ಕನ್ನಡ ಸುದ್ದಿ  /  ಕರ್ನಾಟಕ  /  Forest Tales: ಮಂಗನ ಕಾಯಿಲೆಗೆ ಬರಲಿಲ್ಲ ಸೂಕ್ತ ಲಸಿಕೆ, ಮಲೆನಾಡಿಗರ ಭೀತಿಗಿಲ್ಲ ಕೊನೆ; ಇನ್ನೆಷ್ಟು ದಿನ ಕಾಯೋಣ ಸ್ವಾಮಿ

Forest Tales: ಮಂಗನ ಕಾಯಿಲೆಗೆ ಬರಲಿಲ್ಲ ಸೂಕ್ತ ಲಸಿಕೆ, ಮಲೆನಾಡಿಗರ ಭೀತಿಗಿಲ್ಲ ಕೊನೆ; ಇನ್ನೆಷ್ಟು ದಿನ ಕಾಯೋಣ ಸ್ವಾಮಿ

ಮಂಗನ ಕಾಯಿಲೆ ಮಲೆನಾಡು ಜನರಿಗೆ ಅಪರಿಚಿತ ಪದವಲ್ಲ. ಬಹುಕಾಲದಿಂದ ಕಾಡುತ್ತಿರುವ ಈ ಕಾಯಿಲೆಗೆ ಸೂಕ್ತ ಲಸಿಕೆ ಕಂಡುಹಿಡಿಯಲು ಈವರೆಗೆ ಆಗಿಲ್ಲ. ಜನರನ್ನು ಆವರಿಸಿರುವ ಭೀತಿ ಮತ್ತು ಆಗಬೇಕಿರುವ ಕೆಲಸಗಳ ಬೆಳಕು ಚೆಲ್ಲುವ ಪ್ರಯತ್ನ ಈ ಬರಹದಲ್ಲಿದೆ.

ಶಿವಮೊಗ್ಗ ಸಹಿತ ಕರ್ನಾಟಕದ ಕೆಲ ಜಿಲ್ಲೆಗಳನ್ನು ಕಾಡುತ್ತಿರುವ ಮಂಗನ ಕಾಯಿಲೆ.
ಶಿವಮೊಗ್ಗ ಸಹಿತ ಕರ್ನಾಟಕದ ಕೆಲ ಜಿಲ್ಲೆಗಳನ್ನು ಕಾಡುತ್ತಿರುವ ಮಂಗನ ಕಾಯಿಲೆ.

Kyasanur Forest disease (KFD): ಮಲೆನಾಡು, ಕರಾವಳಿಗೆ ಹೊಂದಿಕೊಂಡ ಜಿಲ್ಲೆಗಳ ಜನರಿಗೆ ಅರಣ್ಯವಾಸವೇ ನೈಜ ಬದುಕು. ಕಷ್ಟವೋ ಸುಖವೋ ಅವರಿಗೆ ಅರಣ್ಯ ವಾಸದ ಸುಖವೇ ಬೇಕು. ಇಲ್ಲದಿದ್ದರೆ ಆಗದು. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಮೈಸೂರು, ಚಾಮರಾಜನಗರ ಜಿಲ್ಲೆಯ ಪಶ್ಚಿಮ ಘಟ್ಟದ ಸೆರಗಿನಲ್ಲಿ ಶತಮಾನಗಳಿಂದ ನೆಲೆಸಿರುವ ಜನರಿಗೆ ಇಂದಿಗೂ ಕಾಡೇ ಆಸರೆ. ಅದೇ ಎಲ್ಲವೂ. ಈ ಭಾಗದಲ್ಲಿ ಕಾಡುತ್ತಿರುವ ಮಂಗನ ಕಾಯಿಲೆ ಮಾತ್ರ ಆಗಾಗ ಮನೆ ಬಿಡುವಂತೆ ಮಾಡಿ ಬಿಡುತ್ತದೆ. ಕಾಡಿನ ಸೆಳೆತ, ಮನೆಯ ಆಕರ್ಷಣೆ ಮತ್ತೆ ಅಲ್ಲಿ ಕರೆ ತಂದು ಬಿಡುತ್ತದೆ.

