ಭಾರತದ ಶ್ರೀಮಂತ ರಾಜ್ಯ ಕರ್ನಾಟಕ, ಬೆಂಗಳೂರಿಗೆ ನೀವೇನು ಮಾಡಿದಿರಿ, ಅದನ್ನ ಹೇಳಿ: ಕರ್ನಾಟಕ ಸರ್ಕಾರಕ್ಕೆ ಮಾತಿನ ಚಾಟಿ ಬೀಸಿದ ಮೋಹನ್‌ದಾಸ್ ಪೈ
ನೇರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕದ ಪಾಲು ಹೆಚ್ಚು ಎಂಬುದನ್ನು ಬಿಂಬಿಸಲು ಸಚಿವ ದಿನೇಶ್ ಗುಂಡೂರಾವ್ ಮಾಡಿದ ಟ್ವೀಟ್‌ಗೆ ಉದ್ಯಮಿ ಮೋಹನದಾಸ್ ಪೈ ಪ್ರತಿಕ್ರಿಯಿಸಿದ್ದು, “ಭಾರತದ ಶ್ರೀಮಂತ ರಾಜ್ಯ ಕರ್ನಾಟಕ, ಬೆಂಗಳೂರಿಗೆ ನೀವೇನು ಮಾಡಿದಿರಿ, ಅದನ್ನ ಹೇಳಿ” ಎಂದು ಮಾತಿನೇಟು ಕೊಟ್ಟಿದ್ದಾರೆ. ಈ ವಿದ್ಯಮಾನದ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ ವಿರುದ್ಧ ಬೆಂಗಳೂರಿಗರು ತಿರುಗಿ ಬಿದ್ದಿದ್ದು, ರಸ್ತೆ ಮೂಲಸೌಕರ್ಯದ ವಿಚಾರದಲ್ಲಿ ವ್ಯಾಪಕ ಅಸಮಾಧಾನ, ಆಕ್ರೋಶ ವ್ಯಕ್ತವಾಗುತ್ತಿದೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಅವರು ಬೆಂಗಳೂರು ರಸ್ತೆ ನಿರ್ವಹಣೆಯನ್ನು ಎಲೆಕ್ಟ್ರಾನಿಕ್ ಸಿಟಿ ಟೌನ್‌ಶಿಪ್ ಪ್ರಾಧಿಕಾರಕ್ಕೆ ಬಿಟ್ಟುಕೊಡಿ, ಕಳಪೆ ಕಾಮಗಾರಿ ಮಾಡುವ ಬಿಬಿಎಂಪಿ ಗುತ್ತಿಗೆದಾರರಿಗೆ ಯಾಕೆ ಕೊಡ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ನಡುವೆ, ಇನ್‌ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರು ಕೂಡ ಕರ್ನಾಟಕ ಸರ್ಕಾರಕ್ಕೆ ಮಾತಿನ ಚಾಟಿ ಬೀಸಿದ್ದು, ಮೂಲಸೌಕರ್ಯದ ವಿಚಾರದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ಇತ್ತೀಚಿನ ಮಳೆಯಿಂದಾಗಿ ಪೂರ್ವ ಬೆಂಗಳೂರು ಮತ್ತು ಉತ್ತರ ಬೆಂಗಳೂರು ತತ್ತರಿಸಿದ್ದು, ತಗ್ಗ ಪ್ರದೇಶಗಳೂ ಸಂಕಷ್ಟಕ್ಕೀಡಾಗಿವೆ. ರಸ್ತೆಗಳು ಹದಗೆಟ್ಟುಹೋಗಿವೆ. ಈ ಸನ್ನಿವೇಶದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಡಿದ ಟ್ವೀಟ್ ಮೋಹನ್ ದಾಸ್ ಪೈ ಅವರ ಗಮನಸೆಳೆದಿದೆ. ಆ ಟ್ವೀಟ್‌ಗೆ ಅವರು ಪ್ರತಿಕ್ರಿಯಿಸಿದ್ದು ಹೀಗೆ -
“ಭಾರತದ ಶ್ರೀಮಂತ ರಾಜ್ಯ ಕರ್ನಾಟಕ, ಬೆಂಗಳೂರಿಗೆ ನೀವೇನು ಮಾಡಿದಿರಿ, ಅದನ್ನ ಹೇಳಿ”
ಇತ್ತೀಚಿಗೆ ಸುರಿದ ಮಳೆಯಿಂದಾಗಿ ಬೆಂಗಳೂರಿನ ಮೂಲಸೌಕರ್ಯಗಳು ಹದೆಗೆಟ್ಟು ಹೋಗಿರುವುದನ್ನು ಎತ್ತಿ ತೋರಿಸಿದ ಇನ್ಫೋಸಿಸ್ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರು ಕರ್ನಾಟಕ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಶನಿವಾರವೂ ಮುಂದುವರಿಸಿದ್ದಾರೆ. ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, “ಇದು ಅದ್ಭುತವಾಗಿದೆ. ಕರ್ನಾಟಕ ಭಾರತದ ಶ್ರೀಮಂತ ದೊಡ್ಡ ರಾಜ್ಯ. ಆದರೆ ಕಳೆದ 18 ತಿಂಗಳುಗಳಲ್ಲಿ ನೀವು ಬೆಂಗಳೂರಿಗೆ ಏನು ಮಾಡಿದ್ದೀರಿ ಎಂದು ನಮಗೆ ತಿಳಿಸುವಿರಾ? ನಮ್ಮ ಬದುಕು ಶೋಚನೀಯವಾಗಿದೆ, ಭ್ರಷ್ಟಾಚಾರ ಹೆಚ್ಚಾಗಿದೆ. ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆಯನ್ನು ನಿರ್ಧರಿಸುವುದಿಲ್ಲ ಆದರೆ ಹಣಕಾಸು ಆಯೋಗ ಆ ಕೆಲಸ ಮಾಡುತ್ತದೆ” ಎಂದು ಮೋಹನ್ ದಾಸ್‌ಪೈ ಪ್ರತಿಕ್ರಿಯಿಸಿದ್ದಾರೆ. ಅವರು ಸಚಿವ ದಿನೇಶ್ ಗುಂಡೂರಾವ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಟ್ವೀಟ್‌ನಲ್ಲೇನಿದೆ?
