂಪದಲ್ಲಿ ಸಂಶೋಧಕರು, ಅಧ್ಯಾಪಕರು, ವಿದ್ಯಾರ್ಥಿಗಳಿಗೆ ನೆರವಾಗುವ ಇವರು ಪ್ರೀತಿಯ ಪೊನ್ನಣ್ಣ.
ಸೇನೆಯಿಂದ ಸೆಕ್ಯುರಿಟಿ ಕಡೆಗೆ
ಹೆಸರೇ ಸೂಚಿಸುವಂತೆ ಪೊನ್ನಣ್ಣ ಅವರು ಕೊಡಗು ಮೂಲದವರು. ಆದರೆ ಅವರು ಬದುಕು ಕೈ ಬೀಸಿ ಕರೆದಿದ್ದು ಭಾರತದ ನಾನಾ ಊರುಗಳಿಗೆ. ಎಲ್ಲಿ ಜೀವನ ನಡೆವುದೇ ಅದೇ ನಮ್ಮೂರು ಎನ್ನುವ ಹಾಡಿನಂತೆ. ಕೊಡಗು ಮೊದಲು ಜೀವವೈವಿಧ್ಯದ ಜಿಲ್ಲೆ. ಬದುಕು ಕೂಡ ಅಷ್ಟೇ ವೈವಿಧ್ಯಮಯ. ಹಾಗೆ ಪೊನ್ನಣ್ಣ ಅವರೂ ಕೂಡ ಸಣ್ಣ ವಯಸ್ಸಿನಲ್ಲಿಯೇ ಎಲ್ಲವನ್ನೂ ಆಸಕ್ತಿಯಿಂದ ಕಲಿಯುತ್ತಾ ಹೋದರು. ಕೆ ಎ ಪೊನ್ನಣ್ಣ, ಜೇನುನೋಣ, ಕಾಡು ಮೊಲಗಳು, ಸಿಂಹ ಬಾಲ ಸಿಂಗಳೀಕಗಳು, ಜಿಂಕೆ, ಕಣಜಗಳು, ಪಕ್ಷಿಗಳು ಸೇರಿ ಹಲವಾರು ಕೀಟ, ಇತರ ಪ್ರಾಣಿಗಳ ಕುರಿತು ಸಹಿತ ಅಲ್ಲಿನ ಪರಿಸರದ ಜೀವವೈವಿಧ್ಯದ ಕುರಿತು ಕುತೂಹಲ ಬೆಳೆಸಿಕೊಂಡು ಕಲಿತವರು ಸಹಬಾಳ್ವೆಯ ನಡುವೆ ಬೆಳೆದವರು.
ಕೊಡಗಿನ ಪ್ರತಿಯೊಬ್ಬ ಪೋಷಕರಂತೆ ತಮ್ಮ ಮಗನೂ ಸೇನೆ ಸೇರಬೇಕು ಎಂದು ಪೊನ್ನಣ್ಣರ ತಂದೆಯೂ ಕೂಡ ಬಯಸಿದರು. ಸೇನೆ ಸೇರುವುದೇ ಬದುಕಿನ ಧ್ಯೇಯ ಎನ್ನುವ ರೀತಿಯಲ್ಲಿ ಪೊನ್ನಣ್ಣ ಕೂಡ ಸೇರಿಕೊಂಡಿದ್ದು ಸೇನೆಯನ್ನೆ. ಭಾರತೀಯ ಸೇನೆಯ ತರಬೇತಿ ಸಂಸ್ಥೆಯಾದ ಸ್ಕೂಲ್ ಆಫ್ ಆರ್ಟಿಲರಿಯಲ್ಲಿ ಸಂವಹನ ಸಾಧನ ಕ್ಷೇತ್ರದಲ್ಲಿ ಸೇರಿಕೊಂಡ ಪೊನ್ನಣ್ಣ ವೃತ್ತಿ ಜೀವನ ಆರಂಭವಾಯಿತು. ಮೊದಲೇ ಪರಿಸರ ಕುತೂಹಲಿ ಪೊನ್ನಣ್ಣ ಅವರು ವಿವಿಧ ನಗರಗಳಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುವಾಗ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾ ಹೋದರು.