ಟ್ರೆಂಡಿಂಗ್​ ಸುದ್ದಿ

'ಮೂರು ವರ್ಷದಿಂದ ಮಂಗನ ಕಾಯಿಲೆ ಭೀತಿ ಇದ್ದರೂ ಯಾರೂ ಮೃತಪಟ್ಟಿರಲಿಲ್ಲ. ಆರೋಗ್ಯ ಇಲಾಖೆ ನೀಡುವ ಯಾವುದೋ ಲಸಿಕೆಯನ್ನು ಪಡೆದು ಹೆಂಗೋ ಬದುಕ್ತಾ ಇದ್ದೀವಿ. ಯಾರಾದರೂ ಮಂಗನ ಕಾಯಿಲೆಗೆ ಸತ್ತರೂ ಅಂದ್ರೆ ನಮಗೂ ಭಯ ಶುರುವಾಗುತ್ತದೆ. ಹಿಂದೆಲ್ಲಾ ಮನೆ-ಮಠ ಬಿಟ್ಟು ಹೋಗಿ ಅನುಭವಿಸಿದ್ದು ಸಾಕಾಗಿದೆ. ಬದುಕು ಯಾಕಪ್ಪ ಅನ್ನಿಸುವಷ್ಟರ ಮಟ್ಟಿಗೆ ಇದು ನಮ್ಮನ್ನು ಕಾಡುತ್ತಲೇ ಇದೆ. ಕರ್ನಾಟಕದ ಏಳೆಂಟು ಜಿಲ್ಲೆಗಳ ಅರಣ್ಯ ಭಾಗದ ಜನರನ್ನು ಕಾಡುತ್ತಿರುವ ಮಂಗನ ಕಾಯಿಲೆಗೆ ಒಂದು ಲಸಿಕೆ ಕಂಡು ಹಿಡಿಯಿರಿ. ನಮ್ಮ ಜೀವ ಉಳಿಸಿರಿ' ಎನ್ನುವ ಮಾತು ಮಂಗನ ಕಾಯಿಲೆ ಭೀತಿ ಇರುವ ಊರಿಗೆ ಹೋದರೆ ಕೇಳಿಸುತ್ತದೆ.

ಇಂತಹ ಆತಂಕದ ನುಡಿಗಳು ಕೇಳಿ ಬರುವುದು ಸಾಮಾನ್ಯ. ಕ್ಯಾಸನೂರು ಅರಣ್ಯ ಕಾಯಿಲೆ ಎಂದೇ ಕರೆಯುವ ಮಂಗನ ಕಾಯಿಲೆ ಭೀತಿ ಬರೀ ಶಿವಮೊಗ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಅಕ್ಕಪಕ್ಕದ ಜಿಲ್ಲೆಗಳ ಅರಣ್ಯ ಪ್ರದೇಶದ ಜನರನ್ನು ಇದು ಕಾಡುತ್ತಿದೆ. ಉತ್ತರಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಉಡುಪಿ, ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲೂ ಮಂಗನ ಕಾಯಿಲೆ ಭಯ ಇದ್ದೇ ಇರುತ್ತದೆ. ಮೂರು ವರ್ಷ ಕಾಲ ಮಂಗನ ಕಾಯಿಲೆ ಭಯ ಇರಲಿಲ್ಲ.

