Forest Tales: ಆನೆ ಖೆಡ್ಡಾಕ್ಕೆ ಹೊಸತನ, ಪುಸ್ತಕದಲ್ಲಿ ಕನ್ನಡಾಭಿಮಾನ: ಇದು ಒಂದೂವರೆ ಶತಮಾನದ ಹಿಂದಿನ ಇಂಗ್ಲೆಂಡ್‌ ನಿಸರ್ಗವಾದಿ ಕಥನ
ಕನ್ನಡ ಸುದ್ದಿ  /  ಜೀವನಶೈಲಿ  /  Forest Tales: ಆನೆ ಖೆಡ್ಡಾಕ್ಕೆ ಹೊಸತನ, ಪುಸ್ತಕದಲ್ಲಿ ಕನ್ನಡಾಭಿಮಾನ: ಇದು ಒಂದೂವರೆ ಶತಮಾನದ ಹಿಂದಿನ ಇಂಗ್ಲೆಂಡ್‌ ನಿಸರ್ಗವಾದಿ ಕಥನ

Forest Tales: ಆನೆ ಖೆಡ್ಡಾಕ್ಕೆ ಹೊಸತನ, ಪುಸ್ತಕದಲ್ಲಿ ಕನ್ನಡಾಭಿಮಾನ: ಇದು ಒಂದೂವರೆ ಶತಮಾನದ ಹಿಂದಿನ ಇಂಗ್ಲೆಂಡ್‌ ನಿಸರ್ಗವಾದಿ ಕಥನ

Khedda expert George Sanderson ಕರ್ನಾಟಕದ ಆನೆ ಖೆಡ್ಡಾ ವಿಶ್ವ ಪ್ರಸಿದ್ದಿ. ಇದನ್ನು ರೂಪಿಸಿದವರು ಇಂಗ್ಲೆಂಡ್‌ನ ಜಾರ್ಜ್‌ ಸ್ಯಾಂಡರ್‌ಸನ್‌(George Peress Sanderson). ಮೈಸೂರು ಭಾಗದಲ್ಲಿಯೇ ಇದ್ದು ಅವರು ಕಟ್ಟಿಕೊಟ್ಟ ಕಾಡಿನ ಕಥನ, ಅದರಲ್ಲಿ ಬಳಸಿದ ಕನ್ನಡದ ಪದಗಳ ಅರ್ಥ ಒಂದೂವರೆ ಶತಮಾನದ ಹಿಂದಿನ ಆ ದಿನಗಳನ್ನು ನೆನಪಿಸುತ್ತದೆ.

ಕರ್ನಾಟಕ ಕಾಡಿನ ಕುರಿತು ಬರೆದ ಪುಸ್ತಕ, ಅಲ್ಲಿ ಬಳಸಿದ ಕನ್ನಡ ಪದಗಳ ಅರ್ಥವಿವರಣೆ, ಖೆಡ್ಡಾ ಕಾರ್ಯಾಚರಣೆಗೆ ಹೊಸ ರೂಪ ನೀಡಿದ ಜಾರ್ಜ್‌ ಸ್ಯಾಂಡರ್‌ಸನ್‌.
ಕರ್ನಾಟಕ ಕಾಡಿನ ಕುರಿತು ಬರೆದ ಪುಸ್ತಕ, ಅಲ್ಲಿ ಬಳಸಿದ ಕನ್ನಡ ಪದಗಳ ಅರ್ಥವಿವರಣೆ, ಖೆಡ್ಡಾ ಕಾರ್ಯಾಚರಣೆಗೆ ಹೊಸ ರೂಪ ನೀಡಿದ ಜಾರ್ಜ್‌ ಸ್ಯಾಂಡರ್‌ಸನ್‌.

