logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಎಂಎಂ ರಸ್ತೆಯಲ್ಲಿ ಈ ಸಲ ರಂಜಾನ್ ಆಹಾರ ಮೇಳ ನಡೆಯೋದು ಡೌಟ್; ಫ್ರೇಜರ್‌ ಟೌನ್‌ ನಿವಾಸಿಗಳಿಂದ ದೂರು

ಬೆಂಗಳೂರಿನ ಎಂಎಂ ರಸ್ತೆಯಲ್ಲಿ ಈ ಸಲ ರಂಜಾನ್ ಆಹಾರ ಮೇಳ ನಡೆಯೋದು ಡೌಟ್; ಫ್ರೇಜರ್‌ ಟೌನ್‌ ನಿವಾಸಿಗಳಿಂದ ದೂರು

Umesh Kumar S HT Kannada

Feb 22, 2024 02:12 PM IST

google News

ಬೆಂಗಳೂರಿನ ಎಂಎಂ ರಸ್ತೆಯಲ್ಲಿ ಈ ಸಲ ರಂಜಾನ್ ಆಹಾರ ಮೇಳ ನಡೆಯೋದು ಡೌಟ್; ಫ್ರೇಜರ್‌ ಟೌನ್‌ ನಿವಾಸಿಗಳಿಂದ ದೂರು

  • ಬೆಂಗಳೂರಿನ ಎಂಎಂ ರಸ್ತೆಯಲ್ಲಿ ಈ ಸಲ ರಂಜಾನ್ ಆಹಾರ ಮೇಳ ನಡೆಯೋದು ಡೌಟ್. ಅದರ ವಿರುದ್ಧ ಫ್ರೇಜರ್‌ ಟೌನ್‌ ನಿವಾಸಿಗಳಿಂದ ದೂರು ಸಲ್ಲಿಕೆಯಾಗಿದ್ದು, ಸ್ಥಳೀಯ ಶಾಸಕರು ಕೂಡ ಸ್ಪಂದಿಸಿದ್ದಾರೆ. ವಿವಿಧ ಮಸೀದಿ ಸಮಿತಿಗಳು ಕೂಡ ಈ ಆಹಾರ ಮೇಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾರಣ ಈ ವಿಚಾರ ಗಮನಸೆಳೆದಿದೆ.

ಬೆಂಗಳೂರಿನ ಎಂಎಂ ರಸ್ತೆಯಲ್ಲಿ ಈ ಸಲ ರಂಜಾನ್ ಆಹಾರ ಮೇಳ ನಡೆಯೋದು ಡೌಟ್; ಫ್ರೇಜರ್‌ ಟೌನ್‌ ನಿವಾಸಿಗಳಿಂದ ದೂರು
ಬೆಂಗಳೂರಿನ ಎಂಎಂ ರಸ್ತೆಯಲ್ಲಿ ಈ ಸಲ ರಂಜಾನ್ ಆಹಾರ ಮೇಳ ನಡೆಯೋದು ಡೌಟ್; ಫ್ರೇಜರ್‌ ಟೌನ್‌ ನಿವಾಸಿಗಳಿಂದ ದೂರು

ಬೆಂಗಳೂರು: ಟ್ರಾಫಿಕ್, ಶಬ್ದ ಮಾಲಿನ್ಯ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವುದು ಮುಂತಾದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಫ್ರೇಜರ್ ಟೌನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಎಫ್‌ಟಿಆರ್‌ಡಬ್ಲ್ಯೂಎ), ಹಾಜಿ ಸರ್ ಇಸ್ಮಾಯಿಲ್ ಸೇಟ್ (ಎಚ್‌ಎಸ್‌ಐಎಸ್) ಸಮುದಾಯ ಅಭಿವೃದ್ಧಿ ಟ್ರಸ್ಟ್ ಮತ್ತು ವಿವಿಧ ಮಸೀದಿ ಸಮಿತಿಗಳು ಫ್ರೇಜರ್ ಟೌನ್‌ನಲ್ಲಿ ವಾರ್ಷಿಕವಾಗಿ ನಡೆಯುವ ರಂಜಾನ್ ಆಹಾರ ಮೇಳಕ್ಕೆ ಸಾಮೂಹಿಕವಾಗಿ ವಿರೋಧ ವ್ಯಕ್ತಪಡಿಸಿವೆ.