ಅಕ್ಟೋಬರ್‌ನಿಂದ ಆತಂಕ ಶುರು

ಮಂಗನ ಕಾಯಿಲೆ ಅಥವಾ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಋತು ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಆರಂಭವಾಗುತ್ತದೆ. ಆನಂತರ ಸೋಂಕಿತರ ಸಂಖ್ಯೆ ಹೆಚ್ಚಿ ಸಾವು ಸಂಭವಿಸುತ್ತದೆ. ಜನ ಊರು ಬಿಡಲು ಶುರು ಮಾಡುತ್ತಾರೆ. ಮೂರ್ನಾಲ್ಕು ವರ್ಷದಿಂದ ಕೊಂಚ ಕಡಿಮೆಯಾಗಿದ್ದ ಆತಂಕ ಈ ಬಾರಿ ಯುವತಿಯೊಬ್ಬಳ ಸಾವಿನ ಬಳಿಕ ಮತ್ತೆ ಶುರುವಾಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ 1957ರಲ್ಲಿ ಮೊದಲ ಬಾರಿಗೆ ಈ ಕಾಯಿಲೆ ಪತ್ತೆಯಾಗಿದ್ದು ಮಂಗನ ಕಾಯಿಲೆ. ಸತ್ತ ಮಂಗದ ದೇಹದಲ್ಲಿದ್ದ ಚಿಗಟಗಳು ಮನುಷ್ಯನಿಗೆ ಕಡಿದರೆ ಅವರಿಗೆ ಮಂಗನಕಾಯಿಲೆ ಹರಡುತ್ತದೆ ಎನ್ನುವುದು ಹಿಂದಿನಿಂದಲೂ ತಿಳಿದಿರುವ ಅಂಶ. ಕೋತಿಯಲ್ಲಿ ಮೊದಲು ಈ ವೈರಸ್ ಪತ್ತೆಯಾದ್ದರಿಂದ ಮಂಗನ ಕಾಯಿಲೆ ಎಂದೇ ಇದಕ್ಕ ಹೆಸರು ಬಂದಿದೆ. ಅದು ನಿಜವೂ ಕೂಡ.

ಶಿವಮೊಗ್ಗದಿಂದ ಉತ್ತರ ಕನ್ನಡಕ್ಕೆ

1957 ರಲ್ಲಿ ಶಿವಮೊಗ್ಗ ಜಿಲ್ಲೆಗೆ ಸೀಮೀತವಾಗಿದ್ದ ಕಾಯಿಲೆ 1972ರ ಹೊತ್ತಿಗೆ ಉತ್ತರ ಕನ್ನಡಕ್ಕೆ ಲಗ್ಗೆ ಇಟ್ಟತು, 1990ರಲ್ಲಿ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದಲ್ಲಿ ಸೋಂಕು ಪತ್ತೆಯಾದವು. 2012ರ ಹೊತ್ತಿಗೆ ಚಾಮರಾಜನಗರದಲ್ಲಿ ಕೆಎಫ್‌ಡಿ ಪ್ರಕರಣ ಪತ್ತೆಯಾದರೆ 2018ರಲ್ಲಿ ಬೆಳಗಾವಿ, ಗದಗ, 2021ರ ಹೊತ್ತಿಗೆ ಹಾಸನ, ಮೈಸೂರಿನಲ್ಲಿಯೂ ಸೋಂಕು ಇರುವುದು ಕಂಡು ಬಂದು ಇದು ಏಳೆಂಟು ಜಿಲ್ಲೆಗೆ ಹರಡಿದೆ.

ಕರ್ನಾಟಕದ ಗಡಿಯಲ್ಲಿರುವ ಮೂರು ನೆರೆಯ ರಾಜ್ಯಗಳು, ಅಂದರೆ, ಕೇರಳದ ವಯನಾಡ್ (2013) ಮತ್ತು ಮಲಪ್ಪುರಂ ಜಿಲ್ಲೆಗಳು (2014), ಗೋವಾ ರಾಜ್ಯದ ಉತ್ತರ ಗೋವಾ ಜಿಲ್ಲೆ (2015), ಮತ್ತು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆ (2016) ಯಿಂದ ಈಗ ಮಂಗಗಳ ಸಾವು ಮತ್ತು ಮಾನವ ಪ್ರಕರಣಗಳು ವರದಿಯಾಗಿವೆ. ತೀವ್ರತೆ ಹೆಚ್ಚಿರುವುದು ಶಿವಮೊಗ್ಗ ಜಿಲ್ಲೆಯಲ್ಲಿ.

