ಕಾಡಿನ ಕಥೆಗಳು: ಬಾಲ್ಯದಲ್ಲಿ ಹಕ್ಕಿ, ಪರಿಸರ, ಕಾಡಿನ ಪ್ರಭಾವ; ಬೆಂಗಳೂರಿನ ಅರ್ಲಿ ಬರ್ಡ್ ಸಂಸ್ಥೆ ಹುಟ್ಟು ಹಾಕುತ್ತಿರುವ ಹಸಿರು ಮಹಾ ಮಾರ್ಗ
Dec 03, 2024 09:00 AM IST
ಬೆಂಗಳೂರಿನ ಅರ್ಲಿ ಬರ್ಡ್ ಸಂಸ್ಥೆ ಪಕ್ಷಿ, ಪರಿಸರ ವಿಚಾರದಲ್ಲಿ ಗಮನಾರ್ಹ ಕಾರ್ಯದಲ್ಲಿ ನಿರತವಾಗಿದೆ.
Forest Tales: ಮೈಸೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದು ಈಗ ಭಾರತದ ಹಲವು ಭಾಗಗಳಲ್ಲಿ ಹರಡಿರುವ ಅರ್ಲಿ ಬರ್ಡ್ ಎಂಬ ಪಕ್ಷಿ, ಪರಿಸರದ ಹಸಿರು ಬಿತ್ತುವ ಸಂಸ್ಥೆ ಮಕ್ಕಳ ಬಾಲ್ಯಕ್ಕೆ ನೀಡುತ್ತಿರುವ ಕೊಡುಗೆ ದೊಡ್ಡದು. ಸಂಸ್ಥೆಯ ವಿಭಿನ್ನ ಪ್ರಯತ್ನಗಳ ಹಾದಿ ಇಲ್ಲಿದೆ.
ಅಲ್ಲಿ ಸೇರಿದ್ದವರು 9 ರಿಂದ 13 ವರ್ಷ ವಯಸ್ಸಿನ ಮಕ್ಕಳು. ಏನಾದರೂ ಹೊಸತು ತಿಳಿಯಬೇಕು ಎನ್ನುವ ಮನಸು ಇದ್ದು ಬಂದವರೇ. ಆ ಪಕ್ಷಿ ಶಬ್ದ ಹೀಗೆಕೇ ಹೊರ ಹೊಮ್ಮುತ್ತದೆ. ಈ ಪಕ್ಷಿಯ ಬಣ್ಣ ಹೀಗೆಕೇ ಇದೆ. ಹಕ್ಕಿಗಳ ಧ್ವನಿಯಲ್ಲಿ ಇದೇ ಹಕ್ಕಿಯದ್ದು ಎಂದು ನಾವು ಹೇಗೆ ಗುರುತಿಸಬಹುದು. ಹಕ್ಕಿಗಳು ನಮಗೆ ಏಕೇ ಬೇಕು. ಅವುಗಳಿಂದ ನಾವು ಏನೇನು ಕಲಿಯಬಹುದು ಎನ್ನುವ ಪಶ್ನೆಗಳ ಮೇಲೆ ಪ್ರಶ್ನೆಗಳನ್ನು ಪುಟ್ಟ ಮಕ್ಕಳು ಬೌನ್ಸರ್ ರೀತಿ ಎಸೆಯುತ್ತಿದ್ದರೆ ಎದುರಿಗೆ ಕುಳಿತ ಅನುಭವಿ ಹಕ್ಕಿ ತಜ್ಞರು, ಪರಿಸರ ವಿಷಯದಲ್ಲಿ ನುರಿತವರು ಉತ್ತರವನ್ನು ನೀಡುತ್ತಲೇ ಇದ್ದರು. ಓಹ್ ಹೌದಾ. ಹಕ್ಕಿಗಳು ಎಂದರೆ ಹೀಗಾ, ಪರಿಸರ, ಕಾಡು. ವನ್ಯಲೋಕ ಕುರಿತಾದ ತರೇಹವಾರಿ ಪ್ರಶ್ನೆಗಳಿಗೆ ಉತ್ತರ ಪಡೆದು ಮುಗದಲ್ಲಿ ಖುಷಿ ಬೀರಿ ಮತ್ತೊಂದು ಪ್ರಶ್ನೆಗೆ ಅಣಿಯಾಗುತ್ತಲೇ ಇದ್ದರು. ಆ ಮಕ್ಕಳಿಗೆ ತಿಳಿದುಕೊಳ್ಳುವ ತವಕ. ಹಿರಿಯರಿಗೆ ಆ ಮಕ್ಕಳ ಮನಸ್ಸಿನಲ್ಲಿ ಪಕ್ಷಿಗಳು ಸಂಚರಿಸಿ ಬರಲಿ, ಹಸಿರು ಗೂಡು ಕಟ್ಟಲಿ, ಬದುಕು ಹಕ್ಕಿಗಳಂತೆ ನಿಗದಿತ ಆಸಕ್ತಿಗಳೊಂದಿಗೆ ಸ್ವಚ್ಛಂದವಾಗಿಯೇ ಬೆಳೆಯಲಿ ಎನ್ನುವ ಮಹಾದಾಸೆ.
ಬೆಂಗಳೂರು ಮೂಲದ ಅರ್ಲಿ ಬರ್ಡ್(earlybird) ಎನ್ನುವ ಸಂಸ್ಥೆ ದಶಕದಿಂದಲೂ ಕರ್ನಾಟಕದ ಬೆಂಗಳೂರು, ಮೈಸೂರು ಮಾತ್ರವಲ್ಲದೇ ಉತ್ತರ ಭಾರತ, ಈಶಾನ್ಯ ರಾಜ್ಯಗಳಲ್ಲಿ ಪಕ್ಷಿ ಜಾಗೃತಿ, ಪರಿಸರವನ್ನು ಅರಿಯುವ ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಇದೆ. ಅರ್ಲಿ ಬರ್ಡ್ ಸಂಸ್ಥೆ ಹುಟ್ಟು ಹಾಕಿದ ಉದ್ದೇಶವೇ ಮಕ್ಕಳ ಬಾಲ್ಯ ಸುಮ್ಮನೇ ಕಳೆದು ಹೋಗಬಾರದು. ಮಕ್ಕಳು ಹಕ್ಕಿಗಳೊಂದಿಗೆ ಕೆಲ ಕ್ಷಣವಾದರೂ ಕಳೆಯಬೇಕು. ಪರಿಸರವನ್ನು ನೋಡಿ ಅದಕ್ಕೆ ಚಿತ್ರರೂಪ ಕೊಡಬೇಕು, ಪ್ರಕೃತಿಯಿಲ್ಲದೇ ನಾವ್ಯಾರು ಇಲ್ಲ ಎನ್ನುವುದನ್ನು ತಿಳಿಸಬೇಕು ಎಂದು ಆರಂಭಿಸಿದ ಸಂಸ್ಥೆ ತನ್ನ ಹಾದಿಯಲ್ಲಿ ಸರಿಯಾಗಿಯೇ ಸಾಗುತ್ತಿದೆ.
ಈ ವಾರದ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್‌ನಲ್ಲಿ ಮೈಸೂರಿನಲ್ಲ ಅರ್ಲಿ ಬರ್ಡ್ ಸಂಸ್ಥೆ ಆರಂಭಿಸಿದ ಸಣ್ಣ ಗೂಡು ಈಗ ದೊಡ್ಡದಾಗಿಯೇ ಬೆಳೆದು ಭಾರತದ ಹಲವು ಭಾಗಗಳಲ್ಲಿ ಹರಡಿಕೊಂಡಿದೆ. ಪಕ್ಷಿಗಳ ಕುರಿತಾಗಿ ಪ್ರೀತಿಯಿಂದ ಹೇಳಿಕೊಡುವ ರೀತಿಯನ್ನು ಪ್ರಧಾನಿ ಉಲ್ಲೇಖಿಸಿದ್ದರು. ಹಾಗೆಯೇ ಅರ್ಲಿ ಬರ್ಡ್ ಸಂಸ್ಥೆ ಎಳೆಯರ ಪಾಲಿನ ದಾರಿ ದೀವಿಗೆಯಂತೆಯೇ ಕೆಲಸ ಮಾಡುತ್ತಿದೆ.