ಅವರ ಮೂಲ ದೂರದ ಇಂಗ್ಲೆಂಡ್‌, ಹುಟ್ಟಿದ್ದು ಮದ್ರಾಸ್‌. ಬದುಕು ಹೆಚ್ಚು ಸವೆಸಿದ್ದು ಮೈಸೂರು ಸುತ್ತಮುತ್ತ ಕಾಡಿನಲ್ಲಿ. ಅದೂ ಹುಣಸೂರು, ಮೈಸೂರು, ಚಾಮರಾಜನಗರ. ಮೊದಲು ಕಾಫಿ ಎಸ್ಟೇಟ್‌ ಅಧಿಕಾರಿ, ನಂತರ ಸರ್ವೇ ಅಧಿಕಾರಿ. ಆನಂತರ ನೀರಾವರಿ ಮೇಲುಸ್ತುವಾರಿ ಅಧಿಕಾರಿ. ಈ ವೇಳೆ ಆರ್ಕಷಿಸಿದ ಕಾಡು ಮತ್ತು ವನ್ಯಜೀವಿಗಳು. ಅದೇ ಗುಂಗು ಹಾಗೂ ಹುಚ್ಚಿನಲ್ಲಿ ಭಾರತದಲ್ಲಿ ಆನೆಗಳನ್ನು ಖೆಡ್ಡಾದಡಿ ಸೆರೆ ಹಿಡಿಯಬಲ್ಲ ಹೊಸ ಮಾರ್ಗ ತೋರಿಸಿಕೊಟ್ಟ ನಿಸರ್ಗವಾದಿ. ಇವೆಲ್ಲದರ ಜತೆಗೆ ಕಾಡಿನ ಅನುಭವಗಳನ್ನಾಧರಿಸಿ ಬರೆದ ಕೃತಿಯಲ್ಲಿ ಕನ್ನಡಾರ್ಥದ ಪದಗಳನ್ನು ಬಳಸಿ ಜಗತ್ತಿಗೆ ಕನ್ನಡವನ್ನು ಪರಿಚಯಿಸಿದವರು.

ಇದೆಲ್ಲಾ ನಡೆದದ್ದು ದಶಕದ ಹಿಂದೆ ಅಲ್ಲ. ಒಂದೂವರೆ ಶತಮಾನದ ಹಿಂದೆ. ಅಂದರೆ 1865 ರಿಂದ 1890ರವರೆಗೆ. ಹುಟ್ಟಿದ್ದು ಎಲ್ಲೋ, ಬೆಳೆದದ್ದು ಇನ್ನೆಲ್ಲೋ, ಆದರೆ ಕರ್ನಾಟಕದ ವನ್ಯಜೀವಿಗಳ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ ಈ ನಿಸರ್ಗವಾದಿ ಜಾರ್ಜ್‌ ಸ್ಯಾಂಡರ್ಸನ್‌. ಅವರ ಹೆಸರು ಹಲವು ಕಾರಣಕ್ಕೆ ಈಗಲೂ ಅಜರಾಮರ.

ಜಾರ್ಜ್‌ ಪೆರೆಸ್‌ ಸಾಂಡರ್ಸನ್‌(George Peress Sanderson) ಅವರು ಜನಿಸಿದ್ದು 1848ರ ಮೇ 5ರಂದು ತಮಿಳುನಾಡಿನ ಮದ್ರಾಸ್‌ನಲ್ಲಿ. ಅವರ ತಂದೆ ಕ್ರೈಸ್ತ ಮಿಷನರಿಗಳಲ್ಲಿ ಕೆಲಸ ಮಾಡುತ್ತಿದ್ದವರು. ಮಗ ಚೆನ್ನಾಗಿ ಓದಲೆಂದು ತಂದೆ ತಮ್ಮ ದೇಶ ಕುಂಬ್ರಿಯಾಕ್ಕೆ ಕಳುಹಿಸಿದರು. ಆಗ ಹನ್ನೊಂದು ವರ್ಷದ ಜಾರ್ಜ್‌ಗೆ ಭಾರತಕ್ಕೆ ಬರುವ ಮನಸು.

ನಾಲ್ಕು ವರ್ಷ ಹಾಗೂ ಹೀಗೂ ಓದಿ ಭಾರತಕ್ಕೆ ಮರಳಿಯೇ ಬಿಟ್ಟರು. ಇಲ್ಲಿಯೇ ಶಿಕ್ಷಣ ಪಡೆದ ಜಾರ್ಜ್‌ಗೆ ಮೈಸೂರಿನ ಬಗ್ಗೆ ಆಸಕ್ತಿಯಿತ್ತು.