ವೈರಸ್ ಹರಡುವ ಕೀಟಗಳು

ಚಿಗಟ ಈ ವೈರಸ್‌ನ ಪ್ರವಾಹಕಗಳು. ಅರಣ್ಯ ಪ್ರದೇಶಗಳಲ್ಲಿ ಕೋತಿ, ಹೆಗ್ಗಣ ಇತ್ಯಾದಿ ಪ್ರಾಣಿಗಳಿಗೆ ವೈರಸ್ ಸೋಂಕು ತಗುಲಿದರೆ, ಚಿಗಟ ಇತ್ಯಾದಿ ಮೂಲಕ ಅದು ಬೇರೆ ಬೇರೆ ಪ್ರಾಣಿಗಳಿಗೆ ಸುಲಭವಾಗಿ ಹರಡುವ ಸಾಧ್ಯತೆ ಇರುತ್ತದೆ. ಕೆಂಪು ಚಿಗಟ ಎಂಬ ಕೀಟ ಕೆಎಫ್‌ಡಿ ಅನ್ನು ಬಹಳ ವೇಗವಾಗಿ ಹರಡುತ್ತದೆ. ಈ ಕೀಟಕ್ಕೆ ವೈರಸ್ ಹೊಕ್ಕಿಬಿಟ್ಟರಂತೂ ಸಾಯುವವರೆಗೂ ಬಿಟ್ಟು ಹೋಗುವುದಿಲ್ಲ. ಆ ಕೀಟ ಕಚ್ಚಿದ ಪ್ರಾಣಿ ಪಕ್ಷಗಳಿಗೆಲ್ಲಾ ವೈರಸ್ ಹರಡುತ್ತದೆ. ಹೇನು, ತಿಗಣೆ, ಸೊಳ್ಳೆ ಇತ್ಯಾದಿ ರಕ್ತ ಹೀರುವ ಕೀಟಗಳ ಮೇಲೆ ಪ್ರಯೋಗ ನಡೆದರೂ ಇವು ಪ್ರವಾಹಕವೆಂದು ದೃಢಪಟ್ಟಿಲ್ಲ ಎನ್ನುತ್ತಾರೆ ಶಿವಮೊಗ್ಗದ ಡಾ ದರ್ಶನ್ ನಾರಾಯಣಸ್ವಾಮಿ.

ಮಂಗನ ಕಾಯಿಲೆಯ ಲಕ್ಷಣಗಳು

ಮಂಗನ ಕಾಯಿಲೆಯಿಂದ ಸಾಮಾನ್ಯವಾಗಿ ಬರುವ ರೋಗಲಕ್ಷಣ ಎಂದರೆ ಜ್ವರ, ತಲೆನೋವು ಮತ್ತು ರಕ್ತ ಸ್ರಾವ. ವಾಂತಿ, ಸ್ನಾಯು ಬಿಗಿತ ಮತ್ತು ನಡುಕ ಇವೂ ಕೂಡ ಕೆಎಫ್‌ಡಿಯ ಪ್ರಮುಖ ರೋಗಲಕ್ಷಣಗಳು. ಇಲ್ಲಿ ರಕ್ತಸ್ರಾವ ಎಂದರೆ ಮೆದುಳು ಸ್ರಾವದ ಲಕ್ಷಣಗಳು. ಅಂದರೆ ಮುಗಿನ ಒಳಗಿನ ಹೊಳ್ಳೆಯ ಮೇಲ್ಭಾಗದ ಜತೆಗೆ ಗಂಟಲು ಮತ್ತು ವಸಡುಗಳಿಂದ ರಕ್ತ ಸ್ರಾವವಾಗುವುದು ಇದರ ಗುಣಲಕ್ಷಣ. ಕೆಲವೊಮ್ಮೆ ಮಲವಿಸರ್ಜಿಸುವಾಗಲೂ ರಕ್ತಸ್ರಾವ ಆಗಬಹುದು. ಕ್ಯಾಸನೂರು ವೈರಸ್ ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸೋಂಕು ಹರಡುವುದಿಲ್ಲ. ಆತಂಕದ ಸಂಗತಿ ಎಂದರೆ ಮಂಗನ ಕಾಯಿಲೆಗೆ ಒಳಪಟ್ಟವರಲ್ಲಿ ಶೇ 5-10 ಮಂದಿ ಸಾವನ್ನಪ್ಪುವ ಸಾಧ್ಯತೆ ಅಧಿಕ.