ಎನ್‌ಸಿಎಫ್ ಹಾದಿಯಲ್ಲಿ ಹುಟ್ಟಿದ ಕೂಸು
ಮೈಸೂರಿನ ಎಂ.ಡಿ.ಮಧುಸೂಧನ್ ಎಂಬ ಯುವ ಪರಿಸರ ಪ್ರೇಮಿ ಶಂಕರರಾಮನ್, ಚಾರುದತ್ತ ಮಿಶ್ರ, ರೋಹನ್ ಎಂಬ ಸಮಾನಮನಸ್ಕ ಮೂವರು ಸ್ನೇಹಿತರೊಂದಿಗೆ ಸೇರಿ ಮೂರು ದಶಕದ ಹಿಂದೆ ಆರಂಭಿಸಿದ ನೇಚರ್ ಕನ್ಸರ್‌ವೇಷನ್ ಫೌಂಡೇಷನ್( Nature Conservation Foundation) ವನ್ಯಜೀವಿ, ಪರಿಸರ, ಅರಣ್ಯದ ಕುರಿತಾಗಿ ವೈಜ್ಞಾನಿಕವಾಗಿ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿತು. ಭಾರತ ಮಾತ್ರವಲ್ಲದೇ ಹೊರ ದೇಶದ ವನ್ಯಜೀವಿಶಾಸ್ತ್ರಜ್ಞರು, ಪರಿಸರ ತಜ್ಞರ ಸಹಯೋಗದಲ್ಲಿ ಹೊಸ ಶಕೆಯನ್ನೇ ಹುಟ್ಟು ಹಾಕಿತು. ನಿಖರ ಕ್ಷೇತ್ರ ಕಾರ್ಯ,ಉತ್ಕೃಷ್ಟ ಜ್ಞಾನಪಡೆಯೊಂದಿಗೆ ಎನ್‌ಸಿಎಫ್ ಒಳ್ಳೆಯ ಹೆಸರು ಮಾಡಿತು. ಎರಡು ದಶಕಗಳ ಕಾಲ ನೂರಾರು ಜನರಿಗೆ ಶೈಕ್ಷಣಿಕವಾಗಿ ಪರಿಸರ, ಅರಣ್ಯ,ವನ್ಯಜೀವಿಗಳನ್ನು ನೋಡುವ ನಿಟ್ಟಿನಲ್ಲಿ ಹೊಸ ಮಾರ್ಗವನ್ನೇ ಹುಟ್ಟು ಹಾಕಿತು. ಇದೇ ಸಂಸ್ಥೆ ಮಕ್ಕಳಲ್ಲೂ ಪರಿಸರದ ಅರಿವು, ಪಕ್ಷಿಗಳನ್ನು ಅರಿಯಲು ಸಹಕಾರಿಯಾಗುವಂತೆ ಹುಟ್ಟು ಹಾಕಿದ ವೇದಿಕೆಯೇ ಅರ್ಲಿ ಬರ್ಡ್ ಸಂಸ್ಥೆ. ದಶಕದ ಹಿಂದೆ ಶುರುವಾಗಿ ಅದೂ ಕೂಡ ಬೆಳೆದಿದೆ
ವಿಭಿನ್ನ ಚಟುವಟಿಕೆಗಳ ಸಂಗಮ