ಸ್ನೇಹಿತರೊಬ್ಬರು ಕಾಫಿ ಎಸ್ಟೇಟ್‌ನಲ್ಲಿ ಕೆಲಸಕ್ಕೆ ಕಳುಹಿಸಿಕೊಟ್ಟರು. ಆದರೆ ಆ ಕೆಲಸ ಅವರಿಗೆ ಬಹಳ ದಿನ ಉಳಿಯಲೇ ಇಲ್ಲ. ಮೈಸೂರು ಭಾಗಕ್ಕೆ ಬಂದಿದ್ದ ಜಾರ್ಜ್‌ ಸ್ಯಾಂಡರಸನ್‌ ಇಲ್ಲಿಯೇ ಉಳಿಯುವ ನಿರ್ಧಾರವನ್ನು ತೆಗೆದುಕೊಂಡು ಬಿಟ್ಟರು. ಸರ್ವೇ ಇಲಾಖೆಯಲ್ಲಿ ಕೆಲಸವೇನೋ ಸಿಕ್ಕಿತು. ಆಗಲೇ ಹಳ್ಳಿಗಳಿಗೆ ಹೋಗಬೇಕಾಗಿದ್ದರಿಂದ ಕನ್ನಡವನ್ನು ಕಲಿಯುವ ಪ್ರಯತ್ನವನ್ನು ಜಾರ್ಜ್‌ ಮಾಡಿದರು. ಬಳಿಕ ಆಗಿನ ಬ್ರಿಟೀಷ್‌ ಆಡಳಿತದಲ್ಲಿ ನೀರಾವರಿ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ಇದು ನೀರಾವರಿ ಇಲಾಖೆಯ ನಾಲೆಗಳ ಮೇಲೆ ಸುತ್ತು ಹಾಕುವ ನೀರುಗಂಟಿ ಕೆಲಸ. ಅಂದರೆ ನಾಲೆಗಳ ಅಧೀಕ್ಷಕನಾಗಿ ಹುಣಸೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಉಸ್ತುವಾರಿ. ಅದು ಒಂದು ಸಾವಿರ ಕಿ.ಮಿ.ಗೂ ಉದ್ದದ ನಾಲೆಗಳ ನಿರ್ವಹಣೆ ನೋಡಿಕೊಳ್ಳುವ ಹೊಣೆ. ಆಗ ಕಾಡಿನ ಸುತ್ತಮುತ್ತಲೂ ಇದ್ದ ನಾಲೆಗಳತ್ತಲೂ ಜಾರ್ಜ್‌ ಹೋಗುತ್ತಿದ್ದರು. ಆ ಅವರಿಗೆ ಕಾಡಾನೆ, ಕಾಡೆಮ್ಮೆ, ಹುಲಿ, ಕರಡಿ, ಸಹಿತ ಹತ್ತಾರು ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ಯಾರಿಗೆ ಆಗಲಿ ಕಾಡಿನ ಸಖ್ಯ ಒಮ್ಮೆ ಬೆಳೆದರೆ ಅದನ್ನು ಬಿಡುವುದು ಕಷ್ಟವೇ. ಅದು ಜಾರ್ಜ್‌ ವಿಷಯದಲ್ಲೂ ನಿಜವಾಗಿತ್ತು. ನೂರ ಐವತ್ತು ವರ್ಷದ ಹಿಂದಿನ ನಿಜಕ್ಕೂ ಗಜಗಾತ್ರದ ಆನೆಗಳು, ಆಳೆತ್ತರದ ಕಾಡೆಮ್ಮೆಗಳು. ಮೈ ಜುಮ್ಮೆನಿಸುವ ಹುಲಿಗಳನ್ನು ಪದೇ ಪದೇ ನೋಡುತ್ತಲೇ ಇದ್ದರು ಜಾರ್ಜ್‌. ಆನೆಗಳ ಹಿಂಡು ಕಂಡಾಗ ಅವುಗಳನ್ನು ಸೆರೆ ಹಿಡಿಯಬೇಕು ಎನ್ನುವುದನು ಮನಸಿನಲ್ಲಿ ಬಂದಿತು. ನೀರಾವರಿ ಇಲಾಖೆ ಹುದ್ದೆ ತೊರೆದು ಸಂಪೂರ್ಣ ಕಾಡಿನತ್ತಲೇ ತಮ್ಮನ್ನು ತೊಡಗಿಸಿಕೊಂಡು ಬಿಟ್ಟರು. 