logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Sex Scandals: ಕರ್ನಾಟಕದಲ್ಲಿ ಈ ಹಿಂದೆ ಮೂವರು ಸಚಿವರ ವಿರುದ್ದದ ಲೈಂಗಿಕ ಹಗರಣಗಳ ತನಿಖೆ ಏನಾಯಿತು?

Karnataka Sex Scandals: ಕರ್ನಾಟಕದಲ್ಲಿ ಈ ಹಿಂದೆ ಮೂವರು ಸಚಿವರ ವಿರುದ್ದದ ಲೈಂಗಿಕ ಹಗರಣಗಳ ತನಿಖೆ ಏನಾಯಿತು?

Umesha Bhatta P H HT Kannada

May 01, 2024 07:00 AM IST

google News

ಹರತಾಳು ಹಾಲಪ್ಪ, ಎಚ್‌ವೈ ಮೇಟಿ ಹಾಗೂ ರಮೇಶ್‌ ಜಾರಕಿಹೊಳಿ ವಿರುದ್ದವೂ ಗಂಭೀರ ಆರೋಪಗಳೇ ಕೇಳಿ ಬಂದು ಅಧಿಕಾರ ಕಳೆದುಕೊಂಡಿದ್ದರು.

    • ಸಚಿವರು,ಅಧಿಕಾರದಲ್ಲಿರುವವ ವಿರುದ್ದ ಕರ್ನಾಟಕದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣದ ಗಂಭೀರ ಪ್ರಕರಣಗಳು ದಾಖಲಾಗಿವೆ. ಪ್ರಮುಖ ಮೂರು ಪ್ರಕರಣಗಳ ಸ್ಥಿತಿಗತಿ ಏನಾಗಿದೆ. ಇಲ್ಲಿದೆ ವಿವರ..
ಹರತಾಳು ಹಾಲಪ್ಪ, ಎಚ್‌ವೈ ಮೇಟಿ ಹಾಗೂ ರಮೇಶ್‌ ಜಾರಕಿಹೊಳಿ ವಿರುದ್ದವೂ ಗಂಭೀರ ಆರೋಪಗಳೇ ಕೇಳಿ ಬಂದು ಅಧಿಕಾರ ಕಳೆದುಕೊಂಡಿದ್ದರು.
ಹರತಾಳು ಹಾಲಪ್ಪ, ಎಚ್‌ವೈ ಮೇಟಿ ಹಾಗೂ ರಮೇಶ್‌ ಜಾರಕಿಹೊಳಿ ವಿರುದ್ದವೂ ಗಂಭೀರ ಆರೋಪಗಳೇ ಕೇಳಿ ಬಂದು ಅಧಿಕಾರ ಕಳೆದುಕೊಂಡಿದ್ದರು.

ಬೆಂಗಳೂರು: ಕರ್ನಾಟಕದಲ್ಲಿ ಸಚಿವರಾಗಿದ್ದಾಗ ಲೈಂಗಿಕ ಆರೋಪದಲ್ಲಿ ಅಧಿಕಾರ ಕಳೆದುಕೊಂಡವರು ಹಲವರು. ಅದರಲ್ಲಿ ಬಿಜೆಪಿಯ ಹರತಾಳು ಹಾಲಪ್ಪ, ರಮೇಶ್‌ ಜಾರಕಿಹೊಳಿ, ಕಾಂಗ್ರೆಸ್‌ನ ಎಚ್‌ವೈ ಮೇಟಿ ಪ್ರಮುಖರು. ಇಬ್ಬರ ವಿರುದ್ದ ಸಿಡಿ ಬಿಡುಗಡೆಯಾಗಿದ್ದರೆ, ಇನ್ನೊಬ್ಬರ ವಿರುದ್ದ ದೂರು ದಾಖಲಿಸಲಾಗಿತ್ತು. ಒಂದು ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆದು ಕ್ಲೀನ್‌ ಚಿಟ್‌ ನೀಡಿದರೂ ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲ. ಇನ್ನಿಬ್ಬರ ವಿರುದ್ದ ಪ್ರಕರಣದಲ್ಲಿ ಅರ್ಜಿ ವಜಾಗೊಳಿಸಿ ಆರೋಪದಿಂದ ಖುಲಾಸೆ ಮಾಡಲಾಗಿದೆ. ರಮೇಶ್‌ ಜಾರಕಿಹೊಳಿ ಪ್ರಕರಣದಲ್ಲಿ ರಾಜಕೀಯ ಇರುವ ಆರೋಪಗಳು ಕೇಳಿ ಬಂದಿದ್ದವು. ಆಗಲೂ ಡಿ.ಕೆ.ಶಿವಕುಮಾರ್‌ ವಿರುದ್ದವೇ ರಮೇಶ್‌ ಜಾರಕಿಹೊಳಿ ಸಿಡಿ ಸೃಷ್ಟಿಸಿದ ಗಂಭೀರ ಆರೋಪ ಮಾಡಿದ್ದರು. ಜಾರಕಿಹೊಳಿ ಪ್ರಕರಣದ ಮೂರು ವರ್ಷದ ಬಳಿಕ ಈಗ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ದ ಸಿಡಿ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿ ಎಸ್‌ಐಟಿಯನ್ನು ರಚಿಸಲಾಗಿದೆ.