ಲಸಿಕೆಗಾಗಿ ನಿರಂತರ ಸಂಶೋಧನೆ, ಸಿಗುತ್ತಿಲ್ಲ ಫಲ

'ಮಲೆನಾಡಿನ ಜನರನ್ನು ಕಾಡುತ್ತಿರುವ ಕೆಎಫ್‌ಡಿ ಸಮಸ್ಯೆಯನ್ನು ಸರ್ಕಾರ ಗಂಭೀರ ಪರಿಗಣಿಸಿದೆ. ಮಂಗನ ಕಾಯಿಲೆ (ಕೆಎಫ್‌ಡಿ) ತಡೆಗೆ ಶೀಘ್ರ ಹೊಸ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಐಸಿಎಂಆರ್ (ICMR) ಜತೆ ಚರ್ಚೆ ನಡೆಸಿದ್ದು, ಹೊಸ ಲಸಿಕೆ ಸಂಶೋಧನೆ ನಡೆಯುತ್ತಿದೆ' ಎನ್ನುವುದು ಅರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿಕೆ.

ಮಂಗನ ಕಾಯಿಲೆ ತಡೆಗೆ ನೀಡುತ್ತಿದ್ದ ಲಸಿಕೆಯು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ವಿತರಣೆ ಸ್ಥಗಿತಗೊಳಿಸಲಾಗಿದೆ. ಖಾಸಗಿ ಕಂಪನಿಯ ಸಹಯೋಗದೊಂದಿಗೆ ಹೊಸ ಲಸಿಕೆ ಸಂಶೋಧನೆ ನಡೆಸಲಾಗುತ್ತಿದೆ. ಮಂಗನ ಕಾಯಿಲೆಯು ಕಡಿಮೆ ಜನರಿಗೆ ಬಾಧಿಸುತ್ತಿರುವ ಕಾರಣದಿಂದ ಕಂಪನಿಗಳು ಲಸಿಕೆ ಕಂಡುಹಿಡಿಯಲು ಮುಂದಾಗುತ್ತಿಲ್ಲ. ಸರ್ಕಾರವು ಸಂಶೋಧನೆಗೆ ಧನ ಸಹಾಯ ನೀಡಲಿದೆ. ಶೀಘ್ರವಾಗಿ ಹೊಸ ಲಸಿಕೆಯನ್ನು ರೋಗಿಗಳಿಗೆ ನೀಡುತ್ತೇವೆ ಎಂದು ಕಳೆದ ತಿಂಗಳು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ದಿನೇಶ್ ಗುಂಡೂರಾವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.

ಸಚಿವರು ಹೀಗೊಂದು ಉತ್ತರ ನೀಡಿದ್ದರೂ ಜನರಿಗೆ ಮಾತ್ರ ಇದು ಪ್ರಶ್ನೆಯಾಗಿಯೇ ಕಾಡುತ್ತಿದೆ. ಮಂಗನಕಾಯಿಲೆ ಕಾಣಿಸಿಕೊಂಡು ಏಳು ದಶಕದ ನಂತರವೂ ಇಂತಹ ಹೇಳಿಕೆಯನ್ನು ಹಿಂದೆ ಬಂದ ಬಹುತೇಕ ಆರೋಗ್ಯ ಸಚಿವರೂ ಹೇಳಿದ್ದಾರೆ. ಆದರೆ ಪ್ರಗತಿ ಮಾತ್ರ ನಿರೀಕ್ಷೆಯಷ್ಟು ಇಲ್ಲ. ಜನರ ಭಯ ಮಾತ್ರ ಹೋಗುತ್ತಿಲ್ಲ.

