ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್, ಬ್ಯಾನರ್ ಅಳವಡಿಕೆ; ಶಿಕ್ಷೆಗೆ ಕಾನೂನು ರೂಪಿಸದ್ದಕ್ಕೆ ಬಿಬಿಎಂಪಿ ಮೇಲೆ ಹೈಕೋರ್ಟ್ ಗರಂ
Dec 14, 2024 09:36 AM IST
ಬೆಂಗಳೂರಿನಲ್ಲಿನ ಅನಧಿಕೃತ ಹೋರ್ಡಿಂಗ್, ಫ್ಲೆಕ್ಸ್‌ಗಳ ವಿಚಾರದಲ್ಲಿ ಹೈಕೋರ್ಟ್ ಮತ್ತೆ ಗರಂ ಆಗಿದೆ.
- ಬೆಂಗಳೂರಿನ ಸೌಂದರ್ಯಕ್ಕೆ ಧಕ್ಕೆಯಾಗುವ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್, ಬ್ಯಾನರ್‌ಗಳ ನಿಗ್ರಹಕ್ಕೆ ಬಿಬಿಎಂಪಿ ಕಠಿಣ ಕಾನೂನು ರೂಪಿಸದೇ ಇರುವುದಕ್ಕೆ ಕರ್ನಾಟಕ ಹೈಕೋರ್ಟ್ ಗರಂ ಆಗಿದೆ. ಕ್ರಮದ ಕುರಿತು ವರದಿ ನೀಡುವಂತೆಯೂ ತಾಕೀತು ಮಾಡಿದೆ.
- ವರದಿ: ಎಚ್.ಮಾರುತಿ.ಬೆಂಗಳೂರು
ಬೆಂಗಳೂರು:ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಹೋರ್ಡಿಂಗ್ಸ್ ಮತ್ತು ಬ್ಯಾನರ್ ಹಾಕಿರುವವರನ್ನು ಶಿಕ್ಷಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಳಿ ಯಾವುದೇ ಕಾನೂನು ಇಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಪಾಲಿಕೆಯ ಬೈಲಾದಲ್ಲಿ ಯಾವುದೇ ಅವಕಾಶ ಇಲ್ಲ ಎಂದೂ ಹೈಕೋರ್ಟ್ ಗರಂ ಆಗಿದೆ. ಈ ವಿಷಯವನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಸರ್ಕಾರ ಮತ್ತು ಪಾಲಿಕೆಯನ್ನು ಎಚ್ಚರಿಸಿದೆ. ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ತಡೆಯಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಮಾಯಿಗೇಗೌಡ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿ ಮತ್ತು 2024ರ ಜುಲೈನಲ್ಲಿ ಸ್ವಯಂಪ್ರೇರಣೆಯಿಂದ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಬೆಂಗಳೂರಿನಲ್ಲಿನ ಅಕ್ರಮ ಫ್ಲೆಕ್ಸ್-ಹೋರ್ಡಿಂಗ್ಸ್ ಮತ್ತು ಬ್ಯಾನರ್‌ಗಳ ಹಾವಳಿಯಿಂದ ನಾಗರಿಕರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಆದರೂ, ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅಂತೆಯೇ ಉದ್ದೇಶಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಾಹೀರಾತು ಬೈಲಾ-2024ರಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಹೋರ್ಡಿಂಗ್ಸ್ ಅಳವಡಿಸುವವರನ್ನು ಶಿಕ್ಷಿಸುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ' ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.
ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ಅಥವಾ ಬ್ಯಾನರ್ ಹಾಕುವುದರಿಂದ ವಾಹನ ದಟ್ಟಣೆ ಉಂಟಾಗುವುದಲ್ಲದೆ ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಸರ್ಕಾರ ಮತ್ತು ಬಿಬಿಎಂಪಿ ಕೂಡಲೇ ಅನಧಿಕೃತವಾಗಿ ಫ್ಲೆಕ್ಸ್,, ಹೋರ್ಡಿಂಗ್ಸ್ ಅಥವಾ ಬ್ಯಾನರ್ ಹಾಕುವವರಿಗೆ ದಂಡದ ಪ್ರಮಾಣ ನಿಗದಿ ಮಾಡಬೇಕು. ಈ ಬಗ್ಗೆ ಕೈಗೊಂಡ ಕ್ರಮಗಳನ್ನು ಕುರಿತು ಸೂಕ್ತ ಉತ್ತರ ನೀಡಬೇಕು ಎಂದು ಹೈಕೋರ್ಟ್ ವಿಚಾರಣೆಯನ್ನು 2025 ರ ಜನವರಿ 16 ಕ್ಕೆ ಮುಂದೂಡಿದೆ.