ಐಐಎಸ್ಸಿ ಸೇವೆಯ ಅವಕಾಶ
ಸೇನೆಗೆ ಸೇರುವಾಗ ಇದ್ದ ಒಪ್ಪಂದದಂತೆ ಪೊನ್ನಣ್ಣ ನಿವೃತ್ತಿ ಕೂಡ ಆದರು. ನಿವೃತ್ತಿ ನಂತರ ಸೇನೆಯಲ್ಲಿ ಕೆಲಸ ಮಾಡಿದವರಿಗೆ ಅವರ ರಾಜ್ಯ ಇಲ್ಲವೇ ಊರ ಕಡೆ ಕೆಲಸ ನೀಡಲಾಗುತ್ತದೆ. ಅದರಂತೆ ಪೊನ್ನಣ್ಣ ಅವರಿಗೆ ಸಿಕ್ಕಿದ್ದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನಲ್ಲಿ ಭದ್ರತಾ ಸಿಬ್ಬಂದಿ ಹುದ್ದೆ. ಅದು ನಾವಿನ್ಯತೆಗೆ ಹಾಗೂ ಸಂಶೋಧನೆಗೆ ಇಡೀ ವಿಶ್ವದಲ್ಲಿಯೇ ಹೆಸರಾದ ಸಂಸ್ಥೆ. ಭದ್ರತೆ, ಗೌಪ್ಯತೆಗೆ ಅಲ್ಲಿ ಇನ್ನಿಲ್ಲದ ಎಚ್ಚರ ಇದ್ದೇ ಇರುತ್ತದೆ.
ಪೊನ್ನಣ್ಣ ಅವರು ಐಐಎಸ್ಸಿ ಸೇರಿಕೊಂಡ ನಂತರ ಕ್ಯಾಂಪಸ್‌ನ ಜೈವಿಕ ಮಹತ್ವವನ್ನು ಅರಿಯಲು ಯತ್ನಿಸಿದ್ದರು. ಅಲ್ಲಿನ ಜೇನುಗಳು, ಪಕ್ಷಿ ಸಂಕುಲದ ಕುರಿತಾಗಿಯೂ ಖುದ್ದು ತಿಳಿದುಕೊಂಡಿದ್ದರು. ಒಮ್ಮೆ ಐಐಎಸ್ಸಿ ಸಹ ಪ್ರಾಧ್ಯಾಪಕರಾಗಿದ್ದ ರಾಘವೇಂದ್ರ ಗದಗಕರ್ ಅವರ ಪರಿಚಯ ಪೊನ್ನಣ್ಣ ಅವರಿಗೆ ಆಗಿದ್ದು ಅವರ ಅಲ್ಲಿನ ವೃತ್ತಿಗಿಂತ ಪ್ರವೃತ್ತಿಗೆ ಇನ್ನಿಲ್ಲದ ಮಹತ್ವ ಸಿಗಲು ದಾರಿಯಾಯಿತು. ಪೊನ್ನಣ್ಣ ಹಾಗೂ ರಾಘವೇಂದ್ರ ಅವರ ನಡುವಿನ ವಿಚಾರ ವಿನಿಮಯ ಪೊನ್ನಣ್ಣ ಅವರ ಅಗಾಧ ಜ್ಞಾನವನ್ನೂ ಅನಾವರಣಗೊಳಿಸಿತು. ಕೆಲವು ದಿನಗಳ ಇಬ್ಬರ ಒಡನಾಟ ಮುಂದುವರಿಯಿತು.