'ನಾಲ್ಕೈದು ದಶಕದಿಂದಲೂ ಅಮೆರಿಕ ಸಹಿತ ಹಲವು ದೇಶಗಳ ತಜ್ಞರು ಇಲ್ಲಿಗೆ ಬಂದು ಮಂಗನಕಾಯಿಲೆಗೆ ಸಂಬಂಧಿಸಿ ಸಂಶೋಧನೆ ನಡೆಸಿದರು. ಅದರ ಫಲ ಮಾತ್ರ ದೊರಕಿಲ್ಲ. ಅರವತ್ತರ ದಶಕದಲ್ಲಿ ಮಂಗನ ಕಾಯಿಲೆ ಜೋರಾಗಿದ್ದಾಗ ಇದೆಲ್ಲವೂ ನಡೆದವು. ಅರಣ್ಯ ಇಲಾಖೆಯೂ ತನ್ನ ಮುಂಚೂಣಿ ಸಿಬ್ಬಂದಿ ಈ ಕುರಿತು ಜಾಗೃತಿ ಮೂಡಿಸುತ್ತಿತ್ತು. ಈಗಲೂ ಜಾಗೃತಿ ಮುಂದುವರಿದಿದೆ' ಎನ್ನುತ್ತಾರೆ ಅರವತ್ತರ ದಶಕದಲ್ಲಿ ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಎ.ಸಿ.ಲಕ್ಷ್ಮಣ.

1970ರಲ್ಲಿ ಆರಂಭವಾದ ವೈರಾಣು ರೋಗನಿರ್ಣಯ ಪ್ರಯೋಗಾಲಯ (VDL) ರಾಜ್ಯದ ಏಕೈಕ ಕೆಎಫ್‌ಡಿ ವೈರಾಣು ಪ್ರಯೋಗಾಲಯ. ಇದಕ್ಕೆ ಮಾನ್ಯತೆ ಸಿಗದೇ ಸರ್ವೇಕ್ಷಣೆ ಕಠಿಣವಾಗುತ್ತಿದೆ. ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ ಪ್ರಕಾರ, ಕೆಎಫ್‌ಡಿಯ ಡಿ ವರ್ಗಕ್ಕೆ ಸೇರಿದ ವೈರಸ್. ಅದರ ಜೀವಂತ ಸ್ಯಾಂಪಲ್‌ಗಳ ಪರೀಕ್ಷೆಗೆ ಬಿಎಸ್‌ಎಲ್ ಪ್ರಯೋಗಾಲಯ ಸೌಲಭ್ಯ ಬೇಕು. ಅದೂ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿಯೇ ಇದನ್ನು ಆರಂಭಿಸಬೇಕು ಎನ್ನುವ ಬೇಡಿಕೆಯಿದೆ.