ಪ್ರಭಾವಿ ಆರ್ಥಿಕ ಬೆಳವಣಿಗೆಯಿಂದ ನಡೆಸಲ್ಪಡುವ ಹೆಚ್ಚಿನ ತೆರಿಗೆ ಕೊಡುಗೆಗಳೊಂದಿಗೆ ಕರ್ನಾಟಕವು ಭಾರತದ ಆಕಾಂಕ್ಷೆಗಳಿಗೆ ಉತ್ತೇಜನ ನೀಡುತ್ತದೆ. ಕೇಂದ್ರ ಸರ್ಕಾರವು ಜಿಎಸ್‌ಟಿಯ ತನ್ನ ಹಕ್ಕಿನ ಪಾಲನ್ನು ನಿರಾಕರಿಸಿದರೂ, ಆರ್ಥಿಕ ಬೆಳವಣಿಗೆಯ ವಿಷಯದಲ್ಲಿ ಕರ್ನಾಟಕವು ಭಾರತದ ಅಗ್ರ-ಕಾರ್ಯನಿರ್ವಹಣೆಯ ರಾಜ್ಯಗಳಲ್ಲಿ ಒಂದಾಗಿದೆ. ಸಿದ್ದರಾಮಯ್ಯ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಸರ್ಕಾರವು ಹಲವಾರು ನವೀನ ಉಪಕ್ರಮಗಳು ಮತ್ತು ಪ್ರಮುಖ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ನಾಗರಿಕರ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ. ಖಾತರಿ ಯೋಜನೆಗಳ ಮೂಲಕ ಸಾಮಾನ್ಯ ಜನರ ಸಬಲೀಕರಣಕ್ಕೆ ಪ್ರಯತ್ನಿಸಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದರು. ಅವರು ನೇರ ತೆರಿಗೆಗೆ ಸಂಬಂಧಿಸಿದ ಎಸ್‌ಬಿಐ ವರದಿಗೆ ಸಂಬಂಧಿಸಿದ ಸುದ್ದಿಯ ಇಮೇಜ್ ಅನ್ನು ಶೇರ್ ಮಾಡಿದ್ದರು.
ಇದಕ್ಕೂ ಮೊದಲು, ಅಕ್ಟೋಬರ್ 19 ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಟ್ಯಾಗ್ ಮಾಡಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ನಾಗಸಂದ್ರ ಮತ್ತು ಮಾದಾವರ ಮಾರ್ಗದ ನಮ್ಮ ಮೆಟ್ರೋ ಗ್ರೀನ್ ಲೈನ್ ವಿಸ್ತರಣೆ ವಿಳಂಬವಾಗುತ್ತಿರುವುದರ ಬಗ್ಗೆ ಆಕ್ರೋಶ ಹೊರಹಾಕಿದ್ದರು.
ಎಕ್ಸ್ ಪೋಸ್ಟ್‌ನಲ್ಲಿ ಅವರು, "ಸಿದ್ದರಾಮಯ್ಯನವರೇ, ಅನಗತ್ಯ ವಿಳಂಬದ ಮೂಲಕ ಬೆಂಗಳೂರಿಗರನ್ನು ಯಾಕೆ ಶಿಕ್ಷಿಸುತ್ತಿದ್ದೀರಿ? ಕಾಳಜಿ ಇಲ್ಲದ ಜಡ ಹಿಡಿದ ಸರ್ಕಾರ ಎಂಬುದನ್ನು ಇದು ತೋರಿಸಿಕೊಡುತ್ತದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಮೋಹನದಾಸ್ ಪೈ ಕಟುವಾಗಿ ಟೀಕೆ ಮಾಡಿದ್ದರು.