1875ರ ಕಾಲ. 29 ಹರೆಯದ ಜಾರ್ಜ್‌. ಆಗ ದೂರದ ಬಾಂಗ್ಲಾ ಸೇರಿದ್ದ ಬಂಗಾಳದಲ್ಲಿ ಕೆಲಸ. ಅದೂ ಕಾಡಿನಲ್ಲಿ ಆನೆ ಹಿಡಿಯುವ ತಂಡದ ಉಸ್ತುವಾರಿ. ತಾತ್ಕಾಲಿಕ ಕೆಲಸವಾದರೂ ಜವಾಬ್ದಾರಿಯಿತ್ತು. ಅಲ್ಲಿಸ್ವಲ್ಪೇ ಅವಧಿಯಲ್ಲಿ 85 ಆನೆಗಳನ್ನು ಹಿಡಿಯುವಲ್ಲಿ ಸ್ಯಾಂಡರ್‌ಸನ್‌ ಯಶಸ್ವಿಯಾದರು. ಬಂಗಾಳದಲ್ಲಿದ್ದರೂ ಅವರ ಮನಸು ಮೈಸೂರು ಹಾಗೂ ಇಲ್ಲಿನ ಕಾಡಿನ ಮೇಲೆಯೇ ಇತ್ತು. ವಾಪಾಸ್‌ ಬರುವ ಗಟ್ಟಿ ತೀರ್ಮಾನ ಕೈಗೊಂಡೇ ಬಿಟ್ಟರು. ಮೈಸೂರಿಗೆ ಬಂದವರು ಕಾಡನ್ನು ಎಡಬಿಡದೇ ಸುತ್ತಿದರು. ಆಗಿನ ಆನೆ ಸೆರೆ ಕಾರ್ಯಾಚರಣೆ ಅಧ್ಯಯನವನ್ನೂ ಮಾಡಿದರು. ಆಗ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರನ್ನು ಬೇಟಿಯಾಗಿ ಆನೆಗಳ ಸೆರೆ ಕಾರ್ಯಾಚರಣೆ, ಕಾಡಲ್ಲೇ ಅವುಗಳಿಗೆ ಬಗೆಬಗೆಯ ಆಹಾರ ಬೆಳೆಯುವುದು ಸೇರಿ ಹಲವು ರೀತಿಯಲ್ಲಿ ಸಲಹೆಗಳನ್ನು ನೀಡಿ ಖೆಡ್ಡಾ ಕಾರ್ಯಾಚರಣೆ ಬದಲಿಸುವಂತೆ ಹೇಳಿದರು. ಇದಕ್ಕೆ ಮಹಾರಾಜರ ಒಪ್ಪಿಗೆಯೂ ಸಿಕ್ಕಿತ್ತು. ಆನಂತರವೇ ನಾಗರಹೊಳೆಯ ಕಾಡಿನಲ್ಲಿ ಖೆಡ್ಡಾ ಕಾರ್ಯಾಚರಣೆ ಶುರುವಾಗಿದ್ದು. ಅಂದರೆ ಆನೆಗಳನ್ನು ಗುಂಡಿಗೆ ಬೀಳಿಸಿ ಅಲ್ಲಿಯೇ ಪಳಗಿಸುವುದು ಇದಾಗಿತ್ತು. ಈ ಭಾಗದ ಬೇಟೆಗಳು, ಚಿರತೆ, ಕರಡಿ ಸಹಿತ ಬೇರೆ ಬೇರೆ ಪ್ರಾಣಿಗಳ ಸಂತತಿ, ಜನರ ಒಡನಾಟದೊಂದಿಗೆ ಸ್ಯಾಂಡರ್‌ ಸನ್‌ ಅವರು ಕಂಡು ಕೇಳಿದ ಅನುಭವವೇ ಅವರನ್ನು ಈ ಕ್ಷೇತ್ರದಲ್ಲಿ ತಜ್ಞರನ್ನಾಗಿ ಮಾಡಿತ್ತು. ಈಗಿನ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗಬೆಟ್ಟದ ದಟ್ಟವಾದ ಅರಣ್ಯದಲ್ಲಿ ಸ್ಯಾಂಡರ್‌ ಸನ್‌ ಸುತ್ತದ ಸ್ಥಳವಿಲ್ಲ. ತಿಳಿಯದ ವಿಷಯವೇ ಇಲ್ಲ ಎನ್ನುವಂತೆ. ಈಗಿನ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತಲ ಪ್ರದೇಶಕ್ಕೆ ಮಾರುಹೋಗಿ ಬೆಟ್ಟದ ತಪ್ಪಲಿನ ಮೊರ್ಲೆಯಲ್ಲಿ ಹೆಚ್ಚು ಕಾಲ ನೆಲೆಸಿದರು.