ನನೆಗುದಿಗೆ ಬಿದ್ದ ಪ್ರಸ್ತಾವಗಳು

'ವೈರಾಣುವಿನ ನಮೂನೆಯನ್ನು ಈಗಲೂ ಪರೀಕ್ಷಿಸುವುದು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ. ಫಲಿತಾಂಶಕ್ಕೆ 10 ದಿನದಿಂದ ಎರಡು ತಿಂಗಳು ಬೇಕಾಗಬಹುದು. ಅಷ್ಟರಲ್ಲಿ ರೋಗ ವ್ಯಾಪಿಸುವ ಸಾಧ್ಯತೆ ಅಧಿಕ. ವಿಡಿಎಲ್‌ ಅನ್ನು ಬಿಎಸ್‌ಎಲ್-3 ಸೌಲಭ್ಯವಾಗಿ ಪರಿವರ್ತಿಸಲು 2019ರಲ್ಲಿ ರಾಜ್ಯ ಸರಕಾರ ಆಯವ್ಯಯದಲ್ಲಿ 15 ಕೋಟಿ ರೂ. ಅನುದಾನ ಮೀಸಲಿರಿಸಿ, ವಿಸ್ತೃತ ಯೋಜನಾ ವರದಿಯನ್ನು ಕೇಳಿತ್ತಾದರೂ ಅದು ಜಾರಿಯಾಗಲೇ ಇಲ್ಲ. ಪ್ರಯೋಗಾಲಯದ ಉನ್ನತೀಕರಣ ಪ್ರಯತ್ನಗಳು ಆಗಲೇ ಇಲ್ಲ. . ತಪಾಸಣೇ ಕೇಂದ್ರವನ್ನು ಸಾಗರ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನಲ್ಲಿ ಆರಂಭಿಸುವುದು ಸೂಕ್ತ' ಎಂದು ಹೊಸನಗರದ ಪತ್ರಕರ್ತ ರವಿಬಿದನೂರು ಹೇಳುತ್ತಾರೆ.

ಇದರೊಟ್ಟಿಗೆ ಶಿವಮೊಗ್ಗದವರೇ ಆದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಮಂಗನ ಪಾರ್ಕ್‌ ಆರಂಭಿಸುವ ಯೋಜನೆಯನ್ನೂ ಪ್ರಕಟಿಸಿದ್ದರು. ಮಂಗಗಳ ಸಂಖ್ಯೆಯನ್ನು ಊರುಗಳಲ್ಲಿ ಕಡಿಮೆ ಮಾಡುವುದು ಇದರ ಉದ್ದೇಶವಾಗಿತ್ತು. ಅದೂ ಕೂಡ ಜಾರಿಯಾಗಲೇ ಇಲ್ಲ. ಜಾಗ ಗುರುತಿಸುವುದಲ್ಲೇ ಕಾಲ ಕಳೆದು ಹೋಯಿತೇ ವಿನಃ ಏನೂ ಆಗಲಿಲ್ಲ ಎಂದು ಶಿವಮೊಗ್ಗ ಜನ ಆಕ್ರೋಶ ಹೊರ ಹಾಕುತ್ತಾರೆ.

ಶತಮಾನಗಳಿಂದ ಅರಣ್ಯ ಪ್ರದೇಶವನ್ನೇ ನಂಬಿ ಬದುಕುತ್ತಿರುವ ಹತ್ತಾರು ಕುಟುಂಬಗಳಿಗೆ ಮಂಗನ ಕಾಯಿಲೆ ಊರು ಬಿಡುವಂತೆ ಮಾಡಿ ಬಿಡುತ್ತದೆ. ಯಮಯಾತನೆಯಿಂದಲೇ ಅವರು ಇನ್ನೆಲ್ಲಿಗೂ ಹೋಗಿ ಇರಬೇಕು. ಇದು ತಪ್ಪಲಿ. ಮಂಗನ ಕಾಯಿಲೆ ಭೀತಿಯನ್ನು ಹೋಗಲಾಡಿಸಲಿ. ಮಂಗಳನ ಅಂಗಳಕ್ಕೆ ತಲುಪಿದವರಿಗೆ ಮಂಗನ ಅಂಗ ಆಧರಿಸಿ ಸಂಶೋಧನೆ ಮಾಡಲು ಅಗಿಲ್ಲವೇ ಎನ್ನುವ ಸ್ಥಳೀಯರ ಪ್ರಶ್ನೆಯಲ್ಲಿ ನಿಜವೂ ಇದೆ.

IPL_Entry_Point