ಬೆಂಗಳೂರು ಕಸವನಹಳ್ಳಿಯಲ್ಲಿ ಪುಂಡರ ರಸ್ತೆ ದೌರ್ಜನ್ಯ; 5 ವರ್ಷದ ಬಾಲಕನಿಗೆ ಗಾಯ, ಕಾರಿನ ಗಾಜು ಒಡೆದ ಆರೋಪಿಗಳ ಗುರುತು ಪತ್ತೆ
Nov 01, 2024 01:58 PM IST
ಬೆಂಗಳೂರು ಕಸವನಹಳ್ಳಿಯಲ್ಲಿ ಪುಂಡರ ರಸ್ತೆ ದೌರ್ಜನ್ಯದ ವಿಡಿಯೋ ವೈರಲ್ ಆಗಿದ್ದು, ಅದರಿಂದ ತೆಗೆದ ಚಿತ್ರಗಳಿವು. ಇಬ್ಬರ ಮುಖಚಹರೆ ವಿಡಿಯೋದಲ್ಲಿ ದಾಖಲಾಗಿದೆ.
ಬೆಂಗಳೂರು ಕಸವನಹಳ್ಳಿಯಲ್ಲಿ ಪುಂಡರ ರಸ್ತೆ ದೌರ್ಜನ್ಯ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ. ಈ ದಾಳಿಯಲ್ಲಿ 5 ವರ್ಷದ ಬಾಲಕನಿಗೆ ಗಾಯವಾಗಿದೆ. ಕಾರಿನ ಗಾಜು ಒಡೆದು ಕುಟುಂಬವನ್ನು ಬೆದರಿಸಿದ ಆರೋಪಿಗಳ ಗುರುತುಪತ್ತೆಯಾಗಿದ್ದು, ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಕಸವನಹಳ್ಳಿ ಸಮೀಪ ಬುಧವಾರ ರಾತ್ರಿ ಬೈಕ್‌ನಲ್ಲಿ ಆಗಮಿಸಿದ ಪುಂಡರು ಕಾರಿನ ಗಾಜು ಒಡೆದು ಕುಟುಂಬ ಒಂದನ್ನು ಬೆದರಿಸಿದ್ದಾರೆ. ಈ ಘಟನೆಯಲ್ಲಿ 5 ವರ್ಷದ ಬಾಲಕ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದ್ದಾನೆ. ಈ ಘಟನೆ ನಡೆದ ಬಳಿಕ ಸಂತ್ರಸ್ತ ಈ ದಾಳಿಗೆ ಸಂಬಂಧಿಸಿದ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನಸೆಳೆದಿತ್ತು. ಸಂತ್ರಸ್ತರು ನಿನ್ನೆ (ಅಕ್ಟೋಬರ್ 31) ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು. ಈ ದಾಳಿ ನಡೆಸಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಬೆಂಗಳೂರು ಕಸವನಹಳ್ಳಿಯಲ್ಲಿ ರಸ್ತೆ ದೌರ್ಜನ್ಯ ಪ್ರಕರಣ; ಏನಿದು ಘಟನೆ
ಸಂತ್ರಸ್ತ ಅನೂಪ್ ಜಾರ್ಜ್ ಎಕ್ಸ್ ಖಾತೆಯಲ್ಲಿ ಈ ರಸ್ತೆ ದೌರ್ಜನ್ಯದ ವಿಚಾರ ಹಂಚಿಕೊಂಡಿದ್ದಾರೆ. ಪೊಲೀಸರು ದಾಖಲಿಸಿಕೊಂಡ ದೂರಿನ ಪ್ರಕಾರ, ಬೆಳ್ಳಂದೂರು ನಿವಾಸಿ ಅನೂಪ್ ಜಾರ್ಜ್ ಅವರು ಪತ್ನಿ ಜಿಸ್ ಜಾಕೋಬ್ ಹಾಗೂ ಇಬ್ಬರು ಮಕ್ಕಳ ಜತೆಗೆ ಬುಧವಾರ ಶಾಪಿಂಗ್‌ಗೆ ತೆರಳಿದ್ದರು. ಶಾಪಿಂಗ್ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುವಾಗ ಕಸವನಹಳ್ಳಿಯ ಅಮೃತ ಕಾಲೇಜು ಬಳಿ ಬುಧವಾರ ರಾತ್ರಿ 9.30ರ ಹೊತ್ತಿಗೆ ಇಬ್ಬರು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಅಡ್ಡಗಟ್ಟಿದ್ದಾರೆ. ಕಾರಿನ ಕಿಟಕಿ ಗಾಜು ಇಳಿಸುವಂತೆ ಬೆದರಿಸಿದ್ದಾರೆ. ಇದರಿಂದ ಆತಂಕಗೊಂಡ ಅನೂಪ್, ಕಿಟಕಿ ಗಾಜು ಇಳಿಸದೇ ಮುಂದಕ್ಕೆ ಕಾರು ಚಲಾಯಸಿದ್ದು, ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಅದು ಕಿಟಕಿ ಗಾಜಿಗೆ ಬಿದ್ದು ಒಳಗೆ ಕುಳಿತದ್ದ ಬಾಲಕನ ತಲೆಗೆ ಬಿದ್ದಿದೆ. ಈ ಅನಿರೀಕ್ಷಿತ ದಾಳಿಯಿಂದ ಅನೂಪ್ ಹಾಗೂ ಅವರ ಪತ್ನಿ ಜೋರಾಗಿ ಕಿರುಚಿಕೊಂಡಿದ್ದಾರೆ. ಅವರ ಚೀರಾಟಕ್ಕೆ ಸ್ಥಳೀಯರು ಸ್ಪಂದಿಸಿದ ಕಾರಣ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದಕ್ಕೆ ಸಂಬಂಧ ವಿಡಿಯೋದಲ್ಲೂ ದುಷ್ಕರ್ಮಿಗಳಿಬ್ಬರ ಮುಖಚಹರೆ ಕಾಣಿಸಿಕೊಂಡಿದ್ದು, ಘಟನೆಯ ವಿವರ ಕಂಡುಬಂದಿದೆ. ಈ ದಾಳಿಯಿಂದಾಗಿ ಕಾರಿನೊಳಗಿದ್ದ ಬಾಲಕನ ತಲೆಗೆ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಆರೋಪಿಯ ಬಂಧನ; ಆತ ಹೇಳಿದ್ದೇನು
ಅನೂಪ್ ಜಾರ್ಜ್ ಈ ಸಂಬಂಧ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಒಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ಚೂಡ ಸಂದ್ರದ ನಿವಾಸಿ ಕೃಷ್ಣಮೂರ್ತಿ (24) ಎಂದು ಗುರುತಿಸಲಾಗಿದೆ. ಅನೂಪ್ ಜಾರ್ಜ್ ದಂಪತಿ ಕಾರಿನಲ್ಲಿ ಹೋಗುವಾಗ ಬೆಳ್ಳಂದೂರು ಸಮೀಪ ಒಂದು ಕಡೆ ಆರೋಪಿಗಳ ದ್ವಿಚಕ್ರ ವಾಹನಕ್ಕೆ ಕಾರು ತಾಗಿಸಿಕೊಂಡು ಹೋಗಿದ್ದರು. ಈ ಘಟನೆಯಿಂದ ಆಕ್ರೋಶಿತರಾಗಿದ್ದಾಗಿ ಆರೋಪಿ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದನ್ನು ಪ್ರಶ್ನಿಸಲು ಬೆನ್ನು ಹತ್ತಿದ್ದೆವು. ಅವರ ಜೊತೆಗೆ ಮಾತುಕತೆಗೆ ಪ್ರಯತ್ನಿಸಿದಾಗ ಅಲ್ಲಿ ಅವರು ಆತಂಕದಿಂದ ನಿಲ್ಲಿಸದೇ ಮುನ್ನುಗ್ಗಿದ ಕಾರಣ ಕಲ್ಲೆಸೆದುದಾಗಿ ಹೇಳಿದ್ದಾರೆ. ಅದಕ್ಕೂ ಮೊದಲು ವಾಕ್ಸಮರ ನಡೆಯಿತು ಎಂದು ಆರೋಪಿ ಹೇಳಿದ್ದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಪ್ರಕಾರ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತಲೆಮರೆಸಿಕೊಂಡ ಆರೋಪಿಯ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. ಈ ನಡುವೆ ಎಕ್ಸ್ ತಾಣದಲ್ಲಿ ಈ ವಿಚಾರ ಭಾರಿ ಚರ್ಚೆಗೆ ಒಳಗಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.