ಅದು 1879ರ ವರ್ಷ. ಹದಿಮೂರು ವರ್ಷ ಅವರದ್ದು ಕಾಡಬದುಕು. ಅದನ್ನು ದಾಖಲಿಸಲು ತೀರ್ಮಾನಿಸಿದರು ಸ್ಯಾಂಡರ್‌ಸನ್‌. ಆಗಲೇ ಹೊರ ಬಂದಿದ್ದು ಭಾರತದ ಕಾಡು ಮೃಗಗಳ ನಡುವೆ ಹದಿಮೂರು ವರ್ಷಗಳು(Thirteen years among the wild beasts of India) ಎನ್ನುವ ಕೃತಿ ರಚನೆಗೆ ಮುಂದಾದರು. ಆಗಾಗ ದಾಖಲಿಸಿಕೊಂಡು ಬಂದಿದ್ದ ಕಾಡು, ವನ್ಯಜೀವಿಗಳು, ಬೇಟೆ, ಜನರ ಭಾವನೆಗಳು, ಕಾಡಿನ ಸಂಸ್ಕೃತಿ, ಮೈಸೂರು ಅರಣ್ಯದ ಮಹತ್ವ, ಸಂಪ್ರದಾಯಗಳು, ಆನೆ ಖೆಡ್ಡಾ ಕಾರ್ಯಾಚರಣೆ, ಪಳಗಿಸುವ ವಿಧಾನ.. ಹೀಗೆ ಅದು ಸುಧೀರ್ಘ ನಾಲ್ಕು ನೂರು ಪುಟಗಳ ಪುಸ್ತಕ. ಆ ಪುಸ್ತಕದಲ್ಲಿ ಅವರು ಕಾಡಿಗೆ ಸಂಬಂಧಿಸಿ ಬಳಸಿರುವ ಎಲ್ಲಾ ಪದಗಳನ್ನು ಕನ್ನಡೀಕರಣ ಮಾಡಿದ್ಧಾರೆ. ಅಂದರೆ ಆ ಪದಗಳಿಗೆ ಕನ್ನಡದಲ್ಲಿಯೇ ಅರ್ಥ ನೀಡುವ ಪ್ರಯತ್ನ ಮಾಡಿದ್ದಾರೆ. ಹುಲಿ, ಆನೆ, ಚಿರತೆ, ಕರಡಿ, ದೊಡ್ಡ, ಚಿಕ್ಕ, ಹೀಗೆ ಎರಡು ನೂರಕ್ಕೂ ಅಧಿಕ ಕನ್ನಡ ಪದಗಳು ಆ ಪುಸ್ತಕದಲ್ಲಿವೆ. ಬಿಳಿಗಿರಿರಂಗನಬೆಟ್ಟ ಸುತ್ತಮುತ್ತಲಿನ ದಟ್ಟ ಅನುಭವವನ್ನೂ ಅಷ್ಟೇ ವಿಸ್ತೃತವಾಗಿ ದಾಖಲಿಸಿದ್ದಾರೆ. ಇಲ್ಲಿಯೂ ಬಿಳಿಗಿರಿ ರಂಗನ ಬೆಟ್ಟದ ಕುರಿತಾದ ಪದಗಳನ್ನು ಕನ್ನಡ ಅರ್ಥದಲ್ಲಿಯೇ ನೀಡಿದ್ದಾರೆ.