ರಂಜಾನ್ ಆಹಾರ ಮೇಳವು ಎಂಎಂ ರಸ್ತೆಯಲ್ಲಿ ಪ್ರತಿ ವರ್ಷ ನಡೆಯುತ್ತಿದ್ದು, ಅಲ್ಲಿ ಸುತ್ತಮುತ್ತಲಿನ ನಿವಾಸಿಗಳಿಗೆ ಬಹಳಷ್ಟು ತೊಂದರೆಗಳಾಗುತ್ತಿರುವುದರ ಕಡೆಗೆ ಗಮನಸೆಳೆಯುವ ಕೆಲಸವನ್ನು ಎಲ್ಲ ಸಮುದಾಯದವರೂ ಸೇರಿ ಮಾಡುತ್ತಿರುವುದು ಗಮನಸೆಳೆದಿದೆ. ರಂಜಾನ್ ಆಹಾರ ಮೇಳೆ ಒಂದು ರೀತಿಯಲ್ಲಿ ಸಾಂಪ್ರದಾಯಿಕ ಹಬ್ಬದಂತೆ ಆಚರಣೆಯಲ್ಲಿದ್ದು, ಸಾಮಾನ್ಯವಾಗಿ ಇದಕ್ಕೆ ವಿರೋಧ ವ್ಯಕ್ತವಾಗುವಾಗ ಅಲ್ಲಿ ರಾಜಕೀಯ ಅಥವಾ ಕೋಮು ವಿಚಾರ ಮುನ್ನೆಲೆಗೆ ಬರುವುದು ಸಾಮಾನ್ಯ. ಆದರೆ ಇಲ್ಲಿ ಹಾಗಾಗಿಲ್ಲ.

ಮುಸ್ಲಿಮರು ಸೇರಿ ಎಲ್ಲ ಸಮುದಾಯಗಳ ಸದಸ್ಯರು, ಫ್ರೇಜರ್ ಟೌನ್‌ನ ಮಸೀದಿ ರಸ್ತೆಯಲ್ಲಿ ಆಹಾರ ಉತ್ಸವದ ವಿರುದ್ಧ ರ್ಯಾಲಿ ಮಾಡಲು ಟ್ರಾಫಿಕ್ ಅವ್ಯವಸ್ಥೆ, ಆರೋಗ್ಯದ ಅಪಾಯಗಳು ಮತ್ತು ಹೆಚ್ಚುತ್ತಿರುವ ಅಪರಾಧಗಳನ್ನು ಕಾರಣಗಳಾಗಿ ಉಲ್ಲೇಖಿಸಿದ್ದಾರೆ. ಸಕಾರಣಗಳನ್ನು ಪರಿಗಣಿಸಿದ ಸ್ಥಳೀಯ ಶಾಸಕರು ಈ ವರ್ಷ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಯಲ್ಲ ಎಂಬ ಭರವಸೆ ನೀಡಿದ್ದಾರೆ.

ರಂಜಾನ್ ಆಹಾರ ಮೇಳದ ವಿರುದ್ಧ ಫ್ರೇಜರ್ ಟೌನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಭಿಯಾನ

ಫ್ರೇಜರ್ ಟೌನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಎಂಎಂ ರಸ್ತೆಯಲ್ಲಿ ನಡೆಯುವ ರಂಜಾನ್ ಆಹಾರ ಮೇಳದ ವಿರುದ್ಧ ಸಹಿ ಸಂಗ್ರಹ ಅಭಿಯಾನ ಶುರುಮಾಡಿತು. ಬಿಬಿಎಂಪಿಯ ಮಾಜಿ ಕಾರ್ಪೊರೇಟರ್‌ ಎಆರ್ ಝಕೀರ್ ಅವರನ್ನು ಭೇಟಿ ಮಾಡಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಹಾಜಿ ಸರ್ ಇಸ್ಮಾಯಿಲ್ ಸೇಟ್ (ಎಚ್‌ಎಸ್‌ಐಎಸ್) ಸಮುದಾಯ ಅಭಿವೃದ್ಧಿ ಟ್ರಸ್ಟ್ ಮತ್ತು ವಿವಿಧ ಮಸೀದಿ ಸಮಿತಿಗಳು ಕೈಜೋಡಿಸಿದವು. ಬಳಿಕ ಈ ನಿಯೋಗ ಶಾಸಕ ಎ.ಸಿ.ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ಅವರಿಂದ ಆಹಾರ ಮೇಳ ನಡೆಯದಂತೆ ನೋಡಿಕೊಳ್ಳುವ ಭರವಸೆ ಪಡೆಯುವಲ್ಲಿ ಯಶಸ್ವಿಯಾಯಿತು.