ಅಭಿಮಾನದ ನುಡಿಗಳು
ಪೊನ್ನಣ್ಣ ಅವರನ್ನು ಸೆಕ್ಯುರಿಟಿ ಗಾರ್ಡ್ ಮಾತ್ರ ಅಂದುಕೊಂಡಿದ್ದೆ. ಒಮ್ಮೆ ಮಾತಿಗೆ ಸಿಕ್ಕಾಗ ಅವರ ಜೈವಿಕ ಜ್ಞಾನದ ಮಹತ್ವ ಅರಿವಾಯಿತು. ಅವರು ಕ್ಯಾಂಪಸ್‌ನಲ್ಲಿ ಜೇನುಗೂಡುಗಳನ್ನು ರಕ್ಷಿಸಲು ಸಹಾಯ ಮಾಡಿದರು. ಅವರು ಜೇನುನೊಣಗಳ ಬದುಕು, ವಿಶೇಷತೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆಂಬುದು ನನ್ನ ಗಮನಕ್ಕೆ ಬಂದಿತು.. ನಮ್ಮ ಸಂಭಾಷಣೆಯು ತನ್ನ ಹುಟ್ಟೂರಿನಲ್ಲಿ ಜೇನುನೊಣಗಳು ಮತ್ತು ಕಣಜಗಳನ್ನು ನೋಡಿಕೊಂಡೇ ಪೊನ್ನಣ್ಣ ಬೆಳೆದವರು ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿತು ಎಂದು ಪೊನ್ನಣ್ಣರ ಕುರಿತು ರಾಘವೇಂದ್ರ ಹೇಳುತ್ತಾರೆ.
ಜೇನುಗಳ ಕುರಿತಾದ ತಮ್ಮ ಅನುಭವವನ್ನು ಪರಿಗಣಿಸಿ, ಅವುಗಳ ಸಂಶೋಧನೆಯಲ್ಲಿ ಸ್ವಯಂಸೇವಕರಾಗಲು ಅವಕಾಶ ಕೊಡಬೇಕೆಂದು ಪೊನ್ನಣ್ಣ ಕೇಳಿಕೊಳ್ಳುತ್ತಾರೆ.
ಆನಂತರ ಐಐಎಸ್ಸಿಯಲ್ಲಿ ಪೊನ್ನಣ್ಣ ವೃತ್ತಿಯೇ ಬದಲಾಗುತ್ತದೆ. ರಾಘವೇಂದ್ರ ಅವರು ಐಐಎಸ್ಸಿ ಪ್ರಮುಖರೊಂದಿಗೆ ಮಾತನಾಡಿ ಕ್ಷೇತ್ರ ಸಹಾಯಕ ಮತ್ತು ಜೇನುನೊಣಗಳ ಸಂರಕ್ಷಣಾಧಿಕಾರಿಯಾಗಿ ನಿಯೋಜಿಸುತ್ತಾರೆ. ಕೆಲಸದಲ್ಲಿ ಈ ಬದಲಾವಣೆಯಾದರೂ ಅಲ್ಲಿನ ದಾಖಲೆಗಳ ಪ್ರಕಾರ ಪೊನ್ನಣ್ಣ ಸೆಕ್ಯುರಿಟಿ ಗಾರ್ಡ್. ಆ ಹುದ್ದೆಗೆ ಮಾತ್ರ ಸಂಬಳವನ್ನು ಪಡೆಯುತ್ತಾರೆ. ಆ ಕೆಲಸ ನಿರ್ವಸಿಸುತ್ತಲೇ ಸೆಂಟರ್ ಫಾರ್ ಎಕೊಲಾಜಿಕಲ್ ಸೈನ್ಸ್ ವಿಭಾಗದಲ್ಲಿಯೂ ಸಮಯ ವ್ಯಯಿಸುತ್ತಾರೆ. ಬಳಿಕ ಪೊನ್ನಣ್ಣ ಹಲವಾರು ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳು, ದೇಶದ ನಾನಾ ಭಾಗಗಳಿಂದ ಬರುವ ಸಂಶೋಧನಾರ್ಥಿಗಳಿಗೂ ಮಾರ್ಗದರ್ಶನ ಮಾಡುತ್ತಾ ಹೋಗುತ್ತಾರೆ. ಇದೂ ಅಲ್ಲದೇ ಬೆಂಗಳೂರಿನಲ್ಲಿ ಜೇನು ನೊಣ ತೆಗೆಯುವಾಗಲೂ ಪೊನ್ನಣ್ಣ ಹಲವರಿಗೆ ನೆರವಾಗುತ್ತಾರೆ, ಹಾವುಗಳನ್ನು ಸಂರಕ್ಷಿಸುವುದರಲ್ಲೂ ಅವರು ಸಿದ್ದಹಸ್ತರು.