ಮೇಟಿಗೆ ಕ್ಲೀನ್‌ ಚಿಟ್‌ ಮತ್ತೆ ಶಾಸಕ

ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆಗಿದ್ದಾಗ ಅಬಕಾರಿ ಮಂತ್ರಿಯಾಗಿದ್ದ ಹಿರಿಯ ನಾಯಕ ಎಚ್‌.ವೈ,ಮೇಟಿ ವಿರುದ್ದವೂ ಲೈಂಗಿಕ ದೌರ್ಜನ್ಯದ ಸಿಡಿ ಬಿಡುಗಡೆಯಾಗಿತ್ತು. 2016ರ ಡಿಸೆಂಬರ್ 12ರಂದು ಪ್ರಕರಣ ಹೊರ ಬರುತ್ತಿದ್ದಂತೆ ಅಂದೇ ಮೇಟಿ ರಾಜೀನಾಮೆ ನೀಡಿದ್ದರು. ಕೆಲಸ ಕೊಡಿಸುವುದಾಗಿ ಮೇಟಿ ನನ್ನನ್ನು ನಂಬಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು.

ಈ ಪ್ರಕರಣವನ್ನು ಸಿಐಡಿಗೆ ಸಿದ್ದರಾಮಯ್ಯ ಸರ್ಕಾರ ವಹಿಸಿತ್ತು. ಇದಾದ ಒಂದು ವರ್ಷದೊಳಗೆ ಸಿಐಡಿ ಮೇಟಿ ಅವರಿಗೆ ಕ್ಲೀನ್‌ ಚಿಟ್‌ ನೀಡಿತ್ತು. ಆದರೆ ಮಹಿಳೆ ಮತ್ತೆ ಮೇಟಿ ಅವರ ವಿರುದ್ದ ಆರೋಪವನ್ನೂ ಮಾಡಿದ್ದರು.

ನ್ಯಾಯಾಲಯಕ್ಕೆ ಕ್ಲೀನ್‌ ಚಿಟ್‌ ವರದಿಯನ್ನು ಪೊಲೀಸರು ಸಲ್ಲಿಸಿದ್ದರಿಂದ ಪ್ರಕರಣ ವಜಾಗೊಂಡಿತ್ತು. ಕಳೆದ ವರ್ಷ ಮತ್ತೆ ಚುನಾವಣೆಯಲ್ಲಿ ಮೇಟಿ ಗೆದ್ದು ಬಾಗಲಕೋಟೆ ಶಾಸಕರಾಗಿದ್ದಾರೆ.

ಮುಗಿಯದ ಜಾರಕಿಹೊಳಿ ಪ್ರಕರಣ

ಕಾಂಗ್ರೆಸ್‌ನಲ್ಲಿಯೇ ಹಲವಾರು ವರ್ಷ ಇದ್ದು ಆನಂತರ ಡಿ.ಕೆ.ಶಿವಕುಮಾರ್‌ ಹಾಗೂ ಲಕ್ಷ್ಮಿ ಹೆಬ್ಬಾಳಕರ್‌ ವಿರುದ್ದ ತಿರುಗಿ ಬಿದ್ದು ಬಿಜೆಪಿ ಸೇರಿದ್ದ ರಮೇಶ್‌ ಜಾರಕಿಹೊಳಿ ವಿರುದ್ದ ಲೈಂಗಿಕ ದುರುಪಯೋಗ ಆರೋಪ 2021ರ ಮಾರ್ಚ್‌ ಮೊದಲ ವಾರ ಕೇಳಿ ಬಂದಿತ್ತು. ಸಿಡಿ ಕೂಡ ಬಿಡುಗಡೆಯಾಗಿ ತೀವ್ರ ಮುಜುಗರಕ್ಕೆ ಒಳಗಾಗಿ ರಮೇಶ್‌ ಜಾರಕಿಹೊಳಿ ಜಲಸಂಪನ್ಮೂಲ ಸಚಿವ ಸ್ಥಾನವನ್ನು ಆರೋಪ ಕೇಳಿ ಬಂದ ಮರು ದಿನವೇ ತೊರೆದಿದ್ದರು.
ಅಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಹಿರಿಯ ಐಪಿಎಸ್‌ ಅಧಿಕಾರಿ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದರು. ಆರು ತಿಂಗಳ ಒಳಗೆ ಎಸ್‌ಐಟಿ ವರದಿ ಸಲ್ಲಿಸಿತ್ತು.