18 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಜಪ್ತಿ
ಹಗಲಿನಲ್ಲಿ ಬಾಗಿಲು ಹಾಕಿದ್ದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ಹೊತ್ತು ಮನೆಯಬಾಗಲು ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಎಫ್ ನಿವಾಸಿಗಳಾದ ಸಂಜಯ್, ಸಂದೀಪ್ ಮತ್ತು ಸೂರ್ಯ ಬಂಧಿತ ಆರೋಪಿಗಳು. ಇವರಿಂದ 180 ಗ್ರಾಂ ಚಿನ್ನ, 4.ಕೆ.ಜಿ. 800 ಗ್ರಾಂ ಬೆಳ್ಳಿ ಮತ್ತು ದ್ವಿಚಕ್ರ ವಾಹನ ಸೇರಿ ಒಟ್ಟು 18 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯ ನಿವಾಸಿಯೊಬ್ಬರು ವೆಲ್ಲೂರಿಗೆ ಪ್ರವಾಸ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡು ಬೆಳಗಿನ ಜಾವ ಮನೆಯ ಬೀಗ ಮುರಿದು, ಲಾಕರ್‌ನಲ್ಲಿಟ್ಟಿದ್ದ ಚಿನ್ನ, ಬೆಳ್ಳಿ ಹಾಗೂ 15 ಸಾವಿರ ನಗದು ಹಣವನ್ನು ಕಳವು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಸಂಚರಿಸುತ್ತಿದ್ದ ಮೂವರನ್ನು ವಿಚಾರಣೆ ನಡೆಸಿದಾಗ, ಮನೆ ಹಾಗೂ ವಾಹನ ಕಳವು ಮಾಡಿರುವುದನ್ನು ಬಾಯಿ ಬಿಟ್ಟರು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಸುದೀರ್ಘ ವಿಚಾರಣೆ ನಡೆಸಿದಾಗ ಇವರು ನಡೆಸಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ನಂತರ ಕಳವು ಮಾಡಿದ್ದ ಆಭರಣಗಳನ್ನು ಮಾರಾಟ ಮಾಡಿದ್ದ ಅಂಗಡಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ರೌಡಿ ಶೀಟರ್‌ಗಳಾಗಿದ್ದು, ಇವರ ವಿರುದ್ಧ ಕೆ.ಜಿ.ಎಫ್ ಮತ್ತು ಬಂಗಾರಪೇಟೆ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ತಿಳಿಸಿದ್ದಾರೆ. ಯುವತಿಯರ ಜತೆ ಮೋಜಿನ ಜೀವನ ನಡೆಸುವ ಸಲುವಾಗಿ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಕದ್ದ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಯುವತಿಯರ ಜತೆ ಬೈಕ್‌ನಲ್ಲಿ ಸುತ್ತಾಡುತ್ತಾ ಹಣವನ್ನು ಖರ್ಚು ಮಾಡುತ್ತಿದ್ದರು. ಯುವತಿಯರೊಂದಿಗೆ ಪ್ರವಾಸಿ ತಾಣಗಳಿಗೆ ತೆರಳಿ ಮಜಾ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಬಾಣಸವಾಡಿ ಪೊಲೀಸ್ ಠಾಣೆಯ 9, ರಾಮಮೂರ್ತಿ ನಗರ ಪೊಲೀಸ್ ಠಾಣೆ
ವ್ಯಾಪ್ತಿಯ ಒಂದು ಮನೆ ಕಳವು ಹಾಗೂ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಕದ್ದಿದ್ದ ಶ್ರೀಗಂಧ ವಶ
ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಮತ್ತು ಶ್ರೀಗಂಧವನ್ನು ಕಡಿದು ಕಳವು ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಮತ್ತು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಜ್ಞಾನಭಾರತಿ ಠಾಣೆ ಪೊಲೀಸರು ಶ್ರೀಗಂಧ ಕಳವು ಮಾಡುತ್ತಿದ್ದ ರಾಮನಗರ ಜಿಲ್ಲೆ ಇರುಳಿಗರ ದೊಡ್ಡಿ ಗ್ರಾಮದ ಸಾಕಯ್ಯ ಅಲಿಯಾಸ್ 'ಸಾಕ' ಎಂಬಾತನನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಾದ ರಮೇಶ್, ಮಲ್ಲೇಶ್, ಸಂತು ಅವರಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತ ಸಾಕನಿಂದ 15 ಲಕ್ಷ ಮೌಲ್ಯದ 115 ಕೆ.