ಪೊನ್ನಣ್ಣ ಅವರು 2012 ರಲ್ಲಿ ಐಐಎಸ್ಸಿ ಭದ್ರತಾ ಸಿಬ್ಬಂದಿ ಹುದ್ದೆಯಿಂದಲೂ ನಿವೃತ್ತರಾಗಿರುತ್ತಾರೆ. ಜೇನುಗಳ ಬಗೆಗಿನ ಅವರ ಜ್ಞಾನ ಮತ್ತು ಆಸಕ್ತಿಯನ್ನು ಗುರ್ತಿಸಿ ಅವರನ್ನು ಸಲಹೆಗಾರರಾಗಿ ಮರು ನಿಯೋಜಿಸಲಾಗುತ್ತದೆ. ಅವರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದನ್ನು ಮುಂದುವರೆಸುತ್ತಾರೆ. ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಾ, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಸಹಾಯ ಮಾಡುತ್ತಾರೆ. ಇದಾದ ಬಳಿಕ 2018 ರಲ್ಲಿ ಅಲ್ಲಿಂದ ನಿವೃತ್ತರಾಗುತ್ತಾರೆ. ಹೀಗಿದ್ದರೂ ಅವರ ಜ್ಞಾನ ಹಂಚುವ ಅಭಿಮಾನದ ಪ್ರವೃತ್ತಿ ನಂತರವೂ ಮುಂದುವರಿಯುತ್ತದೆ.
ಕ್ಷೇತ್ರ ಕಾರ್ಯದ ಆಸಕ್ತಿ
ನಾನು ಜೇನುನೊಣಗಳ ವಿಧಗಳು, ವಿಷಕಾರಿ ಮತ್ತು ವಿಷಕಾರಿಯಲ್ಲದ ಕೀಟಗಳು, ಸರೀಸೃಪಗಳು ಮತ್ತು ಇತರ ಕಾಡು ಪ್ರಾಣಿಗಳನ್ನು ನಿರ್ದಿಷ್ಟವಾಗಿ ಗುರುತಿಸುತ್ತೇನೆ. ನನ್ನ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಅವರ ಸಂಶೋಧನೆಯಲ್ಲಿ ನೆರವಾಗುವಂತೆ ಮಾಡಿದ್ದೇನೆ. ಜೇನುನೊಣಗಳು ಮತ್ತು ಕಣಜಗಳ ಬಗ್ಗೆ ಕ್ಷೇತ್ರ ಅಧ್ಯಯನ ಮಾಡುವ ಸಮಯದಲ್ಲಿ ಅವರೊಂದಿಗೆ ಹೋಗುತ್ತೇನೆ. ಲ್ಯಾಬ್‌ನಲ್ಲಿ ಪ್ರಯೋಗಗಳನ್ನು ಮಾಡುವುದರ ಹೊರತಾಗಿ, ವಿದ್ಯಾರ್ಥಿಗಳು ಅವರು ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವುದನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿರಬೇಕು. ವಿಷಯಗಳ ಬಗ್ಗೆ ಉತ್ಸಾಹ ಮತ್ತು ಸೂಕ್ಷ್ಮತೆಯು ಮಾತ್ರ ಅದನ್ನು ಸಾಧಿಸಲು ಸಹಾಯ ಮಾಡುತ್ತದೆ ಎನ್ನುವುದು ಪೊನ್ನಣ್ಣರ ಪ್ರೀತಿಯ ನುಡಿ.