ಆ ಪುಸ್ತಕವೂ ಅಷ್ಟೇ ರೋಚಕ ಕಥೆಗಳ ಗುಚ್ಛದಂತೆಯೇ ಕಾಣುತ್ತದೆ. ಕಾಡು ಪ್ರಾಣಿಗಳು ಹಾಗೂ ಬೇಟೆಯ ರೋಚಕತೆ ಕುರಿತು ಜಿಮ್‌ ಕಾರ್ಬೆಟ್‌, ಕೆನೆಥ್‌ ಅಂಡರಸನ್‌ ಕಥಾನಕಗಳು ಜನಪ್ರಿಯವಾಗಿವೆ. ಅಷ್ಟೇ ಆಳವಾದ, ರೋಚಕವಾದ ಕಥಾನಕಗಳನ್ನು ಸ್ಯಾಂಡರ್ಸನ್‌ ದಾಖಲಿಸಿದ್ದಾರೆ.

ಅದು 1889. ಮೈಸೂರಿನ ಅತಿಥಿಯಾಗಿ ಆಗಮಿಸಿದ್ದ ಪ್ರಿನ್ಸ್‌ ಆರ್ಲರ್ಟ್‌ ವಿಕ್ಟರ್‌ ಅವರಿಗೆ ಖುದ್ದು ಎತ್ತಿನ ಗಾಡಿಯಲ್ಲಿಯೇ ಕರೆದೊಯ್ದು ಖೆಡ್ಡಾವನ್ನು ತೋರಿಸಿದ್ದರು. ಅವರ ಬಂದ ನೆನಪಿಗೆ ನಡೆಸಿದ್ದ ಖೆಡ್ಡಾ ಕೂಡ ಜನಪ್ರಿಯವಾಗಿದೆ. ಆಗ ಮೈಸೂರಿನ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕೂಡ ಪ್ರಿನ್ಸ್‌ ಜತೆಗಿದ್ದರು. ಆಗ ಮಾಧ್ಯಮಗಳು ಸ್ಯಾಂಡರ್ಸನ್‌ ಅವರನ್ನು ಆನೆಗಳ ರಾಜಾ( ಹಾಥಿ ಕಾ ರಾಜಾ) ಎಂದು ಬಿಂಬಿಸಿದ್ದವು.

ಕಾಡನ್ನೇ ಬದುಕು ಮಾಡಿಕೊಂಡಿದ್ದ ಸ್ಯಾಂಡರ್ಸನ್‌ಗೆ 1891ರಲ್ಲಿ ಮದುವೆಯೂ ಆಯಿತು. ಇದಾದ ಕೆಲವೇ ದಿನಗಳಲ್ಲಿ ಅನಾರೋಗ್ಯಕ್ಕೆ ಸ್ಯಾಂಡರ್ಸನ್‌ ಸಿಲುಕಿದರು. ಇಂಗ್ಲೆಂಡ್‌ಗೆ ರಜೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಬರಲು ಯೋಜಿಸಿದ್ದರು. ಆದರೆ ಅಗು ಆಗಲೇ ಇಲ್ಲ. ಅದಕ್ಕೂ ಮೊದಲೇ ಚೆನ್ನೈನ ತಮ್ಮ ಸಂಬಂಧಿಕರ ಮನೆಯಲ್ಲಿ ಸ್ಯಾಂಡರ್ಸನ್‌ ಮೃತಪಟ್ಟರು.

ಸ್ಯಾಂಡರ್ಸನ್‌ ಭಾರತದಲ್ಲಿ ಕಾಡಾನೆಗಳ ಸೆರೆಗೆ ದಿಕ್ಕು ತೋರಿದ ದಿಟ್ಟ ನಿಸರ್ಗವಾದಿ ಎಂದು ಜಂಗಲ್‌ ಬುಕ್‌ನಲ್ಲೂ ದಾಖಲಿಸಲಾಗಿದೆ. ರುಡಯಾರ್ಡ್‌ ಕಿಪ್ಲಿಂಗ್‌ ತಮ್ಮ ತೂಮೈ ಎನ್ನುವ ಚಿತ್ರದಲ್ಲೂ ಜಾರ್ಜ್‌ ಸ್ಯಾಂಡರ್ಸನ್‌ ಅವರ ಉಲ್ಲೇಖ ಮಾಡಿದ್ದಾರೆ. ಹಿರಿಯ ಅರಣ್ಯಾಧಿಕಾರಿ ಬಸಪ್ಪನವರ್‌ ತಮ್ಮ ಗಜಗಾಮಿನಿ ಪುಸ್ತಕದಲ್ಲಿ ಸ್ಯಾಂಡರ್‌ಸನ್‌ ಸಾಹಸಗಳನ್ನು ಉಲ್ಲೇಖಿಸಿದ್ದಾರೆ.