ಅರ್ಲಿ ಬರ್ಡ್ ರೂಪಿಸಿರುವ ಕಾರ್ಯಕ್ರಮಗಳು, ಆಯೋಜಿಸುವ ಚಟುವಟಿಕೆಗಳು ವಿಭಿನ್ನವಾಗಿಯೇ ಇವೆ. ಒಂದು ದಿನದ ಮಟ್ಟಿಗೆ ಮಕ್ಕಳಿಗೆ ಪಕ್ಷಿಗಳು ಪರಿಸರ ಕುರಿತು ತಿಳಿಸಿಕೊಡುವುದು. ಚಟುವಟಿಕೆ ರೂಪಿಸುವುದು, ಅವರು ಕಂಡಿದ್ದನ್ನು ಚಿತ್ರರೂಪಕ್ಕೆ ಇಳಿಸುವುದು, ಹಕ್ಕಿ,ಎಲೆ, ಹಣ್ಣು, ಹೂವು.. ಇವುಗಳ ಕುರಿತು ಕುತೂಹಲಕಾರಿ ಅಂಶಗಳನ್ನು ತಿಳಿಸುತ್ತಾ ಹೋಗೋದು ಸಂಸ್ಥೆಯ ಚಟುವಟಿಕೆ ಭಾಗ. ಮಕ್ಕಳ ಜತೆಗೆ ಶಿಕ್ಷಕರಿಗೂ ತರಬೇತಿಗಳನ್ನು ನೀಡಿ ಅವರು ತಮ್ಮ ಶಾಲೆ, ಪರಿಸರದಲ್ಲಿ ಇದನ್ನು ವಿಸ್ತರಿಸುವಂತೆಯೂ ನೋಡಿಕೊಳ್ಳುತ್ತಿದ್ದಾರೆ.
ಅರ್ಲಿ ಬರ್ಡ್ ನ ಕಲಿಕೆಯ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಎಲ್ಲಾ ವಯಸ್ಸಿನ ಹರಿಕಾರ ಪಕ್ಷಿವೀಕ್ಷಕರಿಗೆ ಸೂಕ್ತವಾಗಿ ವಿನ್ಯಾಸಗೊಳಿಸಲಾಗಿದೆ. ಯಾವುದೇ ಕಲಿಕೆಯ ವಾತಾವರಣದಲ್ಲಿ ಬಳಸಲು, ಎಲ್ಲಾ ಹಿನ್ನೆಲೆಯ ಶಿಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ಅಭಿವೃದ್ಧಿಪಡಿಸಲಾಗಿದೆ.
ವನ್ಯಜೀವಿ ಸಪ್ತಾಹಕ್ಕಾಗಿ ಈ ಬಾರಿ ಮೈಸೂರು, ದೆಹಲಿ, ಕೋಲ್ಕತ್ತಾ, ಮುಂಬೈ,ಗೋವಾದ ಶಿರ್ಗಾವ್, ಅರುಣಾಚಲ ಪ್ರದೇಶದ ಗೋಬುಕ್ ನಲ್ಲಿ ಪಕ್ಷಿ ನಡಿಗೆ( ಬರ್ಡ್ಸ್ ವಾಕ್) ಹಮ್ಮಿಕೊಳ್ಳಲಾಗಿತ್ತು. ಮಕ್ಕಳ ಆಸಕ್ತಿ ಎಷ್ಟಿತ್ತೆಂದರೆ ಎಲ್ಲವನ್ನೂ ಕುತೂಹಲದ ಕಂಗಳಿನಿಂದಲೇ ನೋಡುತ್ತಾ ಹೆಜ್ಜೆ ಹಾಕಿದರು. ಮೂರು ದಿನದ ಹಿಂದೆ ಸಿಲಿಗುರಿಯಲ್ಲೂ ಇಂತಹದ್ದೇ ಚಟುವಟಿಕೆ ಸಮಯ. ಅಲ್ಲಿಯೂ ಇದೇ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಯುವಕರು ಮಾತ್ರವಲ್ಲದೇ ಪರಿಸರದ ಬಗ್ಗೆ ಆಸಕ್ತಿ ಇದ್ದವರಿಗೆ ಆಯೋಜಿಸಿದ್ದು ಬರ್ಡಿಂಗ್ ಬಡ್ಡೀಸ್ ಜೊತೆ ಒಂದು ದಿನ. ಅಲ್ಲಿ ಪರಿಸರ ನೋಡುವ ಪರಿ, ಅನುಭವಿಸಿದ್ದಕ್ಕೆ ಕಲೆಯ ರೂಪ ಕೊಡುವ ಬಗೆ, ಆಟ, ಗುಂಪು ಚರ್ಚೆಯಂತಹ ಚಟುವಟಿಕೆ ಇದ್ದವು. ಇದೊಂದು ರೀತಿ ಕಾರ್ಯಾಗಾರ, ಪ್ರಕೃತಿ ಶಿಕ್ಷಣದ ಮಾರ್ಗ. ಇದಕ್ಕೂ ಸಿಕ್ಕ ಪ್ರತಿಕ್ರಿಯೆ ವಾವ್ ಎನ್ನುವಂತೆಯೇ ಇತ್ತು.
ಚಟುವಟಿಕೆಗಳೂ ಆಕರ್ಷಕ
ಯಾವುದೀ ಹಕ್ಕಿ ಎನ್ನುವ ಫ್ಲ್ಯಾಶ್ ಕಾರ್ಡ್ ಗಳ ಆಧರಿತ ಚಟುವಟಿಕೆಯಿದು. ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡುಬರುವ 40 ಹಕ್ಕಿಗಳನ್ನು ಪರಿಚಯಿಸುವ ಮೋಜಿನ, ಶೈಕ್ಷಣಿಕ ಆಟ. ಪ್ರತಿ ಕಾರ್ಡು, ಹಕ್ಕಿ ಪ್ರಭೇದವೊಂದನ್ನು ಹೊಂದಿದ್ದು, ಒಂದು ಬದಿಯಲ್ಲಿ ಛಾಯಾಚಿತ್ರ ಇನ್ನೊಂದೆಡೆ ಆವಾಸಸ್ಥಾನ, ಆಹಾರ, ಗಾತ್ರ, ಹಕ್ಕಿಯ ನಡವಳಿಕೆ ಹಾಗೂ ವ್ಯಾಪ್ತಿಯ ಬಗ್ಗೆ ಮಾಹಿತಿ, ಮತ್ತು ಮೋಜಿನ ಸಂಗತಿ ವಿಭಾಗವು ಇದರಲ್ಲಿದೆ. ಫ್ಲಾಷ್‌ಕಾರ್ಡ್‌ಗಳನ್ನು ಕೋಲ್ಕತ್ತಾ ಮೂಲದ ಥಾಟ್‌ಶಾಪ್ ಫೌಂಡೇಶನ್ ವಿನ್ಯಾಸಗೊಳಿಸಿದೆ. ಈಗ ಇಂಗ್ಲಿಷ್, ಹಿಂದಿ, ತಮಿಳು ಮತ್ತು ಕನ್ನಡ - ನಾಲ್ಕು ಭಾಷೆಗಳಲ್ಲಿ ಲಭ್ಯವಿದೆ" ಎಂದು ಪ್ರಾಜೆಕ್ಟ್ ಅರ್ಲಿ ಬರ್ಡ್‌ನ ಕಾರ್ಯಕ್ರಮ ನಿರ್ವಾಹಕರಾದ ಗರಿಮಾ ಭಾಟಿಯಾ ವಿವರಿಸುತ್ತಾರೆ.