ಜಿ ತೂಕದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜ್ಞಾನಭಾರತಿ ಕ್ಯಾಂಪಸ್‌ನ ಕಾವಲುಗಾರ, ಹಲಸೂರು ನಿವಾಸಿ ತೆಂಗಮಂಗಲಂ ಅವರು ನೀಡಿದ್ದ ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಈತ ವರ್ಷದ ನವೆಂಬರ್ ಹಾಗೂ 2015, 2017ರಲ್ಲಿ ದಾಖಲಾಗಿದ್ದ ಶ್ರೀಗಂಧ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ನವೆಂಬರ್ 13 ರಂದು ರಾತ್ರಿ ಜ್ಞಾನಭಾರತಿ ಆವರಣದಲ್ಲಿ ನಾಲ್ವರು ಆರೋಪಿಗಳು ಶ್ರೀಗಂಧದ ಮರವನ್ನು ಕಡಿಯುತ್ತಿದ್ದರು. ಅಲ್ಲಿಗೆ ಕಾವಲುಗಾರ ತೆರಳಿದಾಗ ಅವರನ್ನು ಕಂಡ ಕಳ್ಳರು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪಿ ಶರತ್ ಎಂಬಾತನನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ ರೂ. 14.60 ಲಕ್ಷ ಮೌಲ್ಯದ 146 ಕೆ.ಜಿ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕನಕಪುರ ಮುಖ್ಯರಸ್ತೆಯ ಗುಬ್ಬಲಾಳದ ಮೂಲಕ ಉತ್ತರಹಳ್ಳಿ ಕಡೆಗೆ ಟ್ರಕ್‌ನಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಬೆಂಗಳೂರಿಗೆ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ಹೇಳಿವೆ.
ಕೊಡಗು ಜಿಲ್ಲೆಯ ಸಿದ್ದಾಪುರ, ವಿರಾಜಪೇಟೆ ಭಾಗದ ಇಬರು ಆರೋಪಿಗಳು, ಸೌದೆ ತರುವ ನೆಪದಲ್ಲಿ ಅರಣ್ಯಕ್ಕೆ ಹೋಗಿ ಶ್ರೀಗಂಧದ ಮರಗಳನ್ನು ಕಡಯುತ್ತಿದ್ದರು. ನಂತರ ಈ ತುಂಡುಗಳನ್ನು ಭರತ್ ಗೆ ಮಾರಾಟ ಮಾಡುತ್ತಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.
ಕದ್ದ ಬೈಕ್ ನಲ್ಲೇ ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿ ಬಂಧನ, 40 ಮೊಬೈಲ್ ವಶ
ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕದ್ದು, ಅದರಲ್ಲೇ ಮೊಬೈಲ್ ಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಮೈಕೋ ಪೊಲೀಸ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕೃತ್ಯ ಎಸಗುತ್ತಿದ್ದ ಬನ್ನೇರುಘಟ್ಟ ನಿವಾಸಿ ಕಿರಣ್ ಅಲಿಯಾಸ್ ಚಿಟ್ಟೆಯನ್ನು ಬಂಧಿಸಲಾಗಿದೆ. ಈತನಿಂದ ರೂ. 5.60 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನ ಮತ್ತು 40 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುವೆಂಪುನಗರದ ಬಿ.ಟಿ.ಎಂ ಲೇಔಟ್‌ನ ನಿವಾಸಿಯೊಬ್ಬರು ದ್ವಿಚಕ್ರ ವಾಹನ ಕಳುವಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಅರೆಕೆರೆ ಸಾಮ್ರಾಟ್ ಲೇಔಟ್ ಬಳಿ ಆರೋಪಿಯನ್ನು ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗಲೇ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಈತ ವಿಚಾರಣೆಯ ಸಂದರ್ಭದಲ್ಲಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಬಿಟಿಎಂ ಲೇಔಟ್‌ನ ವಿವೇಕಾನಂದ ಮೈದಾನ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಕಳವು ಮಾಡಿದ್ದ ವಾಹನವನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ. ಬನ್ನೇರುಘಟ್ಟದಲ್ಲಿರುವ ಆರೋಪಿ ನಿವಾಸದಿಂದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಮೈಕೋ ಬಡಾವಣೆಯ ಎರಡು ದ್ವಿಚಕ್ರ ವಾಹನಗಳ ಪ್ರಕರಣ ಪತ್ತೆಯಾಗಿದೆ. ಕದ್ದ ಬೈಕ್ ಗಳಲ್ಲಿ ಸಂಚರಿಸುತ್ತಾ ಮಾತನಾಡಿಕೊಂಡು ಹೋಗುತ್ತಿದ್ದವರನ್ನೇ ಗುರಿಯಾಗಿಸಿಕೊಂಡು ಮೊಬೈಲ್ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ಎಚ್. ಮಾರುತಿ