ಆಗಲೇ ಕಾಡಿನ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಮೈಸೂರು ಕಾಡನ್ನು ತಿಳಿದು ಇಲ್ಲಿನ ಮಹತ್ವವನ್ನು ತಮ್ಮ ಪುಸ್ತಕದ ಮೂಲಕ ಸಾರಿದ್ದಾರೆ ಸ್ಯಾಂಡರ್ಸನ್‌. ಅದರಲ್ಲೂ ಮೈಸೂರು ಖೆಡ್ಡಾ ಎಂದರೆ ಈಗಲೂ ಜಗದ್ವಿಖ್ಯಾತಿ. ಖೆಡ್ಡಾವನ್ನು ಆರಂಭಿಸಲು ಮೈಸೂರು ಮಹಾರಾಜರನ್ನು ಪ್ರೇರೇಪಿಸಿ ಅದಕ್ಕೆ ರೂಪ ನೀಡಿದ ಸ್ಯಾಂಡರ್ಸನ್‌ ಸಾಹಸವನ್ನು ಮೆಚ್ಚಲೇಬೇಕು. ಇದರ ಜತೆಗೆ ಆತನ ಬಗ್ಗೆ ಅಭಿಮಾನ ಹುಟ್ಟುವುದು ಕನ್ನಡ ಪದಗಳ ಬಳಕೆಗೆ. ಪುಸ್ತಕದಲ್ಲಿ ಕನ್ನಡದ ಪದಗಳನ್ನು ಇಂಗ್ಲೀಷ್‌ನಲ್ಲಿಯೇ ಬಳಸಿ ವಿವರಣೆ ನೀಡುವುದು ನಿಜಕ್ಕೂ ಮೈಸೂರು ಬಗ್ಗೆ ಇದ್ದ ಅಭಿಮಾನವನ್ನು ತೋರಿಸುತ್ತದೆ ಎಂದು ಸ್ಯಾಂಡರ್ಸ್‌ನ್‌ ಬಗ್ಗೆ ಅಧ್ಯಯನ ಮಾಡುತ್ತಲೇ ಕಾಡು, ಪ್ರಾಣಿ, ಪಕ್ಷಿ, ಪರಿಸರದ ಕುರಿತು ಸಾಕಷ್ಟು ಲೇಖನಗಳನ್ನು ಬರೆದಿರುವ ಮೈಸೂರಿನ ಪತ್ರಕರ್ತ ಗುರುಪ್ರಸಾದ್‌ ತುಂಬಸೋಗೆ ಹೇಳುತ್ತಾರೆ.

ಗುರುಪ್ರಸಾದ್‌ ಅಭಿಪ್ರಾಯ ನಿಜವೂ ಹೌದು. ಮೈಸೂರಿನ ಕಾಡಿನ ನೆನಪುಗಳು ಹಾಗೂ ಕನ್ನಡದ ಪ್ರೀತಿಯೊಂದಿಗೆ ಹಸಿರಾಗಿದ್ಧಾರೆ ಸ್ಯಾಂಡರ್ಸನ್‌. ಅದೂ ಕನ್ನಡ ರಾಜ್ಯೋತ್ಸವ ಸಮಯದಲ್ಲಾದರೂ ಅವರನ್ನೊಮ್ಮೆ ಅಭಿಮಾನದಿಂದ ನೆನೆಯೋಣ.

-ಕುಂದೂರು ಉಮೇಶಭಟ್ಟ

(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್​ ಮಾಡಬಹುದು.)

=================

Whats_app_banner