ಪಾಕೆಟ್ ಗೈಡ್‌ಗಳು, ಪಕ್ಷಿಗಳ ಬಿಂಗೊ, ಔಟ್ ರೀಚ್ ಕಾರ್ಯಕ್ರಮಗಳೂ ಕೂಡ ಇವೆ. ಆನ್ ಲೈನ್‌ನಲ್ಲಿ ತರಬೇತಿ ಮುಂದುವರಿದಿದೆ. ಮಕ್ಕಳಿಗೆ ಕುತೂಹಲಿ ಎನ್ನುವ ಮ್ಯಾಗಜೀನ್ ಕೂಡ ಹೊರ ತರುತ್ತಿದೆ. ಹ್ಯಾಂಡ್‌ಬುಕ್ ಫಾರ್ ಬರ್ಡ್ ಎಜುಕೇಟರ್ಸ್ ಇಲ್ಲಿನ ವಿಶೇಷ.ಇದರೊಂದಿಗೆ ಶಿಕ್ಷಕರು.ಆಸಕ್ತರಿಗೆ ತರಬೇತಿ ನೀಡಲಾಗಿದೆ. ಅಂದಾಜು ಮೂರು ಲಕ್ಷ ಮಕ್ಕಳನ್ನು ತಲುಪಿರುವ ಸಮಾಧಾನ ಅರ್ಲಿ ಬರ್ಡ್ ಸಂಸ್ಥೆಯದು. ಕರ್ನಾಟಕದಲ್ಲಿ ಸರ್ಕಾರ ಹೊಸದಾಗಿ 6599 ಗ್ರಂಥಾಲಯ ಸ್ಥಾಪಿಸುವುದಾಗಿ ಹೇಳಿತು. ಇದರಲ್ಲಿ 5800 ಗ್ರಂಥಾಲಯಗಳು ಪರಿಸರ ಸ್ನೇಹಿ, ಮಕ್ಕಳ ಸ್ನೇಹಿಯಾಗಿರಬೇಕು ಎನ್ನುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರಲ್ಲಿ ಅರ್ಲಿ ಬರ್ಡ್ ಕೂಡ ಸೇರಿಕೊಂಡು 500 ಪಂಚಾಯಿತಿ ಗ್ರಂಥಾಲಯ ಸಿಬ್ಬಂದಿಗೆ ತರಬೇತಿ ನೀಡಿದೆ. ಮಕ್ಕಳು ನಿಧಾನವಾಗಿ ಗ್ರಾಮೀಣ ಗ್ರಂಥಾಲಯಗಳಲ್ಲಿ ಹಕ್ಕಿಗಳು, ಪರಿಸರದ ಕುರಿತು ತಿಳಿಯುತ್ತಾರೆ.
ಕನ್ನಡತಿ ಅಭಿಷೇಕ ಅಭಿಮಾನ
ಅರ್ಲಿ ಬರ್ಡ್ ಕೂಡ ದೊಡ್ಡ ತಂಡವನ್ನೇ ಹೊಂದಿದೆ. ಇದರಲ್ಲಿ ಹಾಸನದ ಸಕಲೇಶಪುರ ಮೂಲದವರಾದರೂ ಬೆಂಗಳೂರಿನಲ್ಲಿ ನೆಲೆಸಿರುವ ಅಭಿಷೇಕ ಕೃಷ್ಣಗೋಪಾಲ್ ಅರ್ಲಿ ಬರ್ಡ್ ನೊಂದಿಗೆ ಮಕ್ಕಳು ಮತ್ತು ಪರಿಸರ- ಪಕ್ಷಿಗಳ ನಂಟು ಬೆಳೆಯಲು ಜೋಡಿಸಿದ್ದು ಕಲೆ. ಅವರ ಬಾಲ್ಯದಲ್ಲೂ ಹಾಗೆಯೇ ಆಗಿತ್ತು. ನೋಡಿದ್ದನ್ನು ಬರೆಯಬೇಕು ಎನ್ನುವುದು. ಇದು ಪರಿಣಾಮಕಾರಿಯೂ ಆಗಿದೆ.
