ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕಾವೇರಿ ಎಂಪೋರಿಯಂಗೆ ಅರಣ್ಯಾಧಿಕಾರಿಗಳ ದಾಳಿ, ಶ್ರೀಗಂಧ ಅಕ್ರಮ ದಾಸ್ತಾನು ಕೇಸ್‌ನಲ್ಲಿ ಪರವಾನಗಿ ನಷ್ಟ
Dec 18, 2024 12:28 PM IST
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕಾವೇರಿ ಎಂಪೋರಿಯಂಗೆ ಅರಣ್ಯಾಧಿಕಾರಿಗಳ ದಾಳಿ ನಡೆಸಿದ್ದು, ಶ್ರೀಗಂಧ ಅಕ್ರಮ ದಾಸ್ತಾನು ಪತ್ತೆಯಾಗಿದೆ.
Cauvery Emporium: ಸರ್ಕಾರಿ ಸ್ವಾಮ್ಯದ ಬೆಂಗಳೂರು ಕಾವೇರಿ ಎಂಪೋರಿಯಂ ಮೇಲೆ ಅರಣ್ಯಾಧಿಕಾರಿಗಳ ದಾಳಿ ನಡೆಸಿ, ಶ್ರೀಗಂಧ ಅಕ್ರಮ ದಾಸ್ತಾನು ಪತ್ತೆ ಹಚ್ಚಿದ್ದಾರೆ. ಈ ಕೇಸ್‌ನಲ್ಲಿ ಕಾವೇರಿ ಎಂಪೋರಿಯಂಗೆ ಶ್ರೀಗಂಧ ದಾಸ್ತಾನು ಪರವಾನಗಿ ನಷ್ಟವಾಗಿದೆ.
Cauvery Emporium: ಶ್ರೀಗಂಧ ಕಳ್ಳಸಾಗಣೆ ಮತ್ತು ಅಕ್ರಮ ದಾಸ್ತಾನು ಕೇಸ್‌ನಲ್ಲಿ ಭಾಗಿಯಾಗಿ ಕರ್ನಾಟಕ ಸರ್ಕಾರದ ಕಾವೇರಿ ಎಂಪೋರಿಯಂ ಶ್ರೀಗಂಧ ದಾಸ್ತಾನು ಪರವಾನಗಿಯನ್ನು ಕಳೆದುಕೊಂಡಿದೆ. ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಂ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ (ಡಿಸೆಂಬರ್ 17) ದಾಳಿ ನಡೆಸಿದ್ದು, ಅಲ್ಲಿ ಶ್ರೀಗಂಧ ಅಕ್ರಮ ದಾಸ್ತಾನು ಪತ್ತೆ ಹಚ್ಚಿದ್ದಾರೆ. ಇದರೊಂದಿಗೆ ಕಾವೇರಿ ಎಂಪೋರಿಯಂಗೆ ನೀಡಲಾಗಿದ್ದ ಶ್ರೀಗಂಧ ದಾಸ್ತಾನು ಪರವಾನಗಿಯನ್ನು ರದ್ದುಗೊಳಿಸಲಾಗಿದೆ.
ಕಾವೇರಿ ಎಂಪೋರಿಯಂ ಮೇಲೆ ಅರಣ್ಯಾಧಿಕಾರಿಗಳ ದಾಳಿ; ಶ್ರೀಗಂಧ ಅಕ್ರಮ ದಾಸ್ತಾನು ಪತ್ತೆ
ಕೆಆರ್ ಪುರಂ ವಲಯ ಅರಣ್ಯಾಧಿಕಾರಿ ರಘು ವಿ ನೇತೃತ್ವದ ತಂಡ ಬೆಂಗಳೂರು ಎಂಜಿ ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಂ ಮೇಲೆ ದಾಳಿ ನಡೆಸಿ ಶ್ರೀಗಂಧ ಅಕ್ರಮ ದಾಸ್ತಾನು ಇರುವ ಬಗ್ಗೆ ಶೋಧ ನಡೆಸಿತ್ತು. ರಾಜಸ್ಥಾನದ ಕೆಲವರು ಅಕ್ರಮವಾಗಿ ಗಂಧದ ತುಂಡು ತಂದು ಅಲ್ಲಿ ಕೊಟ್ಟಿರುವ ಖಚಿತ ಮಾಹಿತಿ ಲಭ್ಯವಾಗಿರುವ ಕಾರಣ ಅರಣ್ಯಾಧಿಕಾರಿಗಳ ತಂಡ ಶೋಧ ನಡೆಸುವುದಕ್ಕಾಗಿ ದಾಳಿ ನಡೆಸಿತ್ತು. ರಾಜಸ್ಥಾನದಿಂದ ಬೆಂಗಳೂರಿಗೆ ಶ್ರೀಗಂಧ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಸಿಕ್ಕಿದ ಕಾರಣವೇ ಈ ಶೋಧ ನಡೆಸಲಾಗಿತ್ತು. ಶ್ರೀಗಂಧ ಅಕ್ರಮವಾಗಿ ದಾಸ್ತಾನು ಮಾಡಿರುವುದು ಖಚಿತವಾಗಿದ್ದು, ಅದನ್ನು ವಶಪಡಿಸಲಾಗಿದೆ ಎಂದು ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ರವೀಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ. ಶ್ರೀಗಂಧ ಅಕ್ರಮ ದಾಸ್ತಾನು ಕೇಸ್ ಸಂಬಂಧ ಬೆಂಗಳೂರು ಎಂಜಿ ರಸ್ತೆಯ ಕಾವೇರಿ ಎಂಪೋರಿಯಂನ ವ್ಯವಸ್ಥಾಪಕ ನಾರಾಯಣ ಮೂರ್ತಿ ಮತ್ತು ರಾಜಸ್ಥಾನದ ಗೌರವ್ ಸರಗೋಯ್ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜಸ್ಥಾನದಿಂದ ಬೆಂಗಳೂರು; ಶ್ರೀಗಂಧ ಕಳ್ಳಸಾಗಣೆ
ಅರಣ್ಯ ಇಲಾಖೆಯ ನಿಯಮ ಪ್ರಕಾರ ವ್ಯಕ್ತಿಯೊಬ್ಬರು 4 ಕಿಲೋಕ್ಕಿಂತ ಕಡಿಮೆ ತೂಕದ ಶ್ರೀಗಂಧ ಮರದ ಕೊರಡು ಅಥವಾ ಗಂಧದ ಕಲಾಕೃತಿ/ಉತ್ಪನ್ನಗಳನ್ನು ಖರೀದಿಸಿದರೆ, ಅವುಗಳ ಸಾಗಾಣಿಕೆಗೆ ಅನುಮತಿ ಪಡೆಯಬೇಕಿಲ್ಲ. ಈ ನಿಯಮ ವಿನಾಯಿತಿಯನ್ನು ದುರುಪಯೋಗ ಪಡಿಸಿಕೊಂಡ ಗೌರವ್ ಸರಗೋಯಿ, ಕಳೆದ ಆರು ತಿಂಗಳ ಅವಧಿಯಲ್ಲಿ ಒಟ್ಟು 435 ಕಿಲೋ ಶ್ರೀಗಂಧದ ಮರವನ್ನು ಪೂರೈಕೆ ಮಾಡಿದ್ದಾರೆ. ಪ್ರತಿ ಬಾರಿ ಸುಮಾರು 3.5 ಕೆ.ಜಿ. ಶ್ರೀಗಂಧದ ಮರದ ತುಂಡನ್ನು ರಾಜಸ್ಥಾನದಿಂದ ಬೆಂಗಳೂರಿಗೆ ಸಾಗಾಟ ಮಾಡಿ ಎಂಪೋರಿಯಂಗೆ ತಲುಪಿಸಿದ್ದಾರೆ. ಇದಲ್ಲದೆ, 105 ಕೆಜಿ ಶ್ರೀ ಗಂಧದ ಪುಡಿ ಮತ್ತು 10 ಕಿಲೋ ಶ್ರೀಗಂಧದ ಎಣ್ಣೆಯನ್ನು ಕೂಡ ಪೂರೈಕೆ ಮಾಡಿದ್ದಾರೆ. ಆದರೆ, ಇವು ಸಕ್ರಮ ಮಾಲು ಎಂಬುದನ್ನು ಸಾಬೀತುಪಡಿಸುವ ಸೂಕ್ತ ದಾಖಲೆಗಳನ್ನು ಅವರು ಒದಗಿಸಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಕಾವೇರಿ ಎಂಪೋರಿಯಂ
ಕರ್ನಾಟಕದ ಸೊಗಸಾದ ಕರಕುಶಲ ಶ್ರೀಮಂತ ಸಂಪ್ರದಾಯವನ್ನು ಸಂರಕ್ಷಿಸಲು, ಅಭಿವೃದ್ಧಿ ಪಡಿಸಲು ಮತ್ತು ಉತ್ತೇಜಿಸುವ ಸಲುವಾಗಿ ಕರ್ನಾಟಕ ಸರ್ಕಾರ 1964ರಲ್ಲಿ "ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಎಸ್‌ಎಚ್‌ಡಿಸಿಎಲ್)" ಅನ್ನು ಸ್ಥಾಪಿಸಿತು. ಇದರ ಮಾರುಕಟ್ಟೆ ವಿಭಾಗದ ಔಟ್‌ಲೆಟ್ ಆಗಿ ಕಾವೇರಿ ಎಂಪೋರಿಯಂ ಕಾರ್ಯನಿರ್ವಹಿಸುತ್ತಿದೆ. ಸಾವಿರಕ್ಕೂ ಹೆಚ್ಚು ಕರಕುಶಲ ವಸ್ತುಗಳು, ಶ್ರೀಗಂಧದ ಕೆತ್ತನೆ, ಎಣ್ಣೆ ಮತ್ತು ಕಂಚು, ತಾಮ್ರದ ವಸ್ತುಗಳನ್ನು ಕೂಡ ಮಾರಾಟ ಮಾಡುತ್ತಿದೆ. ಚನ್ನಪಟ್ಟಣದ ಬೊಂಬೆಗಳಿಂದ ಹಿಡಿದು ಮೈಸೂರು ಸಿಲ್ಕ್ ಸೀರೆ ಉತ್ಪನ್ನಗಳ ತನಕ ನಾನಾ ಉತ್ಪನ್ನಗಳನ್ನು ಮಾರಾಟ ಮಾಡುವ ಕಾವೇರಿ ಎಂಪೋರಿಯಂ ಭಾರತದಾದ್ಯಂತ ಮಳಿಗೆಗಳನ್ನು ಹೊಂದಿದ್ದು, ತನ್ನದೇ ಛಾಪು ಮೂಡಿಸಿದೆ.