"ರಂಜಾನ್ ಉಪವಾಸ, ಪ್ರಾರ್ಥನೆ, ಭಕ್ತಿ ಮತ್ತು ದಾನದ ತಿಂಗಳು, ಆದರೆ ಆಹಾರ ಮೇಳ ಆಯೋಜಿಸುವುದರಿಂದ ತಪ್ಪು ಸಂದೇಶ ರವಾನೆಯಾಗುತ್ತಿದೆ. ಉಪವಾಸದ ತಿಂಗಳನ್ನು ಹಬ್ಬದ ತಿಂಗಳು ಎಂದು ಬಿಂಬಿಸಲಾಗುತ್ತಿದೆ" ಎಂದು ಫ್ರೇಜರ್ ಟೌನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

ಸಾರ್ವಜನಿಕರಿಗೂ, ಸುತ್ತಮುತ್ತಲಿನ ನಿವಾಸಿಗಳಿಗೂ ಸಮಸ್ಯೆ

ದೂರದೂರಿನಿಂದ ರಂಜಾನ್ ಆಹಾರ ಮೇಳಕ್ಕೆ ಬರುವ ವಾಹನ ಸವಾರರು ಮನೆಗಳ ಗೇಟ್‌ಗಳ ಹೊರಭಾಗದಲ್ಲಿ ವಾಹನ ನಿಲ್ಲಿಸಿ, ನಿತ್ಯ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದರು. "ಫುಟ್‌ಪಾತ್‌ಗಳು ಮತ್ತು ರಸ್ತೆಗಳು ಅತಿಕ್ರಮಿಸಲ್ಪಟ್ಟಿವೆ, ಇದರಿಂದಾಗಿ ನಿಧಾನ ಸಂಚಾರ ಮತ್ತು ಹಾರ್ನ್ ಮತ್ತು ವಾಯು ಮಾಲಿನ್ಯವೂ ಉಂಟಾಗಿದೆ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ರಂಜಾನ್ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಗಳು, ಮಾದಕ ದ್ರವ್ಯಗಳ ಹಾವಳಿ, ಸಂಚಾರ ದಟ್ಟಣೆ, ಹೊರಗಿನವರು ಬಂದು ಪ್ರದೇಶದ ಚಿತ್ರಣವನ್ನು ಹಾಳು ಮಾಡುತ್ತಾರೆ ಎಂದು ನಿವಾಸಿಗಳು ದೂರಿದ್ದಾರೆ, ಆದ್ದರಿಂದ ಅವರು ಫ್ರೇಜರ್ ಟೌನ್‌ನಲ್ಲಿ ಅಂತಹ ಯಾವುದೇ ಆಹಾರ ಮೇಳಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಸಂಸದ ಪಿಸಿ ಮೋಹನ್ ಅವರು ಕಳೆದ ವರ್ಷ ಮಾಡಿದ ಟ್ವೀಟ್ ಹೀಗಿದೆ.

ರಂಜಾನ್ ಆಹಾರ ಮೇಳದ ನಂತರ ಅಲ್ಲಿನ ಪರಿಸರ ಸಂಪೂರ್ಣ ತ್ಯಾಜ್ಯಗಳಿಂದ ಕೂಡಿದ್ದು, ಸ್ವಚ್ಛತೆಯ ಸಮಸ್ಯೆಯೂ ಕಾಡುತ್ತದೆ. ಇದು ಪ್ರತಿ ವರ್ಷ ಸುತ್ತಮುತ್ತಲಿನ ನಿವಾಸಿಗಳು ಎದುರಿಸುವ ಸಂಕಷ್ಟಗಳಲ್ಲಿ ಒಂದು ಎಂಬುದನ್ನು ಬಹಿರಂಗಪಡಿಸಿದರು. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಈ ವಿಚಾರ ಗಮನಸೆಳೆದಿದೆ. ಎಲ್ಲರೂ ಸೇರಿ ಇದನ್ನು ವಿರೋಧಿಸುತ್ತಿರುವ ಕಾರಣ ಈ ಸಲ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಯವುದು ಸಂದೇಹ ಎಂದು ಸ್ಥಳೀಯರು ಹೇಳಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