ನಾನು ಬೆಂಗಳೂರಿನಲ್ಲಿ ಬೆಳೆದಿದ್ದೇನೆ ಆದರೆ ಕರ್ನಾಟಕದ ಪಶ್ಚಿಮ ಘಟ್ಟಗಳ ಸಕಲೇಶಪುರದಲ್ಲಿರುವ ನನ್ನ ಅಜ್ಜಿಯರ ಮನೆಯಲ್ಲಿ ರಜೆಯನ್ನು ಕಳೆಯುವುದು ಸ್ವಾಭಾವಿಕವಾಗಿ ನನಗೆ ಚಿಕ್ಕ ವಯಸ್ಸಿನಲ್ಲೇ ಪ್ರಕೃತಿಯಲ್ಲಿ ಆಳವಾದ ಆಸಕ್ತಿಯನ್ನು ಬೆಳೆಸಲು ಸಹಾಯ ಮಾಡಿತು. ಪರಿಸರ ಸಂರಕ್ಷಣೆ, ವನ್ಯಜೀವಿ ಪುನರ್ವಸತಿ ಚಟುವಟಿಕೆ ಮೂಲಕ ವಿಸ್ತರಿಸಿತು. ನನ್ನ ಆರಂಭಿಕ ತರಬೇತಿಯು ಫೈನ್ ಆರ್ಟ್ಸ್‌ನಲ್ಲಿದ್ದರೂ, ಕಾಡು ಪ್ರಾಣಿಗಳ ಸಮೀಪದಲ್ಲಿ ವಾಸಿಸುವುದು, ಶುಶ್ರೂಷೆ ಮತ್ತು ಗಾಯಗೊಂಡ ವನ್ಯಜೀವಿಗಳ ಆರೈಕೆಯ ಭಾಗವಾಗವಾಗಿ ಈ ಪಯಣ ಮುಂದುವರಿಯಿತು. ಈಗ ಅರ್ಲಿ ಬರ್ಡ್ ಅದೇ ಪರಿಕಲ್ಪನೆಯೊಂದಿಗೆ ಭಾರತದ ಹಲವು ಭಾಗಗಳಲ್ಲಿ ಹರವಿಕೊಂಡು ಮಕ್ಕಳು, ಪರಿಸರದ ಬಗ್ಗೆ ಆಸಕ್ತಿ ಇರುವವರನ್ನು ಸೆಳೆದುಕೊಂಡಿದೆ ಎಂದು ಅಭಿಷೇಕ ಕೃಷ್ಣಗೋಪಾಲ್ ಅರ್ಲಿ ಬರ್ಡ್ ಏಕೆ, ಹೇಗೆ ಬೆಳೆಯಿತು ಎಂದು ವಿವರಿಸುತ್ತಾ ಹೋಗುತ್ತಾರೆ.
https://www.early-bird.in/ ಕೊಂಡಿಯೊಂದರೆ ಒಳಹೊಕ್ಕರೆ ಅರ್ಲಿ ಬರ್ಡ್‌ನ ಹಾದಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ ಎನ್ನುವ ಕೆ.ಎಸ್.ನರಸಿಂಹಸ್ವಾಮಿ ಅವರ ಹಾಡಿನ ಸಾಲಿನಂತೆ ಮಕ್ಕಳ ಭಾವಭಿತ್ತಿಯಲ್ಲಿ ಪಕ್ಷಿ, ಪರಿಸರ, ಹಸಿರಿನ ಪ್ರೀತಿ ಬಿತ್ತುತ್ತಿರುವ ಅರ್ಲಿ ಬರ್ಡ್ಸ್ ಪ್ರಯತ್ನದಿಂದ ಸಮಾಜಕ್ಕೆ ಸಿಗುವ ಫಲ ದೊಡ್ಡದು.