150 ಪುಟಗಳ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಾಕ್ಷಾಧಾರಗಳ ಜತೆಗೆ ತನಿಖಾಧಿಕಾರಿ ಎಸಿಪಿ ಕವಿತಾ ಅವರು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಿ ವರದಿಯನ್ನು 2022ರ ಫೆಬ್ರವರಿಯಲ್ಲಿ ಸಲ್ಲಿಸಿದ್ದರು.

ತನಿಖಾ ವರದಿಯನ್ನು ತನಿಖಾ ತಂಡದ ಮುಖ್ಯಸ್ಥರ ಸಹಿಯೊಂದಿಗೆ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ಕೂಡ ಅನುಮತಿ ನೀಡಿದ್ದರಿಂದಾಗಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳು ಸಲ್ಲಿಸಿದ್ದರು.

ಇಬ್ಬರೂ ಪರಸ್ಪರ ಸಮ್ಮತಿ ಮೇರೆಗೆ ಲೈಂಗಿಕ ಸಂಪರ್ಕ ನಡೆದಿದೆ. ಯಾರ ಒತ್ತಾಯಕ್ಕೂ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಈ ಪ್ರಕರಣದಲ್ಲಿ ಅತ್ಯಾಚಾರ ಎನ್ನುವ ಅಂಶವೇ ಬೆಳಕಿಗೆ ಬಂದಿಲ್ಲ ಎಂದು ಸಾಕ್ಷ್ಯಾಧಾರ ಆಧರಿಸಿ ಬಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲ.

ಹೈಕೋರ್ಟ್‌ ಹಂತದಲ್ಲಿ ವಿಚಾರಣೆ ಬಾಕಿಯಿದೆ. ಪ್ರಕರಣದ ನಂತರ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ರಮೇಶ್‌ ಜಾರಕಿಹೊಳಿ ಗೋಕಾಕ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ.

ಏಳು ವರ್ಷ ನಂತರ ಗೆದ್ದ ಹರತಾಳು

ಯಡಿಯೂರಪ್ಪ ಅವರ ಸಂಪುಟದಲ್ಲಿ 2009ರಲ್ಲಿ ಆಹಾರ ಸಚಿವರಾಗಿದ್ದ ಹರತಾಳು ಹಾಲಪ್ಪ ವಿರುದ್ದ ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪ ಕೇಳಿ ಬಂದಿತ್ತು.

ದೂರು ಕೇಳಿ ಬಂದ ಆರು ತಿಂಗಳ ನಂತರ ಅವರ ವಿರುದ್ದ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಯಡಿಯೂರಪ್ಪ ಸರ್ಕಾರ ಸಿಐಡಿಗೆ ವಹಿಸಿತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹರತಾಳು ಅವರನ್ನು 2010ರ ಮೇ ನಲ್ಲಿ ಬಂಧಿಸಲಾಗಿತ್ತು.
ಏಳು ವರ್ಷದ ಸತತ ವಿಚಾರಣೆ ನಡೆದು 2017ರಲ್ಲಿ ಹರತಾಳು ಹಾಲಪ್ಪ ವಿರುದ್ದದ ಪ್ರಕರಣವನ್ನು ವಜಾಗೊಳಿಸಿ ಅವರನ್ನು ಆರೋಪದಿಂದ ಮುಕ್ತಗೊಳಿಸಲಾಗಿತ್ತು. ಆರೋಪದಲ್ಲಿ ಯಾವುದೇ ಹುರಳಿಲ್ಲ ಎನ್ನುವ ಕಾರಣವನ್ನು ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನೀಡಿತ್ತು.

ಆನಂತರ ಸರ್ಕಾರ ಹಾಲಪ್ಪ ವಿರುದ್ದ ಮೇಲ್ಮನವಿ ಸಲ್ಲಿಸದೇ ಇದ್ದುದರಿಂದ ಪ್ರಕರಣ ತಣ್ಣಗಾಯಿತು. ಮರು ವರ್ಷವೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಹರತಾಳು ಹಾಲಪ್ಪ ಗೆದ್ದು ಬಂದಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